ಪ್ರೇಮದ ಅಸಂಖ್ಯ ಅವಸ್ಥಾಂತರಗಳಲ್ಲಿ ಇದು ಮಧುರವೂ ಯಾತನಾಮಯವೂ ಆಗಿದೆ
ನಾಲ್ಕಕ್ಷರದ ಪದ. ಎಡದಿಂದ ಬಲಕ್ಕೆ. ಕ್ಲೂ: ವಿನಾಕಾರಣ ಸಂಶಯಪಟ್ಟ ನಾಟಕಕಾರ ಕಂಡುಕೊಂಡ ದಾರಿ. ಮೇಲಿನಿಂದ ಕೆಳಕ್ಕೆ ಮೂರಕ್ಷರದ ಪದ. ಆ ಮೂರಕ್ಷರದ ಕೊನೆಯ ಅಕ್ಷರ ನಾಲ್ಕಕ್ಷರದ ಪದದ ಮೂರನೆಯ ಅಕ್ಷರ. ಮೇಲಿನಿಂದ ಕೆಳಕ್ಕೆ ಹುಡುಕಬೇಕಾದ ಮೂರಕ್ಷರದ ಪದದ ಕ್ಲೂ: ಪ್ರೇಮದ ಅಸಂಖ್ಯ ಅವಸ್ಥಾಂತರಗಳಲ್ಲಿ ಇದು ಮಧುರವೂ ಯಾತನಾಮಯವೂ ಆಗಿದೆ.
ವ್ಯಾಸರು ಯೋಚಿಸುತ್ತಾ ಹಾಗೇ ಜಗಲಿಯಲ್ಲಿ ಅಡ್ಡಾದರು. ಮಧ್ಯಾಹ್ನ ಎಂದಿಗಿಂತ ನಿಧಾನವಾಗಿ ಸಂಜೆಯತ್ತ ಹೆಜ್ಜೆ ಹಾಕುತ್ತಿತ್ತು. ಬಿಸಿಲಲ್ಲಿ ಓಡಾಡುವುದಕ್ಕಾಗದೇ ಗಾಳಿ ಉಸಿರುಬಿಗಿ ಹಿಡಿದುಕೊಂಡು ಕೂತು ಬಿಟ್ಟಿತ್ತು. ಮನೆ ಮುಂದಿನ ಅಡಕೆ ತೋಟ, ಅದರ ಪಕ್ಕದಲ್ಲಿರುವ ಅಪ್ಪಯ್ಯ ಬಿದ್ದು ಸತ್ತ ಬಾವಿ, ಮಗ ಸಾಯುವ ಹಿಂದಿನ ದಿನದ ತನಕವೂ ಓಡಿಸುತ್ತಿದ್ದ ಸೈಕಲ್ಲು ಎಲ್ಲವೂ ಕಣ್ಣು ಕುಕ್ಕುವ ಬಿಸಿಲಿನಲ್ಲಿ ಹಳದಿ ಹಳದಿಯಾಗಿ ಕಾಣಿಸುತ್ತಿತ್ತು.
ಹಾಳಾಗಿ ಹೋಗಲಿ ಎಂದುಕೊಂಡು ವ್ಯಾಸರು ಪತ್ರಿಕೆಯನ್ನು ಮಡಿಚಿ ಗಾಳಿ ಹಾಕಿಕೊಂಡರು. ಎದೆಯುರಿ ಕಡಿಮೆಯಾಯಿತು ಅನ್ನಿಸಲಿಲ್ಲ. ಮನೆಯ ಹಿಂಬದಿಯಲ್ಲಿ ಹಸಿದ ಹಸು ಅಂಬಾ ಎಂದು ಕೂಗಿಕೊಂಡಿತು. ಮೋಹನ ಬರಲಿಲ್ಲ, ಹಸುವಿಗೆ ಹುಲ್ಲು ಹಾಕಲಿಲ್ಲ. ತಾನಾದರೂ ಹಾಕಬಹುದಿತ್ತು ಅಂದುಕೊಂಡರು. ಎದ್ದು ಹೋಗುವ ಮನಸ್ಸಾಗಲಿಲ್ಲ. ಕಣ್ಮುಚ್ಚಿ ಮಲಗಲು ಯತ್ನಿಸಿದರು. ಮತ್ತೆ ಪದಬಂಧ ಕಾಡಿತು.
ತನಗೂ ಸವಾಲಾಗುವ ಪದಬಂಧ ಇರುವುದಕ್ಕೆ ಸಾಧ್ಯವಾ? ಅಥವಾ ಬುದ್ಧಿಗೆ ಗೆದ್ದಲು ಹಿಡಿದಿದೆಯಾ? ಎಂತೆಂಥಾ ಪದಗಳನ್ನೆಲ್ಲ ಬಿಡಿಸಿಲ್ಲ ತಾನು. ಅವಧಾನಕ್ಕೆ ಕೂತಾಗ ಎಂತೆಂಥಾ ಸಮಸ್ಯೆಗಳನ್ನು ಅದೆಷ್ಟು ಸುಲಭವಾಗಿ ಪರಿಹರಿಸಿಲ್ಲ. ಅಪ್ರಸ್ತುತ ಪ್ರಸಂಗದಲ್ಲಾಗಲೀ, ಅರ್ಥವಿಲ್ಲದ ಕಾವ್ಯದ ಕೊನೆಯ ಸಾಲನ್ನು ಮುಂದಿಟ್ಟುಕೊಂಡು ಅವರು ರಚಿಸಿದ ಷಟ್ಪದಿಯಲ್ಲಿ ಕಾವ್ಯ ಕಟ್ಟುವುದನ್ನಾಗಲೀ ಎಷ್ಟು ಸೊಗಸಾಗಿ ಮಾಡಿಲ್ಲ? ಈಗ ಇದೊಂದು ಸುಡುಗಾಡು ಪದ ಅವಳ ಹಾಗೆ ಕಾಡುತ್ತಿದೆಯಲ್ಲ?
ಇಲ್ಲ, ಅದನ್ನು ಬಿಡಿಸಿಯೇ ತೀರುತ್ತೇನೆ ಎಂದುಕೊಂಡು ವ್ಯಾಸರು ಎದ್ದು ಕೂತರು. ಪ್ರೇಮದ ಅವಸ್ಥಾಂತರಗಳಲ್ಲಿ ಯಾತನೆಯದ್ದು ಯಾವುದು, ಮಧುರವಾದದ್ದು ಯಾವುದು? ಭಗ್ನಪ್ರೇಮವೇ ಯಾತನೆಯದ್ದಾಗಿರಬಹುದೇ? ಅದರಲ್ಲಿ ಮಾಧುರ್ಯ ಎಲ್ಲಿಂದ ಬರಬೇಕು? ಒಡೆದು ಹೋದದ್ದು ಯಾವತ್ತೂ ಮಧುರವಾಗಿರಲಿಕ್ಕೆ ಸಾಧ್ಯವೇ ಇಲ್ಲ. ಅವೆರಡೂ ಭಾವನೆಗಳೂ ಒಂದಾಗಿರುವಂಥ ಸ್ಥಿತಿ ಯಾವುದು ಹಾಗಿದ್ದರೆ?
ಸುಕನ್ಯೆ ಬಿರುಬಿಸಿಲಲ್ಲಿ ಪ್ರತ್ಯಕ್ಷಳಾದಳು. ವ್ಯಾಸರು ಶಾಂಭವಿನದಿಯ ತೀರದಲ್ಲಿ ಕೂತಿದ್ದರು. ಪರಾಶರರಿಗೂ ಮತ್ಯ್ಸಗಂಧಿ ಸಿಕ್ಕಿದ್ದು ಗಂಗಾತೀರದಲ್ಲೇ ತಾನೇ? ಅದು ಗಂಗಾನದಿಯೋ ಸರಯೂ ನದಿಯೋ ಮರೆತುಹೋಯಿತು. ಸುಕನ್ಯಾಳನ್ನು ನೋಡಿದ ದಿನ ತಾನು ಇದನ್ನೆಲ್ಲ ಯೋಚಿಸಿದ್ದೆನಾ? ಅವಳೊಂದು ಹೆಣ್ಣಾಗಿ, ತಾನೊಂದು ಗಂಡಾಗಿ ಅಲ್ಲಿ ಎದುರುಬದುರಾಗಿದ್ದೆವು. ಆ ಭೇಟಿಗೆ ಯಾವ ಕಾವ್ಯದ ಹಂಗೂ ಬೇಕಿರಲಿಲ್ಲ. ವಯಸ್ಸಾಗುತ್ತಾ ಆಗುತ್ತಾ ಎಲ್ಲದಕ್ಕೂ ರೆಫರೆನ್ಸುಗಳನ್ನು ಹುಡುಕುತ್ತಾ ಹೋಗುತ್ತದಲ್ಲ ಮನಸ್ಸು? ಯಾಕೆ ಬೇಕು ಅದೆಲ್ಲ, ಸಮರ್ಥನೆಗೋ, ಆ ಭೇಟಿಗೆ ಮತ್ತಷ್ಟು ಹೊಳಪು ಬರುವುದಕ್ಕೋ, ಚರಿತ್ರೆಯ ಜೊತೆಗೋ ಪುರಾಣದ ಜೊತೆಗೋ ಅದನ್ನು ತಳಕು ಹಾಕಿ ಅಜರಾಮರವಾಗಿಸುವುದಕ್ಕೋ?
ಸುಕನ್ಯೆ ಸುಮ್ಮನೆ ನಕ್ಕಿದ್ದಳು. ಕತೆ ಬರೆಯೋದಕ್ಕೆ ಬಂದು ಕೂತಿದ್ದೀರೋ ಹೇಗೆ ಎಂದು ಸಹಜವಾಗಿ ಕೇಳಿದ್ದಳು. ತಾನು ಕತೆ ಬರೆಯುತ್ತೇನೆ ಅನ್ನುವುದು ಅವಳಿಗೆ ಹೇಗೆ ಗೊತ್ತಾಯಿತೋ? ವ್ಯಾಸರು ಏನೂ ಹೇಳದೇ ಸುಮ್ಮನೆ ಅವಳನ್ನು ದಿಟ್ಟಿಸಿದ್ದರು. ತನ್ನ ಕತೆಯ ಬಗ್ಗೆ ಅವಳು ಮತ್ತಷ್ಟು ಕೇಳಲಿ, ಅವಳು ತನ್ನ ಕತೆಗಳನ್ನು ಓದಿರಲಿ ಎಂದು ಹಾರೈಸಿದ್ದರು.
ಅವಳು ಅದೇನೂ ಹೇಳದೇ ಹೊರಟು ಹೋಗಿದ್ದಳು. ಹಾಗೆ ಹೊರಟು ಹೋದವಳು ತನ್ನ ಮನಸ್ಸಿನಿಂದಾಚೆ ಹೋಗಲೇ ಇಲ್ಲವಲ್ಲ ಎಂದುಕೊಂಡರು ವ್ಯಾಸ. ಸೌಭಾಗ್ಯಳನ್ನು ಮದುವೆಯಾಗಿ ಮೂವತ್ತು ವರ್ಷವಾದ ನಂತರವೂ ಕಾಡುತ್ತಾಳೆ. ಬಿರುಬಿಸಿಲಲ್ಲಿ ನಡೆದು ಬರುತ್ತಾಳೆ. ಹೊಳೆಯ ಬದಿಗೆ ಹೋದರೆ ಪ್ರತ್ಯಕ್ಷವಾಗುತ್ತಾಳೆ. ಕತೆ ಬರೆಯೋದಕ್ಕೆ ಬಂದಿರೋ ಎಂದು ಕೇಳುತ್ತಾಳೆ. ತಾನು ಕೈಲಿರುವ ಪುಸ್ತಕ, ಪೆನ್ನು ಎಸೆದು ವಾಪಸ್ಸು ಬರುತ್ತೇನೆ. ವ್ಯಾಸರೇ, ಕತೆ ಕೊಟ್ಟಿಲ್ಲ ನೀವು. ಎಷ್ಟು ತಡಮಾಡ್ತೀರಪ್ಪ ಎಂದು ಸಂಪಾದಕರು ಫೋನು ಮಾಡುತ್ತಾರೆ. ಯಾಕೆ ತಡಮಾಡಿದೆ ಎಂದು ಹೇಳುವುದಾದರೂ ಹೇಗೆ?
ಸುಕನ್ಯೆ ತನ್ನನ್ನು ಪ್ರೀತಿಸುತ್ತಿದ್ದಾಳೆ ಎಂದು ತಾನು ಭ್ರಮಿಸಿದ್ದಾದರೂ ಹೇಗೆ? ಅದು ಭ್ರಮೆಯೇ. ಅವಳು ಕೇಳಿದ್ದು ಒಂದೇ ಪ್ರಶ್ನೆ. ಅದಕ್ಕೆ ತಾನು ಉತ್ತರವನ್ನೂ ಕೊಟ್ಟಿರಲಿಲ್ಲ. ಹಾಗೆ ನಡೆದುಹೋದವಳು ಶಾನುಭೋಗ ಸದಾಶಿವಯ್ಯನ ಮಗಳು ಎನ್ನುವುದೂ ತನಗೆ ಆಗ ಗೊತ್ತಿರಲಿಲ್ಲ. ಅವಳು ಯಾರೆನ್ನುವುದು ಪತ್ತೆ ಮಾಡುವುದಕ್ಕೆ ತಿಂಗಳು ಹಿಡಿಯಿತು. ಎರಡನೆಯ ಸಾರಿ ಅವಳು ಎದುರಾದದ್ದು ಗುರುವಾಯನಕೆರೆಯ ದಂಡೆಯಲ್ಲಿ. ಬತ್ತಿಹೋದ ಕೆರೆಯಂಗಣದಲ್ಲಿ ಕ್ರಿಕೆಟ್ಟು ಆಡುತ್ತಾ ನಿಂತ ಹುಡುಗರನ್ನು ನೋಡುತ್ತಾ ನಿಂತವಳನ್ನು ವ್ಯಾಸರೇ ಮಾತಾಡಿಸಿದ್ದರು.
ನೀನು ಆಟ ಆಡೋದಿಲ್ವಾ?’
ಅವಳು ಮಾತನಾಡಿರಲಿಲ್ಲ. ಇಳಿದ ಹಗಲಲ್ಲಿ ಕೆರೆಯೊಳಗೆ ಇಳಿದು, ಆಟವಾಡುತ್ತಿದ್ದ ಹುಡುಗರ ನಡುವಿದ್ದ ಒಬ್ಬನನ್ನು ಕೈ ಹಿಡಿದು ಎಳಕೊಂಡು ಹೊರಟೇ ಬಿಟ್ಟಿದ್ದಳು. ಅವಳ ತಮ್ಮನಿರಬೇಕು. ಇನ್ನೂ ಆಡಬೇಕು ಎಂದು ರಚ್ಚೆ ಹಿಡಿದು ಅಳುತ್ತಿದ್ದ. ಅವಳು ದರದರ ಎಳೆದುಕೊಂಡು ಹೊರಟೇ ಬಿಟ್ಟಿದ್ದಳು; ತನ್ನನ್ನೂ.
ಮಾರನೆಯ ಬೆಳಗ್ಗೆ ರಂಜೆ ಹೂವು ಹೆಕ್ಕುತ್ತಿದ್ದಾಗ ಅವಳೇ ಕಣ್ಮುಂದೆ ಬಂದಿದ್ದಳು. ಅವಳನ್ನು ಮತ್ತೆ ಮತ್ತೆ ನೋಡಬೇಕು ಅನ್ನಿಸುತ್ತಿತ್ತು. ಹೊಳೆದಂಡೆಗೆ, ಕೆರೆದಂಡೆಗೆ ನಿತ್ಯವೂ ಓಡಾಡಿದ್ದಾಯಿತು. ಅವಳು ಎಷ್ಟು ತಿಣುಕಾಡಿದರೂ ಹೊರಗೆ ಬರದ ಕತೆಯ ಹಾಗೆ ಅದೆಲ್ಲೋ ಕಣ್ಮರೆಯಾಗಿದ್ದಳು. ಮತ್ತೆ ಅವಳನ್ನು ವ್ಯಾಸರು ನೋಡಿದ್ದು ಶಾನುಭೋಗರ ಜೊತೆ. ಅವರ ಹಳೆಯ ಆಸ್ಟಿನ್ ಆಫ್ ಇಂಗ್ಲೆಂಡ್ ಕಾರಲ್ಲಿ ಕೂತು ಹೋಗುವಾಗ ತನ್ನನ್ನು ನೋಡಿ ಕೈ ಬೀಸಿದ್ದಳು. ಎತ್ತರದಲ್ಲಿರುವ ಹುಡುಗಿಯರು ತಗ್ಗಿನಲ್ಲಿ ನಿಂತ ಹುಡುಗರತ್ತ ಕೈ ಬೀಸುತ್ತಾರೆ.
ಅವಳು ಕೈ, ನೀಳ ಬೆರಳು, ಗಾಳಿಗೆ ಹಾರುತ್ತಿದ್ದ ಕುರುಳು, ಅವಳು ತೊಟ್ಟುಕೊಂಡಿದ್ದ ಪುಗ್ಗೆತೋಳಿನ ಅಂಗಿ, ಅವಳು ಬಿಟ್ಟುಹೋದ ನಗು ಎಲ್ಲವೂ ಸೇರಿಕೊಂಡು ಮತ್ತೊಂದು ವಿಚಿತ್ರ ಜಗತ್ತನ್ನೇ ಕಟ್ಟಿಕೊಟ್ಟ ಸಂಭ್ರಮದಲ್ಲಿ ತಾನು ಮೊದಲ ಕತೆ ಬರೆದಿದ್ದೆ. ಅದಕ್ಕೆ ಬಹುಮಾನ ಬಂದಿತ್ತು. ಅದನ್ನು ಶಾನುಭೋಗರಿಗೆ ತೋರಿಸಲಿಕ್ಕೆಂದು ಅಮ್ಮ ಹೊರಟು ನಿಂತಾಗ ತಾನೂ ಹೋಗಿದ್ದೆ. ಸುಕನ್ಯಾಳೇ ಕಾಫಿ ತಂದುಕೊಟ್ಟಿದ್ದಳು. ಕತೆ ಓದಿ ಹೇಳು ಅಂದಿದ್ದರು ಶಾನುಭೋಗರು. ತೊದಲುತ್ತಲೇ ಓದಿದ್ದೆ. ಹರೆಯದ ಬೆಚ್ಚನೆಯ ವಿವರಗಳು ಬಂದಾಗ ಸುಕನ್ಯಾಳತ್ತ ನೋಡಿದರೆ, ಆಕೆ ಮುಗುಳ್ನಗುತ್ತಿದ್ದಳು. ಹೆಮ್ಮೆಯಿಂದ ಕತೆ ಓದಿ ಮುಗಿಸುವ ಹೊತ್ತಿಗೆ ಶಾನುಭೋಗರು ಗಂಭೀರವಾಗಿದ್ದರು. ನಿನ್ನ ಮಗನಿಗೆ ಭಗತ್ ಸಿಂಗ್, ವಿವೇಕಾನಂದರ ಬಗ್ಗೆ ಬರೆಯೋದಕ್ಕೆ ಹೇಳು. ಈ ಸುಡುಗಾಡು ಕತೆ ಯಾಕೆ ಬರೀತಾನಂತೆ‘ ಎಂದು ಎದ್ದು ಹೋಗಿದ್ದರು. ಅವರು ಹೋದ ನಂತರ ಸುಕನ್ಯಾ, ನಂಗಿಷ್ಟ ಆಯ್ತು’ ಎಂದಿದ್ದಳು.
ಆಮೇಲೆ ತಾನೇ ನಿತ್ಯವೂ ಶಾನುಭೋಗರ ಮನೆಗೆ ಹಾಲು ತೆಗೆದುಕೊಂಡು ಹೋಗುತ್ತಿದ್ದದ್ದು, ಸುಮ್ಮಸುಮ್ಮನೆ ಅವರ ಮನೆಗೆ ಹೋಗುತ್ತಿದ್ದದ್ದು, ಸುಕನ್ಯಾ ಏಕವಚನದಲ್ಲಿ ಮಾತಾಡಿಸಲು ಶುರು ಮಾಡಿದ್ದು, ಅವಳಿಗೆ ಇಷ್ಟ ಎಂದು ಒಂದರ ಮೇಲೊಂದು ಕತೆ ಬರೆಯುತ್ತಾ ಹೋದದ್ದು, ಆ ಕತೆಗಳಲ್ಲಿ ಅವಳೇ ಕಾಣಿಸಿಕೊಳ್ಳುತ್ತಿದ್ದದ್ದು, ಒಂದು ಕತೆಯಲ್ಲಿ ಅವಳನ್ನು ಯಥವತ್ತಾಗಿ ಸೃಷ್ಟಿಸಿ ಅವಳಿಗೇ ಓದಲು ಕೊಟ್ಟದ್ದು. ಸುಕನ್ಯಾ ಅದನ್ನು ಓದಿ ನಕ್ಕಿದ್ದಳು. ಅದು ನಾನು ಪ್ರೀತಿಸೋ ಹುಡುಗಿ ಅಂದಿದ್ದೆ. ಅವಳು ಮತ್ತಷ್ಟು ನಕ್ಕಿದ್ದಳು. ತಾನು ಅವಳ ಕೈ ಹಿಡಿದುಕೊಂಡಿದ್ದೆ. ಅವಳು ಸರಕ್ಕನೆ ಕೈ ಹಿಂದಕ್ಕೆ ಎಳೆದುಕೊಂಡಿದ್ದಳು. ಸಿಟ್ಟಿನಿಂದ ಎದ್ದು ಹೋಗಿದ್ದಳು. ತಾನು ಎದ್ದು ಬರುವಾಗ ಇದ್ದಕ್ಕಿದ್ದಂತೆ ಬಂದು ತಬ್ಬಿಕೊಂಡಿದ್ದಳು. ಭಾನುವಾರ ಮನೆಗೆ ಬಾ, ಯಾರೂ ಇರೋಲ್ಲ ಅಂದಿದ್ದಳು.
ಭಾನುವಾರಕ್ಕೆ ಮೂರು ದಿನ ಉಳಿದಿತ್ತು
ಕ್ಲೂ: ಪ್ರೇಮದ ಅಸಂಖ್ಯ ಅವಸ್ಥಾಂತರಗಳಲ್ಲಿ ಇದು ಮಧುರವೂ ಯಾತನಾಮಯವೂ ಆಗಿದೆ. ವ್ಯಾಸರು ವಿರಹ’ ಎಂದು ಬರೆದು ಖುಷಿಯಲ್ಲಿ ನಕ್ಕರು. ನಗುವುದಕ್ಕೆ ಕಾರಣಗಳಿರಲಿಲ್ಲ ಎನ್ನುವುದು ಅವರಿಗೆ ಆಮೇಲೆ ಹೊಳೆಯಿತು.
ಭಾನುವಾರ ಬಂತು, ಬರಲಿಲ್ಲ. ಶಾನುಭೋಗರ ಮನೆಗೆ ಭಾನುವಾರ ಹೋದವನಿಗೆ ಕಂಡದ್ದು ಮುಚ್ಚಿದ ಬಾಗಿಲು. ಶಾನುಭೋಗರ ಕುಟುಂಬ ಹೈದರಾಬಾದಿಗೆ ಹೋಗಿತ್ತು. ಸುಕನ್ಯಾಳಿಗೆ ಮದುವೆ ಗೊತ್ತಾಗಿತ್ತು. ಹುಡುಗ ಅದ್ಯಾವುದೋ ದೇಶದಲ್ಲಿದ್ದನಂತೆ. ಅಲ್ಲಿಗೆ ಹೋದವರು ಮದುವೆ ಮುಗಿಸಿಕೊಂಡೇ ಮರಳಿದರು. ಹುಡುಗನಿಗೆ ಪುರುಸೊತ್ತಿರಲಿಲ್ಲ.
ತಾನು ಆಮೇಲೆ ಬರೆದ ಕತೆಗಳಲ್ಲಿ ಮದುವೆಯಾಗಿ ದೂರದೇಶಕ್ಕೆ ಹೋಗಿ, ಅಲ್ಲಿ ಏಕಾಂತದಲ್ಲಿ ನರಳುವ, ಹಿಂಸೆ ಕೊಡುವ ನಪುಂಸಕ ಗಂಡನಿಂದ ಪಡಬಾರದ ಪಾಡುಪಡುವ, ಮನೆಯೊಳಗೆ ಕೂತು ಕೂತು ನಗುವುದನ್ನೇ ಮರೆತು ಹುಚ್ಚಿಯಂತಾದ ಹೆಣ್ಮಕ್ಕಳೇ ಕಾಣಿಸಿಕೊಳ್ಳುತ್ತಿದ್ದರಲ್ಲ. ಅದು ತನ್ನ ಆಶೆಯಾಗಿತ್ತಾ, ಅವಳ ಸ್ಥಿತಿಯಾಗಿತ್ತಾ, ತಾನು ಅವಳ ಮೇಲೆ ಸೇಡು ತೀರಿಸಿಕೊಳ್ಳುವುದಕ್ಕೆ ಹಾಗೆ ಬರೆಯುತ್ತಿದ್ದೆನಾ?
ಅಥವಾ ನನ್ನ ಯಾತನೆಯಾಗಿತ್ತಾ ಅದು’ ವ್ಯಾಸರು ಗೊಣಗಿಕೊಂಡು ಅಂಗಳ ನೋಡಿದರು. ಕಂಬಳಿಹುಳವೊಂದು ಬಿಸಿಲಿನಿಂದ ನೆರಳಿನತ್ತ ನಿಧಾನ ತೆವಳಿಕೊಂಡು ಬರುತ್ತಿತ್ತು. ಇನ್ನೇನು ನೆರಳನ್ನು ತಲುಪಿತು ಅನ್ನುವಷ್ಟರಲ್ಲಿ ಕಾಗೆಯೊಂದು ಹಾರಿಬಂದು ಅದನ್ನು ಕೊಕ್ಕಿನಲ್ಲಿ ಕಚ್ಚಿಕೊಂಡು ಹಾರಿಹೋಯಿತು.
*******
ಮಧ್ಯಾಹ್ನಗಳನ್ನು ನಾನು ಪ್ರೀತಿಸುವುದಿಲ್ಲ. ನನಗೆ ಅಪರಾತ್ರಿಗಳೆಂದರೆ ಇಷ್ಟ. ಅಂಥ ಹೊತ್ತಲ್ಲಿ ಅವಳು ಮರಳಿ ಬರುತ್ತಾಳೆ. ಸತ್ತು ಹೋದ ನನ್ನ ಮಗ ಕಾಣಿಸುತ್ತಾನೆ. ಹೇಳದೇ ಕೇಳದೇ ಓಡಿಹೋದ, ಎಲ್ಲೋ ಹುಚ್ಚಿಯಂತೆ ಅಡ್ಡಾಡುತ್ತಿರುವ ನನ್ನ ಹೆಂಡತಿ ಇರುತ್ತಾಳೆ. ಅವರೆಲ್ಲ ಯಾವ ಸ್ಥಿತಿಯಲ್ಲಿದ್ದರೂ ನನಗೆ ಸಹ್ಯವೇ. ನಾನು ಒಂಟಿಯಾಗಿರಲು ಇಷ್ಟಪಡುವುದಿಲ್ಲ…
ಅಷ್ಟು ಬರೆದು ವ್ಯಾಸರು ಮುಂದೇನೂ ತೋಚದೇ ಕೂತಿದ್ದರು. ಕತೆಗಳಲ್ಲಿ ತನ್ನೊಳಗಿನ ಇಷ್ಟಿಷ್ಟನ್ನೇ ಕತ್ತರಿಸಿ ತೆಗೆದು ಹವಿರ್ಭಾಗದಂತೆ ಕಥಾಗ್ನಿಗೆ ಅರ್ಪಿಸುತ್ತಾ ಹೋಗುತಿದ್ದೇನಲ್ಲ ಅನ್ನಿಸಿತು. ಕೊನೆಗೆ ನಾನು ಏನಾಗಿ ಉಳಿಯುತ್ತೇನೆ. ಇಡೀ ಮನೆಯಲ್ಲಿ ತಾನೊಬ್ಬನೇ. ತನ್ನ ಓದುಗರ ಪಾಲಿಗಿದು ನಿಗೂಢ. ಸಂಭ್ರಮ. ಕಾಡಿನ ನಡುವಿನ ಕಟ್ಟೇಕಾಂತದಲ್ಲಿ ಕುಳಿತು ಕತೆಗಳನ್ನು ಸೃಷ್ಟಿಸುವ ಸಂತ ಎಂದು ಮೆಚ್ಚಿಕೊಳ್ಳುತ್ತಾರೆ. ಹಳದಿ ಬಿಸಿಲಲ್ಲಿ ಏನೇನೋ ಕೇಳಿಸುತ್ತದೆ. ಏನೇನೋ ಕಾಣಿಸುತ್ತದೆ, ನಾನೇ ಅಲ್ಲಿ ಇರುವುದಿಲ್ಲ.
ಪುರವಣಿ ಸಂಪಾದಕ ಶಂಕರಯ್ಯ ಬರೆದಿದ್ದ ಪತ್ರವನ್ನು ವ್ಯಾಸರು ಮತ್ತೊಮ್ಮೆ ಓದಿದರು. ವಿಶೇಷಾಂಕ ಸಿದ್ಧವಾಗುತ್ತಿದೆ. ನಿಮ್ಮ ಕತೆಯೊಂದೇ ಬಾಕಿ. ಎರಡು ದಿನಗಳೊಳಗೆ ಕೈ ಸೇರದೇ ಹೋದರೆ ಅನಾನುಕೂಲವಾಗುತ್ತದೆ.
ಅನಾನುಕೂಲವಾಗುತ್ತದೆ’ ವ್ಯಾಸರು ಸುಮ್ಮನೆ ಗೊಣಗಿಕೊಂಡರು. ಬಾವಿಗೆ ಬಿದ್ದು ಸತ್ತ ಅಪ್ಪ, ಅಪಘಾತದಲ್ಲಿ ತೀರಿಕೊಂಡ ಮಗ, ಹುಚ್ಚಿಯಾಗಿ ಅಲೆದಾಡುತ್ತಿರುವ ಹೆಂಡತಿ, ಮೋಸ ಮಾಡಿದವರು, ಆದರ ತೋರಿ ತಿರಸ್ಕಾರ ಮಾಡಿದವರು, ವಿಕ್ಷಿಪ್ತನಂತೆ ಯೋಚಿಸುವ ತಾನು- ಎಲ್ಲರ ಕುರಿತೂ ತಾನು ಬರೆದಿದ್ದಾಗಿದೆ. ಯಾವ ಗುಟ್ಟನ್ನೂ ಮುಚ್ಚಿಟ್ಟೇ ಇಲ್ಲ. ತನ್ನ ಕನಸಿನಲ್ಲಿ ಮೆಚ್ಚುಗೆಯಾದ ಹೆಣ್ಣುಗಳು, ತನ್ನ ವಿಕೃತಿ, ಒಳಗಿನ ಅತಿರೇಖ, ಅಸಹ್ಯ, ಯಾರೂ ಮೆಚ್ಚುವುದಕ್ಕೂ ಸಾಧ್ಯವಿಲ್ಲದ ಅನಿಸಿಕೆಗಳು- ಇವೆಲ್ಲವನ್ನೂ ಕತೆಗಳಲ್ಲಿ ಬೇರೆ ಬೇರೆ ಪಾತ್ರಗಳ ಮೂಲಕ ತಂದಾಗಿದೆ. ತಾನು ಸುಖಿಸದ ಹೆಣ್ಣುಗಳು ಕೂಡ ಪರಮ ಚಂಚಲೆಯರಾಗಿ ಕತೆಗಳಲ್ಲಿ ಮೂಡಿದ್ದಾರೆ. ಅವರ ಮೂಲಕ ಯಾರ್ಯಾರೋ ಯಾರ್ಯಾರನ್ನೋ ಕಂಡುಕೊಂಡು ಮೆಚ್ಚಿಕೊಂಡು ಯಾತನೆ ಅನುಭವಿಸಿ ಪತ್ರಬರೆದು ಸಾಂತ್ವನ ಬೇಡಿದ್ದಾರೆ. ಅವರಿಗೆಲ್ಲ ಎರಡೇ ಸಾಲಿನ ಉತ್ತರ: ನಿರೀಕ್ಷೆ ಇಲ್ಲದೆ ಬದುಕು, ನೆನಪುಗಳಿಲ್ಲದೆ ಸಾಯಿ. ಕ್ರೂರ ಸಾಲುಗಳು. ಏಪ್ರಿಲ್ ತಿಂಗಳ ಹಾಗೆ, ಬೆಂಬಿಡದ ಬಿಸಿಲು, ಬಾರದ ಮಳೆ, ಬೀಸದ ಗಾಳಿ, ತಲೆದೂಗದ ತೆಂಗು, ಸಾಯದ ತಾನು.
ಮತ್ತೆ ಪದಬಂಧ ಕೈಗೆತ್ತಿಕೊಂಡರು. ವಿನಾಕಾರಣ ಸಂಶಯಪಟ್ಟ ನಾಟಕಕಾರ ಕಂಡುಕೊಂಡ ದಾರಿ. ಅರ್ಥವಾಗಲಿಲ್ಲ. ಕಾಳಿದಾಸ ಕಣ್ಮುಂದೆ ಬಂದ. ಅಲ್ಲಿ ಸಂಶಯಪಟ್ಟದ್ದು ದುಶ್ಯಂತ. ಅವನು ಶಕುಂತಲೆಯನ್ನು ನಿರಾಕರಿಸಿದ. ನಾಲ್ಕಕ್ಷರ.. ನಿರಾಕರಣೆ, ಐದಕ್ಷರ, ಪರಿತ್ಯಾಗ, ಮೂರನೆಯ ಅಕ್ಷರ ಹ. ಮೇಲಿನಿಂದ ಕೆಳಕ್ಕೆ ಬಂದ ವಿರಹ ಸರಿಯಾಗಿದ್ದರೆ.
ಅಪ್ಪ ಸತ್ತದ್ದು ತನ್ನ ಮೇಲಿನ ರೇಜಿಗೆಯಿಂದಲೋ ಅಮ್ಮನ ಮೇಲಿನ ಸಿಟ್ಟಿನಿಂದಲೋ. ತನ್ನನ್ನು ಮಗ ಅಂತ ಅವರು ಒಪ್ಪಿಕೊಳ್ಳಲೇ ಇಲ್ಲ. ಮೈಮೇಲೆಲ್ಲ ಬೆಳ್ಳಗೆ ಬೆಳಗ್ಗೆ ಮಚ್ಚೆ. ವಿಕಾರವಾಗಿ ಪ್ರೇತದಂತೆ ಕಾಣುತ್ತಿದ್ದ ಅಪ್ಪನನ್ನು ಅಮ್ಮ ಕೂಡಲು ನಿರಾಕರಿಸಿ ಜಗಳಾಡುತ್ತಿದ್ದದ್ದು ಕಿವಿಗೆ ಅಪ್ಪಳಿಸಿತು. ಅಪ್ಪ ಬಾಗಿಲಿಗೆ ತಲೆ ಚಚ್ಚಿಕೊಂಡು ಗದ್ದಲ ಮಾಡುತ್ತಿದ್ದ. ಸಾಯುತ್ತೇನೆ ಅನ್ನುತ್ತಿದ್ದ. ಅಂಥ ಅಸಹಾಯಕತೆಗೆ ಅಪ್ಪನನ್ನು ಒಡ್ಡಿದ್ದಾದರೂ ಯಾಕೆ. ಅಮ್ಮನ ಕನಸೇನಿತ್ತು? ಅವಳೂ ತನ್ನ ಹಾಗೆ ಯಾರನ್ನೋ ಪ್ರೀತಿಸಿದ್ದಳಾ? ಸುಕನ್ಯಾಳೂ ಹೀಗೇ ಆಡುತ್ತಿರಬಹುದಾ?
ಮಗನೂ ತನ್ನನ್ನು ಒಂದು ದಿನವಾದರೂ ಮಾತಾಡಿಸಲಿಲ್ಲ. ದಿಟ್ಟನಂತೆ ಎದುರು ಬಂದು ನಿಲ್ಲುತ್ತಿದ್ದ. ತನ್ನ ಕತೆಗಳನ್ನೂ ಅವನೂ ಓದಿಲ್ಲ ಅಂದುಕೊಂಡಿದ್ದೆ. ಒಂದು ದಿನ ಅವನ ಪೆಟ್ಟಿಗೆಯಲ್ಲೇ ಅಷ್ಟೂ ಕತೆಗಳೂ ಸಿಕ್ಕವಲ್ಲ. ತನಗಿಷ್ಟವಾದದ್ದಕ್ಕೋ ಆಗದೇ ಇದ್ದದ್ದಕ್ಕೋ ಅಲ್ಲಲ್ಲಿ ಕೆಲವು ಸಾಲುಗಳ ಕೆಳಗೆ ಗೆರೆ ಎಳೆದಿದ್ದ. ಅಲ್ಲಿ ಅವನಿಗೆ ತನ್ನ ವಿಕೃತಿಯೇ ಕಾಣಿಸಿರಬೇಕು. ವಿರಹದ, ಯಾತನೆಯ, ಅಂಗಲಾಚಿದ ಸಾಲುಗಳೇ ಅವನಿಗೆ ಇಷ್ಟವಾಗಿದ್ದವು. ಅವನೂ ಯಾರನ್ನೋ ಪ್ರೀತಿಸುತ್ತಿದ್ದನಾ? ದೊಡ್ಡ ಮನೆ, ಒಳ್ಳೆಯ ಊಟ, ತಂಗಾಳಿ, ಕಣ್ಣಿಗೆ ಹಸಿರು, ದೂರದಲ್ಲಿ ಕಾಣುವ ಬೆಟ್ಟಸಾಲು, ಮಲಗಿದ್ದರೆ ಒಳ್ಳೆಯ ನಿದ್ದೆ, ಓದುವುದಕ್ಕೆ ಎಷ್ಟು ಬೇಕೋ ಅಷ್ಟು ಪುಸ್ತಕ. ಅಷ್ಟಿದ್ದರೂ ಪ್ರೀತಿ ಬೇಕಾಗುತ್ತಾ? ಏನು ಬೇಕಿತ್ತು ಅವನಿಗೆ. ಕುಡಿದು ಲಾರಿಯಡಿಗೆ ಸಿಕ್ಕು ಸತ್ತ ಅನ್ನುವುದು ನಿಜವಾ? ಕುಡಿದಿದ್ದು ಅವನಾ, ಲಾರಿ ಡ್ರೈವರ್ರಾ?
ವಿನಾಕಾರಣ ಸಂಶಯಪಟ್ಟ ನಾಟಕಕಾರ ಕಂಡುಕೊಂಡ ದಾರಿ. ಭಾಸ ನಾಟಕಕಾರನಾ? ಮತ್ಯಾರಿದ್ದಾರೆ. ಷೇಕ್ಸ್ಪಿಯರ್. ದುರಂತ ನಾಟಕಕಾರ. ಅದಕ್ಕೇನನ್ನುತ್ತಾರೆ? ಟ್ರಾಜಿಡೀ, ಶೋಕನಾಟಕ, ದುರಂತನಾಟಕ. ಮೂರನೆಯ ಅಕ್ಷರ ಹ. ವಿನಾಕಾರಣ ಸಂಶಯ.
ಸೌಭಾಗ್ಯಳಿಗೆ ಯಾರ ಹುಚ್ಚು? ತಾನೇನೂ ಅವಳಿಗೆ ಅಡ್ಡಿಯಾಗಿರಲಿಲ್ಲ. ಮಗ ಸತ್ತ ದುಃಖದಿಂದ ಅವಳು ಹೊರಬರಲಿಲ್ಲ ಎಂದುಕೊಳ್ಳಲೇ? ಮಗ ಸತ್ತಿದ್ದು ತನ್ನಿಂದಲೇ ಎಂದವಳು ಭಾವಿಸಿದಂತಿತ್ತಲ್ಲ. ಅಂಥದ್ದೇನು ಮಾಡಿದ್ದೇನೆ. ಯಾಕೆ ನನ್ನ ಕುರಿತು, ನಮ್ಮ ಕುರಿತು ಬರೆಯಬಾರದು? ಬಗೆದು ಅಗೆದು ತೆಗೆಯದ ಹೊರತು ಕತೆ ಹೇಗೆ ಬಂದೀತು. ಹಾಗೆ ಬರೆಯದೇ ಹೋದರೆ ನಾನು ಅನಾಮಿಕ. ಕತೆ ಹುಟ್ಟದ ದಿನ ಬರೀ ಹಳದಿ ಬಿಸಿಲು. ಅದಕ್ಕೊಂದು ಅರ್ಥವಿಲ್ಲ, ಪಾತ್ರವೇ ಇಲ್ಲದಿದ್ದರೆ ಮಾತುಗಳನ್ನು ಯಾರು ಆಡುತ್ತಾರೆ, ಭಾಷೆ ಯಾಕೆ ಬೇಕು? ಕವಿತೆ ಯಾರಿಗೋಸ್ಕರ.
ಹಳದಿ ಬಿಸಿಲು ಮಂದವಾಗುತ್ತಾ ಸಾಗುತ್ತಿತ್ತು. ಗುಪ್ಪೆ ಗುಪ್ಪೆಯಾಗಿ ಕಾಣಿಸುತ್ತಿದ್ದ ಕಾಡು. ರೆಂಜೆ ಹೂವಿನ ಮರದ ಮೇಲ್ಗಡೆ ಬಿಳಿಬಿಳಿಯ ಹಕ್ಕಿಗಳು ಕೂತಿದ್ದವು. ಅವು ಥಟ್ಟನೆ ಹಾರಿಹೋಗುವುದನ್ನು ಕಾಯುತ್ತಾ ವ್ಯಾಸರು ಸುಮ್ಮನೆ ಕೂತರು. ಕತೆ ಕೇಳಿ ಬರೆದ ಶಂಕರಯ್ಯನ ಪತ್ರ ಇನ್ನೊಂದಷ್ಟು ರಹಸ್ಯಗಳನ್ನು ಹೊರಗೆ ಹಾಕು, ನಿನ್ನ ಆತ್ಮವನ್ನೇ ಹವಿಸ್ಸಾಗಿ ಅರ್ಪಿಸು ಎಂದು ಕರೆಯುತ್ತಿತ್ತು.
ಸುಕನ್ಯಾ ಸುಖವಾಗಿಲ್ಲ ಎಂದು ಬರೆಯಬೇಕು ಅನ್ನಿಸಿತು. ಅವಳನ್ನು ತಾನು ಅನುಭವಿಸಿದ್ದನ್ನು ಬರೆಯಬೇಕು. ಅವಳ ಹೆಸರು ಹಾಕಿಯೇ ಬರೆಯಬೇಕು. ಏನಾಗುತ್ತೋ ಆಗಲಿ. ಅವಳು ಓದಿದರೂ ಓದಲಿ. ಓದಬೇಕು. ಅವಳಿಗೆ ಗೊತ್ತಿದ್ದವರಿಗೆ ಎಲ್ಲರಿಗೂ ಗೊತ್ತಾಗಬೇಕು. ಅವಳನ್ನು ವಿಕೃತವಾಗಿ ಸೃಷ್ಟಿಸಬೇಕು ಅಂದುಕೊಂಡರು. ಅದೇ ನಿರ್ಧಾರದಲ್ಲಿ ಎದ್ದು ಬರೆಯುವ ಕೋಣೆಗೆ ಬಂದರು. ಮರೆತು ಎತ್ತಿಕೊಂಡು ಬಂದ ಪದಬಂಧದ ಪೇಪರನ್ನು ಸಿಟ್ಟಿನಿಂದ ಎಸೆದು ಒಳಗೆ ಹೋಗಿ ಬಾಗಿಲು ಹಾಕಿಕೊಂಡರು. ಸುಕನ್ಯೆ ಅರಳತೊಡಗಿದಳು, ಮರಳತೊಡಗಿದಳು.
*******
ಹಿಂದಿನ ದಿನ ಕೈ ಕೊಟ್ಟಿದ್ದಕ್ಕೆ ವ್ಯಾಸರು ಬೈಯುತ್ತಾರೆ ಅಂತ ಹೆದರುತ್ತಲೇ ಬಂದ ಮೋಹನ ವ್ಯಾಸರ ಬರೆಯುವ ಕೋಣೆಯ ಬಾಗಿಲು ಹಾಕಿದ್ದನ್ನು ನೋಡಿದ. ಒಳಗೆ ಕೂತು ಬರೆಯುತ್ತಿರಬೇಕು ಅಂತ ಹೊರಗೇ ನಿಂತು ಕಾದ. ಕಾದು ಕಾದು ಬೇಸರಾಗಿ ಅಲ್ಲೇ ಬಿದ್ದಿದ್ದ ಪೇಪರ್ ಕೈಗೆತ್ತಿಕೊಂಡ. ವ್ಯಾಸರು ತುಂಬಿದ ಪದಬಂಧವನ್ನು ನೋಡುತ್ತಾ ಬಂದ. ಕಷ್ಟದ ಪದಗಳನ್ನೆಲ್ಲ ಎಷ್ಟು ಸಲೀಸಾಗಿ ತುಂಬಿದ್ದಾರೆ ಎಂದು ಬೆರಗಾದ. ಒಂದು ಪದವನ್ನು ಮಾತ್ರ ಯಾಕೆ ತುಂಬದೇ ಬಿಟ್ಟಿದ್ದಾರೆ ಎಂದು ಯೋಚಿಸಿದ. ವಿನಾಕಾರಣ ಸಂಶಯಪಟ್ಟ ನಾಟಕಕಾರ ಕಂಡುಕೊಂಡ ದಾರಿ.
ಅರೆಕ್ಷಣ ಯೋಚಿಸಿ�� ಮೋಹನ ಸಂಶಯದ ನಾಟಕಕಾರ ಸಂಸರಲ್ಲವೇ’ ಎಂದುಕೊಂಡ. ಮೇಲಿಂದ ಕೆಳಕ್ಕೆ ವಿರಹ. ಮೂರನೆಯ ಅಕ್ಷರ ಹ’.
ಆತ್ಮಹತ್ಯೆ’ ಎಂದು ಬರೆದು ಅದನ್ನು ವ್ಯಾಸರು ಮರೆತು ಬಿಟ್ಟಿರಬಹುದಾ, ಅರ್ಥವಾಗದೇ ಬಿಟ್ಟಿರಬಹುದಾ ಎಂದು ಯೋಚಿಸುತ್ತಾ ಅವರು ಬಾಗಿಲು ತೆಗೆಯುವುದನ್ನೇ ಕಾಯುತ್ತಾ ಕೂತ.