ರಾಜಸ್ಥಾನವೆಂಬ ಸ್ವರ್ಗದ ತುಣುಕು
ರಾಜಸ್ಥಾನವೆಂಬ ಸ್ವರ್ಗದ ತುಣುಕು
ಲೇಖಕ: ಲಕ್ಷ್ಮೀಕಾಂತ ಇಟ್ನಾಳ
ಪ್ರಕಾಶನ: ಸಾಹಿತ್ಯ ಪ್ರಕಾಶನ, ಹುಬ್ಬಳ್ಳಿ
ಬೆಲೆ: ರೂ 180
ಮರುಭೂಮಿಯ ನಾಡು ರಾಜಸ್ಥಾನದಲ್ಲಿ ಎಷ್ಟು ಬಿಸಿಲಿದೆಯೋ ಅಷ್ಟೇ ತಂಪೂ ಇದೆ. ಅಲ್ಲಿನ ಅರಮನೆಗಳು ಪ್ರವಾಸಿಗರಿಗೆ ಇತಿಹಾಸದ ಚಿತ್ರಪಟಗಳಂತೆ ಕಾಣುತ್ತಲೇ ಕವಿ ಹೃದಯಕ್ಕೂ ಕೆಲಸ ಕೊಡುತ್ತವೆ.
ಹೀಗಾಗಿಯೇ ‘ರಾಜಸ್ಥಾನವೆಂಬ ಸ್ವರ್ಗದ ತುಣುಕು’ ಎಂಬ ಪ್ರವಾಸ ಕಥನ ಬರೆದ ಲಕ್ಷ್ಮೀಕಾಂತ ಇಟ್ನಾಳರು ಅಲ್ಲಲ್ಲಿ ಅಗತ್ಯಕ್ಕೆ ತಕ್ಕಂತೆ ಘಜಲ್ಗಳ ಪರಿಮಳವನ್ನು ಓದುಗರ ಮೇಲೆ ಹರಿಸಿದ್ದಾರೆ. ಇಡಿಯಾಗಿ ಕೃತಿಯನ್ನು ಓದುತ್ತಿದ್ದಂತೆ ಇದು ಬರೀ ಪ್ರವಾಸ ಕಥನ ಅನಿಸುವುದೇ ಇಲ್ಲ. ಪ್ರತಿ ಸ್ಥಳಕ್ಕೆ ಭೇಟಿ ನೀಡಿದಾಗಲೂ ಅದನ್ನು ಕಾವ್ಯಮಯವಾಗಿ ವರ್ಣಿಸಿದ್ದಾರೆ ಲೇಖಕರು. ಜೊತೆಗೆ ಅಲ್ಲಿನ ಜನಜೀವನದ ಸ್ಥಿತಿ, ಜೈಪುರದ ಅರಮನೆಗಳು ಗುಲಾಬಿ ಬಣ್ಣಕ್ಕೆ ತಿರುಗಲು ಕಾರಣವಾದ ಐತಿಹಾಸಿಕ ಕಾರಣವನ್ನೂ ವರ್ಣಿಸುತ್ತಾರೆ.
ಪ್ರವಾಸಿ ತಾಣಗಳಲ್ಲಿ ಅಲ್ಲಿಯ ನಿವಾಸಿಗಳ ವರ್ತನೆ, ಸ್ನೇಹಪರತೆಯ ಬಗ್ಗೆ ವಿವರ ನೀಡುತ್ತಲೇ ಆ ಭಾವನೆಗಳಿಗೆ ತಕ್ಕಂತೆ ಕನ್ನಡ ಹಾಗೂ ಹಿಂದಿಯ ಗಾಯನಗಳನ್ನು ಪೋಣಿಸುತ್ತಲೇ ಹೋಗಿದ್ದಾರೆ ಇಟ್ನಾಳರು. ಜೈಪುರ, ಶಿಲ್ಪಗ್ರಾಮ, ಬಿಕಾನೇರ್, ಜೈಸಲ್ಮೇರ್, ಮೇವಾಡ, ಅಜ್ಮೇರ್ ಸೇರಿದಂತೆ ಹಲವು ಪ್ರಮುಖ ಸ್ಥಳಗಳನ್ನು ಓದುಗರಿಗೆ ಭೆಟ್ಟಿ ಮಾಡಿಸುವ ಲೇಖಕರು ಬಹಳ ಲೋಕಾಭಿರಾಮವಾಗಿ ಆ ಸ್ಥಳ ಮಹತ್ವವನ್ನು ವಿವರಿಸುತ್ತಾರೆ. ವಾಜಪೇಯಿ ಸರ್ಕಾರ ಇದ್ದಾಗ ಆದ ಅಣುಬಾಂಬ್ ಪರೀಕ್ಷೆ ನಡೆದ ಪೋಖ್ರಾನ್ಗೆ ಭೇಟಿ ನೀಡಿ ಆ ಸ್ಥಳ ಹೇಗೆ ಭಾರತದ ಸಾರ್ವಭೌಮತ್ವವನ್ನು ರಕ್ಷಿಸಿದೆ ಎಂಬುದನ್ನು ಭಾವುಕವಾಗಿ ವಿವರಿಸಿದ್ದಾರೆ. ಒಣ ವಿವರಣೆಗೆ ಜೋತುಬೀಳದೇ ಕಾವ್ಯ, ಲಾಲಿತ್ಯವನ್ನು ಪ್ರವಾಸ ಕಥನದಲ್ಲಿ ಬೆರೆಸಿದ್ದರಿಂದ ಇದು ವಿಭಿನ್ನ ಕೃತಿಯಾಗಿ ಓದುಗರನ್ನು ಆವರಿಸಿಕೊಳ್ಳುತ್ತದೆ.
Courtesy : Prajavani.net
http://www.prajavani.net/news/books/2017/12/02/537288.html