ಹುಚ್ರಾಯಪ್ಪನ ಹೊಸ ಕಂಪನಿ

 ಹುಚ್ರಾಯಪ್ಪನ ಹೊಸ ಕಂಪನಿ
ನಿನ್ನೆ ರಾತ್ರಿ ಟಿವಿ ವಾಹಿನಿಯಲ್ಲಿ ಕಾಳೀ ಸ್ವಾಮಿಯ ಡ್ಯಾನ್ಸ್ ಪ್ರೋಗ್ರಾಂ ನೋಡಿ ನೋಡಿ ಸಾಕಾಗಿ ನಾನು ಟಿವಿಯನ್ನು ಕುಟ್ಟಿ ಮಲಗಿದ್ದೆ.
ರಾತ್ರಿಯ ‘ಟಿವಿ ಪಾರ್ಟಿಯ’ ಹ್ಯಾಂಗ್ಓವರಿನಿಂದಾಗಿ ಬೇಗನೇ ಏಳಲಾಗದೇ ಬೆಳಗಿನ ವಾಕಿಂಗ್ಗೆ ಹೋಗುವ ಮನಸ್ಸಿರಲಿಲ್ಲ. ಪೇಪರ್ನಲ್ಲಿ ನಿನ್ನೆಯ ‘ಬೆನ್ನು ವರ್ಸ್ಸ್ ಚೂರಿ’ಯ ಪ್ರೇಮ ಕಲಹದ ವಿಶೇಷ ವರದಿಯನ್ನು ಓದುತ್ತಾ ಕೂತಿದ್ದೆ.
ಆಗ ನಮ್ಮನೇಗೆ ನನ್ನ ಶಿಷ್ಯ ‘ಹುಚ್ರಾಯಪ್ಪ ಅಡ್ಡಮನೆ’ ಬಂದ! ಜೋಲು ಮುಖ. ಮುಖದಲ್ಲಿ ಕಳೆಯೇ ಇಲ್ಲ. ಎಂಟುದಿನ ಗಡ್ಡ ಮೀಸೆ, ಮಾಸಿದ ಅಂಗಿ ಪಂಚೆ. ಕೈಯಲ್ಲಿ ಅದೇ ಎಂದಿನ ಮಾಸಲು ಲೆದರ್ ಬ್ಯಾಗ್.
ನಾನು ಆಶ್ಚರ್ಯದಿಂದ, ‘ಏನ್ಲೇ ಹುಚ್ಚಾ ನಮ್ಮನೀವರ್ಗೂ ಬಂದಿ? ಹಿಂಗ್ಯಾಕ್ ಇಲೆಕ್ಷೆನ್ಯಾಗ ಸೋತು ಡಿಪಾಜಿಟ್ ಕಳ್ಕೊಂಡೌರಾಂಗ ಮಾರೀ ಮಾಡೀ? ಏನ್ ಕತೀ ನಿಂದು? ನಿನ್ನ ಹೊಸಾ ಕಂಪನೀ ಏನಾದ್ರೂ ಗೋತಾ ಹೊಡೀತೋ ಹ್ಯಾಂಗ’ ಅಂತ ಸ್ವಲ್ಪ ಚುಡಾಯಿಸುವಂತೆ ಕೇಳಿದೆ.
ಹುಚ್ರಾಯಪ್ಪ, ‘ಏನ್ಸಾ ಎಲ್ಲಾರಾಂಗೆ ನೀವೂನೇ ತಮಾಸೆ ಮಾಡ್ತೀರಿ?’ ಅಂತ ನೊಂದುಕೊಂಡು ಕೇಳಿದ. ಅವನ ಮಾತು ಕೇಳಿ ನಾನು ಹಾಗೆ ಮಾತಾಡಬಾರದಿತ್ತು ಅಂತ ಅನ್ನಿಸಿ,
‘ಸಾರೀ ಹುಚ್ರಾಯಾ! ಇರ್ಲಿ ಅದೇನು ನಮ್ಮನೀಗ್ ಬಂದಿ? ಎನ್ ಕೆಲ್ಸಾ?’
ನನ್ನ ಮಾತು ಕೇಳಿ ಹುಚ್ರಾಯ ಮೇಕೆಯಂತೆ ಕೆಕೆ ಅಂತ ನಗುತ್ತಾ, ‘ಓ ನೀವೇನ್ ಮಆ ಮಂತ್ರಿಯೋ ಪುಡಾರೀನೋ ಸಾ! ನಿಮ್ತಾವಾ ಕೆಲ್ಸಾ ಇರೋಕೆ! ನೆಟ್ಗೆ ನಿಮ್ ಕೆಲ್ಸಾನೇ ನಿಮ್ ಕೈಲಿ ಮಾಡ್ಕೋಳ್ಳಿಕ್ಕೆ ಆಗ್ತಾ ಇಲ್ಲ!’ ಅಂತ ನನಗೇ ಟಾಂಟ್ ಕೊಟ್ಟ. ಅವನ ಟಾಂಗಿಗೆ ನಾನೂ ನಸು ನಕ್ಕು,
‘ಇರ್ಲಿ ಹಿಂದಾಗ ಬೈಯ್ಯೂ ಅಂತ! ಈಗ್ಯಾಕ್ ಬಂದೀ ಹೇಳು?’ ಅಂತ ಅಂದು, ಮನೆಯವಳಿಗೆ ಕೂಗಿ,
‘ಏ ಏನss! ಹುಚ್ರಾಯಾ ಬಂದಾನ ಛಾ ತೊಗೊಂಡ್ ಬಾ, ಹಂಗ ನಂಗೂ ಒಂದರ್ಧಾ ತಾ!’ ಅಂತ ಜಬರ್ದಸ್ತಿನಿಂದ ಆರ್ಡರ್ ಮಾಡಿ ಹುಚ್ರಾಯನಿಗೆ ಕೂಡಲು ಹೇಳಿದೆ. ಮತ್ತೆ ಅವನ ಮುಖ ಸಪ್ಪಗಾಗಿತ್ತು. ಅವನ ಮುಖ ನೋಡಿದೆ.
‘ನೀವೇನೇ ಏಳಿ ಸಾ! ನಮ್ ಜನಕ್ಕೆ ಕ್ರಿಯಾಕರ್ಮ ಒಂದೂ ಇಲ್ಲಾ ಸಾ! ನೀವೇ ಹೇಳಿ! ನಾ ಈ ದಾರ್ವಾಡಕ್ಕೆ ಬಂದಾಗ ನಮ್ ಪರಿಸ್ತಿತಿ ಎಂಗಿತ್ತು ಸಾ! ಉಣ್ಣಾಕೆ ಉಡಾಕೇ ಇರ್ನಿಲ್ಲಾ! ನಮ್ ಸಮ್ಮಂದಿಕರೆಲ್ಲಾ ಉಚ್ನಾಯಿಯಂಗೆ ಬೀದಿ ಬೀದಿ ಅಲೀತಿದ್ರು ಅಲ್ಲವ್ರಾ?’
‘ಹೌದೂ!’
‘ನಾ ಎಸ್ಟ್ ಕಟ್ಟಾ ಪಟ್ಟ ನಮ್ ಪ್ಯಾಮಿಲೀನ ಈ ಊರ್ನಾಗೆ ಎಟ್ಟ್ಯಾಬಿಲ್ಡ್ ಮಾಡಿಲ್ಲಾ ಸಾ!’ ಅವನ ಅಧ್ವಾನದ ಇಂಗ್ಲೀಷಿಗೆ ಎಗರಿ ಬಿದ್ದು,
‘ಹೌದು ಹುಚ್ಚಾ ನೀ ಉಟ್ಟಾ ಓರಾಟ್ಗಾರಾ! ನಂಗೊತ್ತಿಲ್ಲೇನ್! ಮುಂದ್ಹೇಳು!’
‘ನಮ್ ಚಿಕ್ಕಪ್ಪನ್ ಮಗಾ, ಔರ್ ನಮ್ ಪ್ಯಾಮಿಲಿ ಇರೋದಿಗಳು ಸಾ! ಆದ್ರೂನೂವೇ ನಮ್ ಪ್ಯಾಮಿಲೀಗೆ ಒಳ್ಳೇದಾಗ್ಲೀ, ನಾಕ್ಕಾಸ್ ಸಂಪಾದ್ಸಿ ಔರೂ ನಮ್ ಇರೋದಿಗಳಂಗೆ ಚೆಂದಾಗಿರ್ಲೀ ಅಂತ ಔರ್ ಜತೀಗೆ ಸೇರಿ ಪಾಲ್ಟನರ್ ಸಿಪ್ನಲ್ಲಿ ಒಂದ್ ಕಂಪನೀನ ಓಪನ್ ಮಾಡ್ನಿಲ್ಲಾ ಸಾ ನಾ! ಓರಾಟಾ ಮಾಡಿ ಈ ಊರ್ನಾಗೆ ನಮ್ ಪ್ಯಾಮಿಲೀನ ಕಟ್ಟಿ ಬೆಳಿಸ್ನಿಲ್ವಾ?’
‘ಹೌಧೌದು!’ ಅಂತ ನಾನು ಹೇಳಿದ್ದು ಕೇಳಿ ಅವನ ಉತ್ಸಾಹ ಹೆಚ್ಚಾಯಿತು. ಮುಖದಲ್ಲಿ ತುಂಬಿದ್ದ ದುಗುಡ ಮಾಯವಾಗಿ ರೋಷ ತುಂಬತೊಡಗಿತು.
‘ಆದ್ರೆ ಆ ನನ್ ತಂಮ್ಮಾ, ಆ ನನ್ ಮಗಾ! ಎಲ್ಡ್ ವರ್ಸಾ ಕಂಪನೀ ಚೇರ್ಮನ್ ಅಂವಾ ಆಗಿರೋದು, ಆಮ್ಯಾಗೆ ನಾ ಎಲ್ಡ್ ವರ್ಸಾ ಅಂತ ಅಗ್ಲೀಮೆಂಟ್ ಆಗಿತ್ತು ಸಾ! ಕಂಪನೀ ಚೇರ್ಮನ್ಗಿರಿ ನಂಗೆ ಬಿಟ್ಟು ಕೊಡೋದಿಲ್ಲಾಂತ ಜಗಳಕ್ಕೆ ನಿಂತಾ ಸಾ! ಔರಪ್ಪಾ ಬ್ಯಾರೆ ಉಚ್ನನ್ ಮಗಾ ಒಳ್ಳೇ ತಿಕ್ಲ ಆಡ್ದಾ ಸಾ! ಬ್ಯಾಡಾದ್ದೆಲ್ಲಾ ಸರತ್ ಆಕಿ ಟಾಂಪ್ಪೇಪರ್ಮ್ಯಾಗೆ ಸೈನ್ ಆಕಂತ ಪೋರ್ಸ ಮಾಡ್ದಾ ಸಾ!’
‘ಹೂಂ! ಮುಂದ’
‘ಮುಂದೇನ್ಸಾ! ನಿಮಗೂ ಗೊತ್ತಲ್ಲ, ನಾನೂ ಔರಪ್ಪನಂತಾ ತಿಕ್ಕಲ್ ನನ್ ಮಗಾ! ನಂಗೂ ತಿಕ್ಕಲತ್ತಿ ನಮ್ ತಮ್ಗೊಳನ್ನ ಅಕ್ಕತಂಗೀರ್ನ ಕರ್ಕೊಂಡ್ ಕಂಪನೀಯಿಂದ ವೊರ್ಗೆ ಬಂದೆ ಸಾ! ಕಡೀಕೆ ಕೋಲ್ಟ್ಗೆ ಓದೆ ಸಾ! ಜಜ್ಜು ಸಾಏಬ್ರು ಸಾಬಾಸ್ ಮಗನೇ ಅಂದರು ಸಾ! ಕೇಸ್ ನಮ್ಮಂಗೆ ಆಗಿ ನಾ ಕಂಪನೀನ ಓವಲ್ಟೇಕ್…!’
‘ಓ ಟೇಕ್ಓವರ್!’
‘ಊಂ ಸಾ! ಅದೇ ಓವಲ್ಟೇಕ್ ಮಾಡ್ದೆ. ಅಂಗೇ ನಂ ಕಂಪನೀನ ಸ್ಟಾಂಗ್ ಮಾಡೋಕೆ, ಆ ಅಲ್ಕಾ ನನ್ ಮಗನ್ ಕಂಪನೀಲಿದ್ದ ಡೈರೆಕ್ಟರುಗಳನ್ನ ನಂ ಕಂಪನೀಗೆ ಸೇರಸ್ಗೊಂಡು, ನಾ ಮತ್ತಷ್ಟು ಸ್ಟಾಂಗ್ ಆದೆ ಸಾ! ನಿಮ್ಗೂ ಗೊತ್ತಲ್ಲ ಸಾ! ಅಂಗೆ ನಮ್ ಕಂಪನೀ ಸೇರ್ದೌರ್ಗೆ ಕಂಪನೀಲಿ ಒಳ್ಳೆ ಪೊಜಿಸೆನ್ ಕೊಟ್ಟೆ. ಆದ್ರೆ ಆ ತರ್ಲೆ ನನ್ ಮಕ್ಳು ಅಪರಾತೆಪರಾ ಮಾಡಿ ನನ್ ಕಂಪ್ನೀನ ದಿವಾಳಿ ಮಾಡಿ ನನ್ ಮಕಕ್ಕೆ ಮಣ್ ಮೆತ್ತಿದ್ರೂ ಸಾ!’
‘ಏ ನಿನ್ ಕಂಪನೀಗೆ ಅದ್ಯಾರೋ ಕಂಡಾಪಟ್ಟಿ ರೊಕ್ಕಾ ಕೊಟ್ಟಾರಂತಲ್ಲೇ’
‘ಅದು ಎಣ್ಮಕ್ಕಳ ಇದ್ಯಾ ಸಂಸ್ತೆ ಸಾ! ಅದಕ್ಕೆ ಒಂದಿಸ್ಟು ಅಣಾ ಯಾರೋ ಪಾಪ ತಮ್ಮಂತ ಪುಣ್ಯಾತ್ಮರು ಆಕಿದ್ದಾರೆ.’
‘ಲೇ ಹುಚ್ಚಾ ಆ ಪುಣ್ಯಾತ್ಮರ್ಯಾರಂತ ನಂಗೂ ಸ್ವಲ್ಪ ಅಡ್ರೆಸ್ಸ್ ಕೊಡ್ಲೇ. ನಾನೂ ಬಾಯ್ ಬಾಯ್ ಬಡ್ಕೊಂಡ್ರೂ ಯಾರೂ ನನ್ ಟ್ರಸ್ಟಿಗೆ ಹತ್ ಪೈಸಾ ಕೊಟ್ಟಿಲ್ಲ’ ಅಂತ ಆತುರಾತುರವಾಗಿ ಕೇಳಿ, ‘ಮುಂದ!’
‘ಕಡೀಕೆ ಕೋಲ್ಟ ನನ್ ಅರೆಸ್ಟ್ ಮಾಡಿದ್ರು ಸಾ!’
‘ಕೋರ್ಟ ಯಾಕೋ ಅರೆಸ್ಟ್ ಮಾಡ್ತದ! ಪೋಲೀಸರೇ ನಿನ್ ಅಟ್ಟಿಸ್ಗೊಂಡ್ ಬಂದ್ ಅರೆಸ್ಟ್ ಮಾಡಿದ್ರಂತ ಪೇಪರ್ನ್ಯಾಗ ಓದ್ದೆ!’
‘ಈ ಪೇಪರ್ನೌರೊಂದು ಸಾ! ಒಂಚೂರೂ ಬುದ್ದೀ ಬ್ಯಾಡ್ವಾ? ಎಲ್ಲಾ ಗೊತ್ತಿದ್ದೌರಂಗ್ ಏನೇನೋ ಬರೀತಾರೆ ಸಾ! ಯಾರೇ ಬಾಂಬ್ ಆಕಿದ್ರೂ ನಾನೇ ಆಕಿದ್ದು ಅಂತ ಆ ಇರೋದಿಗಳ ಏಳಿಕೇನ ದೊಡ್ಡದಾಗಿ ಪಿರಿಂಟ್ ಮಾಡ್ತಾರೆ! ಅದನೆಲ್ಲಾ ನಂಬೋಕಾಗ್ತದ್ರಾ!’
‘ಸುಮ್ಸುಮ್ನ ಯಾಕ್ ಬರೀತಾರ್ಲೇ ಹುಚ್ಚಾ! ಅಂಧಾಂಗ ನಿಂಗ್ ಬೇಲ್ ಸಿಗಲಿಕ್ಕೂ ತ್ರಾಸ ಆತಂತಲ್ಲೋ!’
‘ಊಂ ಸಾ! ಎಲ್ಲಾ ನಮ್ಮೌರೇ ಸೇರಿ ಪಿತೂರಿ ಮಾಡಿದ್ದಾರೆ ಸಾ! ಅನ್ನಾ ಕೊಟ್ಟ್ ಕೈಗೆ ಕೋಳಾ ಆಕ್ಸುದ್ರೂ ಸಾ! ನಂ ಬ್ರದರ್ಗಳೇ ನನ್ ಕಂಪನೀ ಚೇರ್ಮನ್ಗಿರಿಯಿಂದ ಕಿತ್ತಾಕಿದ್ರೂ ಸಾ! ಔರ್ ಕೈಗೆ ಕರಿನಾಗ್ರಾ ಕಚ್ಲೀ!’ ಅಂತ ರೋಷಾವಿಷ್ಠನಾಗಿ ಹೇಳಿದ.
ನಾನು, ‘ಸಮಾಧಾನಾ ಮಾಡ್ಕೋ ಹುಚ್ಚಾ! ದೇವ್ರಿದ್ದಾನ!’
‘ಬಿಡೀ ಸಾ! ಅವ್ನ್ಯಾವ್ ಸೀಮೇ ದೇವ್ರು! ಆ ವಯ್ಯಂಗೆ ಮಾಡಿಸದ ಪೂಜೆ ಇಲ್ಲಾ, ಓಮಾ ಔನಾ ಇಲ್ಲಾ! ನಮ್ಮನೇಯವಳನ್ನ ಕರ್ಕೊಂಡ್ ಊರಾಗಿನ ದೇವ್ರುಗೆಲ್ಲಾ ದಿಂಡುರುಳಿದೆ ಸಾ!’
‘ಹೂಂ! ಅದಿರ್ಲಿ ನಿಮ್ ಕಂಪನೀ ಚೇರ್ಮನ್ ನಿನ್ನ ಯಾಕೋ ಹಂಗೆ ನಡೆಸ್ಗೊಂಡಾ?’
‘ಏನೋ ನಂಗೆ ರಾಯಲ್ ಇದ್ದಾಂತ ಔನ್ನ ಚೇರ್ಮನ್ ಮಾಡ್ದೆ! ಆವಯ್ಯಾನೂ ನಂಗೆ ಕೈಕೊಟ್ಟು, ನಮ್ ಕಂಪನೀ ಡಾಕುಮೆಂಟನ್ನೆಲ್ಲಾ ರೂಪಾಯ್ಗೊಂದ್ರಂಗೆ ಎಲ್ಲಾರ್ಗೂನೂವೆ ಕೊಟ್ಟು, ಮತ್ತೆ ಯಾರ್ಯಾರ್ದೋ ಕೈಲಿ ಕೇಸ್ ಆಕ್ಸಿ ನಾ ದಿನಾ ಕೋಲ್ಟ ಅಲೀವಂಗೆ ಮಾಡ್ದಾ ಸಾ! ನನ್ ತಿಕಾ ಎಲ್ಲಾ ಉರ್ದೋಯ್ತು ಸಾ! ಆವಯ್ಯನ್ನೂ ಕಿತ್ತಾಕ್ದೆ! ಕಡೀಕೆ ನಮ್ ಕುಲಬಾಂದವನೊಬ್ಬನ್ನ ಮಾಡಿ ಕುಂದರ್ಸೀದೆ! ಈವಯ್ಯನೂ ನನ್ ಕ್ಯಾರೇ ಅನ್ಲಿಲ್ಲ! ಅದ್ಕೇ ಒಂದ್ ಡಿಸೀವ್ ಮಾಡ್ದೆ ಸಾ! ನಾನೇ ಒಂದ್ ಒಸಾ ಕಂಪನೀ ಓಪನ್ ಮಾಡ್ದೆ ಸಾ!’ ಅಂತ ದೊಡ್ಡ ಕತೆಯನ್ನೇ ಹೇಳಿದ.
‘ಹೌದು ನಿನ್ ಕಂಪನೀನೂ ಓಪನ್ ಆತು. ಅದು ಒಂಚೂರು ಬಿಜಿನೆಸ್ಸೂ ಮಾಡ್ತಲ್ಲಾ ಮೊನ್ನೆ ನಗರಸಭೆ ಹರಾಜು ಹಾಕಿದ್ದರಲ್ಲ! ಅದ್ರಾಗ ನೀನೂ ಸ್ವಲ್ಪ ಸಾ’ಮಾನಾ’ ಖರೀದಿ ಮಾಡಿದ್ದು ಪೇಪರ್ನ್ಯಾಗ ಬಂದಿತ್ತು. ನಾ ಓದ್ದೆ!’ ನಾನು ಸ್ವಲ್ಪ ಅಂತ ಅಂದದ್ದು ಅವನನ್ನು ಕೆರಳಿಸಿತೇನೋ.
‘ಸ್ವಲ್ಪ ಯಾಕ್ ಸಾ! ನಂ ಇರೋದೀ ಕಂಪನೀಗಳು ನನ್ ಕಂಪನೀಲಿಂದಲೇ ಸಾಮಾನ್ ಕರೀದಿ ಮಾಡ್ಬೇಕ್. ಇಲ್ದಿದ್ರೆ ಔರ್ ಬಿಜಿನೆಸ್ಸು ನಡೆಮಗಿಲ್ಲಾ ಸಾ! ಅಂಗಾಗೈತೆ ನನ್ನ ಒಸಾ ಬಿಜಿನೆಸ್ ಈಗ!’ ರೋಷಾವೇಶದಿಂದ ಹೇಳಿದ.
‘ಆದ್ರೂ ನೀ ಹೊಸಾ ಕಂಪನೀ ತಗದಾಗ್ ನಿನ್ನ ಕಂಪನೀ ಶೇರ್ಹೋಲ್ಡರ್ಸ್ ಆಗ್ತೀನಿ ಅಂದೌರ್ಯಾರೂ ಬರ್ಲೇಲ್ಲೋ ಹುಚ್ಚಾ!’ ಅಂತ ಚುಡಾಯಿಸಿದೆ.
‘ಉಂ ಸಾ ಈಗ ಅದೇ ನಂಗೆ ಬಾರೀ ಬೇಜಾರಾಗಿರೋದು’ ಹುಚ್ರಾಯನ ಬೇಜಾರಿನ ಮೂಲ ಈಗ ತಿಳೀತು.
‘ನಿಂಗ್ ಔರಿವ್ರ ಹೆಲ್ಪ್ ಯಾಕ ಬೇಕೋ ಹುಚ್ಚಾ! ನಿಂಗೊಬ್ಬನೀಗೇ ಆ ಕೆಪ್ಯಾಸಿಟಿ ಇದೆಯಲ್ಲಾ!’ ಅಂತ ಸಮಾಧಾನ ಮಾಡಿದೆ.
‘ನೋಡೀ ಸಾ! ಅದ್ಕೇ ನೀವು ನನ್ನ ಕರೇ ಇತೈಸಿಗಳು! ಆ ನನ್ನ ಮಕ್ಳು ನಂ ಕಂಪನೀ ಶೇರ್ ಓಲ್ಡರ್ ಆಗ್ತೀನಂದೌರು, ಬರ್ತೀನಂದೌರು ಆ ನನ್ನ ಅಳೇ ಕಂಪನೀ ಡೈರೆಕ್ಟರ್ ಮಾತು ಕೇಳ್ಕೊಂಡು, ಎಲ್ಲಾ ನನ್ನ ಕೈಲಿ ಚಿಪ್ಪು ಕೊಟ್ಟು…’
‘ಅಂಧಾಂಗ್ ನಿನ್ ಹೊಸಾ ಕಂಪನೀ ಲೋಗೋ ಆಲೂಗಡ್ಡೆ ಸಿಪ್ಪಿ ಅಲ್ಲೇನೋ?’ ಅಂತ ರೇಗಿಸಿದೆ.
‘…ಅಲ್ಲೇ ಕುಂತೌರಲ್ಲಾ ಸಾ!’ ನನ್ನ ಮಾತನ್ನು ಗಣನೆಗೆ ತೆಗೆದುಕೊಳ್ಳದೇ ಗೊಣಗಿದ.
‘ನಿಂತಿಲ್ಲೇನೋ?’ ಅಂತ ಕುತೂಹಲದಿಂದ ಕೇಳಿದೆ.
‘ಏಯ್ ನೀವೊಂದು ಸಾ! ನಿಲ್ಲಾಕ್ ಅದೇನ್ ಇನೆಕ್ಸೆನ್ನಾ?’ ಅಂತ ನನಗೇ ಮರು ಸವಾಲು ಎಸೆದ.
‘ಈಗಿರೌರೇ ಸಾಕಲ್ಲೇನ್ನಿಂಗೆ?’
‘ಈಗಿರೌರ್ನೂ ನಂಬಾಕಾಗ್ತಿಕ್ಕಾ ಸಾ! ನನ್ನ ಬಂಡವಾಳಾ ಕರಗಿಸಿ ಔರೂ ನಂಗೆ ಚಿಪ್ಪು ಕೊಡೌರೇ ಸಾ’ ಅಂತ ನಿಟ್ಟುಸಿರು ಬಿಟ್ಟ.
‘ಮತ್ತ ನೀ ಆ ನಿನ್ನ ಹಳೇ ವಿರೋಧಿ ಕಂಪನೀಯೌರ ಜತೀ ಏನೋ ಸಿಕ್ರೇಟ್ ಅಗ್ರೀಮೆಂಟ್ ಮಾಡ್ಕೊಂಡೀ ಅಂತ ಗುಸುಗುಸು ಅಂತ ಸುದ್ದಿ ಕೇಳ್ತದಲ್ಲೋ ಹುಚ್ಚಾ! ನೀ ಏನಾರಾ ಭಾನ್ಗಡೀ ಮಾಡ್ಕೊಂಡು ಔರ್ ಕೈಯಾಗ ಸಿಕ್ಕೊಂಡೀಯೋ ಹ್ಯಾಂಗ್?’ ನನ್ನ ನೇರವಾದ ಪ್ರಶ್ನೆ ಅವನಲ್ಲಿ ಗಲಿಬಿಲಿ ಉಂಟು ಮಾಡಿತೇನೋ. ದೇಶಾವರಿ ಹಲ್ಲುಕಿರಿಯುತ್ತಾ,
‘ಹೆ ಹೆ! ಓಗಿ ಸಾ ನೀವೊಂದ್!’
‘ಅದೇನೋ ಹುಚ್ಚಾ ಏನೋ ಹೊಸಾ ಡಿಸಿಜನ್ ಮಾಡೀನಿ ಅಂತಿದ್ದೆಲ್ಲಾ ಏನದು?’ ನಾನು ಎಲ್ಲೆಲ್ಲಿಯೋ ಹರಿದು ಹೋಗುತ್ತಿದ್ದ ಮಾತನ್ನು ಹಳಿಗೆ ತಂದು ನಿಲ್ಲಿಸಿದೆ.
‘ಸಾ! ಈ ಬೋಲ್ಡ್ ಮೀಟಿಂಗೊಂದ್ ಕಳೀಲಿ! ಆಗ ನೋಡೋರಂತೆ ನನ್ ಒಸಾ ಯಕ್ತಿತ್ವಾ!’
‘ಏನೋ?’ ನಾನು ಅಚ್ಚರಿಯಿಂದ ಕೇಳಿದೆ.
‘ಈಗಾಗ್ಲೇ ಒಂದ್ ರೌಂಡ್ ಊರ್ನೆಲ್ಲಾ ಸುತ್ತಾಕೀನಿ! ನನ್ ಪೆಂಡ್ರುಗಳನ್ನೆಲ್ಲಾ ಮೀಟ್ ಮಾಡೀನಿ ಸಾ! ನಿಂ ಮಾತ್ ಒಪ್ಗೋತೀನಿ ಸಾ! ಈ ವರ್ಸ ನಂ ಕಂಪನೀ ಬಿಜಿನೆಸ್ಸ ಡಲ್ ಪಡೀಬೌದು ಸಾ! ಆದ್ರೆ ಅಣ್ಣನ್ ಉಟ್ದಬ್ಬಾ ಒಂದ್ ಮುಗೀಲಿ ಸಾ! ಈ ಊರಾಗೆ ನಾ ಇಲ್ದೇ ಉಳದೌರು ಅದೆಂಗೆ ಕಂಪನೀ ಉಟ್ಟಾಕ್ತಾರೋ ನೋಡ್ತೀನಿ. ಆ ಮಂಜುನಾತನ ಮ್ಯಾಲೆ ಪರಮಾಣಾ ಆಕಿದ್ದೀನಿ ಸಾ! ನಾ ಇಲ್ದೇ ಅಂಗೇನಾರಾ ಒಸಾ ಕಂಪನೀನ ಇರೋದಿಗಳು ಮಾಡಿದ್ರೂ ಅಂತಾ ಇಟ್ಗಳ್ಳಿ. ಆಗ್ನೂವೇ, ನಾ ಸೆಕೆಂಡ್ ರೌಂಡ್ ಸಿಟಿ ತಿರಗ್ತೀನಿ! ನನ್ ಎಲ್ಲಾ ಬಂದುಬಾಂದವರು, ಪೆಂಡ್ರು ನಿಮ್ಮಂತಾ ಇತೈಸಿಗಳನ್ನ ಮೀಟ್ ಮಾಡಿ, ಆಮ್ಯಾಲ ಬೋಲ್ಡ್ ನಿರ್ದಾರಾ ತಗೋತೀನಿ ಸಾ! ನಮ್ ಬುಲ್ಡೆ ಮಟದ ಸ್ವಾಮೇರೂ ಏಳೌರೆ! ಅಣ್ಣಾವ್ರ ಅಬ್ಬಾ ಕಳೀತಿದ್ದಾಗೇ, ಕೋಲ್ಟನ್ಯಾಗೆ ಎಲ್ಲಾ ಕೇಸೂ ನನ್ನಂತಾಗ್ತವಂತೆ. ಈಗ ನಾ ಇಲ್ದೇ ಕಂಗಾಲಾಗಿರೋ, ನಾ ಕಟ್ಟಿ ಬೆಳೆಸಿದ ಕಂಪನೀಗೆ, ನನ್ನ ಇರೋದಿಗಳಿಗೆ, ಮತ್ತೊಮ್ಮೆ ಚಾನೆಂಜ್ ಆಕಿ, ನನ್ನ ಒಸಾ ಕಂಪನೀನ ಎಮ್ಮರಾ ಆಗೋವಂಗೆ ಬೆಳೆಸ್ತೀನಿ ಸಾ!’ ಅಂತ ಕಂಪನಿ ಜನರಲ್ ಬಾಡೀ ಮೀಟಿಂಗಿನಲ್ಲಿ ಮಾತಾಡುವಂತೆ ಆವೇಶಭರಿತನಾಗಿ ನುಡಿದು ಬೆವರೊರೆಸಿಕೊಂಡಾ!
‘ಆದ್ರ ಹುಚ್ಚಾ ನಾ ಬ್ಯಾರೇನ ಸುದ್ದೀ ಕೇಳಿದ್ದೆಪಾ! ನೀ ನಿನ್ನ ಹಳೇ ಕಂಪನೀ ಬಿಡೋದನ್ನ ನಿನ್ ಕಂಪನೀ ಒಳಗಗಿನ ಭಾಳಾ ಜನ ಡೈರೆಟ್ಕರುಗಳು ಕಾಯ್ತಿದ್ದರಂತ!’
‘ಊಂ ಸಾ ಅಲ್ಕಾ ನನ್ ಮಕ್ಳು! ನಾ ಕಂಪನೀ ಉಟ್ಟಾಕಿ, ಬೆಳೆಸೀನಿ! ಈ ನನ್ ಮಕ್ಳು ತಿಂತಾ ಮೆರದೌರೆ. ಅದೆಂಗಾರಾ ಇರ್ಲಿ ಸಾ! ನಂಗೂ ನಮ್ ಇರೋದಿ ಕಂಪನಿಗಳಿಂದ ಒಳ್ಳೇ ಆಪರ್ ಬರ್ತಾ ಇವೆ ಸಾ! ಬಾ ಬಾ ಅಂತ ಗಂಟ್ ಬಿದ್ದೀದಾರೆ ಸಾ! ಔರ್ ಕಂಪನೀ ಜಾಯಿನ್ ಆಗಲು! ನಾ ಕ್ಯಾರೇ ಅಂದಿಲ್ಲಾ ಸಾ! ಈ ಸಲ ನಂ ಕಂಪನೀ ಜನರಲ್ ಮೀಟಿಂಗಿನಾಗೆ ಇಸ್ಯಾ ಇಕ್ಕಿ, ಡಿಸಿಜನ್ ತಗೋತೀನಿ ಸಾ! ನಮ್ ಕಂಪನೀನ ಇಸ್ಟ್ ವರ್ಸಾ ನಾನೇ ಕಟ್ಟಿ ಬೆಳೆಸಿ ಈಗ ಬಿಟ್ಟಿದ್ದಕ್ಕೆ ನಂಗೂ ಬ್ಯಾಸ್ರಾ ಈತೆ ಸಾ! ಆದ್ರೆ ಏನ್ಮಾಡೋದು. ನನ್ನ ಬೆನ್ನಿಗೆ ನಂ ಡೈಲೆಕ್ಟರುಗಳೇ ಚಾಕೂ ಆಕಿದಾರೆ! ಒಟ್ಯಾಗ್ ಬೆಂಕೀ ಬಿದ್ದಾಂಗ್ ಆಗ್ದೇ ಇರ್ತದಾ ಸಾ! ಅದ್ಕೇ ಈಗ ನಿಂ ಸಪೋಲ್ಟ ಕೇಳಾಣಂತ ಬಂದೀನಿ ಸಾ! ನೀವು ನನ್ನ ಇರೀರು, ಗುರುಗಳು, ನಂಗೆ ಆಸೀರ್ವಾದಾ ಮಾಡಿ ಸಾ! ಅಂಗೇ ನನ್ ಒಸಾ ಕಂಪನೀ ಸಲೇಗಾರರು ಆಗ್ರೀ ಸಾ!’ ಅಂತ ಚೇರಿನಿಂದ ಎದ್ದು ನಿಂತವನೇ ಧೊಪ್ಪೆಂದು ನನ್ನ ಕಾಲ ಮೇಲೆ ಬಿದ್ದ. ನಾನು ‘ಛೆ ಛೆ’ ಏಳೋ ಮ್ಯಾಲ! ಅದ್ನೆಲ್ಲಾ ಆಮ್ಯಾಲ ನೋಡೋಣಂತ’ ಅಂತ ಅವನ ಸುಣ್ಣ ತಂಬಾಕಿನಿಂದಾವ್ರತವಾದ ಕೈಗಳಿಂದ ನನ್ನ ಪಾದವನ್ನು ರಕ್ಷಿಸಿಕೊಂಡೆ.
‘ಈಗ ನಿನ್ನ ಹೊಸಾ ಕಂಪನೀನೂ ಮಕಾಡೆ ಮಲಗಿದೆ. ಜನರಲ್ ಬಾಡೀ ಮೀಟಿಂಗ್ ಮುಗದ ಮ್ಯಾಲ ನಿನ್ ಹಳೇ ಕಂಪನಿ ಮ್ಯಾನೇಜರ್ರು, ಅಣ್ಣಾ ಎಲ್ಲಾ ಮರ್ತುಬಿಡಣ್ಣಾ! ನಂ ಕಂಪನೀಗ ಮತ್ ಬಂದ್ ಬಿಡಣ್ಣಾ ಅಂತ ಗಂಟ್ ಬಿದ್ರೇನ್ಮಾಡ್ತೀ? ಆಗೂ ನೀ ನನ್ನ ಸಲಹೆಗಾರ ಅಂತ ಇಟ್ಗೋತೀಯಾ?’ ನಾನು ಕೆಣಕಿದೆ. ಅವನ ವೀರಾವೇಷ ರೋಷಾವೇಶವಾಯಿತು.
‘ಅರಿ ಅರ ಬ್ರಮ್ಮ ಬಂದ್ನಿಂತು ಕೈಮುಗದ್ ಮಕಾಡೆ ಮನಗಿದ್ರೂ ನಾ ಆ ಕಂಪನೀ ಸೇರಂಗಿಲ್ಲಾ ಸಾ! ನಂ ತಾಯೀ ಮ್ಯಾಲಾಣೆ, ನಂ ಕುಲದೇವ್ರು ಆ ಉಚ್ರಾಯಪ್ಪನ ಮ್ಯಾಲಾಣೆ, ಇನ್ನೌರು ನನ್ನ ಕಂಪನೀ ಚೇರ್ಮನ್ ಮಾಡ್ತೀನಂದ್ರೂ ನನ್ ನಿರ್ದಾರಾ ಅಚಲ ಸಾ! ನಂಗೆ ನಿಮ್ಮತೌರ ಅಬಿಮಾನಾನೇ ಮುಕ್ಯ ಸಾ! ಮನಸ್ಯಂಗೆ ಆತ್ಮಾಬಿಮಾನಾ, ಗೌರ್ವಾ ಮುಕ್ಯಾ ಅಲ್ಲವರಾ?’ ಅಂತ ಚೇರಿನಿಂದೆದ್ದು ಎಸ್.ವಿ.ರಂಗರಾವ್ ಸ್ಟೈಲ್ನಲ್ಲಿ ಅಂಗಾಭಿನಯಿಸುತ್ತಾ ಆರ್ಭಟಿಸಿದ. ಅವನ ಧೈರ್ಯಕ್ಕೆ ನಾನು ಮೆಚ್ಚಿ ತಲೆದೂಗಿದೆ.
ಅಷ್ಟರಲ್ಲೇ ಅವನ ಮೊಬೈಲ್ ರಿಂಗಣಿಸಿತು. ಮಾತಾಡ್ತಾ ಮಾತಾಡ್ತಾ ಅವನ ಮುಖ ಅರಳಿತು.
‘ಔದೇನ್ಲಾ? ಅಂಗಂತಾರಾ?….ಊಂ ಊಂ ನಾನೀಗ್ನೇ ಒಲ್ಟು ಬರ್ತೀನಿ ಎಲ್ಲಾರ್ನೂವೇ ಅಲ್ಲೇ ಇರಾಕೇಳು!’ ಅಂತ ಬಲು ಸಂಭ್ರಮದಿಂದ ಎದ್ದು ಬಾಯಿಯನ್ನು ಕಿವಿಯಿಂದ ಕಿವಿಯವರೆಗೂ ತೆರೆದು ತನ್ನ ವರ್ಣಮಯ ದಂತಗಳನ್ನು ಪ್ರದರ್ಶಿಸಿ,
‘ಎಂತಾ ಮಕಾ ಸಾ ನಿಮ್ದು! ನಿಮ್ಮನೇಗೆ ಬರ್ತಿದ್ದಾಂಗೇ ಒಳ್ಳೇ ಸಿಇ ಸುದ್ದಿ ಸಾ! ನಾ ಬತ್ತೀನಿ ಸಾ! ನಮ್ ಕಂಪನೀ ಸೆಕೆಟ್ರೀ ಮಾತಾಡ್ದಾ ಸಾ! ನನ್ನ ಅಳೇ ಕಂಪನೀ ಬಿಜಿನೆಸ್ಸ ಈ ಸಲ ಡಲ್ ಆಗ್ಬೌದಂತ ವಲ್ಡ್ ಬ್ಯಾಂಕ್ ಲಿಪೋಲ್ಟ ಮಾಡೌರಂತೆ ಸಾ! ಮತ್ತೇ ನನ್ನೇ ಚೇರ್ಮನ್ ಮಾಡ್ತಾರಂತೆ ಸಾ! ಚೆಂಜೆನೇ ಕಂಪನೀ ಚಾರ್ಜ ತಗೋಬೇಕಂತೆ ಸಾ! ನಾ ಓಗ್ತೀನಿ ಬೈ ಬೈ ಸಾ!’ ಅಂತ ಧಿಗ್ಗನೆದ್ದು ಓಡಿದ. ನಾನು,
‘ಮತ್ತ ನಾ ನಿನ್ ಕಂಪನೀ ಸಲಹೆಗಾರ ಹೌದಲ್ಲೋ?’ ಅಂತ ಕೂಗಿ ಕೇಳಿದ್ದಕ್ಕೆ,
‘ನನ್ನ ಒಸಾ ಕಂಪನೀನೇ ಅಳೇ ಕಂಪನಿಯಲ್ಲಿ ಮಲ್ಜ್ ಆಗ್ತಿರ್ಬೇಕಾದ್ರೆ, ಸಲಎಗಾರ ಪೋಸ್ಟ್ ಎಲ್ಲಿಂದ ಬಂತು ಸಾ!’ ಅಂತ ಓಡಿ ಮಾಯವಾದ.

– ಎಚ್. ಜಿ.ಮಳಗಿ

Leave a Reply