ಬದುಕಿಗೆ ಭಗವದ್ಗೀತೆ – ಬಿರುಗಾಳಿಗೆ ಸಿಕ್ಕ ನಾವೆಯಂತಾಗದೇ ಶಾಂತನಾಗು
ಸ್ಥಿತಪ್ರಜ್ಞನೆನಿಸಿದವನು ಇಂದ್ರಿಯ ಜಯ ಹಾಗೂ ರಾಗದ್ವೇಷಗಳ ನಿಗ್ರಹದ ಮೂಲಕ ಪ್ರಸಾದ ಗುಣವನ್ನು ಸಿದ್ಧಿಸಿಕೊಂಡಿರುತ್ತಾನೆ; ಅಂತಹವನ ಬುದ್ಧಿ (ಯೋಗದಲ್ಲಿ) ನೆಲೆನಿಲ್ಲುತ್ತದೆ – ಎಂದು ಕೃಷ್ಣನು ಹೇಳುತ್ತಿದ್ದನಷ್ಟೆ? ಹೀಗೆ ಮುಂದುವರೆಸುತ್ತಾನೆ-
ನಾಸ್ತಿ ಬುದ್ಧಿರಯುಕ್ತಸ್ಯ ನ ಚಾಯುಕ್ತಸ್ಯ ಭಾವನಾ I
ನ ಚಾಭಾವಯತಃ ಶಾಂತಿರಶಾಂತಸ್ಯ ಕುತಸ್ಸುಖಮ್ II
ಅಯುಕ್ತನಾದವನ ಬುದ್ಧಿಯು ಧ್ಯಾನಸ್ಥವಾಗಲಾರದು (ಭಾವನಾ ಎಂದರೆ ಧ್ಯಾನವೆಂದರ್ಥ) ಧ್ಯಾನಿಸಲಾಗದವನಿಗೆ ಶಾಂತಿಯಿರದು, ಶಾಂತಿಯಿರದವನಿಗೆ ಸುಖವೆಲ್ಲಿಯದು?
ಬಾಹ್ಯ ಪ್ರಪಂಚದಲ್ಲಾಗುವ ಸಹಜ ವಿಕಾರಗಳಿಗೆಲ್ಲ ಅತಿಯಾಗಿ ಹಿಗ್ಗುತ್ತ-ಕುಗ್ಗುತ್ತ ವಿಚ್ಛಿದ್ರವಾಗುವ ನಮ್ಮ ಬುದ್ಧಿ-ಮನಗಳು(ತತ್ವದಲ್ಲಿ) ಯುಕ್ತವಾಗಲಾಗದು(ಸೇರಲಾಗದು). ಯುಕ್ತನಾಗಲಾಗದವನಿಗೆ ‘ಧ್ಯಾನ’ ಸಾಧ್ಯವಾಗದು. ಕಣ್ಣುಮುಚ್ಚಿ ಸ್ಥಿರಾಸನದಲ್ಲಿ ಕುಳಿತ ಮಾತ್ರಕ್ಕೆ ‘ಧ್ಯಾನ’ವು ಸಿದ್ಧಿಸದು. ಅದಕ್ಕೆ ಪೂರ್ವತಯ್ಯಾರಿಯಾಗಿ ಇಂದ್ರಿಯ-ನಿಗ್ರಹ, ರಾಗದ್ವೇಷಗಳ ನಿಯಂತ್ರಣ ಹಾಗೂ ಆತ್ಮಾಭಿಮುಖವಾದ ಚಿಂತನೆಯೂ ಪ್ರಾರಂಭವಾಗಿರಬೇಕು. ಆಗ ಮಾತ್ರವೇ ’ಧ್ಯಾನ’ವೆನ್ನುವುದು ಅವಿಚ್ಛಿನ್ನಧಾರೆಯಾಗಿ ಅತ್ಮಾಭಿಮುಖವಾಗಿ ಸಾಗುವುದು ಸಾಧ್ಯ. ಅಲುಗಾಡುತ್ತಲೇ ಇರುವ ಪಾತ್ರೆಯಲ್ಲಿ ನೀರು ಅಚಲವಾಗಿ ನಿಲ್ಲಲಾಗದಷ್ಟೆ? ಅಂತೆಯೇ ಇಂದ್ರಿಯಗಳ ಮೂಲಕ ಚಲಿಸುತ್ತಲೇ ಇರುವ ಅಂತಃಕರಣವು ನಿಶ್ಚಲತತ್ವದ ಧ್ಯಾನದಲ್ಲಿ ನಿಲ್ಲಲಾಗದು. ‘ಧ್ಯಾನಿಸ’ಲಾಗದವನಿಗೆ ಶಾಂತಿಯು ಲಭಿಸದು. ಶಾಂತಿಯೆಂದರೆ, ಹೆಸರೇ ಸೂಚಿಸುವಂತೆ, ’ಶಮ’ದ ಭಾವ. ಅರ್ಥಾತ್ ಅಂತರಿಂದ್ರಿಯ-ನಿಗ್ರಹದಿಂದ(ಮನೋನಿಗ್ರಹದಿಂದ) ಬರುವುವಂತಹದ್ದು. ‘ಶಾಂತಿ ಎಂಬ ಶಬ್ದವೇ ಸಾರುತ್ತಿದೆ- ’ತಾನು ಮನೋನಿಗ್ರಹಕ್ಕೆ ಸಂಬಂಧಿಸಿದ ಸ್ಥಿತಿಯೇ ಹೊರತು, ಹೊರಗಡೆಯ ವಸ್ತುಲಾಭಕ್ಕೆ ಸಂಬಂಧಿಸಿದ್ದಲ್ಲ” ಎಂದು! ನಮಗದು ಗಮನಕ್ಕೇ ಬರುತ್ತಿಲ್ಲ ಅಷ್ಟೆ!
ಅಶಾಂತಸ್ಯ ಕುತಃ ಸುಖಮ್? (ಶಾಂತಿಯಿಲ್ಲದವನಿಗೆ ಸುಖವೆಲ್ಲಿಯದು?) ’ಖ’ ಎಂದರೆ ’ಇಂದ್ರಿಯ’. ಇಂದ್ರಿಯಗಳು ನಮ್ಮ ಶಮಗುಣಕ್ಕಧೀನವಾಗಿದ್ದರೆ ಸುಮುಖವಾಗಿರುತ್ತವೆ, ಅದೇ’ಸು-ಖ’! ಇಂದ್ರಿಯಗಳು ಶಮವನ್ನು ಕಳೆದುಕೊಂಡು ಅಲೆದರೆ, ಗಾಳಿಗೆ ಸಿಕ್ಕ ಎಂಜಲೆಲೆಯಂತೆ ಅವು ಅನಿಶ್ಚಿತತೆಯ ದುಃಸ್ಥಿತಿಗಿಳಿಯುತ್ತವೆ- ಅದೇ’ದುಃ-ಖ’! ‘ಶಮದಲ್ಲೇ ಸುಖ’ ಎನ್ನುವುದನ್ನು ಒತ್ತಿ ಹೇಳುತ್ತಿದ್ದಾನೆ ಕೃಷ್ಣ! “ಅಯ್ಯೋ! ಶಾಂತಿಯೇ ಇಲ್ಲದಂತಾಗಿದೆ!” ಎಂದು ನಾವು ಗೊಣಗುವಾಗಲೆಲ್ಲ, ನಮ್ಮೊಳಗೇ ಅನಿಯಂತ್ರಿತವಾಗಿ ಓಡುತ್ತ ಬಗ್ಗಡವೆಬ್ಬಿಸುತ್ತಿರುವ ಇಂದ್ರಿಯ-ಮನಸ್ಸುಗಳ ವ್ಯಾಪಾರವನ್ನು ಸ್ವಲ್ಪ ಗಮನಿಸಬೇಕು- ಆಗ ನಮ್ಮ ಅಶಾಂತಿಗೆ ಕಾರಣ ನಮ್ಮೊಳಗೇ ಕಾಣಬರುತ್ತದೆ!
ಇಂದ್ರಿಯಾಣಾಂ ಹಿ ಚರತಾಂ ಯನ್ಮನೋನುವಿಧೀಯತೇ I
ತದಸ್ಯ ಹರತಿ ಪ್ರಜ್ಞಾಂ ವಾಯುರ್ನಾವಮಿಭಾಂಭಸಿ II
ಯಾರ ಮನಸ್ಸು ಚರಿಸುತ್ತಿರುವ ಇಂದ್ರಿಯಗಳನ್ನೇ ಅನುಸರಿಸುತ್ತದೋ, ಅಂತಹವನ ಪ್ರಜ್ಞೆಯನ್ನು (ಆಯಾ ಇಂದ್ರಿಯವು) ಸಮುದ್ರದಲ್ಲಿನ ದೋಣಿಯನ್ನು ಬಿರುಗಾಳಿಯು ಹೊಯ್ದಾಡಿಸುವಂತೆ, (ಸಿಕ್ಕಸಿಕ್ಕೆಡೆಗೆ) ಹೊಯ್ದಾಡಿಸಿಬಿಡುತ್ತದೆ.
ಇಂದ್ರಿಯಗಳೆಂಬ ಬಿರುಗಾಳಿಗೆ ಸಿಗುವುದು ಎಂದರೆ ಹೊರಗಡೆಯ ಸನ್ನಿವೇಶಗಳ ಬಗ್ಗೆ ರಾಗದ್ವೇಷಗಳನ್ನು ಬೆಳೆಸಿಕೊಂಡು ಅಂತರಂಗದಲ್ಲಿ ಭಾವಕಲ್ಲೋಲದಲ್ಲಿ ಸದಾ ಹೊಯ್ದಾಡುವುದು ನರಳಾಡುವುದು ಎಂದರ್ಥ! ಬಿರುಗಾಳಿಯು ದಿಕ್ಕುತಪ್ಪಿಸಿ ಅದೆಲ್ಲೋ ಒಯ್ದುಬಿಸುಡಬಹುದು! ಅಥವಾ ಯಾವ ಕಡೆಗೂ ಚಲಿಸಲಾಗದೇ ಇದ್ದಲ್ಲೇ ಹೊಯ್ದಾಡುತ್ತಿರುವಂತೆಯೂ ಮಾಡಬಹುದು. ಅಥವಾ ದೋಣಿಯನ್ನೇ ಅಪ್ಪಳಿಸಿ ಮುಳುಗಿಸಿಬಿಡಬಹುದು! ಅನಿಯಂತ್ರಿತ ಇಂದ್ರಿಯಗಳ ಬಿರುಗಾಳಿಯೂ ಹಾಗೇ- ನಮ್ಮ ಜೀವನವೆಂಬ ದೋಣಿಯನ್ನು ಭಾವಕಲ್ಲೋಲಗಳಲ್ಲಿ ಹೊಯ್ದಾಡಿಸಿಬಿಡುತ್ತದೆ. ನಮ್ಮ ಭಾವನೆಗಳು, ನಿರ್ಣಯಗಳು, ವರ್ತನೆಗಳನ್ನೆಲ್ಲ ಏರುಪೇರಾಗಿಸಿ, ನಮ್ಮ ಜೀವನವು ನಮ್ಮ ಪಾಲಿಗೇ ಅನಿಶ್ಚಿತವೂ ಅಶಾಂತವೂ ಅಪಾಯಕಾರಿಯೂ ಆಗುವಂತೆ ಮಾಡಿಬಿಡುತ್ತದೆ! ಖಿನ್ನತೆ-ಆತ್ಮಹತ್ಯೆಯಂತಹ ವಿಪರೀತಗಳ ಕೂಪದಲ್ಲಿ ಮುಳುಗಿಸಿಯೂ ಬಿಟ್ಟೀತು ಕೂಡ!
ಪರಸ್ತ್ರೀಯಾದ ಸೀತೆಯನ್ನು ಕಂಡಾಗ ರಾವಣನಿಗಾದದ್ದು ಇಂತಹದೇ ದುಃಸ್ಥಿತಿ. ಕಾಮಾವೇಶದಲ್ಲಿ ಆತ ತನ್ನ ನೂರಾರು ಪತಿವ್ರತಾ-ಪತ್ನಿಯರನ್ನು ಮರೆತ! ಲಂಕಾಧೀಶನಾಗಿ ತನಗಿದ್ದ ಸ್ಥಾನ-ಮಾನ-ಮರ್ಯಾದೆ-ಜವಾಬ್ದಾರಿಗಳನ್ನೂ ಮರೆತ! ‘ತನ್ನ ನಡೆನುಡಿಗಳನ್ನು ಲೋಕಗಳು ಗಮನಿಸುತ್ತಿವೆ, ಎಚ್ಚರವಾಗಿರಬೇಕು’ ಎನ್ನುವ ಸಾಮಾನ್ಯ ಶಿಷ್ಟಾಚಾರವನ್ನೂ ಮರೆತ! “ಥೂ! ಛೀ! ತೊಲಗು! ಒಲ್ಲೆ?” ಎಂದು ಸಾಧ್ವೀ ಸೀತೆಯು ತಿರಸ್ಕರಿಸಿ ಛೀಮಾರಿಹಾಕಿದರೂ, ನಾಚಿಕೆಯಿಲ್ಲದೆ ಆಕೆಯಲ್ಲಿ ಕಾಮಭಿಕ್ಷೆಯನ್ನು ಯಾಚಿಸುವಷ್ಟು ದೈನ್ಯಕ್ಕೆ ಜಾರಿಬಿಟ್ಟ! ‘ಕಾಮಾತುರಾಣಾಂ ನ ಲಜ್ಜಾ’ ಎನ್ನುವುದನ್ನು ಸಾಬೀತುಪಡಿಸಿದ! ‘ತಾನು ಮಾಡುತ್ತಿರುವುದು ತಪ್ಪು’ ಎಂದು ಗೊತ್ತಾದರೂ, ಕಾಮದರ್ಪಗಳ ಬಿರುಗಾಳಿಗೆ ಸಿಕ್ಕ ತನ್ನ ಮನೋಬುದ್ಧಿಗಳೆಂಬ ನಾವೆಯನ್ನು ನಿಯಂತ್ರಿಸಲಾಗದೇ ಸೋತ! ಪರಾಕ್ರಮಿಗಳಾದ ಪುತ್ರರನ್ನೂ ಸೋದರರನ್ನೂ ಬಲಿಗೊಟ್ಟ. ನಿಷ್ಠಾವಂತರಾದ ಅಮಾತ್ಯರನ್ನೂ ಸೈನಿಕರನ್ನೂ ಅಮಾಯಕರನ್ನೂ ಪ್ರಜೆಗಳನ್ನೂ ಕಳೆದುಕೊಂಡ! ಕೊನೆಗೆ ತನ್ನ ಪ್ರಾಣವನ್ನೂ ಸತ್ಕೀರ್ತಿಯನ್ನೂ ಕಳೆದುಕೊಂಡು ಇತಿಹಾಸದಲ್ಲಿ ಶಾಶ್ವತ ಖಲನಾಯಕನೆನಿಸಿಬಿಟ್ಟ! ಅನಿಯಂತ್ರಿತ ಭಾವನೆಗಳ ಬಿರುಗಾಳಿಗೆ ಸಿಲುಕಿ ಧರ್ಮಕರ್ಮಗಳನ್ನು ಮರೆತು ದಾರಿ ತಪ್ಪಿದ ದುರ್ಯೋಧನ, ಕರ್ಣ, ಬಾಣ, ಶೂರ್ಪಣಖಾ, ಕೈಕೇಯಿಯರ ಪೌರಾಣಿಕ ಉದಾಹರಣೆಗಳನ್ನೂ, ಜೈಚಾಂದ್, ಔರಂಗಜೇಬ್ ಮುಂತಾದ ಶಠರ ಐತಿಹಾಸಿಕ ಉದಾಹರಣೆಗಳನ್ನೂ ಕಾಣಬಹುದಾಗಿದೆ. ಇವೆಲ್ಲ ದೊಡ್ದ ’ದುರಂತ’ಗಳ ಉದಾಹರಣೆಗಳಾದರೆ, ನಾವು, ಅದೇ ಶ್ರಮರಹಿತ ನಡವಳಿಕೆಯ ಬಿರುಗಾಳಿಗೆ ಸಿಲುಕಿ, ನಮ್ಮ ನಮ್ಮ ಜೀವನದ ಮಟ್ಟದಲ್ಲಿ ಹೊಯ್ದಾಡುತ್ತ ಮಗುಚಿಬೀಳುತ್ತೇವೆ!
ತಸ್ಮಾದ್ಯಸ್ಯ ಮಹಾಬಾಹೋ ನಿಗೃಹೀತಾನಿ ಸರ್ವಶಃ I
ಇಂದ್ರಿಯಾಣೀಂದ್ರಿಯಾರ್ಥೇಭ್ಯಃ ತಸ್ಯ ಪ್ರಜ್ಞಾ ಪ್ರತಿಷ್ಠಿತಾ II
ಹಾಗಾಗಿ ಯಾವನು ಇಂದ್ರಿಯಾರ್ಥಗಳಿಂದ (ವಿಷಯ ವಸ್ತುಗಳಿಂದ) ಇಂದ್ರಿಯಗಳನ್ನು ನಿಗ್ರಹಿಸಿರುತ್ತಾನೋ, ಅವನ ಪ್ರಜ್ಞೆಯು ಮಾತ್ರವೇ ‘ಪ್ರತಿಷ್ಠಿತ’ವಾಗಿರುತ್ತದೆ. ಅರ್ಥಾತ್, ತತ್ವದಲ್ಲಿ ನೆಲೆಗೊಂಡಿರುತ್ತದೆ. ಸ್ಥಿತಪ್ರಜ್ಞತ್ವದಲ್ಲಿ ಮಾತ್ರವೇ ಶಾಂತಿ-ಸ್ಥೈರ್ಯಗಳು ಸಿದ್ಧಿಸುತ್ತವೆಯೇ ಹೊರತು ಅನಿಯಂತ್ರಿತ ಭೋಗಾತುರದಲ್ಲಲ್ಲ ಎನ್ನುವುದು ತಾತ್ಪರ್ಯ.
ಡಾ.ಆರತಿ ವಿ ಬಿ
ಕೃಪೆ : ವಿಜಯವಾಣಿ