ಜೀವ ತೊರೆದ ದೇಹವನ್ನು ಗೌರವಯುತವಾಗಿ ಕಳುಹಿಸಲು ಇವರು ಬರುತ್ತಾರೆ. ಮೆರವಣಿಗೆಯಲ್ಲಿ ಕಾಣುವ ದೇವರ ಅಲಂಕೃತ ಪಲ್ಲಕ್ಕಿ ಹಿಂದೆ ಇವರ ಕೈಗಳಿರುತ್ತವೆ. ಚಟ್ಟ, ಪಲ್ಲಕ್ಕಿಗಳೇ ಇವರಿಗೆ ಬದುಕು ಕೊಟ್ಟಿದೆ, ತುತ್ತು ನೀಡಿದೆ. ಚಟ್ಟದ ಪ್ರಭಾವಳಿ ಚಕಚಕನೆ ನಿರ್ಮಾಣ ಮಾಡುವ ಕೈಚಳಕ ಈ ವೃತ್ತಿಗಾರರಿಗೆ ಸಿದ್ಧಿಸಿದೆ. ಮಲ್ಲಿಗೆ, ಗುಲಾಬಿ, ಸೇವಂತಿಗೆ, ಚೆಂಡು ಹೂವು, ಕಣಗಿಲೆ, ತುಳಸಿ ಬಳಸಿ ಪ್ರತ್ಯೇಕವಾಗಿಯೇ ಹೂವು ಮಾಲೆ ಸಿದ್ಧಪಡಿಸುವ ಈ ವೃತ್ತಿಗಾರರು ಕರಾರುವಕ್ಕಾಗಿಯೇ ಕೆಲಸ ನಿರ್ವಹಿಸಬೇಕಾಗುತ್ತದೆ. ಏಕೆಂದರೆ ಮಸಣಕ್ಕೆ ಕೊಂಡೊಯ್ಯಬೇಕಾದ ದೇಹ ಇವರಿಗಾಗಿ ಕಾಯುವುದಿಲ್ಲ. ದಿನ ಸಾಯುವವರಿಗೆ ಇವರ್ಯಾರು ಅಳುವುದು ಇಲ್ಲ. ಆದರೆ,ಸಹಾನುಭೂತಿ ಇದೆ. ಏಕೆಂದರೆ ಅಂತಿಮ ಸಂಸ್ಕಾರಕ್ಕೆ ಬಳಸುವ ಚಟ್ಟವೇ ಇವರ ತುತ್ತಿನ ಚೀಲ. ಬೆಂಗಳೂರಿನ ಗರುಡ ಮಾಲ್ ಸಮೀಪದ ಗಣೇಶ ದೇವಸ್ಥಾನದ ಅಂಗಳದಲ್ಲಿ ಹೂಮಾಲೆ ಪೋಣಿಸುವ, ದೇವರ ಉತ್ಸವಗಳಿಗೆ ಪಲ್ಲಕ್ಕಿ ಸಿದ್ಧಪಡಿಸುವ ನೀಲಸಂದ್ರದ ಮುನ್ನಿರತ್ನಂ ಅವರ ಕುಟುಂಬ 50 ವರ್ಷಗಳಿಂದ ಈ ವೃತ್ತಿಯನ್ನು ಮುಂದುವರಿಸಿಕೊಂಡು ಬಂದಿದೆ. ಚಟ್ಟ ನಿರ್ಮಾಣಕ್ಕೆ ಬೇಕಾದ ಭತ್ತದ ಹುಲ್ಲು, ಬಿದರಿನ ಗಳ, ಹಗ್ಗ, ಬಾಳೆದಿಂಡು, ಬ್ಯಾಂಡ್ ಸೆಟ್, ಹೂವು ಪೋಣಿಸುವ ನುರಿತ ಕೆಲಸಗಾರರ ತಂಡಕ್ಕೆ ಮುನ್ನಿರತ್ನಂ ಮಾಲೀಕರು. ಸಂಘಟಿತವಾಗಿ ನಡೆಯುವ ಈ ಕಸಬುನ್ನು ಬೆಂಗಳೂರಿನ ಹಲಸೂರು, ಕೆ.ಆರ್.ಮಾರುಕಟ್ಟೆ ಪ್ರದೇಶದಲ್ಲಿ ನೆಲೆಸಿರುವ ಕೆಲವೇ ಕುಟುಂಬಗಳು ಮುಂದುವರಿಸಿಕೊಂಡು ಬಂದಿವೆ. ವೃತ್ತಿಗೆ ಎರಡು ಮುಖ: ಈ ವೃತ್ತಿಗೆ ಎರಡು ಮುಖಗಳಿವೆ. ಒಂದು ಸಾವು. ಮತ್ತೊಂದು ಸಂಭ್ರಮ. ಚಟ್ಟ ಕಟ್ಟುವುದು ಈ ವೃತ್ತಿಗಾರರಿಗೆ ಯಾಂತ್ರಿಕ ಕೆಲಸವಾದರೆ ದೇವರ ಪಲ್ಲಕ್ಕಿಗೆ ಹೂವು ಪೋಣಿಸುವುದರಲ್ಲಿ ಧನ್ಯತಾಭಾವ ಕಾಣುತ್ತಾರೆ. ಬೆಂಗಳೂರಿನಂತಹ ಕಾಸ್ಮೋಪಾಲಿಟಿನ್ ನಗರದಲ್ಲಿ ಗ್ರಾಮ ಸಂಸ್ಕೃತಿ ಇನ್ನೂ ಉಳಿದಿದೆ. ಪ್ರತಿವರ್ಷ ಬಡಾವಣೆಗಳಲ್ಲಿ ನಡೆಯವ ಊರಹಬ್ಬ, ಜಾತ್ರೆ, ಪಲ್ಲಕ್ಕಿ ಉತ್ಸವಗಳೇ ಇದಕ್ಕೆ ಸಾಕ್ಷಿ. ಪಲ್ಲಕ್ಕಿಗೆ ಮಲ್ಲಿಗೆಯೇ ಬೇಕು: ಪಲ್ಲಕ್ಕಿ ನಿರ್ಮಾಣದಲ್ಲಿ ಮಲ್ಲಿಗೆ ಹೂವಿನದ್ದೇ ಪಾರುಪತ್ಯ. ಈ ಹೂವು ಇಲ್ಲದೆ ಆಚರಣೆ ಪೂರ್ಣಗೊಳ್ಳುವುದೇ ಇಲ್ಲ. ಪೂರ್ಣಚಂದ್ರಾಕೃತಿಯ ಬಿದರಿನ ದೊಡ್ಡ ಪ್ರಭಾವಳಿಗೆ ದುಂಡು ಮಲ್ಲಿಗೆಯನ್ನು ಮುತ್ತಿನಂತೆ ಪೋಣಿಸುವುದೇ ಸವಾಲಿನ ಕೆಲಸ. ಹಾಗಾಗಿ ಈ ವೃತ್ತಿಗಾರರಿಗೆ ವಿಪರೀತ ಬೇಡಿಕೆ ಇದೆ. ಹೂವು ಪೋಣಿಸುವ ಚಾಕಚಕ್ಯತೆಯೇ ಈ ಕಸಬು ನಡೆಸುವವರ ಕೌಶಲ. ಗಾತ್ರದಲ್ಲಿ ಮಲ್ಲಿಗೆ ಹೂವು ಸಣ್ಣ ಮತ್ತು ಅತಿಸೂಕ್ಷ್ಮ. ಇದನ್ನು ನಾಜೂಕಾಗಿ ಪೋಣಿಸಬೇಕಾಗುತ್ತದೆ. ಪಲ್ಲಕ್ಕಿಗೆ ಪೋಣಿಸುವಾಗ ದಾರ ಬಳಕೆ ಮಾಡುವುದಿಲ್ಲ. ಬಿದರಿನ ತೆಳುವಾದ ಕಡ್ಡಿಗೆ ಮುತ್ತಿನಂತೆ ಹೂವು ಪೋಣಿಸಬೇಕಾಗುತ್ತದೆ. ಇಪ್ಪತ್ತರಿಂದ ಮೂವತ್ತು ಮಂದಿ ನುರಿತ ಕುಶಲಕರ್ಮಿಗಳು ಕೆಲವೇ ಗಂಟೆಗಳ ಕಾಲ ಏಕಾಗ್ರಚಿತ್ತರಾಗಿ ಕೆಲಸದಲ್ಲಿ ತೊಡಗಬೇಕಾಗುತ್ತದೆ. ಪಲ್ಲಕ್ಕಿ ನಡುವೆ ಲೇಪಿಸುವ ಕೆಂಗುಲಾಬಿ, ಚೆಂಡು ಹೂವಿನ ಪಕಳೆ ಇದರ ಒಟ್ಟಂದ ಹೆಚ್ಚಿಸುತ್ತದೆ. ನವಿಲು, ಹಂಸ, ಕುದುರೆ ಆಕೃತಿಯ ಹೂವಿನ ಪಲ್ಲಕ್ಕಿ ನಿರ್ಮಾಣದಲ್ಲಿ ಶ್ರಮದ ಜತೆ ಜಾಣ್ಮೆಯೂ ಬೇಕಾಗುತ್ತದೆ. ಪ್ರಭಾವಳಿಗೆ ಬಳಸುವ ಬಿದರಿನ ಸಣ್ಣ ಗಳಗಳನ್ನು ಆಕೃತಿಯ ಲಯಕ್ಕೆ ತಕ್ಕಂತೆ ಬಾಗಿಸಿ ನಿರ್ಮಿಸಬೇಕಾಗುತ್ತದೆ. ಈ ವೃತ್ತಿಯಲ್ಲಿ ಪಳಗಿರುವ ಆನಂದ್ ವಿಠಲ, ಓಂಕಾರ್ ಅವರಿಗೆ ಈ ಕೆಲಸ ನೀರು ಕುಡಿದಷ್ಟು ಸಲೀಸು. ದುಂಡು ಮಲ್ಲಿಗೆಗೆ ಎಷ್ಟೇ ಬೆಲೆ ಇದ್ದರೂ ಕೆಜಿಗಟ್ಟಲೇ ಖರೀದಿಸಿ ಪಲ್ಲಕ್ಕಿ ನಿರ್ಮಿಸಬೇಕಾಗುತ್ತದೆ. ಗ್ರಾಹಕರ ಬೇಡಿಕೆಯೂ ಇದೇ ಆಗಿರುತ್ತದೆ. ಪಲ್ಲಕ್ಕಿಯೊಂದಕ್ಕೆ ₹1ಲಕ್ಷದಿಂದ ಬೆಲೆ ಆರಂಭವಾಗುತ್ತದೆ. ರಾಜ್ಯದ ವಿವಿಧ ನಗರ ಪ್ರದೇಶಗಳಲ್ಲಿ ಈ ವೃತ್ತಿ ಪ್ರಮುಖ ವ್ಯಾಪಾರವಾಗಿಯೂ ಬೆಳೆದಿದೆ. ನೂರಾರು ಮಂದಿಗೆ ಕೆಲಸವೂ ಒದಗಿಸಿದೆ. ದುಡಿದು ಉಣ್ಣುವ ಈ ಕೆಲಸ ಆತ್ಮಗೌರವದ ಪ್ರತೀಕ ಎಂದು ಈ ವೃತ್ತಿಯಲ್ಲಿ ತೊಡಗಿರುವ ಜಗದೀಶ್ ಬಾಬು ಅವರ ಹೆಮ್ಮೆಯ ಮಾತು. ವರ್ಷವಿಡೀ ಕೆಲಸ ಇದ್ದೇ ಇರುತ್ತದೆ. ಕೆಲವೇ ಗಂಟೆಗಳಲ್ಲಿ ಮುಗಿಯುವ ಈ ದುಡಿಮೆಗೆ ತಕ್ಕಂತೆ ಕೂಲಿಯೂ ಸಿಗುತ್ತದೆ. ದಿನದ ಉಳಿದ ಸಮಯವನ್ನು ಬೇರೆ ಕೆಲಸಕ್ಕೆ ವಿನಿಯೋಗಿಸಬಹುದು. ಮನೆವಾರ್ತೆ ನಿಭಾಯಿಸಿಕೊಂಡು ಈ ಕೆಲಸ ಮಾಡುವುದರಿಂದ ಕುಟುಂಬಕ್ಕೆ ಕೊಂಚ ಅದಾಯವೂ ಸಿಗುತ್ತದೆ ಎಂದು ಹೂವು ಕಟ್ಟುವ ಕುರುವಮ್ಮ ನಗೆ ಬೀರಿದರು. ಎಷ್ಟೋ ಬಡ ಮಹಿಳೆಯರು ಈ ಕೆಲಸ ಮಾಡುತ್ತಲೇ ಮನೆ ಅದಾಯಕ್ಕೆ ಬೆಂಬಲವಾಗಿ ನಿಂತಿರುವ ಸಾಹಸಗಾಥೆಯನ್ನು ಅವರು ಬಿಚ್ಟಿಟ್ಟರು. ‘ಅಲಂಕೃತ ಪಲ್ಲಕ್ಕಿಯನ್ನು ನೋಡಿದಾಗ ಅದರ ಕಲಾತ್ಮಕತೆ ಕಣ್ಮನ ಸೆಳೆಯುತ್ತದೆ. ತಮಟೆ–ನಗಾರಿ ಸದ್ದು, ವಿದ್ಯುತ್ ದೀಪಾಲಂಕಾರದ ನಡುವೆ ಬಿಳಿ ಮುತ್ತಿನಂತೆ ಕಂಗೊಳಿಸುವ ಈ ಮಲ್ಲಿಗೆ ಪಲ್ಲಕ್ಕಿ ಪೂರ್ಣಚಂದ್ರನ ಅವತಾರ. ಪರಿಮಳ ಬೀರುವ ಸುಂದರ ಪಲ್ಲಕ್ಕಿ ನಿರ್ಮಾಣದ ಹಿಂದೆ ನೂರಾರು ಕೈಗಳ ಪರಿಶ್ರಮ ಅಡಗಿರುತ್ತದೆ. ಇದೊಂದು ಜನಸಂಸ್ಕೃತಿ ದ್ಯೋತಕವಾಗಿಯೂ ಉಳಿದಿದೆ’ ಎನ್ನುವುದು ಸಮಾಜ ವಿಜ್ಞಾನಿ ಡಾ.ಸಿ.ಜಿ.ಲಕ್ಷ್ಮಿಪತಿ ಅವರ ವಿಶ್ಲೇಷಣೆ.
courtsey:prajavani.net
“author”: “ಸುಬ್ರಮಣ್ಯ ಎಚ್.ಎಂ.”,
https://www.prajavani.net/artculture/article-features/flower-and-income-653209.html