ಆತ್ಮಕ್ಕೆ ಸಾವಿಲ್ಲ; ಆತ್ಮೀಯರಿಗೆ ಉಂಟಲ್ಲ!

ಆತ್ಮಕ್ಕೆ ಸಾವಿಲ್ಲ; ಆತ್ಮೀಯರಿಗೆ ಉಂಟಲ್ಲ!

ನಮ್ಮಲ್ಲಿ ಎರಡು ಥಿಯರಿಗಳಿವೆ. ಮನುಷ್ಯ ಸ್ಥಿತಪ್ರಜ್ಞನಾಗಿರಬೇಕು. ಯಾವುದಕ್ಕೂ ವಿಚಲಿತನಾಗಬಾರದು. ಕಷ್ಟ ಬಂದಾಗ ಕುಗ್ಗಬಾರದು; ಸುಖಬಂದಾಗ ಹಿಗ್ಗಬಾರದು. ಅವಮಾನವನ್ನೂ ಸನ್ಮಾನವನ್ನೂ ಒಂದೇ ಎಂಬಂತೆ ಸ್ವೀಕರಿಸಬೇಕು ಎನ್ನುವವರು ಒಂದು ಪಂಥಕ್ಕೆ ಸೇರಿದವರು.
ಅದೇ ಇನ್ನೊಂದು ಪಂಗಡಕ್ಕೆ ಸೇರಿದವರದ್ದು ಭಾವನಾತ್ಮಕ ಸಿದ್ಧಾಂತ. ಮನುಷ್ಯ ಭಾವನೆಗಳಿಗೆ ಬಂಧಿ. ಸ್ಥಿತಪ್ರಜ್ಞನಾಗಿರುವುದು ಎಂದರೆ ಕಲ್ಲಾಗಿರುವುದು. ಕಲ್ಲಾಗಿರುವುದು ಒಳ್ಳೆಯ ಗುಣವೇನಲ್ಲ. ಅವನ ಹೃದಯ ಕಲ್ಲು ಎಂದು ನಾವು ಬೈಯುವುದಿಲ್ಲವೇ? ನೋಯಿಸಿದಾಗ ನೊಂದು, ಬೇಯಿಸಿದಾಗ ಬೆಂದು ಬದುಕುವುದೇ ಜೀವನ. ಸಾರ್ಥಕತೆ ಇರುವುದೇ ಅದರಲ್ಲಿ ಎಂದು ವಾದಿಸುವವರೂ ಸಿಗುತ್ತಾರೆ.
ಡಿ. ವಿ. ಜಿ. ಬರೆದದ್ದನ್ನೇ ಓದಿ;
ಹುಲ್ಲಾಗು ಬೆಟ್ಟದಡಿ ಮನೆಗೆ ಮಲ್ಲಿಗೆಯಾಗು
ಕಲ್ಲಾಗು ಕಷ್ಟಗಳ ಮಳೆಯ ವಿಧಿ ಸುರಿಯೆ
ಬೆಲ್ಲಸಕ್ಕರೆಯಾಗು ದೀನದುರ್ಬಲರಿಂಗೆ
ಎಲ್ಲರೊಳಗೊಂದಾಗು…
ಈ ಮಾತುಗಳಿಗೂ ಗೀತೆಯ ಸ್ಥಿತಪ್ರಜ್ಞತೆಗೂ ಸಂಬಂಧವಿಲ್ಲ. ನೋವು ಮತ್ತು ನಲಿವು ಯಾರಿಗೆ ಒಂದೇ ಆಗಿರುತ್ತದೆಯೋ… ಎಂದು ಉಪದೇಶಿಸುತ್ತದೆ ಗೀತೆ. ಡಿವಿಜಿಯಾದರೋ ಒಂದೊಂದು ಭಾವಕ್ಕೆ ಒಂದೊಂದು ಪ್ರತಿಕ್ರಿಯೆ ಇರಲಿ ಅನ್ನುತ್ತಾರೆ. ಆದರೆ ಎಲ್ಲರೊಳಗೊಂದಾಗುವುದು ತುಂಬ ಪ್ರಜ್ಞಾಪೂರ್ವಕವಾಗಿ ಆದಾಗ ನಾವು ಸ್ಥಿತಪ್ರಜ್ಞರೇ ಆಗಿರುತ್ತೇವಷ್ಟೇ. ಅಂಥ ಸ್ಥಿತಪ್ರಜ್ಞತೆ ಕೇವಲ ನಾಟಕದಲ್ಲಷ್ಟೇ ಸಾಧ್ಯ. ರಂಗದ ಮೇಲೆ ನಿಂತು ನಗುವವನಿಗೆ ತಾನು ನಗುತ್ತಿರುವುದು ಸುಳ್ಳೆಂದು ಗೊತ್ತಿರುತ್ತದೆ. ಅಳುವವನಿಗೂ ತಾನು ಅಳುತ್ತಿರುವುದು ಸುಳ್ಳೆಂದು ಗೊತ್ತಿರುತ್ತದೆ. ಆದರೆ ಆ ಕ್ಷಣಕ್ಕೆ, ಆ ಪರಿಸರಕ್ಕೆ ಆ ಅಳು ಮತ್ತು ನಗು ಸುಳ್ಳಲ್ಲ. ಅಂಥ ಕ್ಷಣಿಕವಾದ ನೋವು ನಲಿವುಗಳನ್ನು ಜೀವನದಲ್ಲೂ ಮನುಷ್ಯ ಪ್ರಕಟಿಸಬಹುದೇ?
ನಾವು ಮಾಡುತ್ತಿರುವುದೂ ಅದನ್ನೇ ಅಲ್ಲವೇ ಎಂದು ಕೇಳುವವರಿದ್ದಾರೆ. ಯಾರೋ ಸತ್ತಾಗ ಅವರ ಮನೆ ಮುಂದೆ ನಿಂತು `ಹೋ’ ಎಂದು ಅಳುತ್ತೇವೆ. ಇನ್ನಾರಿಗೋ ಪುತ್ರೋತ್ಸವವಾದಾಗ ಅವರ ಮನೆಗೆ ಹೋಗಿ `ಓಹೋ’ ಎಂದು ನಗುತ್ತೇವೆ. ಆದರೆ ಅವೆರಡೂ ನಮಗೆ ಸಂತೋಷವನ್ನಾಗಲೀ ದುಃಖವನ್ನಾಗಲೀ ನೀಡಿರುತ್ತವೆಯೇ ಎಂದು ಯೋಚಿಸಿದರೆ ಉತ್ತರಿಸುವುದು ಕಷ್ಟವಾಗುತ್ತದೆ.
ಈ ಹೊತ್ತಿಗೆ ಷೇಕ್ಸಪಿಯರ್ ಹೇಳಿದ್ದನ್ನು ನೆನೆಯಬೇಕು;
All the world is a stage.
And all the men and women merely players:
They have their exits and entrances;
And one man in his time plays many parts,
His acts being seven ages.
ಮನುಷ್ಯ ಅಂಥ ಸ್ಥಿತಪ್ರಜ್ಞ ಹೌದಾದರೆ ಇಡೀ ಜಗತ್ತೇ ಒಂದು ನಾಟಕರಂಗ. ನಾವೆಲ್ಲ ಪಾತ್ರಧಾರಿಗಳು. ಪ್ರತಿಯೊಬ್ಬರಿಗೂ ಒಂದು ಪ್ರವೇಶ ಮತ್ತು ನಿರ್ಗಮನ ಇರುತ್ತದೆ. ಏಕಕಾಲಕ್ಕೆ ಒಬ್ಬ ವ್ಯಕ್ತಿ ಅನೇಕ ಪಾತ್ರಗಳನ್ನು ಮಾಡುತ್ತಿರುತ್ತಾನೆ…
ಹಾಗಿದ್ದರೆ ನಮಗೆ `ಅನ್ನಿಸುವುದಕ್ಕೆ’ ಅರ್ಥವೇ ಇಲ್ಲವೇ?
ವಿಜ್ಞಾನ ಹೇಳುತ್ತದೆ. ಮನುಷ್ಯನ ದೇಹದಲ್ಲಿ ನಾಲ್ಕನೇ ಮೂರು ಭಾಗ ನೀರು. ಆ ನೀರು ಕುದಿಯುತ್ತದೆ. ಕಣ್ಣೀರಾಗಿ ಹರಿಯುತ್ತದೆ. ತಳಮಳಗೊಳಿಸುತ್ತದೆ. ಹೀಗಾಗಿ ನಾವು ಭಾವಬಿಂದುವಿಗೆ ಅಧೀನರು;ವೈಜ್ಞಾನಿಕವಾಗಿ ಕೂಡ.
ಆದರೆ ಶ್ರೀಕೃಷ್ಣ ಇದೇ ಸಂದರ್ಭದಲ್ಲಿ, ಆ ಮೇಲಿನ ದಿನಗಳಲ್ಲಿ, ಅತ್ಯಂತ ಪ್ರಸಿದ್ಧವಾದ ಶ್ಲೋಕವನ್ನು ಉಸುರುತ್ತಾನೆ;
ವಾಸಾಂಸಿ ಜೀರ್ಣಾನಿ ಯಥಾವಿಹಾಯ
ನವಾನಿ ಗೃಹ್ಣಾತಿ ನರೋಪರಾಣಿ
ಹಳೆಯ ಹರಿದುಹೋದ ಬಟ್ಟೆಗಳನ್ನು ತೆಗೆದೆಸೆದು ಹೊಸ ಬಟ್ಟೆಗಳನ್ನು ತೊಡುವಂತೆ ಅನುಪಯುಕ್ತವೂ ಹಳೆಯದೂ ಆದ ಶರೀರವನ್ನು ತ್ಯಜಿಸಿ….
ಹಾಗಿದ್ದರೆ ಆತ್ಮಕ್ಕೆ ಯಾವ ಪಾಪವೂ ಅಂಟುವುದಿಲ್ಲವೇ? ಆ ಪ್ರಶ್ನೆಗೂ ಗೀತೆಯಲ್ಲಿ ಉತ್ತರವಿದೆ. ಆತ್ಮವನ್ನು ನೈನಂ ಛಿಂದಂತಿ ಶಸ್ತ್ರಾಣಿ ನೈನಂ ದಹತಿ ಪಾವಕ ಶಸ್ತ್ರಗಳು ಕತ್ತರಿಸಲಾರವು, ಅಗ್ನಿಯು ಸುಡಲಾರದು. ನೀರು ತೋಯಿಸಲಾರದು ಮತ್ತು ಗಾಳಿ ಒಣಗಿಸಲಾರದು.
ಇದಕ್ಕಿಂತ ತಮಾಷೆ ಮತ್ತೊಂದಿಲ್ಲ. ಆತ್ಮವನ್ನು ಪಂಚಭೂತಗಳು ಮುಟ್ಟುವುದಿಲ್ಲ, ತಟ್ಟುವುದಿಲ್ಲ ನಿಜ. ಆದರೆ ಪಂಚಮಹಾಪಾತಕಗಳು ಮುಟ್ಟಲಾರವೇ?
ಆತ್ಮನು ಕಣ್ಣಿಗೆ ಕಾಣುವುದಿಲ್ಲ; ಅದನ್ನು ಗ್ರಹಿಸುವುದಕ್ಕೂ ಸಾಧ್ಯವಿಲ್ಲ. ಆತ್ಮ ವಿಕಾರ ಹೊಂದುವುದಿಲ್ಲ; ಹೀಗಾಗಿ ನೀನು ದೇಹಕ್ಕಾಗಿ ದುಃಖಿಸಬಾರದು ಎನ್ನುತ್ತಲೇ ಭಗವದ್ಗೀತೆ ಮತ್ತೊಂದು ತುಂಬ ಸಹಜವೆಂದು ಕಾಣುವ ವಾದವನ್ನು ಮುಂದಿಡುತ್ತದೆ.
ಜಾತಸ್ಯ ಹಿ ಧ್ರುವೋ ಮೃತ್ಯುಧ್ರುವಂ ಜನ್ಮ ಮೃತಸ್ಯ ಚ
ಹುಟ್ಟಿದವರಿಗೆ ಸಾವು ತಪ್ಪದು; ಸತ್ತವರಿಗೆ ಮರುಹುಟ್ಟು ತಪ್ಪದು. ಹೀಗಾಗಿ ನೀನು ದುಃಖಿಸುವುದರಲ್ಲಿ ಅರ್ಥವಿಲ್ಲ. ಆದರೆ ಅರ್ಜುನನು ದುಃಖಿಸುತ್ತಿರುವುದು ತನ್ನ ಸಾವಿಗಾಗಿ ಅಲ್ಲ. ತನ್ನವರ ಸಾವಿಗಾಗಿ. ಅದೂ ತಪ್ಪು ಅನ್ನುತ್ತಾನೆ ಕೃಷ್ಣ.
ಹಾಗಿದ್ದರೆ ಆತ್ಮರೂಪಿಯಾಗಿ ಬದುಕಿರುವವರನ್ನು ನಮ್ಮವರು ಅನ್ನಲಾಗುತ್ತದೆಯೇ? ಆತ್ಮಕ್ಕೆ ಸಾವಿಲ್ಲ ಎಂಬ ಕಾರಣಕ್ಕೆ ನಮ್ಮ ಆತ್ಮೀಯರು ಸತ್ತಾಗ ಅಳದೇ ಕೂರುವುದು ಸರಿಯೇ?
ಇಂಥ ಪ್ರಶ್ನೆ ಮೂಡಿದಾಗ ಗೀತೆ ಮತ್ತೊಂದು ಅರ್ಥಪೂರ್ಣ ಎನ್ನಿಸುವ ಮಾತನ್ನು ಹೇಳುತ್ತದೆ;
ಅವ್ಯಕ್ತಾದೀನಿ ಭೂತಾನಿ ವ್ಯಕ್ತಮಧ್ಯಾನಿ ಭಾರತ
ಅವ್ಯಕ್ತನಿಧನಾನ್ಯೇವ ತತ್ರ ಕಾ ಪರಿದೇವನಾ
ಸೃಷ್ಟಿಯಾದ ಎಲ್ಲಾ ಜೀವಿಗಳೂ ಮೊದಲು ಕಾಣಿಸುವುದಿಲ್ಲ, ಮಧ್ಯೆ ಕೆಲಕಾಲ ಕಾಣಿಸುತ್ತವೆ ಮತ್ತು ನಾಶವಾದ ಮೇಲೆ ಕಾಣಿಸುವುದಿಲ್ಲ. ಹೀಗಿರುವಾಗ ಶೋಕಕ್ಕೆ ಕಾರಣವೆಲ್ಲಿದೆ?
ಈ ಪ್ರಶ್ನೆಗೆ ಉತ್ತರವೆಲ್ಲಿದೆ!

Leave a Reply