ಈ ಕತ್ತಲೊಳಗೆ ಹುಡುಕುವುದು ಬೇಡ, ಅಲ್ಲಿಹುದು ನಿನ್ನ ವೀಣೆ!
ನೀನು ನಂಗೆ ಬೇಕು!
ಅವಳ ದನಿಯಲ್ಲಿ ಅಪ್ಪಟ ಪ್ರಾಮಾಣಿಕತೆ ಇತ್ತು, ತೀವ್ರತೆಯಿತ್ತು. ನಂಗೂ ನೀನು ಬೇಕು ಎಂದು ಹೇಳಿಬಿಡಬೇಕು ಎಂದು ಕಾತರಿಸುವಂತ ಪ್ರೀತಿಯಿತ್ತು. ಹಾಗೆ ಹೇಳುವುದೂ ಕಷ್ಟವೇನಲ್ಲ. ಮಹಾನಗರಗಳಲ್ಲಿ ಸಂಬಂಧಗಳು ಗುಪ್ತವಾಗಿ ಹುಟ್ಟಿ, ಹೆಸರಿಲ್ಲದೆ ಬೆಳೆದು, ಕುರುಹಿಲ್ಲದೆ ಸಾಯುತ್ತವೆ. ಅಂಥ ಸಂಬಂಧಗಳನ್ನು ಸಲಹುವುದೂ ಕಷ್ಟವೇನಲ್ಲ. ಮುಸ್ಸಂಜೆಗಳಲ್ಲಿ ಮಾತು, ಒಂದು ಅಚಾನಕ ಭೇಟಿ, ಬೆರಳುಗಳ ಬೆಸುಗೆ, ಕದ್ದುಮುಚ್ಚಿ ಒಂದು ಉಮ್ಮಾ’ , ಮುಸ್ಸಂಜೆಯಲ್ಲಿ ಜಡಿಮಳೆ ಸುರಿದರೆ ತಬ್ಬುಗೆ, ಅವಳಿಗೆ ತೀರ ಬೇಸರವಾದಾಗ ಎರಡು ಸವಿಮಾತು, ಅವನು ನೊಂದಾಗ ಅವಳದೊಂದಷ್ಟು ಲವ್ ಯೂ, ಯೂ ಆರ್ ಮೈ ವರ್ಲ್ಡ್, ನಾನಿದ್ದೀನಿ ಕಣೋ, ಟೇಕ್ ಕೇರ್, ಎಲ್ಲಾ ಬಿಟ್ಟು ಬಂದ್ಬಿಡ್ತೀನಿ ನಿಂಗೋಸ್ಕರ…
ಎಲ್ಲವೂ ಸರಳ. ಮನಸು ಮಾಯೆಯ ಮಾಟ, ಮಾತು ನೊರೆತೆರೆಯಾಟ. ಇನ್ನೆಲ್ಲೋ ಇನ್ನೇನೋ ಇದೆ ಎನ್ನುವ ತಡಕಾಟ. ಮನಸಿಗೆ ಅದೆಂಥದೋ ಬೇನೆ. ಮನಸ್ಸು ಹೇಳುತ್ತದೆ: ಈ ಕತ್ತಲಲ್ಲಿ ಹುಡುಕುವುದು ಬೇಡ, ಅಲ್ಲಿಹುದು ನಿನ್ನ ವೀಣೆ!
ಮಹಾನಗರಗಳ ಜಾಡು ಬದಲಾಗಿದೆ. ದಾಂಪತ್ಯದ ಗೂಡು ಬೆಚ್ಚಗಿಲ್ಲ. ಅಭದ್ರತೆಯ ಭಯ ಕಣ್ಮರೆಯಾಗುತ್ತಿದೆ. ಒಂಟಿಯಾಗಿ ಬದುಕಬಲ್ಲೆ ಎಂಬ ಛಲ ಮತ್ತು ನೀನು ನನ್ನನ್ನು ವಿನಾಕಾರಣ ಅವಮಾನಿಸುತ್ತೀಯ ಎಂಬ ಆಕ್ರೋಶಗಳಲ್ಲಿ ದಾಂಪತ್ಯದ ಸೂರು ಸೋರತೊಡಗುತ್ತದೆ. ಮತ್ತೊಂದು ಸಂಬಂಧಕ್ಕೆ ಜೀವ ಮಿಡುಕುತ್ತದೆ. ಎಲ್ಲರೂ ಒಂದೇ ಎರಕ, ಜೊತೆಗಿರುವ ಎಲ್ಲರ ಬಾಳೂ ನರಕ ಅನ್ನುವ ಮಾತು ಆ ಕ್ಷಣ ಮರೆತುಹೋಗುತ್ತದೆ. ಅಂದಿಗಂದಿನ ಬದುಕು. ಎಲ್ಲವೂ ಆ ಕ್ಷಣದ ಸತ್ಯ ಎಂಬ ನಂಬಿಕೆ ಬಲವಾಗುತ್ತದೆ. ನಾಳೆಯೆಂಬುದು ಬರೆಯದ ಹಾಳೆ, ನಿನ್ನೆಯೆಂಬುದು ಚಿತ್ತಾದ ಓಲೆ. ನಿನ್ನೆನಾಳೆಯ ನಡುವೆ ಇಂದೆಂಬ ತೂಗುಯ್ಯಾಲೆ.
ಅದು ಸುಖದ ಹುಡುಕಾಟವಾ? ಬರೀ ಸುಖವಷ್ಟೇ ಸಾಲದು, ಸಖ ಬೇಕು, ಸಖಿ ಬೇಕು. ಅರ್ಥ ಮಾಡಿಕೊಳ್ಳುವ ಸಖ ಬೇಕು. ನೊಂದಾಗ ಸಂತೈಸಬೇಕು. ಬೇಸರದಲ್ಲಿದ್ದಾಗ ಗಲ್ಲ ಹಿಡಿದು ನಿಡುಸುಯ್ಯಬೇಕು. ತವಕದಲ್ಲಿದ್ದಾಗ ತಣಿಸಬೇಕು. ತಲ್ಲಣದಲ್ಲಿದ್ದಾಗ ಕಣ್ಣಲ್ಲಿ ಕಣ್ಣಿಟ್ಟು ನೀನು ಹಾಗಲ್ಲ, ನಿನ್ನ ಶಕ್ತಿ ನಿನಗೇ ಗೊತ್ತಿಲ್ಲ ಎಂದು ಸಾಂತ್ವನ ಹೇಳಬೇಕು.
ಅಷ್ಟೇ. ಅದು ಸಾಂತ್ವನಕ್ಕೆ ಹಾತೊರೆಯುವ ಮನ. ದಾಂಪತ್ಯದ ನಡುವೆ ಮಾತು ಸತ್ತುಹೋದಾಗ, ಮಾತು ವ್ಯವಹಾರ ಆದಾಗ ಮನಸ್ಸು ಚಿಂತಾಮಣಿಯಲ್ಲಿ ಕಂಡ ಮುಖಕ್ಕೆ ಹಾತೊರೆಯುತ್ತದೆ.
ಮತ್ತೆ ಯಾವಾಗ ಮರುಭೇಟಿ,
ಕಣ್ಣುಕಣ್ಣುಗಳ ಸಮ್ಮಿಲನ,
ಮೌನದ ನಿಗೂಢ ಗಂಭೀರ ಸಂವಾದದ ಚಟಾಕಿ,
ಆತ್ಮೀಯ ದೀವಿಗೆ ಬರಬಲ್ಲೆನೆ ಏಳು ಕಡಲುಗಳ ದಾಟಿ,
ಬಂದರೂ ಕೂಡ ದೊರೆವುದೆ ಹೇಳು ಈ ಇಂಥ ಸರಿಸಾಟಿ.
ಎಂಬ ಅಡಿಗರ ಪ್ರಶ್ನೆ ಅಡಿಗಡಿಗೂ ನೆನಪು. ಎಲ್ಲಿ ಜಾರಿತೋ ಮನವು ಎಲ್ಲೆ ಮೀರಿತೋ, ಎಲ್ಲಿ ಅಲೆಯುತಿಹುದೋ ಏಕೆ, ನಿಲ್ಲದಾಯಿತೋ!
-2-
ಆಕೆ ಫ್ರಾನ್ಸೆಸ್ಕಾ. ಇಟಾಲಿಯನ್ ಸುಂದರಿ. ಗಂಡ ಮತ್ತು ಮಕ್ಕಳೊಂದಿಗೆ ಅಯೋವಾದಲ್ಲಿ ವಾಸಿಸುವಾಕೆ.. ಸುಖಜೀವಿ ಅನ್ನುವುದಕ್ಕಿಂತ ಹೆಚ್ಚಾಗಿ ಭಾವಜೀವಿ. ಅವಳ ಆಸಕ್ತಿಗಳೇ ಬೇರೆ. ಸಂಗೀತವೆಂದರೆ ಪಂಚಪ್ರಾಣ, ಸುತ್ತಾಡುವುದೆಂದರೆ ಆಸಕ್ತಿ, ಪ್ರಕೃತಿಯೆಂದರೆ ಅಕ್ಕರೆ, ಪೇಂಟಿಂಗ್, ಸಾಹಿತ್ಯ ಎಲ್ಲದರ ಮೇಲೂ ಪ್ರೀತಿ.
ಅವಳ ಗಂಡ ಕೃಷಿಕ. ಹಗಲೂ ರಾತ್ರಿ ಶ್ರಮಪಟ್ಟು ದುಡಿಯುತ್ತಾನೆ. ರಟ್ಟೆಯಲ್ಲಿ ಬಲವಿದೆ. ದುಡಿದು ಮನೆಗೆ ಬಂದರೆ ಹೊಟ್ಟೆಗೆ ಹಿಟ್ಟು, ಬೆಚ್ಚಗಿನ ನಿದ್ದೆ. ಮಧ್ಯರಾತ್ರಿಯಲ್ಲಿ ಎಚ್ಚರಗೊಂಡರೆ ಅವಳ ಸಾಂಗತ್ಯ. ಅಷ್ಟೇ ಬದುಕು. ಅವನಿಗೆ ಗೆಳೆಯರಿಲ್ಲ. ಮುದ್ದು ಮುದ್ದು ಮಾತಾಡುವುದು ಗೊತ್ತಿಲ್ಲ. ಓಲೈಸುವುದು ಮೊದಲೇ ತಿಳಿದಿಲ್ಲ. ಅವಳು ಹಾಡು ಕೇಳುತ್ತಿದ್ದರೆ ಅವನು ಜೋಳದ ಬೆಲೆಯೆಷ್ಟು ಎಂದು ಕೇಳುವುದಕ್ಕೆ ಬೇರೊಂದು ಚಾನಲ್ಲು ಹಾಕುತ್ತಾನೆ.
ತಮ್ಮಿಬ್ಬರ ನಡುವೆ ಸಾಮರಸ್ಯವೇ ಇಲ್ಲ ಅನ್ನುವುದು ಅವಳಿಗೆ ಎಂದೋ ಗೊತ್ತಾಗಿಹೋಗಿದೆ. ಆದರೆ ಅದರಿಂದ ಬಿಡುಗಡೆ ಹೇಗೆ ಅನ್ನುವುದು ಅವಳಿಗೆ ಹೊಳೆದಿಲ್ಲ. ಬದುಕು ಹೀಗೇ ಇರುತ್ತದೇನೋ ಎಂಬ ನಂಬಿಕೆಯಲ್ಲಿ, ಅದಕ್ಕಿಂತ ಹೆಚ್ಚಿನದೇನೂ ಸಾಧ್ಯವಾಗದು ಎಂಬ ನಿರಾಸೆಯಲ್ಲಿ ಅವಳಿರುತ್ತಾಳೆ.
ಅಂಥ ಬರಡುಬಾಳಲ್ಲಿ ಇದ್ದಕ್ಕಿದ್ದಂತೆ ಒಂದು ಅಚ್ಚರಿ. ಗಂಡ ಮಕ್ಕಳು ಪರವೂರಿಗೆ ಹೋಗಿದ್ದಾರೆ. ಬರುವುದು ಒಂದು ವಾರ ಅನ್ನುವುದು ಖಚಿತವಾಗಿ ಗೊತ್ತು. ಆ ಸ್ವಾತಂತ್ರ್ಯಕ್ಕೆ ಮುದಗೊಳ್ಳುತ್ತಿರಬೇಕಾದರೆ ಮನಸ್ಸು, ಅವನು ಬರುತ್ತಾನೆ. ನ್ಯಾಷನಲ್ ಜಿಯಾಗ್ರಫಿಕ್ ಚಾನಲ್ಲಿನ ಫೋಟೋಗ್ರಾಫರ್. ಅವಳಿರುವ ಮ್ಯಾಡಿಸನ್ ಕೌಂಟಿಯ ಹಳೆಯ ಸುಂದರ ಸೇತುವೆಗಳ ಫೊಟೋ ತೆಗೆಯಲು ಬರುವ ಸುಂದರಾಂಗ.
ಅವಳಿಗೆ ಪ್ರೀತಿಯೆಂಬ ನವಿಲಿಗೆ ಅಷ್ಟೊಂದು ಬಣ್ಣದ ಅಸಂಖ್ಯ ಗರಿಗಳಿವೆ ಅನ್ನುವುದು ಅವಳಿಗೆ ಅರಿವಾಗುವುದೇ ಆಗ. ಅವಳು ಏನೂ ಹೇಳದೇ ಎಲ್ಲವನ್ನೂ ಅರ್ಥ ಮಾಡಿಕೊಳ್ಳುವ, ಅವಳು ಕೇಳದೇ ಎಲ್ಲವನ್ನೂ ಕೊಡುವ, ಅವಳಿಗಿಷ್ಟವಾಗುವ ಜಾಗಗಳನ್ನು ತೋರಿಸುವ, ಅವಳನ್ನು ಮಳೆಯಲ್ಲಿ ತೋಯಿಸುವ, ಕಾಮನಬಿಲ್ಲಲ್ಲಿ ಕೂರಿಸುವ, ಜಲಪಾತದಲ್ಲಿ ಜಾರಿಸುವ, ವೇಗದ ಉತ್ಕರ್ಷವನ್ನು ತೋರಿಸುವ ಎಗ್ಗಿಲ್ಲದ ಒಡನಾಡಿ.
ನಾಲ್ಕೇ ದಿನ. ಆ ನಾಲ್ಕು ದಿನ ನಾಲ್ಕು ಶತಮಾನವಾಗಲಿ ಎಂದು ಹಂಬಲಿಸುವಂಥ ರಮ್ಯಕಾಲ. ಎಲ್ಲಾ ಬಿಟ್ಟು ಅವನೊಂದಿಗೆ ಓಡಿಬಿಡಬೇಕು ಅನ್ನಿಸುತ್ತದೆ ಆಕೆಗೆ. ಅದೇನೂ ಕಷ್ಟವೂ ಅಲ್ಲ. ಇನ್ನೇನು ಅವನ ಜೊತೆ ಹೋಗುವುದೆಂದು ನಿರ್ಧಾರವೂ ಆಗಿಬಿಡುತ್ತದೆ. ಅಲ್ಲಿಗೆ ಎಲ್ಲಾ ನಿರುತ್ಸಾಹಕ್ಕೆ, ಎಲ್ಲಾ ಯಾಂತ್ರಿಕತೆಗೆ, ಎಲ್ಲ ಬಗೆಯ ಯಾತನೆಗೆ ಕೊನೆ.
ಅವಳು ಹೋಗುವುದಿಲ್ಲ. ತಾನೇಕೆ ಹೋಗಲಿಲ್ಲ ಅವನ ಜೊತೆ ಅನ್ನುವುದನ್ನು ಆಕೆ ಒಂದು ಡೈರಿಯಲ್ಲಿ ಬರೆದಿಡುತ್ತಾಳೆ. ಅವಳು ಸತ್ತ ನಂತರ ಅದು ಮಕ್ಕಳ ಕೈಗೆ ಸಿಗುತ್ತದೆ. ಅಮ್ಮ ತಮ್ಮಿಂದ ಬಚ್ಚಿಟ್ಟ ಲೋಕದ ದರ್ಶನ ಅವರಿಗಾಗುತ್ತದೆ. ಅವಳು ಅಷ್ಟು ವರುಷ ಆ ಒರಟುತನ, ಏಕಾಂತ, ಪ್ರೇಮರಾಹಿತ್ಯ ಸ್ಥಿತಿ- ಎಲ್ಲವನ್ನೂ ಹೇಗೆ ಒಂದು ಪ್ರೀತಿಯಿಂದಾಗಿ ಸಹಿಸಿಕೊಳ್ಳಲು ಸಾಧ್ಯವಾಯಿತು ಎಂಬುದು ಅರ್ಥವಾಗುತ್ತದೆ.
ನಾನು ಅವನ ಜೊತೆ ಓಡಿಹೋಗಬಹುದಾಗಿತ್ತು. ಓಡಿ ಹೋಗಬೇಕು ಅಂದುಕೊಂಡಿದ್ದೆ. ಆದರೆ ಆ ಬದುಕಿನ ಮಿತಿಯನ್ನೂ ನಾನು ಅರ್ಥ ಮಾಡಿಕೊಂಡೆ. ಪ್ರೀತಿ ಶಾಶ್ವತವಾಗಿರಬೇಕು ಎಂದು ಬಯಸುವ ನಮ್ಮ ಸ್ವಾರ್ಥದಲ್ಲೇ ನಮ್ಮ ದುರಂತವೂ ಅಡಗಿದೆ ಅನ್ನುವುದು ಅರ್ಥವಾಯ್ತು. ಹೀಗಾಗಿ, ಆ ಪ್ರೀತಿಯ ನೆನಪಲ್ಲಿ ನಾನು ನನ್ನ ಇಡೀ ಬದುಕನ್ನು ಬೆಳಗಿಕೊಳ್ಳಬಲ್ಲೆ ಎನ್ನುವುದು ಆಕೆಗೆ ಅರ್ಥವಾಗಿಬಿಟ್ಟಿತ್ತು.
ಪ್ರೀತಿ ಶಾಶ್ವತವಲ್ಲ. ಅದರ ಮಧುರ ಅನುಭೂತಿಯಷ್ಟೇ ಶಾಶ್ವತ. ಅವನು ಕಣ್ಮರೆಯಾಗುತ್ತಾನೆ. ಅವನು ಉಳಿಸಿಹೋಗುವುದು ಆ ಕ್ಷಣಗಳು ಹೊಮ್ಮಿಸಿದ ಬೆಳಕನ್ನು ಮಾತ್ರ. ಅದು ಎಲ್ಲ ಕತ್ತಲೆಯನ್ನು ಹೊರದಬ್ಬುವುದಕ್ಕೆ ಸಾಕು.
ಹಾಗನ್ನಿಸಿದ ದಿನ ಕೊರಗು ಹರಿದಿರುತ್ತದೆ. ಬೆರಗು ಉಳಿದಿರುತ್ತದೆ!
-3-
ಬಿ ಆರ್ ಲಕ್ಷ್ಮಣರಾವ್ ಬರೆದ ಕವಿತೆಗಳನ್ನು ಸುಮ್ಮನೆ ಓದುತ್ತಾ ಕುಳಿತಾಗ ಸಿಕ್ಕ ನಾಲ್ಕಾರು ಸಾಲುಗಳು ಮತ್ತೆ ಮತ್ತೆ ಕಾಡುತ್ತಿವೆ:
ಬಾಳ ಗೆಳತಿಯೆ ತರವೇ ನನ್ನಲ್ಲಿ ಈ ಕೋಪ
ಮೊದಲಿನಂತೆ ನಾನಿಲ್ಲ ಎನ್ನುವ ಆರೋಪ
ಎಲ್ಲಾ ದಾಂಪತ್ಯದ ಆರೋಪವೂ ಅದೇ. ಮೊದಲು ನೀವು ಹೀಗಿರಲಿಲ್ಲ ಎಂಬುದು ಎಲ್ಲರ ತಕರಾರು. ಮೊದಲೂ ಆಮೇಲೂ ಹಾಗೇ ಇರುತ್ತಾರೆ ಎಲ್ಲರೂ. ಆದರೆ, ಹಾಗನ್ನಿಸುತ್ತದೆ ಅಷ್ಟೇ. ಅದನ್ನು ತುಂಬಿಕೊಳ್ಳಬೇಕಾದವರೂ ಅವರವರೇ.
ಮನೆಯ ತಲೆಬಾಗಿಲಲ್ಲಿ ಒಣಗಿದ್ದರೆ ತೋರಣ
ನಾನೊಬ್ಬನೇ ಅಲ್ಲ, ನೀನೂ ಕಾರಣ
ಅಕ್ಷಯ ಪಾತ್ರೆಯಲ್ಲ, ದಾಂಪತ್ಯದ ಒಲವು
ತಂದು ತುಂಬಬೇಕು ನಾವೇ ಪ್ರತಿಸಲವು.
ಅದು ನಾವೇ ತಂದು ತುಂಬಬೇಕಾದ ಪಾತ್ರೆ ಅನ್ನುವುದನ್ನು ನಿರಾಕರಿಸೋಣ. ಮತ್ತೆ ಮತ್ತೆ ತಂದು ತುಂಬುವುದಕ್ಕೆ ಬೇಕಾದ ಉತ್ಸಾಹವನ್ನು ಕಳೆದುಕೊಳ್ಳಲಿಕ್ಕೆ ಬದುಕಲ್ಲಿ ಸಕಾರಣಗಳಿರುತ್ತವೆ. ಆದರೆ, ಯಾರೋ ತಂದು ತುಂಬಿದ ಸಂತೋಷ ಕೂಡ ದಾಂಪತ್ಯವನ್ನು ಬೆಳಗಿಸಲಾರದೆ? ಬೇರೆಲ್ಲ ಸಂಬಂಧಗಳಿಗಿಂತ ಬೇರೆಯೇ ಆದ ಸಂಬಂಧ ಅದು. ಉಳಿದವರೊಂದಿಗೆ ಏನೆಲ್ಲ ಎಷ್ಟೆಲ್ಲ ಹಂಚಿಕೊಂಡರೂ ಕೊನೆಗೂ ಮನಸ್ಸು ತುಡಿಯುವುದು ಮರಳಿ ಮನೆಗೆ. ಆ ಮನೆಯೊಳಗೆ ಎಲ್ಲವೂ ಸ್ವಂತ. ಉಳಿಸಿಕೊಳ್ಳಬಹುದಾದ ಸಂಬಂಧ ಕಡಿದುಕೊಳ್ಳಬಹುದಾದ ಸಂಬಂಧವೂ ಹೌದಲ್ಲ! ಬೇರೊಂದು ಸಂಬಂಧದಲ್ಲಿ ಕಡಿದುಕೊಳ್ಳುವುದಕ್ಕೂ ಏನೂ ��ರುವುದಿಲ್ಲ. ಕಡಿದುಕೊಂಡಾಗ ಕನಿಷ್ಠ ವಿಷಾದ ಕೂಡ.
ಅಲ್ಲಿಂದಾಚೆ ವೆಂಕಟೇಶಮೂರ್ತಿಯವರ ನಾಲ್ಕು ಸಾಲುಗಳತ್ತ ಹೊರಳಿಕೊಂಡರೆ ಮತ್ತೊಂದು ಜಗದ ದರ್ಶನ:
ಇಷ್ಟು ಕಾಲ ಒಟ್ಟಿಗಿದ್ದು ಎಷ್ಟು ಬೆರೆತರೂ
ಅರಿತೆವೇನು ನಾವು ನಮ್ಮ ಅಂತರಾಳವ
ಕಡಲ ಮೇಲೆ ಸಾವಿರಾರು ಮೈಲಿ ಸಾಗಿಯೂ
ನೀರಿನಾಳ ತಿಳಿಯಿತೇನು ಹಾಯಿದೋಣಿಗೆ
ಸಾವಿರಾರು ಮುಖದ ಚೆಲುವ ಹಿಡಿದು ತೋರಿಯೂ
ಒಂದಾದರೂ ಉಳಿಯಿತೇ ಕನ್ನಡಿಯ ಪಾಲಿಗೆ?
ಇವೆಲ್ಲಕ್ಕೂ ಉತ್ತರಿಸುವುದು ಕೆ ಎಸ್ ನ ಕವಿತೆ:
ನಗುವಾಗ ನಕ್ಕು ಅಳುವಾಗ ಅತ್ತು
ಮುಗಿದಿತ್ತು ಅರ್ಧದಾರಿ
ಹೂಬಳ್ಳಿಯಿಂದ ಹೆಮ್ಮರನ ಎದೆಗೆ
ಬಿಳಿಬಿಳಿಯ ಹಕ್ಕಿ ಹಾರಿ.
ಹಾರದೆ ಉಳಿದ ಹಕ್ಕಿ, ಮುಗಿಯದ ಅರ್ಧ ದಾರಿ, ಕನ್ನಡಿಯಲ್ಲಿ ಮಿಂಚಿ ಮರೆಯಾದ ಮುಖ. ಅಷ್ಟು ಸಾಕಲ್ಲ. ಅಥವಾ ವಿವರವಾಗಿ ಹೇಳಬೇಕಾ-
ಈ ಕತ್ತಲೊಳಗೆ ಹುಡುಕುವುದು ಬೇಡ,
ಅಲ್ಲಿಹುದು ನಿನ್ನ ವೀಣೆ.
2 Comments
ಚೆನ್ನಾಗಿದೆ. ಜೀವನವನ್ನು ಇದ್ದಂತೆ ಸ್ವೀಕರಿಸಿ ಖುಷಿಯಾಗಿರುವುದೇ ನಿಜವಾದ ಸುಖ.
ಈ ಲೇಖನ ತುಂಬಾ ಅರ್ಥ ಗರ್ಭಿತವಾಗಿದೆ.