ಪ್ರೀತಿಯ ಕಂಪನದಲ್ಲಿ
— ಹೊಸ್ಮನೆ ಮುತ್ತು
ಅವರು ವಾಸವಿದ್ದದ್ದು ‘ಪಾಶ್’ ಲೊಕಾಲಿಟಿಯಲ್ಲಿರುವ ಬಹುಮಹಡಿ ಕಟ್ಟಡದಲ್ಲಿ. ದೊಡ್ಡ ಹುದ್ದೆ ನಿರ್ವಹಿಸಿದ ಅನುಭವ ಅವರ ಬೆನ್ನಿಗಿತ್ತು. ಮಕ್ಕಳು, ಮೊಮ್ಮಕ್ಕಳ ತುಂಬು ಕುಟುಂಬದೊಂದಿಗೆ ನಿವೃತ್ತಿಯ ಜೀವನ. ಈಗ ಅಜಮಾಸು ಎಪ್ಪತ್ತರ ಗಡಿ ಮೀರಿದ ವಯಸ್ಸು ಅವರದ್ದು. ಇಂತಿಪ್ಪ ಅವರಿಗೆ ಮನೆಯಲ್ಲಿ ಕೈಗೊಬ್ಬ, ಕಾಲಿಗೊಬ್ಬ ಸೇವಕರಿದ್ದರೂ ತಮಗೆ ಬೇಕಾದ ಸಣ್ಣಪುಟ್ಟ ಸಾಮಾನುಗಳನ್ನು ತಾವೇ ಆಯ್ದು ತಂದುಕೊಳ್ಳುವ ರೂಢಿ.
ಶ್ರೀಮಂತ ಬಡಾವಣೆಯಲ್ಲಿನ ಮನೆ ಎಂದಾಗ ಕೈಹಾಸಿನಲ್ಲೇ ದಕ್ಕುವಂತಿರುವ ಹವಾನಿಯಂತ್ರಿತ ವೈಭವೋಪೇತ ಮಾಲುಗಳಿಗೆ, ಷೋಕಿ ಅಂಗಡಿಗಳಿಗೇನೂ ಅಲ್ಲಿ ಬರವಿಲ್ಲ. ಹಾಗಂತ ತಮ್ಮ ಸಣ್ಣಪುಟ್ಟ ಅವಶ್ಯಕತೆಗಳಿಗೆ ಅವರು ಆಶ್ರಯಿಸುವುದು ಮನೆ ಪಕ್ಕದ ಈ ವೈಭವೋಪೇತ ಮಾಲು, ಅಂಗಡಿಗಳನ್ನು ಅಂತ ಅಂದುಕೊಂಡರೆ ನಮ್ಮ ಲೆಕ್ಕಾಚಾರ ತಪ್ಪಿದಂತೆಯೇ ಸರಿ. ಬದಲಿಗೆ ಮನೆಯಿಂದ ಕೊಂಚ ದೂರವೇ ಇರುವ ಮೂರನೇ ಅಡ್ಡ ರಸ್ತೆಯ ತಿರುವಿನ ಶೆಟ್ಟರ ಪುಟ್ಟ ಅಂಗಡಿ. ಅದು ಅವರ ಫೆವರಿಟ್ ಸ್ಪಾಟು!
ಆಗೊಮ್ಮೆ ಎದುರಾದ ಅವರಿಗೆ ಮನೆಯ ಹತ್ತಿರದ ಮಾಲುಗಳಲ್ಲಿ ಲಭ್ಯವಿರುವ ವಸ್ತುಗಳಿಗೆ ಹೀಗೆ ದೂರದ ಅಂಗಡಿಗೆ ಹೋಗಿ ಬರುವ ತಾಪತ್ರಯ ಬೇಕಾ ಎಂಬ ಪ್ರಶ್ನೆ. ಮಂದಸ್ಮಿತ ನೋಟದಿಂದ ಒಮ್ಮೆ ದಿಟ್ಟಿಸಿದ ಅವರ ಉತ್ತರ ಹೀಗಿತ್ತು: ‘ತಳ್ಳುವ ಗಾಡಿ, ಆಯ್ಕೆಯ ಸ್ವಾತಂತ್ರ್ಯ, ಠಾಕುಠೀಕಿನ ಸಿಬ್ಬಂದಿ, ಚೆಂದದ ಪ್ಯಾಕು, ಬಿಲ್ಲಿನ ಷಾಕು ಎಲ್ಲ ಸರಿ ಮಾರಾಯ. ಆದರೆ ನನ್ನೊಡನೆ ಪಟ್ಟಾಂಗ ಹೊಡೆಯುವ, ನನ್ನಂಥ ವೃದ್ಧರ ಮಾತಿಗೆ ಕಿವಿಯಾಗುವ, ಉತ್ತರಿಸುವ ವ್ಯವಧಾನ ಅಲ್ಲೆಲ್ಲ ಸಿಗುತ್ತಯ್ಯ?’ ಎಂಬುದು. ಆ ಧ್ವನಿಯಲ್ಲಿದ್ದ ತಳಮಳ ಗಮನಿಸಿದಾಗ ಅವರ ಅಂತರಾಳದಲ್ಲಿ ಕೊನೆಯಿಲ್ಲದ ಯುದ್ಧವೇ ನಡೆಯುತ್ತಿರುವುದು ಗೋಚರಿಸಿತು.
ಅವರಿಗೆ ಬೇಕಾದದ್ದು ಇಷ್ಟೆ; ಮಾತು. ತನ್ನ ಖುಷಿ, ನಿರಾಶೆ, ಹತಾಶೆಗಳನ್ನು ಡಿಪಾಸಿಟ್ ಮಾಡಬಲ್ಲಂಥ ಆತ್ಮೀಯ ತಾಣ! ಸಮುದ್ರದ ನೆಂಟಸ್ತಿಕೆಯೇ ಇದೆ ಹೌದು! ಆದರೆ ಅವರೆಲ್ಲ ವೇಗೋಪಾಸಕರು! ಬದುಕಿನ ಜೀಕಿನಲ್ಲಿ ಕಳೆದುಹೋಗಿದ್ದಾರೆ. ದೈನಂದಿನ ಚೌಕಟ್ಟಿನ ಚಡಪಡಿಕೆಯಲ್ಲಿರುವ ಆ ಜೀವಿಗಳೆದುರು ಇವರ ಅವ್ಯಕ್ತ ಸಂವೇದನೆ ಹಾಗೂ ಸುಖದ ಭಾವಗಳು ಅನಾವರಣಗೊಳ್ಳುವುದಾದರೂ ಹೇಗೆ?
ಆ ವಯಸ್ಸೆ ಹಾಗೆ. ಪ್ರೀತಿಯ ಕಂಪನಕ್ಕಾಗಿ, ವಾತ್ಸಲ್ಯದ ಮಾತಿಗಾಗಿ, ಕರುಣೆಯ ನೋಟಕ್ಕಾಗಿ ಹಾತೊರೆಯುವಂಥದ್ದು. ಮಾನವೀಯ ಸಂಬಂಧಗಳಿಗೆ ಅಗತ್ಯವಾಗಿರುವ ಆದ್ರ್ರತೆ, ಸ್ನಿಗ್ಧತೆ, ಸಹಸ್ಪಂದನ ಸಾಮರಸ್ಯದಂಥ ಕೋಮಲ ಭಾವನೆಗಳ ನಿರೀಕ್ಷೆ. ನಮ್ಮ ಮಿತಿಯಲ್ಲಿನ ಭರವಸೆ, ಉತ್ಸಾಹ ತುಂಬುವ ನಗು ಹಾಗೂ ಅಕ್ಕರೆಯ ಮಾತುಗಳು ಅವರಿಗೆ ನಿಜಕ್ಕೂ ಹಿತ ನೀಡುತ್ತವೆ. ಅವರು ಅಪೇಕ್ಷಿಸುವುದು ಬದುಕು ದೂಡುವ ಸಹಕಾರವನ್ನಲ್ಲ. ಬದಲಿಗೆ, ಬದುಕಿನ ಸಾರ್ಥಕ್ಯವನ್ನು ಸ್ಥಾಪಿಸಿಕೊಳ್ಳುವ ಮಾನಸಿಕ ಸಾಂಗತ್ಯವನ್ನಷ್ಟೆ. ಒಂದು ಮಂದಹಾಸ, ಪುಟ್ಟ ಸಂಭ್ರಮ, ಸ್ಪಂದನೆ ಇಷ್ಟು ನಮ್ಮ ಕಡೆಯಿಂದಾದರೆ ನಾವು ಕಳೆದುಕೊಳ್ಳುವುದೇನಿದೆ? ಜೀವನದ ಅರ್ಥಗಳು ಹೊಳೆಯುವುದೂ ಪ್ರೀತಿಯಲ್ಲಿ; ಮಾನವ ಪ್ರೇಮದಲ್ಲಿ ಅಲ್ಲವೇ?
3 Comments
ಹೊಸ ಪೀಳಿಗೆ ಮನಸ್ಥಿತಿ ಹೇಗೆಂದರೆ ಎಲ್ಲ ಕೆಲಸವೂ ವೇಗದಲ್ಲಾಗಬೇಕು ……ತಿನ್ನೋಕ್ಕೆ ಸಮಯವಿಲ್ಲ ಆದುದರಿಂದ ಅವರಿಗೆ ಬೇಕು “ಫಾಸ್ಟ್ ಫುಡ್”…..ಮನೆಯಲ್ಲಿ ತುಪ್ಪ ಸಕ್ಕರೆ ಅಥವಾ ತುಪ್ಪ ಚಟ್ನಿ ಪುಡಿ ಹಚ್ಚಿ ಸುರಳಿ ಸುತ್ತಿದ ಚಪಾತಿಯೂ ಫಾಸ್ಟ್ ಫುಡ್ ಆಗಬಹುದು ಎಂಬ ಕಲ್ಪನೆ ಅವರಿಗಿಲ್ಲ ….
ಹಾಗೆಯೆ ದೊಡ್ಡ ಮಾಲ್ ಗಳು…ಕನ್ನಡದ “ಭಾರತ್ ಸ್ಟೋರ್ಸ್” ಎಂಬ ಚಲನಚಿತ್ರದಲ್ಲಿ ಇದನ್ನು ಮನಸ್ಸಿಗೆ ತಟ್ಟುವಂತೆ ತೋರಿಸಿದ್ದಾರೆ
ರಸ್ತೆಯ ಕೊನೆಯ ಅಂಗಡಿಯ ಉಪಚಾರ, ಅಲ್ಲಿಗೆ ಬರುವ ಜನರೊಂದಿಗೆ ಮಾತನಾಡುವ ಖುಷಿ ….ಮಾಲ್ ಕೊಡುವದಿಲ್ಲ.
ಮನನಾರ್ಹ ಲೇಖನ, ಧನ್ಯವಾದಗಳು
ಅವರಿಗೆ ತಮ್ಮ ಬಾಳ ಸಂಜೆಯಲಿ ಒಂದಿಸ್ಟು ಕುಶಲೋಪರಿಯ ಮಾತು ಸಾಕು, ಅವರಲ್ಲಿ ಸಾರ್ಥಕ್ಯದ ಭಾವವನ್ನು ಕಾಣಬಹುದು. ಹಿರಿಯರ ಮನದಲ್ಲಿನ ತಳಮಳವನ್ನು ಸೊಗಸಾಗಿ ಹೇಳಿದ್ದೀರಿ ಹೊಸ್ಮನೆ ಮುತ್ತು ಅವರೆ 🙂