ಯಶಸ್ವಿ ಮಹಿಳಾ ದಿನಾಚರಣೆ
ಮಹಿಳಾ ದಿನಾಚರಣೆಯನ್ನ ಪ್ರತಿ ವರ್ಷ ಮಾರ್ಚ 8ರಂದು ಆಚರಿಸಲಾಗುತ್ತಿದೆ. ಇದು ಇನ್ನು ಎಷ್ಟೋ ಮಹಿಳೆಯರಿಗೆ ಗೊತ್ತಿಲ್ಲ ಮತ್ತು ತಿಳಿಯುವ ಪ್ರಯತ್ನವನ್ನು ಮಾಡಿರುವುದಿಲ್ಲ. ಯಾಕೆಂದರೆ ಎಷ್ಟೋ ಮಹಿಳೆಯರು ತಮ್ಮ ಚೌಕಟ್ಟನ್ನು ಬಿಟ್ಟು ಹೊರಬಂದಿಲ್ಲ. ಚೌಕಟ್ಟನ್ನು ಬಿಟ್ಟು ಹೊರಬಂದಾಗ ನಿಶ್ಚಿತವಾಗಿ ಸಾಧಿಸಬಲ್ಲಳು. ಸಮಾಜದಲ್ಲಿ, ಮನೆ ಮನೆಗಳಲ್ಲಿ ಆಗುತ್ತಿರುವಂಥ ಲಿಂಗತಾರತಮ್ಯ, ಅಸಮಾನತೆ, ಅಸಹಕಾರ, ಅನ್ಯಾಯ, ಅತ್ಯಾಚಾರ, ದೌರ್ಜನ್ಯವನ್ನು ಮೆಟ್ಟಿ ನಿಲ್ಲಬೇಕಾಗಿದೆ. ಇದು ಮೊದಲು ನಮ್ಮ ನಮ್ಮ ಮನೆಗಳಲ್ಲಿ ನಮ್ಮಿಂದ ಆರಂಭವಾಗಬೇಕು. ಮಹಿಳಾ ದಿನಾಚರಣೆ ಕೇವಲ ಕೈಗೆ ಕೈ ಮಿಲಾಯಿಸಿ ಸಂಭ್ರಮಪಡುವುದಲ್ಲ, ಅನ್ಯಾಯದ ವಿರುದ್ದ ಹೋರಾಟಕ್ಕೆ ಅಣಿಯಾಗಲು, ಪ್ರತಿಯೊಂದು ಕ್ಷೇತ್ರದಲ್ಲಿ ಸಾಧನೆಗೈಯಲು ಪ್ರತಿಯೊಬ್ಬ ಮಹಿಳೆ ಮತ್ತೊಬ್ಬ ಮಹಿಳೆಯನ್ನು ಹುರುದುಂಬಿಸಬೇಕಾಗಿದೆ.
ನ್ಯೂಯಾರ್ಕ ನ ಕ್ಲಾರಾ ಜೆಟಕಿನ್ ಎಂಬ ಮಹಿಳೆ, ಮಹಿಳೆಯರ ಸೌಲಭ್ಯಕ್ಕಾಗಿ, ಸಮಾನವೇತನಕ್ಕಾಗಿ ಮಹಿಳಾ ಕಾರ್ಮಿಕರನ್ನು ಸೇರಿಸಿಕೊಂಡು ತಿಂಗಳಾನುಗಟ್ಟಲೇ ಹೋರಾಟ ನಡೆಸಿ ಯಶಸ್ಸು ಸಾಧಿಸಿದ ದಿನ. ಈ ದಿನವನ್ನು ನೆನಪನ್ನಾಗಿರಿಸಲು ವಿಶ್ವಸಂಸ್ಥೆಯು 1975ರಲ್ಲಿ ಮಹಿಳಾ ದಿನಾಚರಣೆಯನ್ನಾಗಿ ಆಚರಿಸಲು ಕರೆಕೊಟ್ಟಿತು. ಅಂತರಾಷ್ಟ್ರೀಯವಾಗಿ ಇಂದು ಮಹಿಳಾ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಈ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯು ಮಹಿಳಾ ಕೂಲಿ ಕಾರ್ಮಿಕರು ಮಾಡಿದ ಚಳುವಳಿಯಿಂದ ಪ್ರಾರಂಭವಾಯಿತು. ಮಹಿಳೆಯರು ಮತ ಚಲಾಯಿಸುವ ಹಕ್ಕು, ಸಾರ್ವಜನಿಕ ಕಛೇರಿಗಳಲ್ಲಿ ಕೆಲಸ ಮಾಡುವ ಹಕ್ಕು, ಸಮಾನತೆಯ ಹಕ್ಕು, ರಾಜಕೀಯ ಮತ್ತು ಆರ್ಥಿಕ ಕ್ಷೇತ್ರಗಳಲ್ಲಿ ಭಾಗವಹಿಸುವ ಹಕ್ಕು ಇವುಗಳನ್ನು ಸಮಾನವಾಗಿ ಪಡೆಯಲು ಚಳುವಳಿ ನಡೆಸಿ, ತಮ್ಮದೇ ಆದ ಸ್ಥಾನವನ್ನು ಗಳಿಸಿದರು. ಕ್ರಮೇಣವಾಗಿ ಅನೇಕ ಮಹಿಳಾ ಚಳುವಳಿಗಳು ನಡೆದು, ನಂತರ ಇದು ಮಹಿಳಾ ದಿನಾಚರಣೆಯಾಗಿ ಮಾರ್ಪಾಡಾಯಿತು. ಇದರಿಂದ ಪ್ರತಿಯೊಬ್ಬ ಮಹಿಳೆಗೆ ತನ್ನದೇ ಆದಂಥ ಸ್ವಾತಂತ್ರ್ಯವನ್ನು ಹೊಂದಲು, ಸಾಧಿಸಲು ಸ್ಥಾನಗಳಿಸಲು, ಒಬ್ಬರಿಂದ ಇನ್ನೊಬ್ಬರನ್ನು ನೋಡಿ ಯಶಸ್ಸು ಗಳಿಸಲು ಪ್ರೋತ್ಸಾಹ ನೀಡುತ್ತದೆ.
ಮಹಿಳೆಯನ್ನು ಭೂಮಿಗೆ ಹೋಲಿಸುತ್ತಾರೆ. ಹೆಣ್ಣಿಲ್ಲದೇ ನಾಡಿಲ್ಲ. ಹೆಣ್ಣಿನಿಂದಲೇ ವಂಶಾಭಿವೃದ್ಧಿ. ಇಂದು ಹೆಣ್ಣು ಅಡುಗೆ ಮನೆಯ ಕೆಲಸದಿಂದ ಆಕಾಶದೆತ್ತರದ ಕೆಲಸದವರೆಗೂ ತನ್ನ ಸಾಧನೆಯನ್ನು ತೋರಿಸಿದ್ದಾಳೆ. ದೈಹಿಕ ಬದಲಾವಣೆಗಳನ್ನು ಹೊರತುಪಡಿಸಿ ಪ್ರತಿಯೊಂದರಲ್ಲೂ ಪುರುಷನಿಗೆ ಸಮಾನವಾಗಿ ಕಾರ್ಯ ನಿರ್ವಹಿಸುತ್ತಿದ್ದಾಳೆ. ಅಶಿಕ್ಷಣವನ್ನು ಮೆಟ್ಟಿನಿಂತು, ಶಿಕ್ಷಣದತ್ತ ಹೆಜ್ಜೆಯಿಟ್ಟು ಸಮಾಜದಲ್ಲಿ ತನ್ನತನದ ಗೌರವವನ್ನು ಹೆಚ್ಚಿಸಿಕೊಂಡಿದ್ದಾಳೆ. ಎಷ್ಟೇ ಬೆಳೆಯುತ್ತಿದ್ದರೂ ಅವಳನ್ನು ಇನ್ನೂ ಕೀಳು ದೃಷ್ಟಿಯಿಂದ ಕಾಣುವುದು ತಪ್ಪಿಲ್ಲ. ಆಕೆಯ ಮೇಲೆ ಅತ್ಯಾಚಾರ, ದೌರ್ಜನ್ಯ, ಅಸಮಾನತೆಗಳು ನಡೆಯುತ್ತಲೇ ಇದೆ. ಎಷ್ಟೋ ಕಾನೂನುಗಳು ಮಹಿಳೆಯರ ಪರವಾಗಿದ್ದರೂ, ಅವುಗಳ ಉಪಯೋಗ ಪಡೆಯಲು ಮುಂದೆ ಬರುತ್ತಿಲ್ಲ. ಕಾರಣ ಅವಳಿಗೆ ಅಲ್ಲಿಯೂ ಮೊಸವಾಗಬಹುದೆಂಬ ಭಯದಿಂದ, ತನಗಾದಂಥ ಅನ್ಯಾಯವನ್ನು ವ್ಯಕ್ತಪಡಿಸಲು ಹಿಂಜರಿಯುತ್ತಾಳೆ. ಮಹಿಳೆಯರಿಗೆ ಮೀಸಲಿರುವಂಥ ಕಾನೂನುಗಳನ್ನು ಉಪಯೋಗಿಸಿಕೊಂಡು ಅನ್ಯಾಯ, ದೌರ್ಜನ್ಯ, ಅತ್ಯಾಚಾರ, ಹಿಂಸಾತ್ಮಕ ಕೃತ್ಯಗಳ ವಿರುದ್ಧ ಮಹಿಳೆಯರು ಪುರುಷರು ಹೋರಾಡಿದಾಗ ಮಾತ್ರ, ವ್ಯಕ್ತಿ ಸ್ವಾತಂತ್ರ್ಯದೊಂದಿಗೆ, ಗೌರವ ಘನತೆಯೊಂದಿಗೆ, ಬದುಕಬಹುದಾಗಿದೆ.
ಹೆಣ್ಣು ಸಹಿಷ್ಣುತೆಗೆ ಹೆಸರಾದವಳು. ಮನೆಯಲ್ಲಿ, ಉದ್ಯೋಗ ಕ್ಷೇತ್ರಗಳಲ್ಲಿ, ಸಮಾಜದಲ್ಲಿ, ಎಷ್ಟೋ ಸಮಸ್ಯೆಗಳಿಗೆ ಒಳಗಾಗಿ ಮಾನಸಿಕ ಒತ್ತಡದಲ್ಲಿ ಸಿಲುಕಿದ್ದಾಳೆ. ಅವಳ ಪರಿತಪಿಸುವಿಕೆ ಹೆಚ್ಚುತ್ತಲೇ ಇದೆ. ಎಷ್ಟೋ ಜನರಿಗೆ ಸಹಕಾರ ದೊರೆಯುತ್ತಿಲ್ಲ. ಮನದ ನೋವನ್ನು ಅನುಭವಿಸುತ್ತಾ ಖಿನ್ನತೆ, ಆತಂಕ, ಭಯ, ಭೀತಿಗೊಳಗಾಗಿದ್ದಾಳೆ. ತನ್ನನ್ನು ತಾನು ಮೆಟ್ಟಿ ನಿಂತು ಸಮಾಜಕ್ಕೆ ಒಳ್ಳೆಯ, ಆದರ್ಶ, ನಿಪುಣ, ಗೌರವಯುತ ಮಹಿಳೆಯಾಗಬೇಕಾಗಿದೆ. ಮಹಿಳೆಯ ಉನ್ನತಿ ಮನೆಯವರ, ಸುತ್ತಮುತ್ತಲಿನ ಆರೋಗ್ಯಯುತ ಪರಿಸರದ ಸಹಕಾರದ ಮೇಲೆ ಅವಲಂಬಿತವಾಗಿದೆ. ಅವಳ ಪ್ರತಿಯೊಂದು ಸಾಧನೆಗೆ, ಇತರ ಮಹಿಳೆಯರು ಸಾಧಿಸಿದ ಸ್ಫೂರ್ತಿಯು ಅವಳಿಗೆ ಉತ್ತೇಜಕವಾಗಬೇಕಾಗಿದೆ.
ಪುರಾತನ ಕಾಲದಿಂದಲೂ ಮಹಿಳೆ ಎಷ್ಟೇ ಕೆಲಸ ಮಾಡಿದರೂ “ ನ ಸ್ತ್ರೀ ಸ್ವಾತಂತ್ರ್ಯ ಅರ್ಹತಿ” ಎಂಬ ನಾಣ್ಣುಡಿಗೆ ತುತ್ತಾಗಿದ್ದಾಳೆ. ಅಂದಿನಿಂದಲೂ ಅವಳ ಮೇಲೆ ಅತ್ಯಾಚಾರ, ದಬ್ಬಾಳಿಕೆ, ಶೋಷಣೆ, ಅನ್ಯಾಯ ನಡೆಯುತ್ತಲೇ ಇದೆ. ಪುರುಷ ಪ್ರಧಾನವಾದ ನಮ್ಮ ಸಮಾಜದಲ್ಲಿ ಹೆಣ್ಣು ಕೇವಲ ಮನೆಗೆಲಸಕ್ಕೆ ಸೀಮಿತ, ಕಡಿಮೆ ಶಿಕ್ಷಣ, ಮದುವೆ, ಮಕ್ಕಳು, ಕುಟುಂಬ, ಹೊರಗಿನ ಜ್ಞಾನವೇ ಇರಲಿಲ್ಲ. ಹೆಣ್ಣನ್ನು ಕೀಳಾಗಿ ಕಾಣುವುದು, ಅವಳು ಮನೆಯವರಿಗೆ ಭಾರ, ಗಂಡು ಹೆಣ್ಣಿನ ಬೇಧ ಭಾವ ಮನೆಯ, ಸಮಾಜದ ಸದಸ್ಯರಿಂದ ಎದ್ದು ತೋರುತ್ತಿತ್ತು. ಪ್ರತಿಯೊಂದರಲ್ಲೂ ಕೀಳಿರಿಮೆಯಿಂದ ತುಚ್ಛವಾಗಿ ಕಾಣಲಾಗುತ್ತಿತ್ತು. ಹೆಣ್ಣು ಮಗು ಹುಟ್ಟಿತೆಂದರೆ ಆ ತಾಯಿಯು ನರಕಯಾತನೆಯನ್ನು ಅನುಭವಿಸಬೇಕಿತ್ತು. ಇನ್ನೂ ಕೆಲವರು ಭ್ರೂಣ ಹತ್ಯೆಯನ್ನೇ ಮಾಡುತ್ತಿದ್ದರು. ಆದರೂ ಹೆಣ್ಣು ಭ್ರೂಣ ಹತ್ಯೆ ಇನ್ನೂ ನಿಂತಿಲ್ಲ. ಅವಳು ತನ್ನ ಭಾವನೆಗಳನ್ನು ಹತ್ತಿಕ್ಕಿಕೊಂಡು. . . . . . . . . .ನಾ ಯಾಕ ಹುಟ್ಟಿ ಬಂದೇನ, ಶಿವ ಯಾಕ ನನ್ನ ಹುಟ್ಟಿಸ್ಯಾನ ಎಂದು ನೊಂದುಕೊಂಡು ತನ್ನನ್ನು ತಾನು ಹಳಿದುಕೊಳ್ಳುತ್ತಿದ್ದಳು. ಕಾಲಕ್ರಮೇಣದಲ್ಲಿ ಅವಳ ಶಿಕ್ಷಣಕ್ಕೆ ಹೆಚ್ಚಿನ ಮಹತ್ವಕೊಟ್ಟು ಅವಳನ್ನು ಕೂಡ ಪ್ರತಿಯೊಂದರಲ್ಲಿ ಮುಂದೆ ಬರುವಂತೆ ಮಾಡಲಾಯಿತು. ಇಂದಿನ ಮುಂದುವರೆದ ಸಮಾಜದಲ್ಲಿ ಕೂಡ ದೇವರಿಗೆ ಹರಕೆ ಹೊತ್ತು ಗಂಡುಮಗು ಬೇಕೆಂದು ಪೂಜೆ ಪುನಸ್ಕಾರಗಳನ್ನು ಮಾಡುತ್ತಾರೆ. ಇಂದು ಮಹಿಳೆಗೆ ಮುಖ್ಯವಾಗಿ ಬೇಕಾಗಿರುವುದು ಕುಟುಂಬದಲ್ಲಿ ಸಮಾನತೆ, ಸಹಕಾರ. ಉತ್ತಮ ಶಿಕ್ಷಣ ಮತ್ತು ಕಾನೂನಿನ ಅರಿವು, ತನ್ನತನದ ವ್ಯಕ್ತಿತ್ವ, ಸಾಧಿಸುವೆನೆಂಬ ಛಲವಿದ್ದಾಗ ಅವಳು ಉನ್ನತಿಯತ್ತ ಹೆಜ್ಜೆ ಇರಿಸುವಳು. ನಮ್ಮ ಸಂವಿಧಾನವು ಮಹಿಳೆಯರಿಗಾಗಿಯೇ ಮೀಸಲಾದ ಹಕ್ಕುಗಳನ್ನು ದಯಪಾಲಿಸಿದೆ. ಅವುಗಳನ್ನು ಪ್ರತಿಯೊಬ್ಬ ಮಹಿಳೆಯರು ಅಳವಡಿಸಿಕೊಳ್ಳಬೇಕಾಗಿದೆ. ಅವು ಕೇವಲ ಪುಸ್ತಕಕ್ಕೆ ಸೀಮಿತವಾಗಿರಬಾರದು. ವೀರ ವನಿತೆಯರು, ಶ್ರೇಷ್ಠ ಸಾಧಕಿಯರು, ಆಯಾ ಕ್ಷೇತ್ರದಲ್ಲಿ ಸಾಧನೆಗೈದ ಪ್ರತಿಭಾವಂತ ಮಹಿಳೆಯರ ಸಾಧನೆಗಳನ್ನು, ವಿಚಾರ, ಮೌಲ್ಯಗಳನ್ನು ತಿಳಿದುಕೊಂಡಾಗ, ಪ್ರತಿಯೊಬ್ಬ ಮಹಿಳೆಯರಲ್ಲೂ, ಪ್ರತಿಯೊಂದರಲ್ಲೂ ಮೆಟ್ಟಿನಿಲ್ಲುವ ಧೈರ್ಯ ಹೊರಹೊಮ್ಮುತ್ತದೆ. ನಮ್ಮೊಳಗಿರುವ ಚೈತನ್ಯ ಜಾಗೃತವಾಗಿ ಉನ್ನತ ಕಾರ್ಯವನ್ನು ಸಾಧಿಸುವಂತೆ ಪ್ರೆರೇಪಿಸುತ್ತದೆ. ಎಷ್ಟೋ ಕುಟುಂಬಗಳಲ್ಲಿ ಮಹಿಳೆಯರು ಕೂಡ ತಮ್ಮ ತಮ್ಮ ಅರ್ಹತೆಗೆ ತಕ್ಕಂತೆ ಆಯಾ ಕ್ಷೇತ್ರಗಳಲ್ಲಿ ಕೆಲಸವನ್ನು ನಿಭಾಯಿಸುತ್ತಿದ್ದಾರೆ. ಮಹಿಳೆ ಅಡುಗೆ ಮನೆಯ ಕೆಲಸವನ್ನು ನಿಭಾಯಿಸುತ್ತ ಹೊರಗಡೆ ಹೋಗಿ ದುಡಿಯುವ ನಿಪುಣತೆಯನ್ನು ಹೊಂದಿದ್ದಾಳೆ. ಎಲ್ಲದರಲ್ಲೂ ಮೇಲು, ಉದ್ಯೋಗ ಯಾವುದಾದರೇನು? ದುಡಿಯುವ ಜನರಿಗೆ, ಎಷ್ಟೋ ಮಹಿಳೆಯರು ದೊಡ್ಡ ದೊಡ್ಡ ಹುದ್ದೆಗಳಿಂದ ಹಿಡಿದು, ಚಿಕ್ಕ ಚಿಕ್ಕ ಹುದ್ದೆಯ ಕೆಲಸಗಳಲ್ಲಿ ತನ್ನ ಜಾಣತನವನ್ನು ತೋರಿದ್ದಾಳೆ. ಪುರುಷನ ಅವಲಂಬನೆಯನ್ನು ಬಿಟ್ಟು ತನ್ನ ಸ್ವಾತಂತ್ರ್ಯದ ಹಾದಿಯಲ್ಲಿದ್ದಾಳೆ. ಅವಳು ವಿವಾಹಿತ, ಅವಿವಾಹಿತಳಾಗಿದ್ದರೂ ಮಾಡುವ ಸಾಧನೆಗೆ ಸಹಕಾರ ದೊರೆತಲ್ಲಿ, ಅವಳ ಸಾಧನೆಗೆ ಯಾವುದು ಅಡ್ಡಿಯಾಗುವುದಿಲ್ಲ. ಅವಳಿಗೂ ಒಂದು ವ್ಯಕ್ತಿತ್ವ, ಗೌರವ ಇದೆ. ತನ್ನದೇ ಆದಂಥ ಸ್ವ-ಸ್ವಾತಂತ್ರ್ಯವನ್ನು ರೂಪಿಸಿಕೊಳ್ಳುತ್ತಿದ್ದಾಳೆ. ಉದ್ಯೋಗ ಅವಳ ಆರ್ಥಿಕ ಭದ್ರತೆಯನ್ನು ಒದಗಿಸಿದರೆ, ನಾನು ‘ಸ್ವಾವಲಂಬಿ’ ಎನ್ನುವ ಶಬ್ಧ ಅವಳಲ್ಲಿ ಸ್ಫೂರ್ತಿ ತುಂಬಿದೆ. ಇಂದು ಮಹಿಳೆ ಪ್ರತಿಯೊಂದು ಕ್ಷೇತ್ರದಲ್ಲಿ ಮುಂದಿದ್ದಾಳೆ. ಕೃಷಿ ಮನೆಗೆಲಸಗಳಿಗೆ ಸೀಮಿತವಾಗಿದ್ದ ಮಹಿಳೆಯರು ಇಂದು ಕೈಗಾರಿಕೆ, ಉದ್ಯಮ, ವಿಜ್ಞಾನ, ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆ, ಪೋಲೀಸ್ ಇಲಾಖೆ, ರಾಜಕೀಯ ಕ್ಷೇತ್ರಗಳಲ್ಲಿ ಸ್ವಾವಲಂಬನೆಯಿಂದ ಪುರುಷನಿಗೆ ಸಮನಾಗಿ ಕಾರ್ಯನಿರ್ವಹಿಸುತ್ತಿದ್ದಾಳೆ. ಎಷ್ಟೋ ಹೆಣ್ಣುಮಕ್ಕಳು ಪ್ರಬಲ ಮತ್ತು ತಮ್ಮ ಸ್ವ ಸ್ವಾತಂತ್ರ್ಯವನ್ನು ಅನುಭವಿಸುತ್ತಿದ್ದಾರೆ. ಅವಳು ತನ್ನ ಕುಟುಂಬ ಹಾಗೂ ತನ್ನ ವೃತ್ತಿ ಎರಡನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದಾಳೆ. ಮಹಿಳೆಯರ ಅಭಿವೃದ್ಧಿಗಾಗಿ ಅನೇಕ ಔದ್ಯೋಗಿಕ ಸ್ಥಾನಗಳು ಮೀಸಲಾಗಿವೆ. ಮಹಿಳಾ ಮತ್ತು ಮಕ್ಕಳ ಇಲಾಖೆಯಿಂದ ಮಹಿಳೆಯರಿಗಾಗಿಯೇ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.
ಒಟ್ಟಿನಲ್ಲಿ ಮಹಿಳೆಯರು ಅನೇಕ ಸಾಧನೆಗಳಿಂದ ಕಂಗೊಳಿಸುತ್ತಿದ್ದಾಳೆ. ಮಹಿಳೆ ದೈಹಿಕವಾಗಿ ಅಶಕ್ತಳಾದರೂ, ಪ್ರತಿಯೊಂದು ಕಾರ್ಯದಲ್ಲಿ ಸಶಕ್ತಳು. ತನ್ನ ನಿಪುಣತೆಯಿಂದ ಕಲಾಕೌಶಲ್ಯದಿಂದ ಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸಬಲ್ಲಳು. ಪ್ರತಿಯೊಬ್ಬ ಮಹಿಳೆಯರಲ್ಲಿ ಸಾಧಿಸುವ ಛಲವಿದೆ. ಯುಕ್ತಿಯಿಂದ ಅವಳು ಮುಂದುವರೆಯಬೇಕಾಗಿದೆ. ಹೆಣ್ಣಿನ ಉಳಿವಿಗಾಗಿ, ಹೆಣ್ಣಿನ ಏಳ್ಗೆಗಾಗಿ ಪ್ರತಿಯೊಬ್ಬರಲ್ಲೂ ಲಿಂಗ ಸಮಾನತೆ, ಸಹಕಾರ, ಗೌರವ ಘನತೆ, ತರುವಲ್ಲಿ ಬದ್ಧರಾಗಿ, ಅವಳು ಹೊಸ ಹೊಸ ಕಾರ್ಯಸಾಧನೆ ಮಾಡುವಲ್ಲಿ ಸ್ಫೂರ್ತಿ, ಧೈರ್ಯ, ಪ್ರೀತಿಯನ್ನು ತುಂಬೋಣ. ನಮ್ಮ ಮನೆಯ ಹೆಣ್ಣುಮಕ್ಕಳಿಗೆ ಪ್ರೀತಿ, ಗೌರವ ನೀಡುವಂತೆ , ಇತರ ಹೆಣ್ಣುಮಕ್ಕಳನ್ನು ಅದೇ ಪ್ರೀತಿ ಗೌರವದಿಂದ ನೋಡಿದಾಗ ರಾಗ, ಮದ, ಮಾತ್ಸರ್ಯಗಳಿಗೆ ಅವಕಾಶವಿರುವುದಿಲ್ಲ. ಆಗುವಂಥ ಅತ್ಯಾಚಾರ ಅನಾಚಾರಕ್ಕೆ ಕಡಿವಾಣ ಹಾಕಿ, ಅವಳು ಇನ್ನೂ ಹೆಚ್ಚಿನ ಅಭಿವೃದ್ದಿ ಪಥದತ್ತ ಸಾಗಲು, ಪ್ರತಿಯೊಂದರಲ್ಲಿ ಸಹಕಾರ ಅನ್ನುವ ಸಾಥ್ ಅವಶ್ಯವಾಗಿದೆ. ಮಹಿಳೆಯರೇ ಗೌರವ, ಯಶಸ್ಸು ತಾನಾಗಿಯೇ ಬರುವುದಿಲ್ಲ. ಅದಕ್ಕೆ ನಿಮ್ಮದೇ ಆದಂಥ ಪರಿಶ್ರಮ, ಸಾಧನೆ, ವ್ಯಕ್ತಿತ್ವದಿಂದ ಮಾತ್ರ ಸಾಧ್ಯ. ಪ್ರತಿಯೊಂದು ಹೆಜ್ಜೆ ಹೊಸ ಹೊಸ ಸಾಧನೆಗಳತ್ತ ಸಾಗಲಿ. ನಾಡಿನ ಮಹಿಳೆಯರಿಗೆಲ್ಲ ನನ್ನ ಹೃದಯಪೂರ್ವಕ ವಂದನೆಗಳು.
-ಶ್ರೀಮತಿ. ಶ್ರೀದೇವಿ ಬಿರಾದಾರ
ಮನೋವೈದ್ಯಕೀಯ ಸಮಾಜಕಾರ್ಯಕರ್ತೆ,
ಡಿಮ್ಹಾನ್ಸ, ಧಾರವಾಡ.