‘ಪರಿಸ್ಥಿತಿ ಅರಿವಾದರೆ ಒತ್ತಡ ಕಾಡುವುದಿಲ್ಲ’
ಸಂದರ್ಭದ ಅರ್ಥೈಸುವಿಕೆ ಮತ್ತು ಸಾವಧಾನ ಸ್ಥಿತಿಯಲ್ಲಿ ಪರಿಸ್ಥಿತಿಯನ್ನು ಗ್ರಹಿಸಲು ಸಾಧ್ಯವಾದರೆ ಒತ್ತಡದ ಪ್ರಮಾಣ ಕಡಿಮೆಯಾಗುತ್ತದೆ. ಕೆಲವೊಮ್ಮೆ ಸಂದರ್ಭಗಳು ಎಲ್ಲವನ್ನೂ ಮೀರಿರುತ್ತವೆ. ನಮ್ಮ ಕೈ ಮೀರಿದ ಪರಿಸ್ಥಿತಿಯಿದ್ದರೆ ಏನೂ ಮಾಡಲು ಸಾಧ್ಯವಿಲ್ಲ ಎಂಬ ವಾಸ್ತವದ ಅರಿವೂ ಇರಬೇಕು ಎಂದು ಒತ್ತಡ ನಿವಾರಣೆಯ ಕುರಿತು ಹೇಳುತ್ತಾರೆ ನಿರ್ದೇಶಕಿ ಸುಮನಾ ಕಿತ್ತೂರು.
ಲಸ ಆಗುತ್ತದೆ ಅಥವಾ ಆಗುವುದಿಲ್ಲ ಎಂಬ ಮನವರಿಕೆಯ ಜೊತೆಗೆ ಸಂದರ್ಭದ ಅರ್ಥೈಸುವಿಕೆ ಮತ್ತು ಸಾವಧಾನ ಸ್ಥಿತಿಯಲ್ಲಿ ಪರಿಸ್ಥಿತಿಯನ್ನು ಗ್ರಹಿಸಲು ಸಾಧ್ಯವಾದರೆ ಒತ್ತಡದಿಂದ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗುತ್ತದೆ.
ಸಿನಿಮಾಕ್ಷೇತ್ರದ ಇನ್ನೊಂದು ಮುಖವೇ ಒತ್ತಡ. ಹೀಗಾಗಿ ಹಲವು ಬಾರಿ ನಾನು ಒತ್ತಡಕ್ಕೆ ಒಳಗಾಗಿದ್ದೇನೆ. ಒಬ್ಬ ನಿರ್ದೇಶಕ ನೂರಾರು ಜನರನ್ನು ನಿಭಾಯಿಸಬೇಕು. ಒಬ್ಬೊಬ್ಬರ ಮಾನಸಿಕ ಸ್ಥಿತಿ ಒಂದೊಂದು ತರಹ. ನಾವು ಹೇಳುವುದು ಕೆಲವರಿಗೆ ಥಟ್ಟನೆ ಅರ್ಥವಾದರೆ, ಮತ್ತೆ ಕೆಲವರಿಗೆ ಅರ್ಥವೇ ಆಗುವುದಿಲ್ಲ. ಕೆಲವರಿಗೆ ಸಂಕ್ಷಿಪ್ತವಾಗಿ ಹೇಳಿದರೂ ಸಾಕು. ಮತ್ತೆ ಕೆಲವರಿಗೆ ವಿಷಯದ ಸಂಪೂರ್ಣ ವಿವರವನ್ನು ಒಪ್ಪಿಸಬೇಕು. ವಿವಿಧ ರೀತಿಯ ಆಲೋಚನೆಗಳುಳ್ಳ ಮನಸ್ಸುಗಳು ಕೆಲಸ ಮಾಡುತ್ತಿರುವಾಗ ಒಂದು ವಿಭಾಗದ ಜನಕ್ಕೆ ಅರ್ಥವಾಗಿ ಇನ್ನೊಂದು ವಿಭಾಗಕ್ಕೆ ಅರ್ಥವಾಗದೇ ಇದ್ದರೆ ಕೆಲಸ ಕೈಕೊಡುತ್ತದೆ. ಈ ಸಮಯದಲ್ಲಿ ಸಂವಹನ ಬಹಳ ಮುಖ್ಯವಾಗುತ್ತದೆ.
ನಾನು ಕೃಷಿ ಕುಟುಂಬದಿಂದ ಬಂದವಳು. ವ್ಯವಸಾಯದ ಕುಟುಂಬಗಳಲ್ಲಿ ಕೆಲಸ, ಅಚ್ಚುಕಟ್ಟುತನ, ಸಂವಹನ ಬಹಳ ಮುಖ್ಯ. ಆ ವಾತಾವರಣದಲ್ಲಿ ಬೆಳೆದ ಕಾರಣಕ್ಕೆ ಜನರ ಮನಸ್ಸನ್ನು ಗ್ರಹಿಸುವುದನ್ನು ಕಂಡುಕೊಂಡಿದ್ದೇನೆ. ವ್ಯಕ್ತಿಯನ್ನು ಎರಡನೇ ಬಾರಿ ಭೇಟಿಯಾದಾಗ ಅವರು ಹೇಗೆ ಎಂಬುದು ತಿಳಿಯುತ್ತದೆ. ಯಾರ ಜೊತೆಗೆ ಹೇಗೆ ಸಂವಹನ ನಡೆಸಬೇಕು ಎಂದು ಅರಿತು, ಅದರಂತೆ ಕೆಲಸ ಮಾಡುತ್ತೇನೆ. ಹೀಗೆಲ್ಲ ಅರ್ಥೈಸಿಕೊಂಡ ನಂತರವೂ ಕೆಲವೊಮ್ಮೆ ನಮ್ಮ ಆಲೋಚನೆ ಕೈಕೊಡುವುದು ಇದೆ. ಎಷ್ಟೋ ಸಮಯದಲ್ಲಿ ನಮ್ಮ ಕೈಮೀರಿ ಒತ್ತಡ ಉಂಟಾಗುತ್ತದೆ. ಇನ್ನೇನೂ ಮಾಡಲು ಸಾಧ್ಯವಿಲ್ಲ ಎಂದಾದಾಗ ಸುಮ್ಮನೆ ಇದ್ದುಬಿಡುವುದು ಒಳ್ಳೆಯದು ಎಂಬುದನ್ನು ಕಂಡುಕೊಂಡಿದ್ದೇನೆ. ಪರಿಸ್ಥಿತಿಯನ್ನು ಪ್ರಬುದ್ಧತೆಯಿಂದ ನಿಭಾಯಿಸುವ ಜಾಣ್ಮೆ ಅರಿತುಕೊಂಡರೆ ಸಮಸ್ಯೆ ತಲೆನೋವಾಗುವುದಿಲ್ಲ.
ಚಿತ್ರೀಕರಣದ ಸಮಯದಲ್ಲಿ ನಾನು ಹೆಚ್ಚು ರೇಗುವುದು ಕಲಾ ವಿಭಾಗದವರ ಜೊತೆಯಲ್ಲಿ. ಆ ವಿಭಾಗದ ಮುಖ್ಯಸ್ಥರು ಚಿತ್ರೀಕರಣಕ್ಕೆ ಅಗತ್ಯವಾದ ವಸ್ತುಗಳನ್ನು ತರುವಂತೆ ಸಿಬ್ಬಂದಿಗೆ ಹೇಳಿದ್ದರೂ ಅವರು ಅದನ್ನು ತರುವುದನ್ನು ಮರೆತಿರುತ್ತಾರೆ. ಆ ವಸ್ತು ದೃಶ್ಯಕ್ಕೆ ಅಗತ್ಯವಾದ ಕಾರಣಕ್ಕೆ ಚಿತ್ರೀಕರಣವನ್ನೇ ನಿಲ್ಲಿಸುವ ಪ್ರಮೇಯವೂ ಬರುತ್ತದೆ. ನಿರ್ಮಾಪಕರ ಹಣ, ಕಲಾವಿದರ ಕಾಲ್‌ಶೀಟ್… ಒಟ್ಟಿನಲ್ಲಿ ಆ ದಿನದ ಶ್ರಮವೇ ವ್ಯರ್ಥವಾಗುತ್ತದೆ. ಬೆಂಕಿಪಟ್ಟಣ, ಮಲ್ಲಿಗೆ ಹೂವು, ಮೊರ – ಹೀಗೆ ಚಿಕ್ಕ ವಸ್ತುಗಳ ಕಾರಣಕ್ಕೆ ಚಿತ್ರೀಕರಣ ನಿಲ್ಲಿಸಿದ್ದು ಇದೆ. ಆ ವಸ್ತುಗಳು ಬರುವವರೆಗೆ ಕಾಯಬೇಕು, ಇಲ್ಲವಾದರೆ ಶೂಟಿಂಗ್ ನಿಲ್ಲಿಸಬೇಕು – ಇವೆರಡೇ ಆಯ್ಕೆ ಇರುತ್ತದೆ. ಆ ಸಮಯದಲ್ಲಿ ನಾವೆಷ್ಟೇ ಕೂಗಾಡಿ, ಮೇಲಿನಿಂದ ಹಾರಿದರೂ ತಕ್ಷಣಕ್ಕೆ ಪರಿಹಾರ ಸಿಗುವುದಿಲ್ಲ. ವೃತ್ತಿಯ ಪ್ರಾರಂಭದ ಹಂತದಲ್ಲಿ ಇದರಿಂದ ಹೇಗೆ ಪರಿಹಾರ ಕಂಡುಕೊಳ್ಳುವುದು ಎನಿಸುತ್ತಿತ್ತು. ಆದರೆ ಏನು ಮಾಡಲಾಗದ ಸ್ಥಿತಿಯಲ್ಲಿ ನಿಮ್ಮನ್ನು ನೀವು ಸಂಭಾಳಿಸುವುದನ್ನು ಕಲಿತಿರಬೇಕು. ಪರಿಸ್ಥಿತಿಯನ್ನು ಅರ್ಥೈಸಿಕೊಳ್ಳಲು ಪ್ರಾರಂಭ ಮಾಡಿದರೆ ಒತ್ತಡದಿಂದ ವಿರಾಮ ಸಿಗುತ್ತದೆ ಎಂಬುದನ್ನು ನಾನು ಈಗ ಅರಿತಿದ್ದೇನೆ. ಒತ್ತಡ ಎಂದುಕೊಂಡರೆ ಅದು ಒತ್ತಡದಂತೆಯೇ ಮುಂದುವರೆಯುತ್ತಾ ಹೋಗುತ್ತದೆ. ಪರಿಸ್ಥಿತಿಯನ್ನು ಇದ್ದ ಹಾಗೇ ಒಪ್ಪಿಕೊಳ್ಳುವುದರಲ್ಲೇ ಒತ್ತಡದ ನಿರ್ವಹಣೆ ಇದೆ.
ಚಿತ್ರೀಕರಣಕ್ಕೆ ಅಗತ್ಯವಾದ ವಸ್ತುಗಳು ಇಲ್ಲದೇ ಇದ್ದಾಗ ಅದರ ಬದಲು ಬೇರೆ ವಸ್ತುಗಳನ್ನು ಬಳಸುವುದು ಸಾಧ್ಯವೇ ಎಂಬುದನ್ನು ಯೋಚಿಸುತ್ತೇನೆ. ಹೀಗೆ ಇನ್ನೊಂದು ಆಯ್ಕೆ ಇಟ್ಟುಕೊಂಡಾಗಲೂ ಒತ್ತಡದ ಪ್ರಮಾಣ ಕಡಿಮೆಯಾಗುತ್ತದೆ. ಜೀವನದಲ್ಲಿ ಎದುರಾಗುವ ಕೆಲವು ಸನ್ನಿವೇಶಗಳನ್ನು ನಮ್ಮಿಂದ ನಿಭಾಯಿಸಲು ಸಾಧ್ಯವಿಲ್ಲ ಎನ್ನುವ ಮನೋಭಾವವೂ ಒತ್ತಡವನ್ನು ಉಂಟುಮಾಡುತ್ತದೆ. ಓದು, ಸಿನಿಮಾ, ಮೌನ – ಇವು ಒತ್ತಡದಿಂದ ಮುಕ್ತಳಾಗಲು ನಾನು ಕಂಡುಕೊಂಡಿರುವ ದಾರಿಗಳು.
ಒತ್ತಡ ಮನುಷ್ಯನನ್ನು ದಿನೇ ದಿನೇ ಕಬಳಿಸುತ್ತಿದೆ. ಇತ್ತೀಚಿನ ಕಾಲಘಟ್ಟಗಳಲ್ಲಿ ಒತ್ತಡದ ಪ್ರಮಾಣ ಹೆಚ್ಚುತ್ತಿದೆ ಎನಿಸುತ್ತದೆ. ನಮ್ಮ ಅಜ್ಜಿ, ಅಮ್ಮನ ಕಾಲದಲ್ಲಿ ಸಮಸ್ಯೆ ಎದುರಾದಾಗ ಅದಕ್ಕೆ ಕಾರಣ ಯಾರು ಎಂದು ತಿಳಿದುಕೊಳ್ಳುವುದಕ್ಕಿಂತ ಸಮಸ್ಯೆಗೆ ಪರಿಹಾರ ಹುಡುಕಲು ಪ್ರಯತ್ನಿಸುತ್ತಿದ್ದರು. ಆದರೆ ನಮ್ಮಲ್ಲಿ ಒಳಜಂಭಗಳು ಹೆಚ್ಚುತ್ತಿವೆ. ಸಂಬಂಧಗಳ ನಡುವೆ ಗೋಡೆ ಹಾಕಿಕೊಂಡಿದ್ದೇವೆ. ಇದು ಸಂಬಂಧಗಳ ಒಡಕಿನ ಜೊತೆಗೆ ಒತ್ತಡ ಹೆಚ್ಚಲು ಕಾರಣವಾಗುತ್ತಿದೆ.
ಒತ್ತಡ ಎನಿಸಿದಾಕ್ಷಣ ಮೊದಲು ಅದಕ್ಕೆ ಅಗತ್ಯವಾದ ಸ್ಪಂದನವನ್ನು ನೀಡಬೇಕು. ಅಂದರೆ, ಅದನ್ನು ಪರಿಹರಿಸಲು ನಮ್ಮಿಂದ ಶೇ 100ರಷ್ಟು ಪ್ರಯತ್ನ ಪಡಬೇಕು. ಆದರೆ ಕೆಲವೊಮ್ಮೆ ಸಂದರ್ಭಗಳು ಎಲ್ಲವನ್ನೂ ಮೀರಿರುತ್ತವೆ. ನಮ್ಮ ಕೈ ಮೀರಿದ ಪರಿಸ್ಥಿತಿಯಿದ್ದರೆ ಏನೂ ಮಾಡಲು ಸಾಧ್ಯವಿಲ್ಲ ಎಂಬ ವಾಸ್ತವದ ಅರಿವೂ ಇರಬೇಕು. ಒತ್ತಡ ಹೇರಿಕೊಂಡು ಏನೂ ಮಾಡಲು ಸಾಧ್ಯವಿಲ್ಲ. ನನ್ನ ನಿಯಂತ್ರಣಕ್ಕೆ ಮೀರಿರುವ ವಿಷಯವಾದರೆ ಅದರ ಬಗ್ಗೆ ನಾನು ಒತ್ತಡ ಮಾಡಿಕೊಳ್ಳಲು ಹೋಗುವುದಿಲ್ಲ. ಏಕೆಂದರೆ ನಿಯಂತ್ರಣಕ್ಕೆ ಸಿಗದೇ ಇರುವುದರ ಬಗ್ಗೆ ಒತ್ತಡ ಮಾಡಿಕೊಂಡರೂ ಅದು ಪ್ರಯೋಜನಕ್ಕೆ ಬರುವುದಿಲ್ಲ.
Courtesy : Prajavani.net
http://www.prajavani.net/news/article/2018/05/16/573168.html