ಆತ್ಮೋನ್ನತಿಯ ದಾರಿ ತೋರಿದ ಅಪೂರ್ವ ಗುರು-ಶಿಷ್ಯರು
ವಿವೇಕಾನಂದರ ಮೇಲೆ ರಾಮಕೃಷ್ಣರಿಗೆ ಅಪಾರ ವಾತ್ಸಲ್ಯ. ತನ್ನ ಸಂದೇಶಗಳನ್ನು ಸಮರ್ಥವಾಗಿ ಜಗತ್ತಿನೆದುರಿಗೆ ಮಂಡಿಸಬಲ್ಲ ಸಾಮರ್ಥ್ಯ ಇರುವುದು ಈ ಶಿಷ್ಯನಿಗೆ ಮಾತ್ರ ಎಂಬ ಖಚಿತ ಅರಿವು ಅವರಿಗಿತ್ತು. ರಾಮಕೃಷ್ಣರ ವಿಚಾರದ ಅಲೆಗಳನ್ನು ಎಲ್ಲೆಡೆಗೆ ಕೊಂಡೊಯ್ದ ವಿವೇಕಾನಂದರು, ನವಭಾರತ ನಿರ್ವಣಕ್ಕೂ ಶ್ರಮಿಸಿದರು.
ಶ್ರೀ ರಾಮಕೃಷ್ಣ ಪರಮಹಂಸರ ಸಂದೇಶಗಳಿಗೆ ದನಿಯಾದ ಸ್ವಾಮಿ ವಿವೇಕಾನಂದರು ಶತಮಾನದ ನಂತರವೂ ತರುಣರಿಗೆ ಸ್ಪೂರ್ತಿಯ ಚಿಲುಮೆಯಾಗಿದ್ದಾರೆ. ಈಚೆಗಷ್ಟೆ ನಾವು ಗುರುಪೂರ್ಣಿಮೆಯನ್ನು ಶ್ರದ್ಧಾಭಕ್ತಿಗಳಿಂದ ಆಚರಿಸಿದೆವು. ಮತ್ತು ನಾಡಿನ ಅನೇಕ ಮಠಾಧೀಶರು ಆ ಪರ್ವದಿನದಿಂದ ಚಾತುರ್ವಸ್ಯ ಆರಂಭಿಸಿದ್ದನ್ನೂ ಬಲ್ಲೆವು. ಗುರು-ಶಿಷ್ಯ ಪರಂಪರೆಗೆ ರಾಮಕೃಷ್ಣರು-ಸ್ವಾಮಿ ವಿವೇಕಾನಂದರ ನಿದರ್ಶನ ಸಾರ್ವಕಾಲಿಕ ಆದರ್ಶ. ಈ ಸಂದರ್ಭದಲ್ಲಿ ಸ್ವಾಮಿ ವಿವೇಕಾನಂದರ ಜೀವನದ ಕೆಲವೊಂದು ಘಟನೆಗಳನ್ನು, ಗುರು-ಶಿಷ್ಯ ಗಾಢ ಸಂಬಂಧ ಮತ್ತು ಶ್ರೀ ರಾಮಕೃಷ್ಣರ ಸಂದೇಶಗಳ ಪ್ರಸಾರದ ಕುರಿತಾಗಿ ನೋಡೋಣ.
ರಾಮಕೃಷ್ಣರ ಸಾಕ್ಷಾತ್ಕಾರದ ನಂತರ ಹಲವು ಮಂದಿ ಶಿಷ್ಯರು ಅವರನ್ನು ಅನುಸರಿಸಿದರು. ಅವರಲ್ಲೊಬ್ಬರು ಸ್ವಾಮಿ ವಿವೇಕಾನಂದರು. ಯುನೈಟೆಡ್ ಸ್ಟೇಟ್ಸ್ನ ಶಿಕಾಗೋದಲ್ಲಿ ನಡೆದ ಸರ್ವಧರ್ಮ ಸಮ್ಮೇಳನದಲ್ಲಿ ಭಾಗವಹಿಸಿದ ಮೊಟ್ಟಮೊದಲ ಯೋಗಿ ವಿವೇಕಾನಂದರು ಆ ಮೂಲಕ ಆಧ್ಯಾತ್ಮಿಕ ಅಲೆಯನ್ನೇ ಎಬ್ಬಿಸಿದರು; ನವ್ಯ ವಿಚಾರಗಳ ಕುರಿತು ಜನರಲ್ಲಿದ್ದ ವಿರೋಧ ಭಾವನೆಗಳನ್ನು ಸ್ವಲ್ಪ ಮಟ್ಟಿಗೆ ನಿವಾರಿಸುವಲ್ಲಿ ಸಫಲರಾದರು.
ರಾಮಕೃಷ್ಣರಿಗೆ ವಿವೇಕಾನಂದರ ಮೇಲಿದ್ದ ಪ್ರೇಮವೇ ವಿಶಿಷ್ಟವಾದದ್ದು. ಸ್ವತಃ ತಾನು ತಲುಪಿಸಲು ಅಸಾಧ್ಯವಾದ ತನ್ನ ಸಂದೇಶಗಳನ್ನು ಜಗತ್ತಿಗೆ ತಲುಪಿಸಬಲ್ಲ ಸೂಕ್ತವಾದ ವ್ಯಕ್ತಿ ವಿವೇಕಾನಂದರೇ ಎಂಬ ಸಂಪೂರ್ಣ ಅರಿವು ಅವರಿಗಿತ್ತು. ಅವರ ಸುತ್ತಲಿದ್ದ ಅನೇಕರಿಗೆ ರಾಮಕೃಷ್ಣರ ಈ ಹುಚ್ಚುಮೋಹ ವಿಚಿತ್ರವೆನಿಸುತ್ತಿತ್ತು. ವಿವೇಕಾನಂದರು ಗುರುವಾದ ತನ್ನನ್ನು ನೋಡಲು ಒಂದು ದಿನ ಬರದಿದ್ದರೂ, ಸ್ವತಃ ತಾವೇ ಶಿಷ್ಯನನ್ನರಸಿ ಹೋಗುತ್ತಿದ್ದರು. ವಿವೇಕಾನಂದರ ಗ್ರಹಿಕಾಶಕ್ತಿ ಮತ್ತು ಅದನ್ನು ಸಾಧನವಾಗಿ ಲೋಕಕ್ಕೆ ತಲುಪಿಸುವ ಸಾಮರ್ಥ್ಯವನ್ನು ರಾಮಕೃಷ್ಣರು ಅರಿತಿದ್ದರು. ವಿವೇಕಾನಂದರೂ ರಾಮಕೃಷ್ಣರತ್ತ ಅಷ್ಟೇ ಆಕರ್ಷಿತರಾಗಿದ್ದರು. ತನ್ನ ವಯಸ್ಸಿನ ಇತರ ಯುವಕರಂತೆ ಉದ್ಯೋಗ ಅಥವಾ ಆಕರ್ಷಣೆ ಇತ್ಯಾದಿಗಳೆಡೆಗೆ ಸಾಗದೆ ತಮ್ಮೆಲ್ಲ ಸಮಯವನ್ನು ಗುರುವಿಗಾಗಿಯೇ ಮೀಸಲಿಟ್ಟಿದ್ದರು.
ವಿವೇಕಾನಂದರ ಜೀವನದಲ್ಲಿ ಒಮ್ಮೆ ಒಂದು ಪ್ರಮುಖ ಘಟನೆ ನಡೆಯಿತು. ಅವರ ತಾಯಿ ವಿಪರೀತವಾದ ಕಾಯಿಲೆಯಿಂದ ಮರಣಶಯ್ಯೆಯಲ್ಲಿದ್ದರು. ತಾಯಿಗೆ ಅಗತ್ಯವಾದ ಆಹಾರ, ಔಷಧೋಪಚಾರಗಳಿಗೆ ತನ್ನ ಬಳಿ ಹಣವಿಲ್ಲವೆಂಬ ಅರಿವು ವಿವೇಕಾನಂದರಿಗಾಯಿತು. ತಾಯಿಯನ್ನು ಸೂಕ್ತವಾಗಿ ಉಪಚರಿಸಲಾಗದ ತನ್ನ ಸ್ಥಿತಿಯ ಬಗ್ಗೆ ಅವರಿಗೆ ತೀವ್ರವಾದ ಕೋಪವುಂಟಾಯಿತು. ವಿವೇಕಾನಂದರಂಥವರ ಕೋಪವೆಂದರೆ – ಅದು ನಿಜವಾಗಿ ತೀವ್ರವೇ ಆಗಿತ್ತು.
ಅವರು ಸೀದಾ ರಾಮಕೃಷ್ಣರ ಬಳಿಗೆ ಹೋಗಿ, ‘ಅಧ್ಯಾತ್ಮವಂತೆ, ಸಾಕ್ಷಾತ್ಕಾರವಂತೆ! ಈ ಹುಚ್ಚು ನನ್ನನ್ನು ಎಲ್ಲಿಗೆ ಒಯ್ಯುತ್ತಿದೆ? ಉದ್ಯೋಗಕ್ಕೆ ಸೇರಿ, ನನ್ನ ಕರ್ತವ್ಯ ನಿರ್ವಹಿಸಿದ್ದರೆ, ಇಂದು ನನ್ನ ತಾಯಿಯನ್ನು ಸೂಕ್ತವಾಗಿ ನೋಡಿಕೊಳ್ಳಬಹುದಿತ್ತು. ಅವಳಿಗೆ ಬೇಕಾದ ಆಹಾರ, ಔಷಧ, ಉಪಚಾರ ಎಲ್ಲವನ್ನೂ ನೀಡಬಹುದಿತ್ತು. ಇದೆಲ್ಲ ಬಿಟ್ಟು ಈ ಅಧ್ಯಾತ್ಮದ ಹುಚ್ಚು ನನ್ನನ್ನೆಲ್ಲಿ ಮುಟ್ಟಿಸುತ್ತಿದೆ?’ ಎಂದರು.
ರಾಮಕೃಷ್ಣರು ಕಾಳಿಯ ಪರಮಭಕ್ತರಾಗಿದ್ದು, ಅವರ ಮನೆಯಲ್ಲಿಯೇ ದೇವಿಯ ಗುಡಿಯಿತ್ತು. ಅವರೆಂದರು-‘ಓಹ್! ನಿನ್ನ ತಾಯಿಗೆ ಆಹಾರ ಮತ್ತು ಔಷಧದ ಅಗತ್ಯವಿದೆಯೆ? ಹಾಗಿದ್ದರೆ ನೀನೇಕೆ ಈ ತಾಯಿಯ ಬಳಿ ಹೋಗಿ ಬೇಡಬಾರದು?’
ಶಿಷ್ಯನಿಗೆ ಅದು ಒಳ್ಳೆಯ ಸಲಹೆಯೆಂದು ತೋರಿತು. ಸೀದಾ ಕಾಳಿಕಾಮಾತೆಯ ಬಳಿ ಹೋದರು. ಒಂದು ಗಂಟೆಯ ನಂತರ ಮರಳಿದಾಗ ಗುರುಗಳು ಕೇಳಿದರು- ನಿನ್ನ ತಾಯಿಗೆ ಬೇಕಾದ ಆಹಾರ, ಔಷಧ ಇತ್ಯಾದಿಗಳನ್ನು ದೇವಿಯ ಬಳಿ ಕೇಳಿಕೊಂಡೆಯಾ?’ ‘ಇಲ್ಲ. ಮರೆತುಬಿಟ್ಟೆ’. ‘ಹೋಗು, ಮತ್ತೆ ಪ್ರಾರ್ಥಿಸು’.
ಮತ್ತೆ ನಾಲ್ಕು ಗಂಟೆಗಳ ಬಳಿಕ ಬಂದಾಗಲೂ ಅದೇ ಉತ್ತರ ದೊರೆಯುತ್ತದೆ. ಪುನಃ ದೇವಿಯಲ್ಲಿಗೆ ಬೇಡಲು ಕಳಿಸುತ್ತಾರೆ. ಈ ಬಾರಿ ಎಂಟು ಗಂಟೆಗಳ ನಂತರ ಹೊರಗೆ ಬಂದ ವಿವೇಕಾನಂದರೆನ್ನುತ್ತಾರೆ-‘ಇಲ್ಲ. ದೇವಿಯನ್ನು ನಾನೇನೂ ಕೇಳುವುದಿಲ್ಲ. ಕೇಳಬೇಕಾಗಿಯೂ ಇಲ್ಲ’.
ರಾಮಕೃಷ್ಣರೆನ್ನುತ್ತಾರೆ- ‘ಒಳ್ಳೆಯದು, ನೀನು ಜಗನ್ಮಾತೆಯ ಬಳಿ ಕೋರಿಕೆಗಳನ್ನಿಟ್ಟಿದ್ದರೆ ನನ್ನ ನಿನ್ನ ಸಂಬಂಧ ಇಂದಿಗೇ ಕೊನೆಗಾಣುತ್ತಿತ್ತು. ನಾನು ಪುನಃ ನಿನ್ನನ್ನು ನೋಡುತ್ತಿರಲಿಲ್ಲ. ಜೀವನದ ಕುರಿತು ಅರಿಯದ ಮೂರ್ಖ ಮಾತ್ರ ಬೇಕು ಬೇಕು ಎಂದು ಬೇಡಿಕೊಳ್ಳುತ್ತಾನೆ.’
ಪ್ರಾರ್ಥನೆಯು ನಿಸ್ವಾರ್ಥವಾದಾಗ ಅದು ವಿಶಿಷ್ಟ ಶಕ್ತಿಯಾಗುತ್ತದೆ. ಬೇಡಿಕೆ, ನಿರೀಕ್ಷೆಗಳು ನಮ್ಮನ್ನು ಗುರಿ ಮುಟ್ಟಿಸಲಾರವು.
ದೇವರ ಅಸ್ತಿತ್ವದ ಪುರಾವೆ: ಕೇವಲ 19 ವರ್ಷದ ವಿವೇಕಾನಂದ ತೀಕ್ಷ್ಣಮತ್ತೆಯ, ಕ್ಷಾತ್ರತೇಜದ ಯುವಕ. ಪ್ರತಿಯೊಂದಕ್ಕೂ ರ್ತಾಕ ಉತ್ತರ ನಿರೀಕ್ಷಿಸುವ ಹುಮ್ಮಸ್ಸು. ‘ದೇವರು, ದೇವರು ಎಂದು ಹೇಳುತ್ತೀರಲ್ಲ, ಎಲ್ಲಿದ್ದಾನೆ ದೇವರು? ನನಗೆ ಪುರಾವೆ ಬೇಕು. ತೋರಿಸಿ’ ಎಂದು ರಾಮಕೃಷ್ಣರನ್ನು ಕೇಳಿದರು.
ರಾಮಕೃಷ್ಣ ಪರಮಹಂಸರು ಸರಳವಾದ ವ್ಯಕ್ತಿ. ವಿದ್ಯಾವಂತರಲ್ಲ. ಸಾಕ್ಷಾತ್ಕಾರ ಪಡೆದಿದ್ದ ಅತೀಂದ್ರಿಯ ವ್ಯಕ್ತಿ. ಆದರೆ ಪಂಡಿತರಲ್ಲ. ಹಾಗಾಗಿ ಸರಳ ಮಾತುಗಳಲ್ಲಿ ಹೇಳಿದರು-‘ನಾನೇ ಪುರಾವೆ. ದೇವರಿದ್ದಾನೆ ಎಂಬುದಕ್ಕೆ ನಾನೇ ಸಾಕ್ಷಿ.’
ವಿವೇಕಾನಂದರಿಗೆ ಏನು ಹೇಳಬೇಕೋ ತಿಳಿಯಲಿಲ್ಲ. ದೇವರಿದ್ದಾನೆ ಎಂಬುದಕ್ಕೆ ಬೀಜ ಮೊಳಕೆಯೊಡೆಯುವುದೇ ಸಾಕ್ಷಿ; ಸೌರಮಂಡಲದ ಚಲನೆಯೇ ಸಾಕ್ಷಿ… ಇಂತಹ ವಿದ್ವತ್ಪೂರ್ಣವಾದ ಉತ್ತರಗಳನ್ನು ನಿರೀಕ್ಷಿಸಿದ್ದವರಿಗೆ ಇದರಿಂದ ಗೊಂದಲವುಂಟಾಗುತ್ತದೆ.
ಮತ್ತೆ ಮೂರು ದಿನಗಳ ನಂತರ ಪುನಃ ‘ನನಗೆ ದೇವರನ್ನು ತೋರಿಸಿ’ ಎಂದು ಹೇಳಿದಾಗ ಗುರುಗಳು ಕೇಳುತ್ತಾರೆ- ‘ನಿನಗೆ ಧೈರ್ಯವಿದೆಯೆ?’ ಪ್ರಶ್ನೆಯು ಹುಟ್ಟಿಸಿದ ತಳಮಳದಿಂದ ಕುದಿಯುತ್ತಿದ್ದ ವಿವೇಕಾನಂದರೆಂದರು, ‘ಇದೆ’.
ರಾಮಕೃಷ್ಣರು ತಮ್ಮ ಪಾದವನ್ನೆತ್ತಿ ವಿವೇಕಾನಂದರ ಎದೆಯ ಮೇಲಿಡುತ್ತಾರೆ. ಅಷ್ಟೇ! ದೇಹ, ಮನಸ್ಸಿನ ಪರಿಧಿಯಾಚೆಗಿನ ಸಮಾಧಿಸ್ಥಿತಿಗೆ ಹೋದ ವಿವೇಕಾನಂದರು ಅದರಿಂದ ಬಾಹ್ಯಲೋಕಕ್ಕೆ ಮರಳಿದ್ದು ಹನ್ನೆರಡು ತಾಸುಗಳ ನಂತರವೇ. ಮತ್ತೆ ಅವರೆಂದೂ ಹಳೆಯ ನರೇಂದ್ರನಾಗುಳಿಯಲಿಲ್ಲ; ಜೀವಮಾನದಲ್ಲಿ ಮತ್ತೆಂದೂ ಅಂಥ ಪ್ರಶ್ನೆ ಮಾಡಲಿಲ್ಲ.
ಶಾರದಾಮಾತೆಯ ಆಶೀರ್ವಾದ: ಸ್ವಾಮಿ ವಿವೇಕಾನಂದರ ಜೀವನದಲ್ಲೊಂದು ಸುಂದರವಾದ ಘಟನೆಯಿದೆ. ರಾಮಕೃಷ್ಣ ಪರಮಹಂಸರ ದೇಹಾಂತ್ಯವಾದ ನಂತರ ವಿವೇಕಾನಂದರು ಒಂದಿಷ್ಟು ಯುವಕರ ಗುಂಪಿನೊಡನೆ ನವಭಾರತ ನಿರ್ವಣಕ್ಕಾಗಿ ಪ್ರಯತ್ನಿಸುತ್ತ ದೇಶದುದ್ದಕ್ಕೂ ಪ್ರವಾಸ ಮಾಡತೊಡಗುತ್ತಾರೆ. ಆಗ ಯಾರೋ ಒಬ್ಬ ವ್ಯಕ್ತಿ, ಶಿಕಾಗೋದಲ್ಲಿ ನಡೆಯಲಿರುವ ಸರ್ವ ಧರ್ಮ ಸಮ್ಮೇಳನದ ಕುರಿತು ತಿಳಿಸಿ ಅಲ್ಲಿಗೆ ಹೋಗಿ ತಮ್ಮ ಚಿಂತನೆಗಳನ್ನು ಮಂಡಿಸಬಹುದೆಂದು ಸಲಹೆ ಕೊಟ್ಟರು. ನಿಜವಾಗಿಯೂ ಇಲ್ಲಿ ವಿವೇಕಾನಂದರ ಮಾತುಗಳನ್ನು ಕೇಳುವವರಿರಲ್ಲ. ತರುಣನೊಬ್ಬ ಧರ್ಮಗ್ರಂಥಗಳಲ್ಲಿ ಉಲ್ಲೇಖಿಸದ ಗಂಭೀರ ವಿಷಯಗಳನ್ನು ಜನರಿಗೆ ತಲುಪಿಸಲು ಅಲ್ಲಿಂದಿಲ್ಲಿಗೆ ಓಡಾಡುತ್ತಿದ್ದರೆ ಅದನ್ನು ಕೇಳಬೇಕು ಯಾರು? ಆ ವ್ಯಕ್ತಿ ಸೂಚಿಸಿದ-‘ನೀವು ಶಿಕಾಗೋಗೆ ಹೋಗಿ. ನಿಮ್ಮ ವಿಚಾರಗಳಿಂದ ಅಲೆಯೆಬ್ಬಿಸಿ. ಅಲ್ಲಿ ಎದ್ದ ಅಲೆಯಿಂದಾಗಿ ಇಲ್ಲಿಯೂ ಎಲ್ಲರೂ ನಿಮ್ಮೆಡೆಗೆ ಗಮನ ವಹಿಸುವರು.’
ರಾಮಕೃಷ್ಣ ಪರಮಹಂಸರ ವಾಣಿಗಳನ್ನು ಜಗತ್ತಿಗೆ ಪರಿಚಯಿಸಲು ಪಶ್ಚಿಮಕ್ಕೆ ಪ್ರಯಾಣಿಸುವ ಮುನ್ನ ವಿವೇಕಾನಂದರು ಶ್ರೀಶಾರದಾ ದೇವಿಯಲ್ಲಿಗೆ ಹೋಗಿ ಆಶೀರ್ವಾದ ಬೇಡುತ್ತಾರೆ. ಆ ಸಮಯದಲ್ಲಿ ಶಾರದಾದೇವಿ ಹಾಡೊಂದನ್ನು ಹಾಡುತ್ತ ಅಡುಗೆಯಲ್ಲಿ ತೊಡಗಿರುತ್ತಾರೆ. ಭಾರತದಲ್ಲಿ ಹಾಡುಗಳನ್ನು, ಸ್ತೋತ್ರಗಳನ್ನು ಹಾಡುತ್ತ ಅಡುಗೆ ಮಾಡುವುದು ಬಹಳ ಸಾಮಾನ್ಯವಾದ ವಿಷಯ. ಈಗ ಆ ಕೆಲಸವನ್ನು ಐಪಾಡ್ಗಳು ಮಾಡುತ್ತಿವೆ ಎನ್ನಿ! ಆದರೆ ಹಿಂದೆಲ್ಲ ತಾಯಂದಿರಿಗೆ ಅಡುಗೆಯೆಂದರೆ ಪೂಜೆಯಂತೆ, ವ್ರತದಂತೆ. ಪ್ರೇಮದಿಂದ ಅಡುಗೆ ಮಾಡಿ ಬಡಿಸಿದ್ದನ್ನು ಸಂತೃಪ್ತಿಯಿಂದ ಉಣ್ಣುವುದನ್ನು ನೋಡುವುದೇ ಅವರಿಗೆ ಪರಮ ಸಂತೋಷ. ಅಡುಗೆಯೆನ್ನುವುದು ಸಂತೋಷದ ವಿಸ್ತೃ ಕ್ರಿಯೆ. ಇಪ್ಪತ್ತು- ಮೂವತ್ತು ನಿಮಿಷದ ಭೋಜನಕ್ಕಾಗಿ ಕಡಿಮೆಯೆಂದರೂ 3-4 ಗಂಟೆಗಳ ಕಾಲ ಶ್ರದ್ಧೆಯಿಂದ ಅಡುಗೆ ತಯಾರಿಸುತ್ತಿದ್ದರು. ಹಾಡು, ದೇವರನಾಮ ಮುಂತಾದವುಗಳನ್ನು ಹಾಡುತ್ತ ಅಡುಗೆ ಮಾಡುತ್ತಿದ್ದರು. ನಮ್ಮ ತಾಯಿಯಂತೂ ಯಾವಾಗಲೂ ಹಾಡಿಕೊಳ್ಳುತ್ತಿದ್ದರು.
‘ನಾನು ಗುರುಗಳ ಸಂದೇಶಗಳನ್ನು ಜಗತ್ತಿಗೆ ತಲುಪಿಸಲು ಯುನೈಟೆಡ್ ಸ್ಟೇಟ್ಸ್ಗೆ ಹೊರಡಲು ಸಿದ್ಧನಾಗಿದ್ದೇನೆ’ ವಿವೇಕಾನಂದರ ಮಾತಿಗೆ ಮಾತೆ ಶಾರದಾದೇವಿ ಏನೂ ಉತ್ತರಿಸುವುದಿಲ್ಲ. ಇದ್ದಕ್ಕಿದ್ದಂತೆ ‘ನರೇನ್, ಆ ಚಾಕುವನ್ನಿತ್ತ ಕೊಡು’ ಎಂದು ತೋರಿಸುತ್ತಾರೆ. ವಿವೇಕಾನಂದರು ಚಾಕುವನ್ನೆತ್ತಿಕೊಂಡು ಒಂದು ವಿಶಿಷ್ಟ ರೀತಿಯಲ್ಲಿ ಶಾರದಾದೇವಿಗೆ ನೀಡುತ್ತಾರೆ. ನಂತರ ಆಕೆ ‘ನಿನಗೆ ನನ್ನ ಆಶೀರ್ವಾದವಿದೆ. ಹೋಗಿ ಬಾ’ ಎನ್ನುತ್ತಾರೆ.
ಅದಕ್ಕೆ ವಿವೇಕಾನಂದರು, ’ನೀವೇಕೆ ಆಶೀರ್ವದಿಸಲು ಇಷ್ಟು ಸಮಯ ತೆಗೆದುಕೊಂಡಿರಿ? ಅಲ್ಲದೆ ನಿಮ್ಮ ಅಡುಗೆಗೆ ಬೇಕಾದ ತರಕಾರಿ ಕತ್ತರಿಸಿಯಾಗಿದೆ. ಆದರೂ ಚಾಕುವನ್ನೇಕೆ ನನ್ನಿಂದ ತೆಗೆದುಕೊಂಡಿರಿ?’ ಎಂದು ಕೇಳುತ್ತಾರೆ.
ಶಾರದಾದೇವಿ ಉತ್ತರಿಸುತ್ತಾರೆ-‘ಗುರುಗಳು ಹೋದ ನಂತರ ನೀನು ಹೇಗಿದ್ದೀ ಎಂದು ನನಗೆ ತಿಳಿಯಬೇಕಾಗಿತ್ತು. ಈಗ ನೀನು ಚೂರಿಯನ್ನು ನನ್ನ ಕೈಗಿಡುವ ಈ ಒಂದು ರೀತಿಯಲ್ಲೇ ನೀನು ಸಮರ್ಥನಿದ್ದೀಯ, ಗುರುಗಳ ಸಂದೇಶಗಳನ್ನು ಸಮರ್ಥವಾಗಿ ತಲುಪಿಸಬಲ್ಲೆ ಎಂದು ಖಾತ್ರಿಯಾಯಿತು’.
ಶ್ರೀ ರಾಮಕೃಷ್ಣರು ಮತ್ತು ವಿವೇಕಾನಂದ ಸಂದೇಶ: ಅನೇಕ ಗುರುಗಳು ತಮ್ಮಷ್ಟಕ್ಕೇ ಪ್ರಸಿದ್ಧಿಗೆ ಬರಲಾರರು. ಜಗತ್ತಿನ ಆಗುಹೋಗುಗಳ ಕುರಿತಾಗಿ ಅಷ್ಟಾಗಿ ಪ್ರಾಜ್ಞರಲ್ಲದ ಅಂತಹ ಗುರುಗಳ ಸಂದೇಶಗಳನ್ನು ಜನರತ್ತ ಕೊಂಡೊಯ್ಯಲು ಸಮರ್ಥ ಶಿಷ್ಯರ ಅವಶ್ಯಕತೆಯಿರುತ್ತದೆ. ಇಂದು ಎಲ್ಲರೂ ಶ್ರೀ ರಾಮಕೃಷ್ಣರ ಕುರಿತು ಮಾತನಾಡುತ್ತಾರೆ. ರಾಮಕೃಷ್ಣರು ಸ್ಪಟಿಕದಷ್ಟು ಸ್ಪುಟವಾದ ಜ್ಞಾನಿ. ಅವರೊಬ್ಬ ಲೋಕೋತ್ತರ ಸಂಭವ. ಆದರೆ ಅದೇ ಸಮಯಕ್ಕೆ ಜಗತ್ತಿನ ಕಣ್ಣಲ್ಲಿ ಅವರು ನಿರಕ್ಷರಕುಕ್ಷಿ. ವಿವೇಕಾನಂದರ ಆಗಮನವಾಗದಿದ್ದರೆ ಅವರೆಲ್ಲೋ ‘ವನಕುಸುಮ’ದಂತೆ ಅಜ್ಞಾತವಾಗಿ ಉಳಿದುಬಿಡಬಹುದಿತ್ತು. ಅಸಂಖ್ಯಾತ ಹೂವುಗಳರಳುತ್ತವೆ. ಆ ಪೈಕಿ ಎಷ್ಟು ತಾನೇ ಗುರುತಿಸಲ್ಪಡುತ್ತವೆ?
courtesy:vijayavani.net