ನವರಸಗಳ ಸಂಗಮ ಗಮಕ

ನವರಸಗಳ ಸಂಗಮ ಗಮಕ

ನಾವು ಚಿಕ್ಕ ವಯಸ್ಸಿನಲ್ಲಿದ್ದಾಗ ದೇವಸ್ಥಾನಗಳಲ್ಲಿ ಯಾವಾಗಲೂ ರಾಮಾಯಣ, ಮಹಾಭಾರತ ಕಾವ್ಯದ ವಾಚನ ಮಾಡುತ್ತಿದ್ದೆವು. ಆಗ ಟಿ.ವಿ. ಮಾಧ್ಯಮ ಇರಲಿಲ್ಲವಲ್ಲ. ಮನರಂಜನೆಗಾಗಿ ಕಾವ್ಯ ವಾಚನ ಆಲಿಸಲು ಹೋಗುತ್ತಿದ್ದೇವೆ…

* ಗಮಕ ವಾಚನ ಕಲಿಯಬೇಕೆಂದು ಯಾಕೆ ಅನ್ನಿಸಿತು?
ನಾವು ಚಿಕ್ಕ ವಯಸ್ಸಿನಲ್ಲಿದ್ದಾಗ ದೇವಸ್ಥಾನಗಳಲ್ಲಿ ಯಾವಾಗಲೂ ರಾಮಾಯಣ, ಮಹಾಭಾರತ ಕಾವ್ಯದ ವಾಚನ ಮಾಡುತ್ತಿದ್ದೆವು. ಆಗ ಟಿ.ವಿ. ಮಾಧ್ಯಮ ಇರಲಿಲ್ಲವಲ್ಲ. ಮನರಂಜನೆಗಾಗಿ ಕಾವ್ಯ ವಾಚನ ಆಲಿಸಲು ಹೋಗುತ್ತಿದ್ದೇವೆ. ‌ಈಶ್ವರನನ್ನು ಒಲಿಸಿಕೊಳ್ಳಲು ಕುಮಾರವ್ಯಾಸ ಭಾರತದಲ್ಲಿನ ಸೋತ್ರ ಪಠನೆಯ ನಿರ್ಲಿಂಗ, ನಿರಾಕಾರ, ನಿರ್ಮಯ ಎಂಬ ರಾಗಗಳು ಕಾವ್ಯ ವಾಚನದ ಸಂದರ್ಭದಲ್ಲಿ ಕಿವಿಯಲ್ಲಿ ಗುಯ್‌ಗುಟ್ಟಿತ್ತು. ರಾಗಗಳು ಎಷ್ಟು ಚೆಂದ ಇವೆ, ಕಲಿಯಬೇಕು ಎಂದು ಮನಸ್ಸಿನಲ್ಲಿ ಆಸೆ ಮೂಡಿತು. ಕಲಿತೆ, ಗಮಕಿಯಾದೆ.

* ಗಮಕ ಅಭ್ಯಾಸಕ್ಕೆ ನಿಮ್ಮ ಮನೆಯ ವಾತಾವರಣ ಪೂರಕವಾಗಿತ್ತಾ?
ನಮ್ಮ ಬೆಳವಣಿಗೆಗೆ ಮನೆಯ ವಾತಾವರಣವೇ ಕಾರಣ. ತಂದೆ ಸಂಗೀತ ಗುರುಗಳಾಗಿದ್ದು, ನಾವು ಸಂಗೀತ ಕಲಿಯುತ್ತಿದ್ದೆವು. ಎಚ್‌.ಆರ್‌.ಕೇಶವಮೂರ್ತಿಗಳು ನಾವು ಗಮಕ ಕಲಿಯುವ ಪ್ರೋತ್ಸಾಹ ತೋರಿದ್ದಕ್ಕೆ ನಮಗೆ ವಾಚನ ಹೇಳಿಕೊಡುತ್ತಿದ್ದರು. ಇದಕ್ಕೆ ಮನೆಯಲ್ಲಿ ಸಂಪೂರ್ಣ ಬೆಂಬಲ ನೀಡಿದ್ದರಿಂದಲೇ ನಾವೂ ಕಲಿಯಲು ಸಹಕಾರಿಯಾಯಿತು.

* ಗಮಕ ಕಲೆಯ ವಿಶೇಷತೆ ಏನು?
ಈ ಕಲೆಯಲ್ಲಿ ಗಿಮಿಕ್‌ ಏನಿಲ್ಲ. ಕಾವ್ಯವನ್ನು ರೂಢಿಸಿಕೊಂಡು ರಸಗಳಿಗೆ ತಕ್ಕಂತೆ ಹಾಡಬೇಕು. ಪ್ರಮುಖವಾಗಿ ಯಾವುದೇ ಸಂಗೀತದಲ್ಲಿ ಒಮ್ಮೆ ಎಲ್ಲಾ ರಸಗಳು ಬರುವುದಿಲ್ಲ. ಆದರೆ ಗಮಕ ವಾಚನದಲ್ಲಿ ನವರಸಗಳು ಒಮ್ಮೆಲೆ ಬರುತ್ತವೆ. ಅದೇ ಗಮಕದ ವಿಶೇಷ

* ಈ ಕ್ಷೇತ್ರದ ಸವಾಲುಗಳೇನು?
ಕಥೆ ಹೇಳುವಾಗ ಬೇರೆ ಪದ್ಯ ಓದಬೇಕಾಗುತ್ತದೆ. ಆ ಪದ್ಯದಲ್ಲಿ ಸಿಟ್ಟು, ಆಕ್ರೋಶ, ಭಯ, ನಗು ಹೀಗೆ ಎಲ್ಲಾ ರಸಗಳು ಬಂದು ಹೋಗುತ್ತವೆ. ಆದರೆ ಈ ಎಲ್ಲಾ ರಸಗಳಿಗೆ ತಕ್ಕಂತೆ ಸಾಹಿತ್ಯ ಎಲ್ಲೂ ಲೋಪವಾಗದಂತೆ ರಸಗಳನ್ನು ಸಮ್ಮಿಲನಗೊಳಿಸಿಕೊಂಡು ಹಾಡುವುದೇ ಗಮಕ ವಾಚನದಲ್ಲಿನ ಪ್ರಮುಖ ಸವಾಲು.

* ಈ ಕಲೆಯ ಉಳಿವಿಗಾಗಿ ಏನು ಮಾಡುತ್ತಿದ್ದೀರಾ?
ಈಗ ಗಮಕ ಅಳಿವಿನಂಚಿನಲ್ಲಿದೆ ಎಂದು ಹೇಳಬಹುದು. ಇದೊಂದು ಪ್ರಮುಖ ಕಲೆ. ಇದನ್ನು ಉಳಿಸಲೇ ಬೇಕು ಅಂತ ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ವರ್ಕ್‌ಶಾಪ್‌ ಆಯೋಜನೆ ಮಾಡುತ್ತೇವೆ. ವಿದ್ಯಾರ್ಥಿಗಳ ಪಠ್ಯಕ್ರಮದಲ್ಲಿ ಕಾವ್ಯಗಳು ಇರುತ್ತವೆ. ಆದರೆ ಅವರಿಗೆ ಯಾವ ರೀತಿ ವಾಚನ ಮಾಡಬೇಕು, ಅರ್ಥ ಮಾಡಿಕೊಳ್ಳಬೇಕು ಎಂದು ಗೊತ್ತಿರುವುದಿಲ್ಲ. ನಮ್ಮ ಕಾರ್ಯಾಗಾರಗಳಿಂದಾಗಿ ಮಕ್ಕಳಿಗೆ ಅವರ ಪಠ್ಯಗಳನ್ನೂ ಅರ್ಥ ಮಾಡಿಕೊಂಡು ಪರೀಕ್ಷೆ ಬರೆಯಲು ಸಲುಭವಾಗುತ್ತದೆ. ಮತ್ತೊಂದೆಡೆ ನಮ್ಮ ಈ ಕಲೆಯ ಬಗ್ಗೆಯೂ ತಿಳಿಯುತ್ತದೆ. ಅದೇ ರೀತಿ ಮನೆ ಮನೆ ಗಮಕ ಕಾಯರ್ಕ್ರಮವನ್ನು ಮಾಡುತ್ತೇವೆ. ಅನೇಕ ಸಂಘ ಸಂಸ್ಥೆಗಳು ಇದರ ಉಳಿವಿಗಾಗಿ ಕಾರ್ಯಕ್ರಮಗಳು ಆಯೋಜನೆ ಮಾಡುತ್ತಾರೆ. ಈಗಿನ ಯುವಜನತೆ ಸಾಮಾಜಿಕ ಜಾಲತಾಣಗಳಿಗೆ ಕೊಡುವ ಗಮನವನ್ನು ಈ ಕಾವ್ಯ ವಾಚನದ ಕಡೆ ಕೊಟ್ಟರೆ ಗಮಕ ಕಲೆಯನ್ನು ಉಳಿಸಬಹುದಾಗಿದೆ.

* ನಿಮ್ಮಷ್ಷದ ಗಮಕ ವಾಚನ ಯಾವುದು?
ಹತ್ತಾರು ಹೂಗಳನ್ನು ಇಟ್ಟು ನಿಮಗೆ ಯಾವ ಹೂ ಇಷ್ಷ ಎಂದರೆ ಹೇಗೆ? ಒಂದೊಂದು ಹೂವಿಗೂ ಒಂದೊಂದು ವೈಶಿಷ್ಟ್ಯವಿದೆ. ಹಾಗೇ ಒಂದೊಂದು ಕಾವ್ಯಕ್ಕೂ ಆದರದೇ ಆದ ಮಹತ್ವವಿದೆ. ಆದರೂ ‘ಕುಮಾರವ್ಯಾಸ ಭಾರತ’ ನೆಚ್ಚಿನ ಕಾವ್ಯವಾಗಿದ್ದು. ಸಲ್ಲಟವಾಗಿ ಸರಳವಾಗಿ ಹಾಡಲೂ ಸಾಧ್ಯವಾಗುತ್ತದೆ.

* ಗಮಕದ ಜತೆ ಏನು ಕಾರ್ಯಗಳನ್ನು ಕೈಗೊಳ್ಳುವಿರಾ?
ಗಮಕ ಕಾರ್ಯಕ್ರಮಗಳ ಜತೆಗೆ ಸಂಗೀತ ಕಚೇರಿ ನಡೆಸುತ್ತೇವೆ. ಹಾಗೂ ಮನೆಯಲ್ಲಿ ಸಂಗೀತ ಕಚೇರಿ ನಡೆಸುತ್ತೇವೆ. ಸಂಗೀತದ ಜತೆಗೆ ಮಕ್ಕಳಿಗೆ ಗಮಕವನ್ನೂ ಹೇಳಿಕೊಡುತ್ತೇವೆ. ಕೆಲವರು ಗಮಕ ಕಲೆ ಆಕರ್ಷಿರ್ತರಾಗಿ ಕಲಿಯಲು ಬರುತ್ತಾರೆ. ಕೆಲವರಿಗೆ ಬಲವಂತವಾಗಿ ತುರುಕಬೇಕಾಗುತ್ತದೆ. ವಯಸ್ಕರೂ ಕಲಿಯಲು ಬರುತ್ತಾರೆ. ಕಲಿಯಲು ಆಸಕ್ತಿ ಇದ್ದು ಬರುವವರಿಗೆ ಎಲ್ಲರಿಗೂ ಹೇಳಿ ಕೊಡುತ್ತೇವೆ.

ಕಿರು ಪರಿಚಯ
ಹೆಸರು: ಜಲಜರಾಜು. ಹುಟ್ಟಿದ್ದು ತರೀಕೆರೆ. ತಂದೆ ಬಿ.ಎಸ್‌.ಕೃಷ್ಣಮೂರ್ತಿ. ತಾಯಿ: ಸರಸ್ವತಿ ಶಿಕ್ಷಣ– ಮೈಸೂರು ವಿಶ್ವವಿದ್ಯಾಲಯದಲ್ಲಿ ಬಿ ಎ ಪದವಿ. ಅನುಭವ– 55 ವರ್ಷ

Courtesy : Prajavani.net

http://www.prajavani.net/news/article/2018/05/04/570456.html

Leave a Reply