ಯಾರು ನನ್ನವರು!
ನನ್ನದೆಂಬುದು ಯಾವುದಯ್ಯ ಜಗದೊಳು?
ಜೀವವೇ ನನ್ನದಲ್ಲದಾಗ ಯಾರು ನನ್ನವರು?
ಹುಟ್ಟಿದಾ ಹೆಣ್ಣಾ ವಾತ್ಸಲ್ಯದಿ ಸಲಹುವರು
ಕನ್ಯಾದಾನವ ಮಾಡಿ ಪರರ ಕೈಗೆ ಕೊಡುವರು
ಯಾರು ನನ್ನವರು?
ಜೀವ ಪಣಕಿಟ್ಟು ಜನುಮವಿತ್ತ ತಾಯಿಯ ಹಳಿವ ಮಗ
ಸಪ್ತಪದಿ ತುಳಿದು ಕಷ್ಟ-ಸುಖದಲಿ ಸಹಕರಿಸುವ ಮಾತು ಕೊಟ್ಟು
ಮರೆತು ಜೀವ ಹಿಂಡುವ ಸಖರು
ಆಸ್ತಿ ಪಾಸ್ತಿಗಾಗಿ ಹೊಡೆದಾಡುವ ಒಡಹುಟ್ಟಿದವರು
ಯಾರು ನನ್ನವರು?
ಏಳಿಗೆಯ ಕಂಡು ಮೂತಿ ತಿರುವುವ ಬಂಧುಗಳು
ಒಳ ಹೊರಗೊಂದೊಂದು ಬಗೆವ ಗೆಳೆಯ ಗೆಳತಿಯರು
ತೋರಿಕೆಯ ಮುಗುಳು ನಗೆ ಬೀರುವ ಜನರು
ಆಶ್ವಾಸನೆಯ ಕೊಟ್ಟು ಕೈ ಎತ್ತುವ ಅಪನಂಬಿಕಸ್ತರು
ಯಾರು ನಮ್ಮವರು?
ಇಂದಿದ್ದು ನಾಳೆ ಹೋಗುವ ಸಕಲ ವೈಭವವು
ನನ್ನದೂ ಅಲ್ಲ ನಿನ್ನದೂ ಅಲ್ಲ ನನ್ನವರು ನಿನ್ನವರು
ಯಾವುದೂ ಶಾಶ್ವತವಲ್ಲ ಈ ಜಗದೊಳಗೆ
ನಿರ್ದೇಶಕ ಸೃಷ್ಟಿಕರ್ತ ಸಿದ್ಧಪಡಿಸಿದ ರಂಗ ಮಂಚವಿದು
ನೀ ಕರೆದಾಗ ನಾಟಕ ನಿಲ್ಲಿಸಿ ಮರಳುವುದು
ಎಲ್ಲಾ ನಿನ್ನದೇ ನೀನೇ ಎಲ್ಲ, ಯಾರೂ ನನ್ನವರಲ್ಲ!