ನೂಪುರ
ಸಂಗೀತ ಕ್ಷೇತ್ರದಲ್ಲಿ ನಾಲ್ಕು ದಶಕಗಳನ್ನೂ ಮೀರಿ ಸೇವೆ ಸಲ್ಲಿಸಿದ ರೇಶಮ್ ಬಾಯಿ ಅದಕ್ಕಾಗಿ ರಾಷ್ಟ್ರಪತಿ ಪಾರಿತೋಷಕವನ್ನು ಸ್ವೀಕರಿಸಿ ಅದೇ ಹಿಂತಿರುಗಿ ಬಂದಿದ್ದರು. ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಹಿಂತಿರುಗಿದ ಅವರು ಮತ್ತೆ ಏಕಾಕಿಯಾಗಿದ್ದರು. ಗಡಿಬಿಡಿ, ಸಂಭ್ರಮ, ಕರತಾಡನ ತುಂಬಿದ ಸಮಾರಂಭದಲ್ಲಿ ಕಳೆದುಹೋಗಿದ್ದ ಅವರಿಗೆ ಆಗ ಕಾಣದ ದಣಿವು, ಆಯಾಸ ಈಗ ತಲೆದೋರಿತ್ತು. ವೃದ್ಧಾಪ್ಯದೆಡೆಗೆ ವಾಲುತ್ತಿದ್ದ ಅವರ ಶರೀರ ಇದನ್ನೆಲ್ಲ ತಡೆದುಕೊಳ್ಳುವ ಶಕ್ತಿಯನ್ನು ಕಳೆದುಕೊಂಡಿತ್ತು. ಆದರೆ ನಾಲ್ಕು ದಶಕಗಳಲ್ಲಿ ಸಾವಿರಕ್ಕೂ ಮೀರಿದ ಹಾಡುಗಳನ್ನು ಹೇಳಿದ ಅವರ ಧ್ವನಿ ಮಾತ್ರ ತನ್ನ ಇಂಪನ್ನು ಕಳೆದುಕೊಂಡಿರಲಿಲ್ಲ. ಅಂತೆಯೇ ಭಾರತದ ಸರ್ವಶ್ರೇಷ್ಠ ಗಾಯಕಿ ಪ್ರಶಸ್ತಿ ಅವರನ್ನು ಅರಸಿ ಬಂದಿತ್ತು.
ಸಾಯಂಕಾಲ ಮನೆಗೆ ಹಿಂತಿರುಗಿದಾಗ ಅಭಿನಂದನೆಗಳನ್ನು ತಿಳಿಸಿ ಬರೆದ ಸಾವಿರಾರು ಪತ್ರಗಳು ಅವರನ್ನು ಕಾಯುತ್ತಿದ್ದವು. ಅವುಗಳಲ್ಲಿ ಆಕರ್ಷಕ ಕವರನ್ನು ಹೊಂದಿದ ಪತ್ರವೊಂದಿತ್ತು. ಕುತೂಹಲದಿಂದ ಅದನ್ನು ತೆರೆದು ನೊಡಿದ ಅವರಿಗೆ ದೊರಕಿದ್ದು ಒಂದು ನೂಪುರ ಮತ್ತು ಒಂದು ಏಲೆ. ಅದರ ಮೇಲೆ ಕಣ್ಣು ಹಾಯಿಸುತ್ತಲೇ ಅವರ ಮುಖದ ಚಹರೆಯೇ ಬದಲಾಯಿತು. ನಂಬಲೇ ಸಾಧ್ಯವಾಗದಂತಹ ಭಾವನೆಗಳು ಮನವನ್ನಾಕ್ರಮಿಸಿ ದೇಹದೊಂದಿಗೆ ಮನಸ್ಸೂ ದಣಿಯಿತು. ಆಸನಕ್ಕೊರಗಿ ಕಣ್ಣು ಮುಚ್ಚಿದ ಅವರಿಗೆ ನಲವತ್ತು ವರ್ಷಗಳ ಹಿಂದಿನ ಘಟನೆಗಳು ಚಲನಚಿತ್ರದಂತೆ ತೋರಲಾರಂಭಿದವು.
ಅದೊಂದು ಸುಂದರ ಸಂಜೆ. ಬಂಗಾರವರ್ಣದ ಸೂರ್ಯ ಕಿರಣಗಳು ಸರ್ವರಿ ನದಿಯನ್ನು ಚುಂಬಿಸಿ ಅವಳ ಸೌಂದರ್ಯವನ್ನು ವೃದ್ಧಿಸಿದ್ದವು. ಯುವರಾಜ ಜಯಚಂದ ತನ್ನ ಮೆಚ್ಚಿನ ಕುದುರೆ ‘ತೂಫಾನ’ನ್ನು ಏರಿ ಆ ನದಿಯ ಎಡೆಯಿಂದ ತನ್ನ ರಾಜವಾಡೆಯ ಕಡೆಗೆ ಧಾವಿಸುತ್ತಿದ್ದ. ಅವನ ಹಿಂದಿದ್ದ 80 ಮಣದ ಅವನಾಡಿದ ಬೇಟೆ ಮತ್ತು ಅವನ ಮೆಚ್ಚಿನ ಕುದುರೆಗಳು ಅವನ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತಿದ್ದವು. ಅದೇ ಆಗ ನಿಂತಿರುವ ಮಳೆಯಿಂದ ಸರ್ವರಿ ತುಂಬಿ ಹರಿಯುತ್ತಿತ್ತು. ಯುವರಾಜ ಆ ನದಿಯನ್ನು ದಾಟಲು ಸುರಕ್ಷಿತ ತಾಣವನ್ನರಸುತ್ತಿದ್ದ.
ಜಯಚಂದ ಮಾಂಡವಗಡದ ಮಹಾರಾಜ ಹರಿಚಂದರ ಜ್ಯೇಷ್ಠಪುತ್ರ. ಮುಂಬಯಿಯಲ್ಲಿ ಕಾಲೇಜು ಶಿಕ್ಷಣದೊಂದಿಗೆ ರಾಜಕುಮಾರರಿಗೆ ಬೇಕಾದ ಇತರ ವಿದ್ಯೆಗಳನ್ನೂ ಕಲಿತು ಹಿಂತಿರುಗಿದ್ದ. ಕೆಲವು ಸಂಸ್ಥಾನಿಕರಲ್ಲಿರುವಂತೆ ಮಾಂಡವಗಡ ರಾಜಘರಾಣೆಯಲ್ಲಿಯೂ ಒಂದು ಪರಂಪರೆಯಿತ್ತು. ರಾಜಕುಮಾರರು ಎಷ್ಟೇ ವಿದ್ಯೆಯನ್ನು ಪ್ರಾಪ್ತಮಾಡಿದರೂ ಸಹ ಅವರು ಒಬ್ಬರೇ ತಮ್ಮ ತಲವಾರಿನೊಂದಿಗೆ ಅರಣ್ಯದಲ್ಲಿ ಹೋಗಿ ಒಂದು ಹುಲಿಯನ್ನಾಗಲೀ ಕ್ರೂರಮೃಗವನ್ನಾಗಲೀ ಬೇಟೆಯಾಡಿ ಬರಬೇಕು. ಅನಂತರವೇ ಅವರನ್ನು ರಾಜಕುಮಾರನೆಂದು ಸ್ವೀಕರಿಸಲಾಗುತ್ತಿತ್ತು. ರಾಜಕುಮಾರ ಜಯಚಂದ ಕೂಡ ಇದೇ ಪರಂಪರೆಯನ್ನು ಪೂರೈಸಿ ಹಿಂತಿರುಗುತ್ತಿದ್ದ. ಅವನ ಕಣ್ಣ ಮುಂದೆ ತನ್ನ ಕುಲದ ಪರಂಪರೆಯನ್ನು ಪೂರೈಸಿ ಹಿಂತಿರುಗಿದ ಮಗನನ್ನು ಕಂಡ ತನ್ನ ತಂದೆಯ ಸಂತೃಪ್ತ ಮುಖವೇ ಕಾಣುತ್ತಿತ್ತು.
ಒಮ್ಮೆಲೇ ತೂಫಾನ ತನ್ನ ಮಾಲಕನನ್ನು ನೆಲಕ್ಕೆ ಕೆಡವಿತು. ಜಯಚಂದನಿಗೆ ಕ್ರೋಧದಿಂದ ಮೈ ನಡುಗಿತು. ಎದ್ದು ಅದನ್ನು ಸಮೀಪಿಸಲು ಹೋದ ಜಯಚಂದನಿಗೆ ಒಮ್ಮೆಲೇ ಎದುರಿನ ದೃಶ್ಯದೆಡೆಗೆ ಲಕ್ಷ್ಯ ಹೋಯಿತು. ಎದುರಿನ ಗಿಡದ ಕೆಳಗೆ ಹುಲಿಯೊಂದು ನಿಂತಿತ್ತು. ಅದರಿಂದ ತಪ್ಪಿಸಿಕೊಳ್ಳಲು ತರುಣಿಯೋರ್ವಳು ಮರವನ್ನೇರಿ ಭಯದಿಂದ ಕಿರುಚುತ್ತಿದ್ದಳು. ಹುಲಿ ತಾನೂ ಮರವನ್ನೇರಲು ಯತ್ನಿಸುತ್ತಿತ್ತು. ಆದರೆ ತೂಫಾನಿನ ಹೆಜ್ಜೆಯ ಶಬ್ದಕ್ಕೆ ಅದರ ಲಕ್ಷ್ಯ ಬೇರೆಡೆಗೆ ತಿರುಗಿತು. ಒಂದು ಬೇಟೆಯನ್ನರಸಿದ ಹುಲಿಗೆ ನಾಲ್ಕು ಬೇಟೆಗಳು ಎದುರಿಗಿದ್ದವು. ಮಾಂಡವಗಡದ ಯುವರಾಜ ಜಯಚಂದ, ಅವನ ಬೇಟೆ, ತೂಫಾನ ಮತ್ತು ಆ ತರುಣಿ. ಯಾವ ಬೇಟೆಯನ್ನು ಹಿಡಿಯಲೆಂದು ಹುಲಿ ವಿಚಾರ ಮಾಡುವಷ್ಟರಲ್ಲಿ ಜಯಚಂದ ಮಿಂಚಿನಂತೆರಗಿ ಆ ಹುಲಿಯನ್ನು ತನ್ನ ಖಡ್ಗದಿಂದ ಬೇಟೆಯಾಡಿದ್ದ. ಅದನ್ನು ಕಂಡ ಆ ತರುಣಿಯ ಮಾನಸಿಕ ಒತ್ತಡ ಹಾಗೂ ಭೀತಿ ಮರೆಯಾಗಿ ತತ್ ಕ್ಷಣ ಮೂರ್ಛೆ ಹೋದಳು. ಮತ್ತು ಅವನ ಮೈಮೇಲೆಯೇ ಬಿದ್ದು ಬಿಟ್ಟಳು. ಜಯಚಂದ ಅವಳನ್ನು ಉಪಚರಿಸಿ, ಅವಳು ಎಚ್ಚರಗೊಳ್ಳುವುದನ್ನೇ ಕಾಯುತ್ತ ಕುಳಿತ. ಆಗ ಅವನಿಗೆ ತನ್ನ ತಂದೆಯ ಮಾತು ನೆನಪಿಗೆ ಬಂದಿತು.
“ಮಗೂ, ಈ ತಲೆಯ ಮೇಲಿನ ಕಿರೀಟ ನಮ್ಮ ಮುಖದ ಶೋಭೆಗಾಗಿ ಅಲ್ಲ. ನಮ್ಮ ಪ್ರಜೆಗಳ ಬಗೆಗಿನ ಕರ್ತವ್ಯವನ್ನು ಸದಾ ನೆನಪಿಸಲೆಂದು ಈ ಭಾರವಾದ ಕಿರೀಟ ನಮ್ಮ ತಲೆಯ ಮೇಲಿರುತ್ತದೆ. ಯಾವಾಗಲೂ ಯಾರೂ ನಿನ್ನ ಸಹಾಯವನ್ನರಸಿದಾಗ, ಅವರ ಸಂಕಟವನ್ನು ಪಾರು ಮಾಡಲು ನಿನ್ನ ಪ್ರಾಣವನ್ನೇ ಪಣವಾಗಿಟ್ಟು ಹೋರಾಡು. ಅದೇ ನಿನ್ನ ಕ್ಷತ್ರಿಯ ಧರ್ಮ.”
ತಾನು ಆ ಮಾತನ್ನೂ ಪಾಲಿಸಿದೆನೆಂದು ಅವನಿಗೆ ಸಂತಸವಾಗಿತ್ತು. ಅಲ್ಲದೇ ಹುಲಿಯನ್ನು ಬೇಟೆಯಾಡಿ ನಿಜವಾದ ರಾಜಕುಮಾರನಾಗಿದ್ದ. ಆಗ ಅವನಿಗೆ ಆ ತರುಣಿಯ ಕಡೆ ಲಕ್ಷ್ಯ ಹೋಯಿತು. ಅವಳ ಅಪರಿಮಿತ ಚೆಲುವು ಅವನನ್ನು ಸೆಳೆಯಿತು. ಗುಲಾಬಿ ಮಿಶ್ರಿತ ಕೆನ್ನೆಯ ಬಣ್ಣ, ನೀಳವಾದ ಕಣ್ರೆಪ್ಪೆ, ಮುಖವನ್ನಾವರಿಸಿದ ರೇಶ್ಮೆಯ ಕಪ್ಪು ಕೂದಲು, ನೀಳವಾದ ಶರೀರ. ಎಲ್ಲಿಯೂ ದೋಷವಿಲ್ಲ. ನೋಡಿದವರ ಕಣ್ಣು ಸೆರೆಹಿಡಿಯುವ ಸೌಂದರ್ಯ.
ಸ್ವಲ್ಪ ಹೊತ್ತಿನ ಅನಂತರ ಕಣ್ತೆರೆದ ತರುಣಿ, ತನ್ನೆದುರು ನಿಂತು ಉಪಚರಿಸುತ್ತಿರುವ ತರುಣನನ್ನು ಕಂಡು ಅಚ್ಚರಿಗೊಂಡಳು. ಕ್ರಮೇಣ ಅವಳಿಗೆ ಏನು ನೆನಪಾಯಿತೋ ಅವಳ ಸುಂದರ ಕಣ್ಣುಗಳಲ್ಲಿ ಅಶ್ರು ತುಂಬಿದವು. ಅವಳಿಗೆ ಗೊತ್ತಿಲ್ಲ- ತನ್ನೆದುರು ನಿಂತಿರುವ ಸುಂದರ ಧೀಮಂತ ಯುವಕ ಮಾಂಡವಗಡದ ಯುವರಾಜನೆಂದು. ಇಂಥ ಘನಘೋರ ಅರಣ್ಯದಲ್ಲಿ ಅವಳು ಒಂಟಿಯಾಗಿ ಬಂದುದೇಕೆಂದು ಪ್ರಶ್ನಿಸಿದ. ಯುವರಾಜನ ಮಾತಿಗೆ ನೋವು ತುಂಬಿ ಹೇಳಿದಳು – ತಾನೊಬ್ಬ ಗಾಯಕಿಯ ಮಗಳು. ಸಮೀಪದ ಸಂಸ್ಥಾನಿಕರಲ್ಲಿ ತನ್ನ ತಾಯಿಯ ನೃತ್ಯ ಮತ್ತು ಗಾಯನದ ಕಾರ್ಯಕ್ರಮ ಮುಗಿಸಿ ಪಯಣಿಸುತ್ತಿರುವಾಗ ತನ್ನ ಜತೆಯವರೆಲ್ಲ ದರೋಡೆಕೋರರ ಗುಂಡಿಗೆ ಸಿಕ್ಕಿ ಬಲಿಯಾದರು. ತಾನೊಬ್ಬಳೇ ಹೇಗೋ ಮರವೇರಿ ಕುಳಿತು ಯುವರಾಜನ ಕೃಪೆಯಿಂದ ಪಾರಾಗಿದ್ದಳು. ಆದರೆ ತನ್ನವರನ್ನೆಲ್ಲ ಕಳೆದುಕೊಂಡು ಒಂಟಿಯಾದ ಅವಳಿಗೆ ದಿಕ್ಕು ತೋರದಾಗಿತ್ತು.
ಅವಳ ಕರುಣ ಕಥೆ ಕೇಳಿದ ಜಯಚಂದ ಅವಳಿಗೆ ತನ್ನೊಡನೆ ಮಾಂಡವಗಡಕ್ಕೆ ಬರಲು ಆಮಂತ್ರಿಸಿದ. ತನ್ನ ಪರಿಚಯವನ್ನೂ ಮಾಡಿಕೊಟ್ಟ. ತನ್ನೆದುರು ಬೇರೆ ಮಾರ್ಗವೇ ಕಾಣದೆ ರೇಶಮ್ ಅವನೊಡನೆ ಪಯಣಿಸಲು ಸಮ್ಮತಿಸಿದಳು. ಅಲ್ಲಿಯವರೆಗೆ ಅವಳಿಗೂ ಜಯಚಂದನ ಸಜ್ಜನಿಕೆಯ ಬಗೆಗೆ ವಿಶ್ವಾಸ ಉದಯಿಸಿತ್ತು.
ಮಾಂಡವಗಡಕ್ಕೆ ಹಿಂತಿರುಗಿದ ಜಯಚಂದ ರೇಶಮ್ ಗೆ ಎಲ್ಲ ಅನುಕೂಲಗಳನ್ನೂ ಮಾಡಿಕೊಟ್ಟ. ಅವಳ ಸಂಗೀತವನ್ನು ಮುಂದುವರಿಸಲು ಸಹ ಅನುಕೂಲ ಮಾಡಿದ. ತಾನೂ ಸಹ ಅವಳ ಸಂಗೀತವನ್ನು ಸವಿಯುತ್ತಿದ್ದ. ಕೆಲವೇ ದಿನಗಳಲ್ಲಿ ಜಯಚಂದ ಮತ್ತು ರೇಶಮ್ ಅನುರಾಗದಲ್ಲಿ ಒಂದಾದರು. ಒಂದು ದಿನ ಈ ಸಮಾಚಾರ ಹರಿಚಂದರಿಗೂ ತಲುಪಿತು.
ಜಯಚಂದ ಹಾಗೂ ರೇಶಮ್ ತಮ್ಮ ಅನುರಾಗದಲ್ಲಿ ಮೈಮರೆತಿರುವಾಗ, ಜಯಚಂದನ ಆತ್ಮೀಯ ಸ್ನೇಹಿತ ಹಾಗೂ ಸೇವಕನಾದ ಮಾನಸಿಂಗ ಅವನನ್ನು ಕರೆದ. ಜಯಚಂದ ಕೋಪೋದ್ರಿಕ್ತನಾಗಿ ಪ್ರಶ್ನಿಸಿದಾಗ ತಾನು ಕೇವಲ ಮಹಾರಾಜ ಹರಿಚಂದ ಇತ್ತ ಆಗಮಿಸುತ್ತಿರುವ ಸಮಾಚಾರ ನೀಡಲು ಬಂದಿರುವುದಾಗಿ ಹೇಳಿದ.
ರೇಶಮ್ ನಾಚಿಕೆ ಹಾಗೂ ಭಯದಿಂದ ಎದ್ದು ಹೋಗಲು ಯತ್ನಿಸಿದಳು. ಜಯಚಂದ ಅವಳನ್ನು ತಡೆದು ನಿಲ್ಲಿಸಿದ.
“ರೇಶಮ್ ನಿಲ್ಲು. ನೀನು ಎಲ್ಲಿಯೂ ಹೋಗುವ ಕಾರಣವಿಲ್ಲ. ಮಹಾರಾಜರಾದ ನನ್ನ ತಂದೆ ಏನನ್ನೂ ಸಹಿಸಿಯಾರು, ಆದರೆ ಸುಳ್ಳನ್ನು ಸಹಿಸರು. ಸತ್ಯವನ್ನು ಮರೆಮಾಚುವುದೇಕೆ? ನೀನಿಲ್ಲೇ ಇರು.”
ಮತ್ತೊಂದು ಕ್ಷಣದಲ್ಲಿ ಹರಿಚಂದ ಮಹಾರಾಜರು ಅವರ ಮುಂದೆ ಪ್ರತ್ಯಕ್ಷರಾಗಿದ್ದರು. ಇಬ್ಬರಿಗೂ ಯಾವ ರೀತಿ ಪ್ರತಿಕ್ರಯಿಸಲೂ ತಿಳಿಯದ ಸ್ಥಿತಿ.
ಮಹಾರಾಜರೇ ಮಾತನಾಡಿದರು – “ನಿನ್ನ ಸ್ನೇಹಿತೆ ಸಂಗೀತದಲ್ಲಿ ಬಹಳ ಸಾಧನೆ ಮಾಡಿರುವಳೆಂದು ಕೇಳಿದೆ ಜಯಚಂದ. ನಮಗೆ ಅವಳ ಸಂಗೀತವನ್ನಾರಾಧಿಸುವ ಅವಕಾಶ ಯಾವಾಗ?”
ಈಗ ಜಯಚಂದ ಎಚ್ಚರಗೊಂಡ.
“ನಿಮ್ಮ ಆಜ್ಞೆ ಮಹಾರಾಜರೇ, ಸ್ವಲ್ಪ ಅವಕಾಶ ಕೊಡಿರಿ. ಮುಂದಿನ ಪೌರ್ಣಮಿಯಂದು ರೇಶಮ್ ನಿಮಗಾಗಿ ಸಂಗೀತ ಸಭೆಯನ್ನು ನಡೆಸಿಕೊಡುತ್ತಾಳೆ.”
ಜಯಚಂದ ತತ್ ಕ್ಷಣ ಕಾರ್ಯಪ್ರವೃತ್ತನಾದ. ರಾಜ ಗಾಯಕ ಶಾಂತಿನಾಥ ತಾನು ಆಯುಷ್ಯಪೂರ್ತಿ ಮಾಡಿದ ಸಾಧನೆಯನ್ನು ರೇಶಮ್ ಗೆ ಧಾರೆಯೆರೆಯಲು ಸಿದ್ಧನಾದ. ರೇಶಮ್ ಸಹ ಒಂದು ತಿಂಗಳು ತ��ಸ್ಸಿನಂತೆ ಸಾಧನೆ ಮಾಡಿದಳು. ಪರಿಣಾಮ, ಪೌರ್ಣಿಮೆಯ ಆ ಸಂಜೆ ರೇಶಮ್ ಜಯಚಂದನ ಪೂರ್ಣ ಮನೆತನವನ್ನೇ ಮಂತ್ರಮುಗ್ಧರನ್ನಾಗಿಸುವಂತೆ ಸ್ವರ್ಗೀಯ ಸಂಗೀತವನ್ನುಣಿಸಿದಳು. ರಾಜಾ ಹರಿಚಂದನ ಕಣ್ಣಿನಲ್ಲಿ ಅಶ್ರು ಮಡುಗಟ್ಟಿತ್ತು.
ಮರುದಿನ ರಾಜಾ ಹರಿಚಂದ, ಅವರ ತಂದೆ ಶಕ್ತಿಸಿಂಹ, ಆಸ್ಥಾನ ಗಾಯಕ ಶಾಂತಿನಾಥ ಮೂವರೂ ಸೇರಿ ಚರ್ಚೆ ನಡೆಸಿದ್ದರು. ಆಗ ಜಯಚಂದನಿಗೆ ಕರೆ ಹೋಯಿತು. ಹರಿಚಂದ ಮಗನಿಗೆ ಹೇಳಿದರು –
“ನೋಡು ಜಯಚಂದ, ನಮಗೆ ನಿನ್ನ ಮತ್ತು ರೇಶಮ್ ಳ ಪ್ರೇಮಕಥೆಯ ಅರಿವಿದೆ. ಇಂದು ನಿನ್ನ ಪ್ರೇಮದ ಸತ್ವ ಪರೀಕ್ಷೆ. ಶಾಂತಿನಾಥ ಹೇಳುತ್ತಾರೆ – ರೇಶಮ್ ಗೆ ಸಂಗೀತ ದೈವದತ್ತವಾದುದು. ಅವಳ ಧ್ವನಿಯಲ್ಲಿ ಸ್ವರ್ಗೀಯ ಮಾಧುರ್ಯವಿದೆ. ಇನ್ನೂ ಹೆಚ್ಚಿನ ಶಿಕ್ಷಣ ಮತ್ತು ಸಾಧನೆಯಿಂದ ಅವಳು ಸಂಗೀತ ಪ್ರಪಂಚದ ತಾರೆಯಾಗಬಲ್ಲಳು. ನೀನು ಅವಳನ್ನು ಎಷ್ಟೇ ಗಾಢವಾಗಿ ಪ್ರೇಮಿಸಿರಬಹುದು. ರಾಜ ಪರಂಪರೆಯಲ್ಲಿ ನೀನು ಅವಳನ್ನು ವಿವಾಹವಾಗಲಾರೆ. ಅದು ನಿನಗೂ ಗೊತ್ತು. ರಾಜ ಪರಂಪರೆಯಲ್ಲಿ ನಾವು ಪ್ರಜೆಗಳ ನಿರ್ಧಾರಕ್ಕೆ ಬದ್ಧರು. ಈಗ ನಿನ್ನ ನಿರ್ಧಾರದ ಮೇಲೆ ರೇಶಮ್ ಳ ಜೀವನ ನಿರ್ಧಾರವಾಗುತ್ತದೆ. ರೇಶಮ್ ಳ ಪ್ರತಿಭೆಯನ್ನು ರಾಷ್ಟ್ರಾದ್ಯಂತ ಹರಡಿ ಸಂಗೀತಲೋಕಕ್ಕೆ ಒಂದು ಕೊಡುಗೆಯನ್ನು ನೀಡುತ್ತೀಯಾ? ನಿನ್ನ ಸ್ವಾರ್ಥಕ್ಕೋಸ್ಕರ ಅವಳೊಬ್ಬ ರಾಜನ ಇಡುಹೆಣ್ಣಾಗಿ ಬಾಳಬೇಕು. ನಿರ್ಧಾರ ನಿನ್ನದೇ. ನಮ್ಮಿಂದ ಒತ್ತಾಯವಿಲ್ಲ.”
ಅದರಂತೆ ರೇಶಮ್ ಳಿಗೂ ಏನೇನೋ ಆಮಿಷ ಒಡ್ಡಲಾಯಿತು. ಆದರೆ ಅವಳು ಯಾವುದಕ್ಕೂ ಮಣಿಯಲಿಲ್ಲ. ಜಯಚಂದನ ಪ್ರೇಮದ ಮುಂದೆ ಅವಳಿಗೆ ಎಲ್ಲವೂ ತೃಣ ಮಾತ್ರ. ಕೊನೆಗೆ ಜಯಚಂದನೇ ಅವಳಿಗೆ ತಿಳಿಸಿ ಹೇಳಲು ಪ್ರಯತ್ನಿಸಿದ. ಆಗಲೂ ಅವಳದು ಒಂದೇ ಮಾತು. “ನನಗೆ ನಿನ್ನ ಪತ್ನಿಯ ಸ್ಥಾನ, ಅಂತಸ್ತು, ಗೌರವ ಏನೂ ಬೇಡ. ಕೇವಲ ಪ್ರೇಮ ಸಾಕು.”
ಕೊನೆಗೆ ಜಯಚಂದ ಸುಳ್ಳಿನ ಮೊರೆಯನ್ನೇ ಹೋಗಬೇಕಾಯಿತು. ನಟನೆ ಮತ್ತು ಕೃತ್ರಿಮ ಮಾತುಗಳಿಂದ ಅವಳ ಬಗೆಗಿನ ತನ್ನ ಭಾವನೆಗಳೆಲ್ಲ ವ್ಯಾಮೋಹವೆಂಬ ಭಾವನೆ ತರಿಸಿದ. ತನಗೀಗ ಅವಳಲ್ಲಿ ಯಾವುದೇ ಆಸಕ್ತಿಯಿಲ್ಲವೆಂದು ಮನಗಾಣಿಸಿದ. ಅನಂತರ ತಾನೇ ಹೋಗಿ ಅವಳನ್ನು ಶಾಂತಿನಾಥರಲ್ಲಿ ಬಿಟ್ಟು ಬಂದ. ಅವರಿಂದ ರೇಶಮ್ ಳನ್ನು ಸಂಗೀತ ಪ್ರಪಂಚದಲ್ಲಿ ಉನ್ನತ ಸ್ಥಾನಕ್ಕೊಯ್ಯುವ ಬಗ್ಗೆ ಭರವಸೆ ಪಡೆದ. ಸಾಕಷ್ಟು ಸಂಪತ್ತಿನೊಡನೆ ಅವರನ್ನು ಮುಂಬಯಿಗೆ ಕಳಿಸಿದ.
ಶಾಂತಿನಾಥ ರೇಶಮ್ ಳನ್ನು ಮಗಳಂತೆಯೇ ನೋಡಿಕೊಂಡರು. ರೇಶಮ್ ತನ್ನ ಸಂಪೂರ್ಣ ಜೀವನವನ್ನೇ ಸಂಗೀತಕ್ಕಾಗಿ ಮುಡಿಪಾಗಿಟ್ಟಳು. ಜಯಚಂದ್ ವಿವಾಹ, ಅವನ ಪಟ್ಟಾಭಿಷೇಕ, ಹರಿಚಂದರ ಮೃತ್ಯು ಇವುಗಳ ಬಗ್ಗೆ ಸಮಾಚಾರ ತಲುಪುತ್ತಿತ್ತು. ಅನಂತರ ಭಾರತ ಸ್ವತಂತ್ರವಾಗಿ ಜಯಚಂದ ಮತ್ತು ಅನೇಕ ಸಂಸ್ಥಾನಿಕರು ದಿಲ್ಲಿಗೆ ವಲಸೆ ಹೋದ ಸಮಾಚಾರ ತಿಳಿಯಿತು. ಅವಳ ಜೀವನದ ಹಿಂದಿನ ಪುಟಗಳು ಮಸುಕಾದವು. ಸಂಗೀತ ಜಗತ್ತಿನಲ್ಲಿ ಅವಳು ಮೇಲೇರಿದಂತೆ ಶಾಂತಿನಾಥರೂ ತಮ್ಮ ವಚನವನ್ನು ಪೂರೈಸಿದ ತೃಪ್ತಿಯಿಂದ ಸಾವನ್ನಪ್ಪಿದರು. ಅವಳೀಗ ಸಂಪೂರ್ಣ ಏಕಾಕಿ. ಸಂಗೀತವೊಂದೇ ಅವಳ ಜತೆಗಾತಿ. ಅದರ ಸಾಧನೆಯಲ್ಲಿ ರಾಷ್ಟ್ರಪತಿ ಪಾರಿತೋಷಕ ಪಡೆದ ಅವಳಿಗೆ ಸ್ವಲ್ಪ ಸಂತೃಪ್ತಿಯಾಗಿತ್ತು.
ಇಂದು ಆಕಸ್ಮಿಕವಾಗಿ ಕೈ ಸೇರಿದ ನೂಪುರ ಹಳೆಯ ಬದುಕನ್ನು ನೆನಪಿಸಿತ್ತು. ಮತ್ತೆ ಪತ್ರದ ಮೇಲೆ ಕಣ್ಣಾಡಿಸಿದಳು.
ನನ್ನೊಲವಿನ ರೇಶಮ್,
ಹೀಗೆ ಸಂಬೋಧಿಸುವ ಅಧಿಕಾರ ನನಗಿಲ್ಲ ಎನ್ನಬೇಡ. ನಿನಗೆ ಇಂದು ರಾಷ್ಟ್ರಪತಿ ಪಾರಿತೋಷಕ ಸಿಕ್ಕಿದ್ದು ಕೇಳಿ ನಿನಗಿಂತ ಹೆಚ್ಚು ಆನಂದ ನನಗಾಗಿದೆ. ನಿನಗೆ ಸಂದ ಗೌರವ ಹಾಗೂ ನನ್ನ ರೇಶಮ್ ಈ ಎತ್ತರವನ್ನೇರಿದಳೆಂಬ ಸಂತೃಪ್ತಿಯಿಂದ ಮನಸ್ಸು ತುಂಬಿ ಬಂದಿದೆ. ಕೊನೆಗೂ ನಾನು ಮಾಡಿದ ನನ್ನ ಪ್ರೇಮದ ತ್ಯಾಗ ಸಾರ್ಥಕವಾಗಿದೆ.
ರೇಶಮ್, ಇಂದೂ ಸಹ ನಮ್ಮಿಬ್ಬರ ಪ್ರಥಮ ಭೇಟಿಯ ಆ ದಿನ ನನ್ನ ಮನದಲ್ಲಿ ಹಸುರಾಗಿದೆ. ಆ ಸರ್ವರಿ ನದಿಯ ತೀರ, ತಂಪು ಸಂಜೆ, ಬೆಳದಿಂಗಳ ರಾತ್ರಿ, ಹೆದರಿಕೆಯಿಂದ ಅರಕ್ತವಾದ ನಿನ್ನ ಮುಖ ಇಂದೂ ನೆನಪಾಗುತ್ತವೆ. ನಿನ್ನ ಸಾಂಗತ್ಯದ ಆ ದಿನಗಳು, ಭಾವಪೂರ್ಣ ಹಾಡುಗಳು ಮನಸ್ಸನ್ನು ತಟ್ಟುತ್ತವೆ. ನೀನೆನ್ನಬಹುದು – ಇಷ್ಟೊಂದು ಪ್ರೇಮವಿದ್ದರೆ ನಾನೇಕೆ ದೂರ ಹೋದೆ ನಿನ್ನಿಂದ ಎಂದು. ಆಗ ನೀನೊಂದು ಮಾತು ಹೇಳಿದ್ದೆ, ನನ್ನಿಂದ ಅಗಲುವಾಗ – ‘ಈ ರೀತಿ ನನ್ನನ್ನು ದೂರವೇ ಮಾಡುವುದಿದ್ದರೆ ಆ ಹುಲಿಯ ಬಾಯಿಯಿಂದ ನನ್ನನ್ನು ಬಿಡಿಸಿದ್ದಾದರೂ ಏಕೆಂದು?’ ಈಗಲೂ ಆ ಮಾತು ನನ್ನೆದೆಯನ್ನು ಕೂರಂಬಿಯಂತೆ ಕೊರೆಯುತ್ತದೆ. ರೇಶಮ್ ನಾನು ಇದೆಲ್ಲ ಮಾಡಿದ್ದು ಸಂಗೀತ ಪ್ರಪಂಚ ಒಂದು ದೈವೀಕ ಧ್ವನಿಯಿಂದ ಎರವಾಗಬಾರದೆಂದು.
ಸತ್ಯ ಹೇಳುತ್ತೇನೆ. ನಿನ್ನಿಂದ ನಾನು ದೂರ ಇಲ್ಲವೇ ಇಲ್ಲ. ನನ್ನ ಮನಸ್ಸನ್ನಂತೂ ನೀನು ನಿನ್ನೊಂದಿಗೇ ಒಯ್ದಿದ್ದೆ. ನನ್ನೊಂದಿಗೆ ಉಳಿದಿದ್ದು ಭೌತಿಕ ಶರೀರ ಮಾತ್ರ, ವೃದ್ಧಾಪ್ಯದಿಂದ ಅದರ ಭಾರವನ್ನೂ ಈಗ ತಡೆಯಲಾಗುತ್ತಿಲ್ಲ.
ರೇಶಮ್ ಈ ಪತ್ರದೊಂದಿಗೆ ನಿನ್ನದೊಂದು ವಸ್ತುವನ್ನು ಹಿಂತಿರುಗಿಸುತ್ತಿದ್ದೇನೆ. ನಿನಗೆ ನೆನಪಿದೆಯೇ? ನಮ್ಮಿಬ್ಬರ ಪ್ರಥಮ ಭೇಟಿಯಲ್ಲಿ ನೀನು ಮೂರ್ಛಿತಳಾದಾಗ ನಿನ್ನ ಕಾಲಿನ ನೂಪುರರವೊಂದು ಜಾರಿಬಿದ್ದಿತ್ತು. ಆಗ ನಾನದನ್ನು ಎತ್ತಿಟ್ಟುಕೊಂಡೆ. ಈ ನಲವತ್ತು ವರ್ಷಗಳಲ್ಲಿ ಅದನ್ನು ನಿನ್ನ ನೆನಪಾಗಿ ನನ್ನ ಎದೆಯ ಹತ್ತಿರವೇ ಇಟ್ಟುಕೊಂಡಿದ್ದೆ. ಇಂದು ಆ ನೆನಪನ್ನು ನಿನಗೆ ಹಿಂತಿರುಗಿಸುತ್ತಿದ್ದೇನೆ. ಎರಡು ಕಾರಣಗಳಿಗಾಗಿ. ಮೊದಲನೆಯದಾಗಿ ನಿನ್ನ ನೆನಪಿನ ಕುರುಹಾಗಿ ನನ್ನೊಂದಿಗೆ ಇದ್ದ ಈ ನೂಪುರ ನನ್ನ ನಿಜವಾದ ಪ್ರೇಮದ ಕುರುಹಾಗಿ ನಿನ್ನನ್ನೇ ಸೇರಲೆಂದು. ಎರಡನೆಯದಾಗಿ ಈ ಪ್ರೇಮವನ್ನು ನೀನರಿತು ನಿನ್ನ ಪ್ರೇಮ ಅಪಾತ್ರವಾಗಲಿಲ್ಲವೆಂಬ ನಂಬಿಕೆ ತರಲೆಂದು.
ರೇಶಮ್ ಇಲ್ಲಿಗೆ ಮುಗಿಸುತ್ತೇನೆ. ಈ ಜೀವನದಲ್ಲಿ ನಿನ್ನನ್ನು ಮತ್ತೊಮ್ಮೆ ಕಾಣುವ ಆಸೆಯಿದ್ದರೂ ಅಸಾಧ್ಯವೇನೋ. ಸಾಧ್ಯವಾದರೆ ನನ್ನನ್ನು ಕ್ಷಮಿಸು.
ಕೇವಲ ನಿನ್ನವ
ಜಯಚಂದ.