ಉತ್ತರ ಕರ್ನಾಟಕದ ಕ್ರಾಂತಿ ಸಿಂಹಗಳು : ಹಲಗಲಿಯ ಬೇಡರು
ಹಲಗಲಿಯ ಬೇಡರು: ಬ್ರಿಟಿಷ್ ಸರ್ಕಾರದ ದೌರ್ಜನ್ಯ ದೇಶದಾದ್ಯಂತ ಆವರಿಸಿದ್ದ ಕಾಲ. ಅದಕ್ಕೆ ಉತ್ತರವಾಗಿ 1857 ರಲ್ಲಿ ದೇಶದ ವಿವಿದೆಡೆಗಳಲ್ಲಿ ಪ್ರಖರ ಹೋರಾಟ ಆರಂಭವಾಯಿತು. 1857 ರ ನವೆಂಬರ್ ನಲ್ಲಿ ಆಂಗ್ಲ ಸರ್ಕಾರ ‘ನಿಶ್ಶಸ್ತ್ರೀಕರಣ ಕಾನೂನನ್ನು’ ಜಾರಿಗೆ ತಂದು ದೇಶದ ಯಾರೂ ತಮ್ಮ ಬಳಿ ಯಾವುದೇ ಶಸ್ತ್ರಗಳನ್ನು ಹೊಂದುವಂತಿಲ್ಲ ಎಂಬ ಕರಾಳ ನಿಯಮವನ್ನು ಹೇರಿತು. ಅದರ ಪ್ರಕಾರ ಎಲ್ಲರೂ ತಮ್ಮಲ್ಲಿದ್ದ ಶಸ್ತ್ರಗಳನ್ನು ಸರ್ಕಾರಕ್ಕೆ ಒಪ್ಪಿಸಬೇಕಾಯ್ತು. ಆದರೆ ಬೇಡರಿಗೆ ಆಯುಧಗಳೇ ಜೀವನೋಪಾಯದ ಆಧಾರಗಳು. ಹಾಗಾಗಿ ಆಯುಧಗಳನ್ನು ಹಿಂತಿರುಗಿಸುವುದಿಲ್ಲ ಎಂದು ಇದರ ವಿರುದ್ಧ ದಿಟ್ಟ ದನಿಯೆತ್ತಿ ಬ್ರಿಟಿಷ್ ಸರ್ಕಾರವನ್ನು ಬೆಚ್ಚಿ ಬೀಳಿಸಿ ಪ್ರಾಣಾರ್ಪಣೆಗೈದವರು ನಮ್ಮ ಕರ್ನಾಟಕದ ಹಲಗಲಿಯ ಬೇಡರು. ಒಂದು ಹಳ್ಳಿಯ ಜನಸಮೂಹ ಸಂಘಟನೆಗೊಂಡು ಬ್ರಿಟಿಷರೆದುರು ಸೆಟೆದು ನಿಂತ ಈ ಉದಾಹರಣೆ 1857ರ ಸಂಗ್ರಾಮದಲ್ಲಿ ಕರ್ನಾಟಕದ ಮಹತ್ತರ ಕೊಡುಗೆಯಾಗಿದೆ. ಹಲಗಲಿಯ ನೆರೆಯ ಹಳ್ಳಿಗಳಾದ ಮಂಟೂರು, ಭೋಧಾನಿ, ಅಲಗುಂಡಿಗಳಿಂದಲೂ ಬೇಡರು ತಂಡತಂಡವಾಗಿ ಬಂದು ಹಲಗಲಿಯಲ್ಲಿ ನಿಂತರು. ಬ್ರಿಟಿಷರ ಸೈನ್ಯವೇ ಬಂದರೂ ಎದುರಿಸಿ ದಿಟ್ಟ ಉತ್ತರ ನೀಡಿದರು. ಇವರ ಹೋರಾಟಕ್ಕೆ ಹೆದರಿ ಬ್ರಿಟಿಷ ಸರ್ಕಾರ ಕಾಲುಕೀಳಬೇಕಾಯ್ತು. ಹಲಗಲಿಯ ಬೇಡರ ವೀರಾವೇಷದ ಹೋರಾಟವನ್ನು ಹತ್ತಿಕ್ಕಲು ಬೆಳಗಾವಿಯಿಂದ ಇನ್ನಷ್ಟು ಸುಸಜ್ಜಿತ ಸೈನ್ಯದ ತುಕಡಿಯನ್ನು ತರಿಸಲಾಯಿತು. ಬ್ರಿಟಿಷರ ಕಾರ್ಸಾಹೇಬ್ ಎಂಬಾತನು ಈ ಸೈನ್ಯದ ಉಸ್ತುವಾರಿ ವಹಿಸಿ ಹಲಗಲಿಯನ್ನು ಸುತ್ತಿನಿಂದಲೂ ಮುತ್ತಿದರು. ಈ ಹೋರಾಟದಲ್ಲಿ ಬೇಡರ ಗುರು ಬಾಬಾಜಿ ನಿಂಬಾಳ್ಕರ್ ವೀರಾವೇಶದಿಂದ ಹೋರಾಡುತ್ತ ಬಲಿಯಾದ. ಆದರೆ ಬೇಡರ ವೀರಾವೇಶದ ಹೋರಾಟದ ಎದುರು ಕಾರ್ ಸಾಹೇಬನ ಸೇನೆಯೂ ಮಣ್ಣುಮುಕ್ಕಿತು. ಇದರಿಂದ ರೊಚ್ಚಿಗೆದ್ದ ಕಾರ್ ಸಾಹೇಬ ಮೋಸದಿಂದ ಇಡೀ ಹಲಗಲಿಗೆ ಬೆಂಕಿ ಹಚ್ಚಿಸಿಬಿಟ್ಟ. ಪರಮ ಸ್ವಾಭಿಮಾನಿಗಳಾದ ಬೇಡ ಯೋಧರು ಅಲ್ಲಿಂದ ಓಡದೆ ಬೆಂಕಿಗೆ ಆಹುತಿಯಾದರು. ಕೈಗೆ ಸಿಕ್ಕಿದ ಬೇಡ ಹೋರಾಟಗಾರರನ್ನು ಬಂಧಿಸಿ ವಿಚಾರಣೆ ನಡೆಸಲಾಯಿತು. 25 ಮಂದಿ ಬೇಡ ವೀರರಿಗೆ ಗಲ್ಲಿನ ಶಿಕ್ಷೆ ವಿಧಿಸಲಾಯಿತು. ಸಾರ್ವಜನಿಕರಲ್ಲಿ ಭೀತಿ ಉಂಟುಮಾಡಬೇಕೆಂದು ಬ್ರಿಟಿಷ್ ಅಧಿಕಾರಿಗಳು 1858ರ ಜನವರಿ 11ರಂದು ಸೆರೆಸಿಕ್ಕ ಬೇಡರನ್ನು ಮುಧೋಳದಲ್ಲಿ ಸಂತೆ ನೆರೆದಿದ್ದಾಗ ಸಾವಿರಾರು ಜನರೆದುರು ಬಹಿರಂಗವಾಗಿ ಗಲ್ಲಿಗೇರಿಸಿದರು. ಇದು ಮುಂದಿನ ಹಲವು ಹೋರಾಟಗಳಿಗೆ ಪ್ರೇರಣೆಯಾಯಿತು. ಹಲಗಲಿಯ ಬೇಡರ ವೀರ ಪರಾಕ್ರಮದ ಕಥೆ ಇಂದಿಗೂ ಉತ್ತರ ಕರ್ನಾಟಕದಲ್ಲಿ ಲಾವಣಿಗಳ ರೂಪದಲ್ಲಿ ಹರಿದಾಡುತ್ತಿದೆ.