ಬದುಕಿಗೆ ಭಗವದ್ಗೀತೆ – ‘ಹುಟ್ಟುವುದೂ ಸಾಯುವುದೂ ಅಪರಿಹಾರ್ಯ, ಆದ್ದರಿಂದ ಶೋಕಿಸಬೇಡ’
ದೇಹಾದಿಗಳು ವಿಕಾರ-ನಾಶಗಳನ್ನು ಹೊಂದುವುದು ಅನಿವಾರ್ಯ. ಆದರೆ ಆತ್ಮವಸ್ತುವು ಅವಿಕಾರ್ಯ-ಅವಿನಾಶಿ. ಈ ಹಾಗಾಗಿ ಈ ಆತ್ಮವೇ ನಮ್ಮ ಪ್ರಜ್ಞೆಯ ನೆಲೆಯಾದಾಗಶೋಕವುಳಿಯಲಾರದು ಎಂಬ ತಥ್ಯವನ್ನು ಕೃಷ್ಣನು ಅರ್ಜುನನಿಗೆ ಮನಗಾಣಿಸುತ್ತಿದ್ದ. ಹೀಗೆ ಆತ್ಮಭಾವದ ‘ತಾತ್ವಿಕನೆಲೆಯ ಸಾಧನೆ’ಗೇರಲು ಮನುಷ್ಯನಿಗೆ ಮನೋಬುದ್ಧಿಗಳ ಪಕ್ವತೆ ಅಗತ್ಯ. ಕಣ್ಮುಂದೆ ಕಾಣುವಷ್ಟನ್ನೇ ಅವಲಂಬಿಸಿ ಅಭ್ಯಾಸವಾಗಿರುವ ನಮಗೆ ಒಮ್ಮೆಲೆ ಮನೋಬುದ್ಧ್ಯತೀತವಾದ ವಿಚಾರ ನಿಲುಕುವುದು ಕಷ್ಟ. ಕೃಷ್ಣನಿಗೆ ಅದು ಗೊತ್ತು. ಹಾಗಾಗಿ ಕರುಣೆಯಿಂದ ಸ್ವಲ್ಪ ಕೆಳಗಿಳಿದು, ತನ್ನ ಉಪದೇಶವನ್ನು ಸಾಮಾನ್ಯ ನೀತಿಯ ಧಾಟಿಯಲ್ಲಿ ಮುಂದುವರೆಸುತ್ತಾನೆ- (ಭ, ೨೬ & ೨೭)
ಅಥ ಚೈನಂ ನಿತ್ಯಜಾತಂ ನಿತ್ಯಂ ವಾ ಮನ್ಯಸೇ ಮೃತಂ I ತಥಾಪಿ ತ್ವಂ ಮಹಾಬಾಹೋ ನೈವಂ ಶೋಚಿತುಮರ್ಹಸಿ IIಜಾತಸ್ಯ ಹಿ ದ್ರುವೋ ಮೃತ್ಯುಃ ಧ್ರುವಂ ಜನ್ಮ ಮೃತಸ್ಯ ಚ I ತಸ್ಮಾದಪರಿಹಾರ್ಯೇಽರ್ಥೇ ನ ತ್ವಂ ಶೋಚಿತುಮರ್ಹಸಿ II ಒಂದು ವೇಳೆ, ‘ಆತ್ಮವಸ್ತುವು ಹುಟ್ಟುತ್ತದೆ ಸಾಯುತ್ತದೇ’ ಎಂದೇ ಪರಿಗಣಿಸುವುದಾದರೂ, ನೀನು ಶೋಕಿಸುವುದು ಅನಗತ್ಯ. ಏಕೆಂದರೆ, ಹುಟ್ಟಿದ್ದು ಸಾಯಲೇ ಬೇಕು, ಸತ್ತದ್ದು ಹುಟ್ಟಲೇಬೇಕು! ಹೀಗೆ ‘ಅಪರಿಹಾರ್ಯ’ವಾದದ್ದರ ಬಗ್ಗೆ ಶೋಕಿಸಿವುದು ಬೇಕಿಲ್ಲ.
ಇಲ್ಲಿ ಕೃಷ್ಣಪರಮಾತ್ಮನ ಕರುಣೆಯನ್ನು ಗಮನಿಸಿ. ಆತ್ಮಭಾವ ಅಷ್ಟು ಸುಲಭವಾಗಿ ಎಲ್ಲರಿಗೂ ದಕ್ಕದು. ಆತ್ಮವಸ್ತುವಿನ ನಿತ್ಯತ್ವವನ್ನು ಗ್ರಹಿಸಲು ಅತ್ಯಂತ ಶುದ್ಧವೂ ಸೂಕ್ಷ್ಮವೂ ಆದ ಅಂತರಂಗಬೇಕಾಗುತ್ತದೆ. ಹಾಗಿಲ್ಲದೇ ಇದ್ದವರು ಏನು ಮಾಡಬೇಕು? ಅವರಿಗಾಗಿ ಕೃಷ್ಣನು ಭೌತಿಕ ಬದುಕಿನ ನೆಲೆಯಲ್ಲೇ ಸಾಮಾನ್ಯ ನೀತಿಯನ್ನೂ ಬೋಧಿಸುತ್ತಿದ್ದಾನೆ. ನಮ್ಮ ಅಸಹಾಯಕತೆಯೇನು ಗೊತ್ತೇ? ಲೋಕದಲ್ಲಿ ಕಂಡದ್ದಲ್ಲದೇ ಬೇರೇನೂ ಮನೋಬುದ್ಧಿಗಳಿಗೆ ಅರ್ಥವಾಗವು! ಪರಮಾರ್ಥವನ್ನೇ ಚಿಂತಿಸಿದರೂ ಅದಕ್ಕೂ ಲೌಕಿಕ ಉದಾಹರಣೆಗಳನ್ನೇ ಹುಡುಕುತ್ತದೆ! ಇದು ಕೃಷ್ಣನಿಗೂ ಗೊತ್ತು.
“ಇಂದ್ರಿಯ-ಮನೋ-ಬುದ್ಧಿಗಳಿಗೆ ನಿಲುಕದ್ದನ್ನು ನೆಚ್ಚುವುದು ಹೇಗೆ?” ಎನ್ನುವುದು ಹಲವರ ಗೊಂದಲ. ‘ಕಾಣುವ ವಸ್ತು-ಪ್ರಪಂಚವಷ್ಟೇ ಸತ್ಯ’ ಎನ್ನುವ ಭ್ರಾಂತಿ ಇದಕ್ಕೆ ಕಾರಣ. ‘ಅದಾವುದೋ ಅಮೂರ್ತವಾದ ಸತ್ಯ-ಧರ್ಮ-ಪಾಪ-ಪುಣ್ಯಗಳಿಗೆ ಹೆದರಿ ಸಧ್ಯಕ್ಕೆ ಕೈಗೆ ಸಿಕ್ಕಿರುವ ಭೋಗವನ್ನು ಏಕೆ ಕಳೆದುಕೊಳ್ಳಬೇಕು? ಆದದ್ದು ಆಗಲಿ!” ಋಣಂ ಕೃತ್ವಾ ಘೃತಂ ಪಿಬೇತ್ (ಸಾಲಮಾಡಿ ತುಪ್ಪ ತಿನ್ನು) ಎಂಬ ‘ಭೋಗವಾದ’ವೂ ಕಾರಣವಿರಬಹುದು. ಒಂದು ಮಟ್ಟಕ್ಕೆ ಇಹ-ಪರ-ಜನ್ಮ-ಮೃತ್ಯು-ಪಾಪ-ಪುಣ್ಯಾದಿಗಳ ಪ್ರಜ್ಞೆ ಎಚ್ಚೆತ್ತಿದ್ದರೂ, ಅತಿಯಾದ ಭೋಗ ಚಾಪಲ್ಯದಿಂದಾಗಿ ವಿಷಯ ಪ್ರಪಂಚವನ್ನು ಬಿಟ್ಟಿರಲಾರದ ಹೃದಯ ದೌರ್ಬಲ್ಯವೂ ಕಾರಣವಿರಬಹುದು. ಜೀವನದ ಬಗ್ಗೆ ಸುಂದರವಾದ ಸ್ವಪ್ನಸೌಧಗಳನ್ನು ಕಟ್ಟಿಕೊಂಡವರಿಗೆ ಕೊನೆಗೆ ಎಲ್ಲವನ್ನೂ ಕೆಡವುವ ಸಾವೆಂಬ ‘Bull-Dozer’ನ ಭಯವೂ ಸತ್ಯದ ಚಿಂತನೆಗೆ ಅಡ್ಡವಾಗಿರಬಹುದು! ಅಥವಾ ಸನಾತನ ದರ್ಶನ-ವಿಚಾರಧಾರೆಗಳನ್ನು ಹಳಿಯುವ ಸಲುವಾಗಿಯೇ ಚಾರ್ವಾಕವಾದದ ಅಸ್ತ್ರಗಳನ್ನು ತೇಲಿಬಿಟ್ಟ ಆಕ್ರಮಣಕಾರೀ ಪಾಶ್ಚಾತ್ಯವಾದಗಳಿಗೆ ಮನಸೋತು ಗೊಂದಲಕ್ಕೆ ಒಳಪಟ್ಟಿರುವ Enslaved Mindset ಸತ್ಯಮೀಮಾಂಸೆಗೆ ಅಡ್ಡವಾಗಿರಬಹುದು!
ಒಟ್ಟಿನಲ್ಲಿ, ದೇಹ-ಮನ-ಬುದ್ಧಿಗಳ ನೆಲೆಯಿಂದ ಆತ್ಮದ ನೆಲೆಗೇರುವುದಂತೂ ಅತ್ಯಂತ ಕಷ್ಟ. ಸಾಮಾನ್ಯರಾದ ನಮಗೆ ಅರ್ಥವಾಗುವ ಅತೀಂದ್ರಿಯ ವಿಷಯ ಒಂದೇ- ‘ಹುಟ್ಟು-ಸಾವು’! ಅದಾವುದೋ ಜೀವವು ಗರ್ಭದಲ್ಲಿ ದೇಹತಾಳಿ ಹುಟ್ಟಿಬರುವ ಸೋಜಿಗವನ್ನು ಎಲ್ಲರೂ ವಿಸ್ಮಯದ ಕಂಗಳಿಂದ ಕಾಣುತ್ತೇವೆ! ಅಂತೆಯೇ ದೇಹವನ್ನು ಅಲ್ಲೇ ತ್ಯಜಿಸಿ ‘ಸಾಯುವ ಜೀವ’ನನ್ನು ಭಯಾಶ್ಚರ್ಯಗಳಿಂದ ಕಾಣುತ್ತೇವೆ.
‘ಸತ್ತಜೀವ ಮತ್ತೆ ಹುಟ್ಟುತ್ತದೆ’ ಎನ್ನುವ ಸನಾತನ ಧರ್ಮದ ದರ್ಶನವನ್ನು ಹಲವು ಪೌರ್ವಾತ್ಯ ಮತಗಳು ಅನುಮೋದಿಸುತ್ತವೆ. ಜಗತ್ತಿನಾದ್ಯಂತ ಸಾವಿರಾರು ಸಂಶೋಧನೆಗಳೂ, ನಿಗೂಢ ಅನುಭವ-ಕಥನಗಳು ಪುನರ್ಜನ್ಮವನ್ನು ಪುಷ್ಟೀಕರಿಸುತ್ತದೆ. ’ಸತ್ತವರು ಮರಳಿ ಹುಟ್ಟುತ್ತಾರೆ’ ಎನ್ನುವುದನ್ನು ಒಪ್ಪದ ಪಾಶ್ಚಾತ್ಯ-ಮತಗಳೂ ಕೂಡ ‘ಹುಟ್ಟಿದವನು ಸಾಯಲೇಬೇಕೆ’ನ್ನುವಷ್ಟನ್ನಾದರೂ ಒಪ್ಪಲೇಬೇಕಲ್ಲ! ಒಟ್ಟಿನಲ್ಲಿ ‘ಸಾವು ಅನಿವಾರ್ಯ. ಹಾಗಾಗಿ ಸುಮ್ಮನೆ ಶೋಕಿಸುವ ಬದಲು ಅಂಗೀಕರಿಸಿ ಶಾಂತವಾಗುವುದು ಜಾಣತನ’ ಎನ್ನುವುದು ಕೃಷ್ಣನ ಕಿವಿಮಾತು.
ಹುಟ್ಟು-ಸಾವುಗಳು ಅಪರಿಹಾರ್ಯ– ಅದಕ್ಕೆ ‘ಪರ್ಯಾಯ ಪರಿಹಾರ’ ಎನ್ನುವುದು ಇಲ್ಲ. ಎಂತಹ ಶಾಂತಿ-ಕರ್ಮಗಳಿಂದಲೂ ವಿಧವಿಧ ಪೂಜೆ-ಜಪ-ತಪಾದಿಗಳಿಂದಲೂ ಆಯಸ್ಸು-ಆರೋಗ್ಯ – ಐಶ್ವರ್ಯಾದಿಗಳನ್ನು ಯತ್ನದಿಂದಲೂ ದೈವಕೃಪೆಯಿಂದಲೂ ಉತ್ತಮಪಡಿಸಿಕೊಂಡರೂ ಕೊನೆಗೂ ‘ಸಾಯುವುದು’ ತಪ್ಪದು! ಎಂತಹ ಸಿದ್ಧರೂ, ಅವತಾರ-ಪುರುಷರೂ ಈ ಸಾವನ್ನೂ ನಗುನಗುತ್ತ ಅಂಗೀಕರಿಸಿ ತೋರಿಸಿಕೊಟ್ಟಿದ್ದಾರೆ! ಚೈತನ್ಯಮಯವಾದ ಅಸ್ತಿತ್ವದಲ್ಲಿ ಅವರ ಮಾಹಾತ್ಮ್ಯ ಹಾಗೂ ಅನುಗ್ರಹಗಳು ಮುಂದುವರೆಯಬಹುದೇನೋ! ಆದರೆ ಅವರ ಭೌತಿಕದೇಹವಂತೂ ಧರೆಗುರುಳುವುದು ತಪ್ಪದಷ್ಟೆ?! ಹೀಗೆ ಅನಿವಾರ್ಯವೂ ಅಪರಿಹಾರ್ಯವೂ ಆದ ಸೃಷ್ಟಿಯ ನಿಯಮವನ್ನು ಒಪ್ಪಿ ಶಾಂತವಾಗುವ ಬದಲು ಗೋಳಾಡುತ್ತಲೇ ಇರುವುದು ಮೂರ್ಖತನವಲ್ಲವೆ?
ಜೀವನ ಎಂಬ Package ಹುಟ್ಟು-ಸಾವುಗಳೆಂಬ ತುದಿಗಳನ್ನೂ ಹಲವಾರು ಅನುಭವಗಳನ್ನೂ ಹೊಂದಿದೆ. ಅವುಗಳಲ್ಲಿ ನಮಗೆ ‘ಬೇಕು-ಬೇಡ-ಸಾಕು’ಗಳ ಆಯ್ಕೆಯಿಲ್ಲ! ಹಾಗಾಗಿ ವಿನಮ್ರತೆಯಿಂದ ಅಂಗೀಕರಿಸಬೇಕು, ಅಷ್ಟೆ. ಆಗ ನಮ್ಮ ಅಂತರಂಗವು ಸ್ಥಿರವೂ ಶಾಂತವೂ ಆಗುತ್ತದೆ. ಆ ಸ್ಥಿತಿಯಲ್ಲಿ ನಮ್ಮ ಆತ್ಮಶಕ್ತಿಯು ಪುಂಖಾನುಪುಂಖವಾಗಿ ವ್ಯಕ್ತವಾಗತೊಡಗುತ್ತದೆ, ಸತ್ಯದರ್ಶನವಾಗುತ್ತದೆ. ತತ್ವಚಿಂತನೆಯ ಜೊತೆಗೇ ಈ ಸಾಮಾನ್ಯನೀತಿಯನ್ನು ಅರ್ಜುನನಿಗೆ ನೆನಪಿಸುತ್ತಿದ್ದಾನೆ ಶ್ರೀಕೃಷ್ಣ!
– ಡಾ. ಆರತಿ ವಿ.ಬಿ.
ಕೃಪೆ : ವಿಜಯವಾಣಿ