ಹಿಂದೆ ಮುಂದೆ ನೋಡುವುದು ಹೇಗೆ
ಹಿಂದುಳಿದ ಅನ್ನುವ ಶಬ್ದ ಇತ್ತೀಚಿನ ದಿನಗಳಲ್ಲಿ ಬಹಳ ಕ್ಲಿಷ್ಟ ಮತ್ತು ಹಲವಾರು ಅರ್ಥಗಳನ್ನು. ಮಜಲುಗಳನ್ನು ಪಡೆಯುತ್ತಿರುವ ಜತೆಗೆಯೆ ಸನ್ನಿವೇಶ ಕೇಂದ್ರೀಕೃತವಾಗಿದೆ. ಇತ್ತೀಚಿಗೆ ನಾನು ರಾಯಚೂರಿನಲ್ಲಿ ಮೂರು ನಾಲ್ಕು ದಿನ ಕಳೆಯುವ ಸಂದರ್ಭ ಬಂದಾಗ ಹಿಂದುಳಿದ ಶಬ್ದದ ಹತ್ತು ಹಲವು ಮುಖಗಳು ಗೋಚರಿಸಿದವು. ಹಿಂದೆ ಉಳಿದ ಅಂದರೆ ಯಾವುದರಲ್ಲಿ ಹಿಂದೆ ಉಳಿದ ಅನ್ನುವದು ಮುಖ್ಯವಾಗುತ್ತದೆ. ಎಲ್ಲರೂ ನಡೆಯುತ್ತಲೋ, ಓಡುತ್ತಲೋ ಹೊರಟಾಗ ಎಲ್ಲರೂ ಒಂದೇ ಲೈನಿನಲ್ಲಿ, ಒಂದೇ ವೇಗದಲ್ಲಿ, ಒಂದೇ ಸನ್ನಿವೇಶ, ಒಂದೇ ನಿಯಮಾವಳಿಗಳ ವ್ಯವಸ್ಥೆಯಲ್ಲಿ ಚಲಿಸುತ್ತಿರುವಾಗ ಇದು ಸಾಧ್ಯವೇ ಅನ್ನುವ ಪ್ರಶ್ನೆಯೊಂದಿಗೆ ಕೆಲವರು ಮುಂದೆ ಕೆಲವರು ಹಿಂದೆ ಉಳಿಯುವುದು ಅನಿವಾರ್ಯ ಅನಿಸುತ್ತದೆ.
ಈ ಜಗತ್ತಿನಲ್ಲಿ ಎಲ್ಲರೂ ಮುಂದುವರಿದವರು ಅನ್ನಲು, ಆಗಲು ನಿಜವಾಗಿಯೂ ಸಾಧ್ಯವೇ? ಅಹಂ ಬ್ರಹ್ಮಾಸ್ಮಿ ಎಂದರೂ ಎಲ್ಲರೂ ದೇವರಾಗುವುದಿಲ್ಲ. ಎಲ್ಲರೂ ದಾನವರೂ ಆಗುವುದಿಲ್ಲ ಅನ್ನುವದು ಅಷ್ಟೇ ಸತ್ಯವಾದ ವಿಷಯ. ಅದಕ್ಕಾಗಿಯೇ ಈ ಸೃಷ್ಟಿಯಲ್ಲಿ ವೈವಿಧ್ಯತೆ ಇರುವುದು. ಜೀವನದಲ್ಲಿಯೂ ಕೂಡಾ ಅದೇ ರೀತಿ ಒಂದು ಹೆಚ್ಚು ಒಂದು ಕಡಿಮೆ ಇರುವುದು ಸೃಷ್ಟಿಯ ನಿಯಮ. ಇಂತಹ ಸಂದರ್ಭದಲ್ಲಿ ಹಿಂದುಳಿಯುವಿಕೆ ಅನ್ನುವುದನ್ನು ಗುರುತಿಸುವುದು ಯಾವ ಮಾನದಂಡದಿಂದ ಅನ್ನುವುದು ಮುಖ್ಯವಾಗುತ್ತದೆ. ಆರ್ಥಿಕವೋ, ಸಾಮಾಜಿಕವೋ, ರಾಜಕೀಯವಾಗಿಯೋ, ಶೈಕ್ಷಣಿಕವಾಗಿಯೋ, ಆರೋಗ್ಯ ಮತ್ತು ನೈರ್ಮಲ್ಯದಲ್ಲಿಯೋ, ವಿದ್ಯುಚ್ಛಕ್ತಿ ಉತ್ಪಾದನೆಯಲ್ಲಿಯೋ ಹೀಗೆ ಹತ್ತು ಹಲವು ಮಾನದಂಡಗಳಾಗುತ್ತವೆ. ಮಾನವ ಸಂಪನ್ಮೂಲ ಅಭಿವೃದ್ಧಿ ಅಥವಾ ಎಚ್ಡಿಐಯನ್ನು ಯಾವ ಪ್ರಕಾರ ಮಾಡುವುದು.
ಒಂದು ಅನುಭವದ ಉಕ್ತಿ. ನೀವು ಅವಕಾಶ ಕೊಡದ ಹೊರತು ನಿಮ್ಮನ್ನು ಯಾರೂ ಕೀಳಾಗಿ ನೋಡಲು ಸಾಧ್ಯವಿಲ್ಲ. ಇಲ್ಲಿ ನಮೂದಿಸುವುದು ಯೋಗ್ಯವಾದೀತು. ನಿಮ್ಮ ಅನುಮತಿ ಇಲ್ಲದೇ ನಿಮ್ಮನ್ನು ಹಿಂದುಳಿದವರು ಆಥವಾ ಕೀಳರು ಅಂತಾ ಮಾಡಲು ಆಗುವುದಿಲ್ಲ ಅನ್ನುವ ಅರ್ಥ ಬರುವುದು. ಹಾಗಾದರೆ ಒಂದು ಪ್ರದೇಶವು ಯಾಕೆ ಹಿಂದುಳಿಯುತ್ತದೆ. ಯಾಕೆ ಒಂದು ಪ್ರದೇಶ ಮುಂದುವರಿದದ್ದು ಆಗುತ್ತದೆ ಅನ್ನುವ ಪ್ರಶ್ನೆಗಳಿಗೆ ಉತ್ತರ ಹುಡುಕುವ ಪ್ರಯತ್ನ ಮಾಡಬೇಕಾಗುತ್ತದೆ. ಹಿಂದುಳಿದದ್ದು, ಮುಂದುವರೆದದ್ದು ಅನ್ನುವುದೂ ಆಗ ಸಾಪೇಕ್ಷ ಅಥವಾ ಪೂರಕ ಆಗುತ್ತದೆ. ಅಮೆರಿಕದ ಮುಂದೆ ಭಾರತ ಬಡ ಅನ್ನಿಸಿದರೂ ಭಾರತ ಬಾಂಗ್ಲಾಗಿಂತ ಶ್ರೀಮಂತ ಅನ್ನುವುದು ಅಷ್ಟೆ ಸತ್ಯ. ಬಡ ಅಥವಾ ಸಿರಿವಂತ ಅನ್ನುವುದು ಯಾವಾಗಲೂ ಸಾಪೇಕ್ಷವಾದುದೇ. ಈ ಎಲ್ಲಾ ಲೇಬಲ್ಲುಗಳು ಸಹ ಅದೇ ಅಳತೆಗಳಿಗೆ ಬರುವವೇ. ಆಗ ಹಿಂದುಳಿಯುವಿಕೆ ಪರಿಭಾಷೆ ಮತ್ತು ಕಲ್ಪನೆಗಳ ವ್ಯಾಖ್ಯೆಯನ್ನು ಬದಲಿಸಿಕೊಳ್ಳಬೇಕಾಗುತ್ತದೆ.
ಮನುಷ್ಯನಿಗೆ ಸುಖ, ಶಾಂತಿ, ಸೌಲಭ್ಯಗಳು ಸಿಕ್ಕಾಗ ಅವನು ಮುಂದುವರಿದವನಾಗುತ್ತಾನೆಯೇ? ರಸ್ತೆಯ ಬದಿಯ ಫುಟ್ಪಾತಿನಲ್ಲಿ ಆರಾಮವಾಗಿ ಮಲಗಿ ನಿದ್ರೆ ಮಾಡುವವನನ್ನು ಕಂಡಾಗ ಅದನ್ನು ಅಭಿವೃದ್ಧಿ ಅಂತಾ ಹೇಳಲಾಗುವುದೇ? ಅದೇ ವ್ಯಕ್ತಿ ಪಂಚತಾರಾ ಹೊಟೇಲಿನಲ್ಲಿ ಅಷ್ಟೆ ಶಾಂತವಾಗಿ ಮಲಗಲು ಸಮರ್ಥನಾದರೆ ಅದನ್ನು ಅಭಿವೃದ್ಧಿ ಅನ್ನಬಹುದೇ? ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚುತ್ತ ಹೋಗುವುದೂ ಅಭಿವೃದ್ಧಿ ಅನ್ನಬಹುದೇ? ಒಂದು ದೇಶದಲ್ಲಿ, ಒಂದು ರಾಜ್ಯದಲ್ಲಿ ಕೆಲವು ಭಾಗ ಮುಂದುವರೆದದ್ದೂ ಕೆಲವು ಹಿಂದೆ ಉಳಿದುದ್ದು ಆಗಿರುವಾಗ ಹೇಗೆ ಈ ಕ್ರಿಯೆ ನಡೆಯುತ್ತದೆ ಅನ್ನುವುದು ಆಸಕ್ತಿಯ ವಿಷಯ. ನೀರು ಎತ್ತರದಿಂದ ಕೆಳಗೆ ಹರಿಯುವುದು ನೀರಿನ ಗುಣಧರ್ಮ ಆದರೆ ಅಭಿವೃದ್ಧಿಯ ವಿಷಯದಲ್ಲಿ ತದ್ವಿರುದ್ಧವಾಗಿರುತ್ತದೆ.
ಅಭಿವೃದ್ಧಿ ಹೊಂದಿದ ರಾಜ್ಯಗಳು, ದೇಶಗಳು ಪ್ರದೇಶಗಳು ತನ್ನ ಸುತ್ತಲಿನ ಪ್ರದೇಶಗಳಿಂದ ಎಲ್ಲವನ್ನೂ ಅಂದರೆ ಅಭಿವೃದ್ಧಿಗೆ ಪೂರಕವಾದ ಎಲ್ಲ ಸಂಗತಿಗಳನ್ನು ಹೀರಿಕೊಳ್ಳುತ್ತವೆ. ಅದು ಮಾನವ ಸಂಪನ್ಮೂಲವಾಗಿರಬಹುದು, ನೈಸರ್ಗಿಕ ಸಂಪತ್ತಾಗಿರಬಹುದು. ಹೀಗಾಗಿ ಒಂದು ಪ್ರದೇಶ ಅಭಿವೃದ್ಧಿ ಹೊಂದುವ ಪ್ರಕ್ರಿಯೆಯಲ್ಲಿ ತನ್ನ ಸುತ್ತಲಿನ ಪ್ರದೇಶಗಳಾದ ತನಗೆ ಬೇಕಾದ ಎಲ್ಲ ವಸ್ತುಗಳನ್ನು. ಸಂಪನ್ಮೂಲಗಳನ್ನು ಹೀರಿಕೊಳ್ಳುತ್ತ ಹೋದಂತೆ ಅದು ಅಭಿವೃದ್ಧಿಗೊಳ್ಳುತ್ತ ಹೋಗುತ್ತದೆ. ಯಾವುದರಿಂದ ಹೀರಲ್ಪಡುತ್ತದೊ ಅದು ನೀಡುತ್ತ ನೀಡುತ್ತ ಬಡವಾಗುತ್ತಾ ಹೋಗುತ್ತದೆ. ಬಡವಾದಷ್ಟು ಹಿಂದುಳಿದ ಲೇಬಲ್ಗಳನ್ನು ಪಡೆಯುತ್ತದೆ. ಬೆಂಗಳೂರು ಹೇಗೆ ಬೆಳೆಯುತ್ತ ಹೋಗುತ್ತದೋ ಹಾಗೆ ರಾಜ್ಯದ ಇತರ ದೂರದ ನಗರಗಳು ಹಿಂದೆ ಬೀಳುತ್ತ ಹೋಗುತ್ತವೆ. ಇದು ಒಂದು ವಿಚಿತ್ರ ಪರಿಸ್ಥಿತಿ. ಮೀಸಲಾತಿ ನಿಯಮಗಳಿಂದ ಎಲ್ಲ ಸೌಲಭ್ಯಗಳನ್ನು ಪಡೆಯುತ್ತ ಉಳಿದವರು ಅಂದರೆ ಅದಿಲ್ಲಿರಬಹುದು. ಹೊರಗಿರಬಹುದು.
ಬಡವರು ಹುಟ್ಟುತ್ತಲೇ ಹೋಗುತ್ತಾರೆ ಒಂದೆಡೆ Creamy layer ಇನ್ನೊಂದೆಡೆ ನಾವಿನ್ನೂ ಹಿಂದುಳಿದವರು ನಮ್ಮ ತನಕ ಯಾವ ಲಾಭ ತಲುಪಿಲ್ಲ ಅನ್ನುವ. ಕೂಗುವ Screeming Layer ಒಂದು ಮನೆತನ ಮುಂದೆ ಬರಲು ಮನೆಯ ಯಜಮಾನತಿ ಹೇಗೆ ಕಾರಣಳಾಗುತ್ತಾಳೋ ಹಾಗೆಯೆ ಒಂದು ಪ್ರದೇಶ, ಒಂದು ಸಮುದಾಯ ಮುಂದೆ ಬರಲು ಸರಿಯಾದ ನಾಯಕತ್ವ ಬೇಕು ಮತ್ತು ನಾಯಕತ್ವವೂ ಕೂಡಾ Creamy layer ನಲ್ಲಿ ಬರದೇ Screeming Layer ಜತೆಗೆ ರೂಪುಗೊಳ್ಳವರು ಸಹ ಅಷ್ಟೆ ಕಠಿಣ ಸಾಧ್ಯ. ರಾಜಕೀಯ ಧುರೀಣತ್ವ ಪಕ್ಷಗಳು ಮೀರಿ ರೂಪುಗೊಳ್ಳುಬೇಕು. ಪ್ರತಿ ಪ್ರದೇಶದ ಬೆಳವಣಿಗೆಯಲ್ಲಿ ನಮ್ಮ ಮತ್ತು ನಮ್ಮ ಅಭಿವೃದ್ಧಿ ಇದೆ ಎನ್ನುವುದನ್ನು ತಿಳಿದುಕೊಂಡ ನಾಯಕತ್ವ ಬೇಕು. ಎಲ್ಲಾ ಭಾಷೆಗಳು ಬೆಳೆದರೆ ಭಾರತೀಯ ಸಾಹಿತ್ಯವೇ ಶ್ರೀಮಂತವಾಗುತ್ತದೆ ಅನ್ನುವ ಹೃದಯ ವೈಶಾಲ್ಯತೆ ಬೇಕು. ಸಮಷ್ಟಿಯ ನಾಯಕತ್ವ ಇಂದಿನ ಅವಶ್ಯಕತೆ, ಸರ್ವೇಜನಾಃ ಸುಖಿನೋ ಭವಂತು ಅನ್ನುವ ವಿಚಾರಧಾರೆ ಸರಿಯಾಗಿ ಹರಿಯಬೇಕಾಗಿದೆ. ಎಲ್ಲೆಲ್ಲೋ ಸಣ್ಣಪುಟ್ಟ ಕೊಬ್ಬಿನ ಸ್ವಾರ್ಥದ ಬ್ಲಾಕುಗಳು. ಈ ಕೊಬ್ಬು ಅಂದರೆ ಕೊಲೆಸ್ಷ್ರಾಲ್ ಜಾತಿಯದು. ವರ್ಗಸಂಘರ್ಷದ್ದೂ. ಅಜ್ಞಾನದ್ದು ಯಾವುದರಿಂದಲೋ ಆಗಬಹುದು ಮನೋಧೋರಣೆಯಲ್ಲಿ ನಾವು ಚಿಂತಿಸುವ, ಯೋಚಿಸುವ ಪರಿಯಲ್ಲಿ ಈ Mindset ಬದಲಾಗುವುದು ವ್ಯಕ್ತಿಗತವಾಗಿ, ಸಾಮುದಾಯಕವಾಗಿ, ಹಲವು ಸ್ತರಗಳ ಸಮಾಜದಲ್ಲಿ ಗಾಂಧೀಜಿ ಅಂತವರು Mindset ನ ಬದಲು ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಇಂದು ಅಂತಹ ಧುರೀಣತ್ವ. ನಾಯಕತ್ವ ಬೇಕಾಗಿದೆ. ಗಾಂಧೀಜಿ ಚುನಾಯಿತ ಪ್ರತಿನಿಧಿ, ಮಂತ್ರಿ, ರಾಜ್ಯಪಾಲ ಯಾವುದೂ ಆಗಿರಲಿಲ್ಲ ಅನ್ನುವದು ಸಹ ನೆನಪಿಟ್ಟುಕೊಳ್ಳಬೇಕಾಗಿದೆ.
ಕೃಪೆ : ಸಂಯುಕ್ತ ಕರ್ನಾಟಕ