ನಂಬಿಕೆ ಪ್ರಾಣ ಉಳಿಸಿತು.
ರೇಶ್ಮಾ ಮುಸ್ಲಿಂ ಕುಟುಂಬದಿಂದ ಬಂದ ಹುಡುಗಿ. ನೋಡಲು ಸಾಧಾರಣ ಗೋಧಿ ಬಣ್ಣ, ನಾಜೂಕಾದ ಮೈಕಟ್ಟು, ಐದಡಿ ಎತ್ತರದ ನಿಲುವು. ತುಂಬಾ ಸುಂದರವಾಗೇ ಇದ್ದಾಳೆ. ತನ್ನ ಕೆಲಸ ಕಾರ್ಯಗಳಲ್ಲಿ ಅಚ್ಚುಕಟ್ಟುತನ. ದುರಾದೃಷ್ಟಾವಶಾತ್ ಆಕೆಯ ಮನೆಯಲ್ಲಿ ತುಂಬಾ ಬಡತನ. ಚಿಕ್ಕವಯಸ್ಸಿನಲ್ಲೇ ನಾಲ್ಕೈದು ಮನೆಗಳಲ್ಲಿ ಕೆಲಸ ಮಾಡಿ ಹಣ ಸಂಪಾದಿಸುವುದು ಆಕೆಗೆ ರೂಢಿಯಾಗಿತ್ತು.
ಆಕೆ ಕೆಲಸ ಮಾಡುತ್ತಿದ್ದ ಮನೆಯಲ್ಲಿ ತುಂಬಾ ಜನ ಇರುತ್ತಿದ್ದರು. ಆ ಮನೆಯಲ್ಲಿ ನಿರ್ಮಲಾ ಎನ್ನುವ 40 ವಯಸ್ಸಿನ ವಿಕಲಚೇತನೆ, ರೇಷ್ಮಾಳೊಂದಿಗೆ ತುಂಬಾ ಅನ್ಯುನ್ನತೆಯಿಂದ ಇರುತ್ತಿದ್ದಳು. ರೇಷ್ಮಾಳ ಪರಿಸ್ಥಿತಿ ಚೆನ್ನಾಗಿ ಅರಿತಿದ್ದ ನಿರ್ಮಲಾ ಆಕೆಗೆ ತುಂಬಾ ಆತ್ಮೀಯತೆಯಿಂದಲೇ ನೋಡುತ್ತಿದ್ದಳು. ಕೆಲಸದವಳಾದರೂ ಆ ಮನೆಯಲ್ಲಿ ಎಷ್ಟೇ ಕೆಲಸವಿದ್ದರೂ ಆಕೆ ಸ್ವಲ್ಪವೂ ಬೇಸರಿಸದೆ ತನ್ನ ಕೆಲಸ ಪ್ರಾಮಾಣಿಕತೆಯಿಂದ ಮಾಡುತ್ತಿದ್ದಳು. ಈಕೆಯನ್ನು ಪ್ರತಿದಿನ ಗಮನಿಸುತ್ತಿದ್ದ ಒಬ್ಬ ಹುಡುಗ ಶೇಖರ ಅವಳನ್ನು ಮೆಚ್ಚಿ ಮನಸ್ಸಿನಲ್ಲೇ ಆಕೆಯನ್ನು ಪ್ರೀತಿಸಲು ಶುರುಮಾಡಿದ. ರೇಷ್ಮಾ ತನ್ನ ಮನೆಕೆಲಸಗಳನ್ನು ಮುಗಿಸಿ ಹೋಗುವಾಗ ಆಕೆಯನ್ನು ಬೆನ್ನಟ್ಟಿ ಹಿಂದೆ ಹಿಂದೆ ಬರುತ್ತಿದ್ದ. ನೋಡಲು ಒಳ್ಳೆಯವನಂತೆ ಕಾಣುತ್ತಿದ್ದ ಅವನನ್ನು ರೇಷ್ಮಾ ತನ್ನ ಮನಸ್ಸಿನಲ್ಲಿ ತುಂಬಿಕೊಂಡಳು. ಆಗಿನ್ನು ಹದಿನಾರು ವಯಸ್ಸಿನ ಅವಳು ಸಹಜವಾಗಿ ಪ್ರೇಮ ಪ್ರವಾಹದಲ್ಲಿ ಬಿದ್ದಳು. ದಿನೆ ದಿನೆ ಅವರ ಭೇಟಿ ಹೆಚ್ಚಾಯಿತು. ಹೀಗೇ ಎರಡು ಮೂರು ವರ್ಷ ಕಳೆದು ನಂತರ ಇಬ್ಬರು ಮದುವೆಯಾಗುವ ವಿಚಾರ ಮಾಡಿದರು. ಇಬ್ಬರೂ ಬೇರೆ ಬೇರೆ ಧರ್ಮದವರಾಗಿರುವುದರಿಂದ ಮನೆಯಲ್ಲಿ ಸಮ್ಮತಿ ಸಿಗುವುದು ಅಸಾಧ್ಯ ಎಂದು ಮನಗಂಡಿದ್ದರು. ಇಬ್ಬರು ಓಡಿ ಹೋಗಿ ಮದುವೆಯಾಗುವ ಯೋಚನೆ ಮಾಡಿಯೇ ಬಿಟ್ಟರು.
ಒಂದಿನ ಅವರ ತಾಯಿ ರೇಷ್ಮಾ ಮನೆಗೆಲಸ ಮಾಡುತ್ತಿದ್ದ ಮನೆಗೆ ಬಂದು” ನಮ್ಮ ರೇಷ್ಮಾ ಏನಾದ್ರೂ ಇಲ್ಲಿ ಬಂದಿದ್ದಾಳಾ? ಎಂದು ಮಗಳನ್ನು ಹುಕಾಡುತ್ತಾ ಬಂದು ಕೇಳಿದಳು. ಮನೆ ಯಜಮಾನರು ಇಲ್ವಲ್ಲಾ! ಯಾಕೆ? ಏನಾಯಿತು? ಎಲ್ಲಾ ಸರಿ ಇದೆ ತಾನೆ ಎಂದು ಮರು ಪ್ರಶ್ನೆ ಕೇಳಿದರು. ಏನಿಲ್ಲಾ ಯಾಕೋ, ಮುಂಜಾನೆಯಿಂದ ಕಾಣತಾ ಇಲ್ಲಾ. ಇಲ್ಲೇ ಎಲ್ಲಾದರು ಹೋಗಿರಬಹುದು ನಾನು ನೋಡಿ ಬರ್ತೀನಿ ಅಂತ ಗಡಿಬಿಡಿಯಲ್ಲಿ ಹೋದಳು. ಸಂಜೆವರೆಗೆ ಹುಡುಕಿದರೂ ಸಿಗಲಿಲ್ಲಾ. ಹೀಗೆ ಎರಡು ದಿನ, ಮೂರುದಿನ ಕಡೆಗೆ ಒಂದು ವಾರ ಕಳದರೂ ಆಕೆಯ ಪತ್ತೆನೇ ಹತ್ತಲಿಲ್ಲಾ! ಮೊದಲೇ ಕಿತ್ತುತಿನ್ನೋ ಬಡತನ ಹೀಗಾಗಿ ಅವಳ ಮನೆಯವರು ಹುಡುಕುವುದನ್ನು ನಿಲ್ಲಿಸಿದರು. ಕೊನೆಗೊಂದು ದಿನ ಆಕೆ ಶೇಖರನ ಜೊತೆ ವಿವಾಹವಾದ ವಿಷಯ ತಿಳಿಯಿತು. ಹೋಗಲೀ ನಾವಾದರೂ ಆಕೆಯ ಮದುವೆ ಮಾಡುವುದು ಅಷ್ಟರಲ್ಲೇ ಇತ್ತು, ತಾನೆ ಒಂದು ಒಳ್ಳೇ ಹುಡುಗನ್ನ ಮದುವೆ ಮಾಡಿಕೊಂಡಳಲ್ಲಾ ಎಂದು ಸುಮ್ಮನಾದರು. ಕೆಲವು ತಿಂಗಳುಗಳ ನಂತರ ರೇಷ್ಮಾ ಇರುವ ಊರು ಪತ್ತೆಯಾಯಿತು. ಕ್ರಮೇಣ ತಂಗಿಯರು, ತಮ್ಮ, ತಾಯಿ ಬರುವುದು ಹೋಗುವುದೂ ನಡೆಯಿತು. ಈಗ ರೇಷ್ಮಾ ಎರಡು ತಿಂಗಳ ಗರ್ಭಿಣಿ. ಇದೇ ಸಮಯದಲ್ಲಿ, ಒಂದು ದಿನ ಶೇಖರನನ್ನು ಹುಡುಕಿಕೊಂಡು ಇಬ್ಬರು ವ್ಯಕ್ತಿಗಳು ಬಂದರು. ನೋಡಲು ಯಾರೋ ಅಧಿಕಾರಿಗಳಂತೆ ಕಾಣುತ್ತಿದ್ದರು. “ಮನೆಯಲ್ಲಿ ಯಾರಿದ್ದೀರಿ? ಶೇಖರ ಎನ್ನುವವನ ಮನೆ ಇದೇ ತಾನೆ? ಅವನು ಈಗ ಎಲ್ಲಿದ್ದಾನೆ? ನೀವು ಅವರಿಗೆ ಏನಾಗಬೇಕು? ಎಂದು ಒಂದೇ ಸಮನೆ ಐದಾರು ಪ್ರಶ್ನೆಗಳನ್ನು ಕೇಳಿದರು.” ಆಗ ರೇಷ್ಮಾ ಸ್ವಲ್ಪ ಭಯದಿಂದಲೇ! ಏಕೆ? ಏನಾಗಬೇಕು ತಾವುಯಾರು?ಏಕೆ ಇಷ್ಟೋಂದು ಪ್ರಶ್ನೆ ಕೇಳುತ್ತಿರುವಿರಿ?ಎಂದು ಗಾಭರಿಯಿಂದ ಕೇಳಿದಳು. ಅದಕ್ಕೆ ಬಂದ ಇಬ್ಬರೂ ಒಬ್ಬರ ಮುಖ ಒಬ್ಬರು ನೋಡಿಕೊಂಡು, ಮೊದಲು ನೀವು ಯಾರು ಎಂಬುದನ್ನು ಹೇಳಿ ಎಂದರು. ನಾನು ಅವರ ಹೆಂಡತಿ ಎಂದು ಏದುಸಿರು ಬಿಡುತ್ತಾ ಹೇಳಿದಳು. ಮದುವೆಯಾಗಿ ಎಷ್ಟು ವರ್ಷ ಆಯ್ತು? ಎಂದು ಕೇಳಲು, ಆಕೆ ಈಗ ಸುಮಾರು ಐದು ತಿಂಗಳು ಆಯ್ತು ಎಂದು ಉತ್ತರಿಸಿದಳು. ಸರಿ ಅವನು ಯಾವ ಸಮಯದಲ್ಲಿ ಮನೆಯಲ್ಲಿ ಇರುತ್ತಾನೆ? ಎಂದು ಕೇಳಿ, ಹಾಗಾದರೆ ನಾವು ಅದೇ ಸಮಯಕ್ಕೆ ಬರುತ್ತೇವೆ ಎಂದು ನಿಲ್ಲಲಾರದೇ ಹೋಗಿಯೇ ಬಿಟ್ಟರು. ರೇಷ್ಮಾಳಿಗೆ ಒಂದೂ ತಳ ಬುಡ ಅರ್ಥವಾಗಲಿಲ್ಲಾ. ಆ ದಿನ ಆಕೆಗೆ ಗಂಡ ಬರುವವರೆಗೆ ಸಮಾಧಾನವೇ ಇರಲಿಲ್ಲಾ. ಸಂಜೆ ಹೊತ್ತು ಇಳಿದ ನಂತರ ಶೇಖರ ಮನೆಗೆ ಬಂದ. ಬರುವ ಹಾದಿಯನ್ನೇ ಕಾಯುತ್ತಿದ್ದ ಆಕೆ ನಡೆದ ಎಲ್ಲಾ ವಿಷಯ ಹೇಳಿದಳು. ಆತನ ಮುಖ ಒಮ್ಮೆಲೆ ಕಪ್ಪಿಟ್ಟಿದಂತಾಯಿತು. ಇದಾವುದೂ ಆಕೆಗೆ ಅರ್ಥವಾಗಲೇ ಇಲ್ಲ. ಏನಾಗಿದೆ ಯಾರು ಅವರು ಬಂದವರು? ಎಂದು ಕೇಳಿದಳು. ಏನೂ ಇಲ್ಲಾ ನನ್ನ ಗೆಳೆಯರಿರಬೇಕು. ಹೆಸರೇನಾದರೂ ಹೇಳಿ ಹೋದರೇ ಎಂದು ಕೇಳಿದ. ಆಕೆ ಇಲ್ಲಾ ಎಂದು ಉತ್ತರಿಸಿ ಮನಸ್ಸಿನಲ್ಲೇ ಕಸಿವಿಸಿಗೊಂಡಳು. ಅವನೂ ಏನೂ ತಿಳಿಯಲಾರದವನಂತೆ ವರ್ತಿಸಿದ್ದನ್ನು ಕಂಡು , ಯಾರೋ ಗೆಳೆಯರೇ ಇರಬಹುದೆಂದು ಸ್ವಲ್ಪ ನೆಮ್ಮದಿಯ ಉಸಿರು ಬಿಟ್ಟಳು. ಇದಾದ ಮರುದಿನದಿಂದ ಶೇಖರ ಒಂದು ವಾರ ಮನೆಗೆ ಬರಲೇ ಇಲ್ಲಾ. ಅಷ್ಟರಲ್ಲಿ ಆ ವ್ಯಕ್ತಿಗಳು ಮೂರುನಾಲ್ಕುಬಾರಿ ಮನೆಗೆ ಬಂದು ಹೋಗಿದ್ದರು.
ಶೇಖರನ ಈ ವರ್ತನೆ ಆಗೊಮ್ಮೆ ಈಗೊಮ್ಮೆ ಕಂಡು ಬರುವುದು ಸಾಮಾನ್ಯವಾಯಿತು. ಅಷ್ಟರಲ್ಲಾಗಲೇ ರೇಷ್ಮಾ ಒಂದು ಹೆಣ್ಣು ಮಗುವಿಗೆ ಜನ್ಮ ನೀಡಿದಳು. ಅವಳಿಗೆ ಅಂಜು ಅಂತ ಹೆಸರಿಟ್ಟಿದ್ದಳು. ಮಗು ಒಂದು ವರ್ಷದಾಗುವುದರೊಳಗೆ ಮತ್ತೆ ಗರ್ಭಣಿಯಾದಳು, ಈ ಬಾರಿ ಆಕೆಗೆ ಮತ್ತೊಂದು ಗಂಡು ಮಗು ಆಯ್ತು ಆ ಮಗುವಿಗೆ ವಲಿ ಎಂದು ನಾಮಕರಣ ಮಾಡಿದಳು. ಈ ವೇಳೆಗಾಗಲೇ ಆಕೆಗೆ ಶೇಖರನ ಎಲ್ಲಾ ಸತ್ಯಗಳು ಬಯಲಿಗೆ ಬಂದಿದ್ದವು. ಅವನು ಯಾವುದೇ ಕೆಲಸ ಮಾಡದೇ ಅಲ್ಲಿ ಇಲ್ಲಿ ಕಳ್ಳತನ, ಸುಲಿಗೆ ಮಾಡುವುದರಲ್ಲಿ ಕಾಲಕಳೆಯುತ್ತಿದ್ದ. ಈಗ ಕೆಲವೇ ದಿನಗಳ ಹಿಂದೆ ಆತನಿಗೆ ಹುಡುಕುತ್ತಾ ಬರುತ್ತಿದ್ದ ಆ ಪೋಲೀಸರು ಅವನನ್ನು ಹಿಡಿದು ಜೈಲಿಗೆ ಹಾಕಿದ್ದರು. ಆಕೆಯ ಜೀವನವೇ ಹರಿದ ಚಿಂದಿಬಟ್ಟೆಯಂತೆ ಆಗಿತ್ತು. ಮತ್ತೆ ಅದೇ ಕಷ್ಟದ ಜೀವನವೇ ಗತಿಯಾಯಿತು.
“ಆಪಾ, ಅರಿಬಿ ಕೊಡತೀರಿ? ಮೊದಲು ಭಾಂಡೆ ತೊಳಿಲಾ? ಕ್ಯಾ ಕರೂಂ? ಅಂತ ಮನೆ ಯಜಮಾನಿಗೆ ಕೇಳಿದಳು. ಅಷ್ಟರಲ್ಲಿ ತುಂಬಾ ದಿನದಿಂದ ಭೇಟಿಯಾಗದ ನಿರ್ಮಲಾ ಹೊರಬಂದು ಏನೇ ರೇಷ್ಮಾ, ಹೇಗಿದ್ದೀ? ಎಲ್ಲಾ ಅರಾಮಲ್ಲಾ? ಯಾಕೆ ರೇಷ್ಮಾ ನನ್ನ ಕಡೆ ಎಲ್ಲಾ ವಿಷಯ ಹೇಳಾಕಿ ಏನೂ ಸುದ್ದೀನೇ ಹಚ್ಚದೇ ಹೋಗಿಬಿಟ್ಯಲ್ಲಾ. ಹೋಗ್ಲಿ ಬಿಡು ಮದುವಿ ಮಾಡ್ಕೊಂಡವನ ಜೊತೆ ಚೊಲೋ ಇದ್ದೀ ಹೌದಲ್ಲೋ ಅಷ್ಟ ಸಾಕು ಅಂತ ಕಾಳಜಿಪೂರ್ವಕ ಕೇಳಿದಳು. ಹಾಂ, ಅರಾಮ ಮಾಡ್ಕೋಬೇಕ್ಲ ಮತ್ತೆ. ನಂದೇನಾರ ಆಗ್ಲಿ ನೀವು ಹೇಂಗಿದೀರಿ ಆಪಾ? ನಿಮ್ಮ ಮುಂದೆ ಎಲ್ಲಾ ಹೇಳಾಕಿ ನನಗೇನು ಬಡಕೊಂಡಿತ್ತೋ ಏನೂ ಹೇಳದೇ ಹೋಗಿಬಿಟ್ಟೆ ಎಂದು ನಿರುತ್ಸಾಹದ ಉತ್ತರ ಕೊಟ್ಲು. ಯಾಕೆ ಹಾಗ್ ಮಾತಾಡತೀ, ನಿನ್ನ ಗಂಡ ಹ್ಯಾಂಗ್ ಇದಾನೆ? ಮರು ಪ್ರಶ್ನ ಕೇಳಿದಳು ನಿರ್ಮಲಾ. ಅವನಿಗ್ ಏನಾಗಿತ್ ಬಿಡ್ರೀ, ಭಾಡ್ಯ ನನಗೆ ಮೋಸ ಮಾಡಿ ಶಾದಿ ಮಾಡ್ಕೊಂಡು, ಸಾಲದಕ್ಕೇ ಎರಡು ಮಕ್ಕಳನ್ನೂ ಕೊಟ್ಟು ಈಗ ಅರಾಮಾಗಿ ಜೈಲದಾಗ ಕೂತು ಮುದ್ದೀನುಂಗ್ಲಿಕ್ಹತ್ತಾನೆ. ನನ್ನ ಮಕ್ಕಳ ಚಿಂತಿ ಅವನಿಗೆ ಇಲ್ಲಾ. ನೋಡಾಕ ನೈಸಾಗಿ ಕಾಣತಿದ್ದ, ನನ್ನ ಮಳ್ಳ ಮಾಡಿ ಮದುವಿ ಆದ, ನಿಯತ್ತಾಗಿ ದುಡುದು ತಿನ್ನೋ ನಮ್ಮಂತವರಿಗೆ ಮೋಸ ಮಾಡಿದ. ಎಲ್ಲಾ ಹೇಳಿ ಗೊಳೋ ಅಂತ ಅತ್ತಳು ರೇಷ್ಮಾ. ಹೋಗ್ಲಿ ಬಿಡು ನೀ ತುಂಬಾ ನಿಯತ್ತಾಗಿ ಕೆಲಸಮಾಡಾಕಿ, ದೇವರು ನಿಮ್ಮಂತವರನ್ನ ಒಂದು ಹಾದಿಗೆ ಹಚ್ಚ ಹಚ್ಚತಾನೆ ಎಂದು ಸಮಾಧಾನ ಮಾಡಿದಳು.
ಹೀಗೆ ತಾನು ತನ್ನ ಕೆಲಸ ಎಂದು ತಿಳಿದು ದಿನಾ ನಾಲ್ಕು ಮನೆ ಕೆಲಸ ಮಾಡಿ ದುಡಿದು ತಾನು ತನ್ನ ಮಕ್ಕಳು ಹಾಗೇ ತನ್ನ ತಾಯಿ, ತಂಗಿಯ ಜವಾಬ್ದಾರಿ ಹೊತ್ತು ಲವಲವಿಕೆಯಿಂದ ರೇಷ್ಮಾ ಎಲ್ಲರೊಂದಿಗೆ ನಗುನಗುತಾ ಮಾತಾಡುತ್ತಾ ಎಲ್ಲರ ಪ್ರೀತಿಗಳಿಸಿದ್ದಾಳೆ. ಇಷ್ಟೆಲ್ಲಾ ಆದರೂ ಹೀಗೆ ಇರುವ ರೇಷ್ಮಾಳ ಮೇಲೆ ದೇವರಿಗೆ ಅದು ಯಾವ ಸಿಟ್ಟೋ ತಿಳಿಯಲಿಲ್ಲಾ ಮೇಲಿಂದ ಮೇಲೆ ಪರೀಕ್ಷೆಗಳನ್ನು ಮಾಡತಾನೇ ಇದ್ದ. ಆದರೆ ಆಕೆಗೆ ದೇವರ ಮೇಲೆ ಅಪಾರ ನಂಬಿಕೆ. ಏನೇ ರೇಷ್ಮಾ ನಿನ್ನ ಜೀವನ ಹಿಂಗಾತಲ್ಲಾ ಎಂದು ಯಾರಾದರೂ ಕೇಳಿದರೆ, ಏನೂ ಆಗಾಂಗಿಲ್ಲಾ ಆಪಾ ,ಅಲ್ಲಾ ಇದಾನೆ ಎಂದು ಧೈರ್ಯದಿಂದ ಹೇಳುತ್ತಿದ್ದಳು. ತನ್ನ ನೂರು ಕಷ್ಟಗಳನ್ನು ಕ್ಷಣಮಾತ್ರದಲ್ಲಿ ಮರೆತು ಮತ್ತೆ ಮೊದಲಿನಂತೆ ಇದ್ದು ಬಿಡುತ್ತಿದ್ದಳು. ತನ್ನ ಎರಡು ಮಕ್ಕಳನ್ನು ತುಂಬಾ ಶಿಸ್ತಿನಿಂದ ಬೆಳೆಸಿದ್ದಳು. ಹಲವಾರು ಬಾರಿ ಮನೆ ಕೆಲಸಕ್ಕೆ ಬರುವಾಗ ಆಕೆಯ ಜೊತೆ ಮಕ್ಕಳು ಬರುತ್ತಿದ್ದುದುಂಟು. ಮನೆ ಯಜಮಾನರು ಏನಾದರೂ ತಿಂಡಿ, ಊಟ ತಿನ್ನಲು ಕರೆದರೆ ಅಮ್ಮಳ ಒಪ್ಪಿಗೆಗಾಗಿ ಕಣ್ಣಲ್ಲೇ ನೋಡುತ್ತಿದ್ದರು. ಹಸಿವೆಯಾಗಿದ್ದರೂ ಯಾವುದಕ್ಕೂ ಹಪಹಪಿಸುತ್ತಿರಲಿಲ್ಲ. ತಾಯಿ ಹೇಳಿದಾಗಲೇ ಶಿಸ್ತಿನಿಂದ ತಿಂದು ಎದ್ದು ಹೋಗುತ್ತಿದ್ದರು. ಬೇರೆಯವರ ಯಾವ ವಸ್ತುಗಳಿಗೂ ಕೈ ಹಚ್ಚುತ್ತಿರಲಿಲ್ಲ. ಆಕೆಯಾದರೂ ಏನೇ ತಿನ್ನಲು ಕೊಟ್ಟರೂ ತಾನೊಬ್ಬಳೇ ತಿನ್ನದೆ ಮನೆಗೆ ಒಯ್ದು ತನ್ನ ತಮ್ಮ,ತಂಗಿ,ಅಮ್ಮಳೊಂದಿಗೆ ತಿನ್ನುತ್ತಿದ್ದಳು. ಈಚೆಗಂತೂ ಆಕೆಯ ಗಂಡ ಜೈಲನ್ನೇ ತನ್ನ ಮನೆಯಾಗಿಸಿಕೊಂಡು ಅಲ್ಲೇ ಖಾಯಂನೆಲೆಯೂರಿದ್ದ. ಯಾವ ಕಷ್ಟ ಕಾರ್ಪಣ್ಯಕ್ಕೂ ಆತನಿಂದ ಯಾವ ಅಪೇಕ್ಷೆಯೇ ಇಲ್ಲದಂತೆ ಇದ್ದು ಬಿಟ್ಟಿದ್ದ.
ಕೆಲವು ದಿನಗಳಿಂದ ರೇಷ್ಮಾ ಯಾಕೋ ತುಂಬಾ ಉದಾಸೀನಳಾದಂತೆ ಕಾಣತಾ ಇದ್ದಳು ಇದನ್ನು ಗಮನಿ���ಿದ ನಿರ್ಮಲಾ, ಯಾಕೆ ರೇಷ್ಮಾ ಏನೋ ಒಂಥರಾ ಇದ್ದೀಯಲ್ಲಾ? ಅಂತ ಕೇಳಿದರು. ಏನಿಲ್ಲಾ ಬಿಡ್ರೀ ಆಪಾ, ಯಾಕೊ ನನ್ನ ಮಗನಿಗೆ ಮೈಯಾಗ ಅರಾಮ ಇಲ್ಲಾ ನಾಲ್ಕು ದಿನಾ ಆತು. ಏನಂತಾ ತಿಳಿತಿಲ್ಲಾ. ಬಿಟ್ಟು ಬಿಟ್ಟು ಜ್ವರ ಬರ್ಲಿಕ್ಹತ್ಯಾದ. ನಾನು ಗುಳಿಗಿ ಔಷಧ ಎಲ್ಲಾ ತಂದೀನಿ. ಅಲ್ಲಾ ಅದಾನ ಬಿಡ್ರಿ, ನೋಡೋಣ. ಹೀಗೆ ನೊಂದುಕೊಂಡರೂ ತಾನೇ ಸಮಾಧಾನದ ಮಾತು ಮಾತಾಡತಾಳೆ. ಆಕೆಗೆ ವಿಚಿತ್ರ ಅನ್ನೋಥರ ನಂಬಿಕೆ, ವಿಶ್ವಾಸ. ಐದಾರು ದಿನ ಕಳೆದ ಮೇಲೆ ಗಡಿಬಿಡಿಯಿಂದ ಬಂದು ಅವಸರ ಅವಸರದಲ್ಲೇ ಕೆಲಸಮುಗಿಸಿ ಹೊರಟು ನಿಂತಳು. ಯಾಕೆ ಏನಾತು ಅಂದ್ರೆ, ಏನಿಲ್ಲಾ ನಿಮಗ್ಯಾಕೆ ಸುಮ್ನೆ ಕಿರಿಕಿರಿ ಅಂತ ಹೊರಟು ನಿಂತಳು. ಏನಾಗಲ್ಲಾ ಹೇಳೇ, ಅಂತ ಕೇಳಿದಾಗ ಅವ್ವಾರೇ ಇವತ್ತು ನನ್ನ ಮಗನ ಮುಖ, ಕಾಲು ಎಲ್ಲಾ ಬಾವುಬಂದೈತಿ, ಡಾಕ್ಟರ್ ಕೊಟ್ಟಿದ್ ಗುಳಿಗಿ ಔಷಧ ಏನೂ ಕೆಲಸಾನೇ ಮಾಡವಲ್ದು, ಅದಕ್ಕ ದೊಡ್ಡ ಡಾಕ್ಟರ್ ಕಡೆ ಕರಕೊಂಡು ಹೋಗಿಬರತೀನಿ ಅಂದಳು. ಏನಾರ ರೊಕ್ಕ ಬೇಕಾದರೆ ಹೇಳು ಕೊಡತೀನಿ ಏನೂ ಭಿಡೇವು ಮಾಡಕೋ ಬ್ಯಾಡ. ಮುಂದ ಆದಾಗ ಕೊಡುವಿಯಂತೆ, ಅಂದಳು ನಿರ್ಮಲಾ. ಬೇಡಕ್ಕ ಹಂಗೇನಾರಾ ಬೇಕನಿಸಿದರೆ ನಾನೇ ಹೇಳತೀನಿ. ನಾನಿನ್ನ ಹೋಗಿಬರತೇನಿ ಎಂದು ಹೇಳಿ ಹೋದಳು ರೇಷ್ಮಾ. ಮತ್ತೆ ಹೊಸ ತಪಾಸಣೆಗಳು ಪ್ರಾರಂಭವಾದವು. ಬ್ಲೆಡ್ ಟೆಸ್ಟ, ಯುರಿನ್ ಟೆಸ್ಟ, ಸ್ಕ್ಯಾನಿಂಗ್ ಹೀಗೆ ಒಂದರ ನಂತರ ಒಂದು ಶುರುವಾಯ್ತು. ಆದರೇ, ಅದಕ್ಕೆಲ್ಲಾ ಬೇಕಾದ ಖರ್ಚು ತುಂಬಾ ಇತ್ತು. ಅಲ್ಲಾ ಇದ್ದಾನೆ ಏನೂ ಆಗಲ್ಲಾ ಎಂದು ಧೈರ್ಯದಿಂದ ತಾನೇ ಹೋದಳು. ಆದರೆ ಎಂಟು ದಿನಗಳು ಕಳೆದರೂ ರೇಷ್ಮಾಳ ಪತ್ತೇನೇ ಇಲ್ಲಾ. ಯಾಕೋ ಆಕೆಯ ಪರಿಸ್ಥತಿ ತಿಳಿದಿದ್ದ ನಿರ್ಮಲಳಿಗೆ ತುಂಬಾ ಕಸಿವಿಸಿಯಾಗಿ, ಏನಾಗಿರ ಬಹುದು? ಮಗು ಹೇಗಿದೆಯೋ ಏನೋ? ರೇಷ್ಮಾ ಏನು ಹೇಳಲಿಲ್ಲವಲ್ಲಾ! ಆಕೆ ಬಳಿ ಹಣ ಇರಲಿಲ್ಲ! ಏನು ಮಾಡಿಕೊಂಡಳೋ ಏನು ಕಥೆಯೋ ಈ ಹುಡುಗಿ ಏನು ಹೇಳುವುದೂ ಇಲ್ಲಾ! ಎಲ್ಲಾದಕ್ಕೂ ಅಲ್ಲಾ ಅಲ್ಲಾ ಅಂತಾಳೆ! ಅವಶ್ಯಕತೆ ಇದ್ದಾಗ ಇದ್ದವರ ಬಳಿ ಹಣ ಕೇಳಿದರೆ ಏನು ತಪ್ಪು? ಮತ್ತೆ ಮರಳಿ ಕೊಡಬಹುದಲ್ಲಾ. ಎಂದು ತನ್ನಷ್ಟಕ್ಕೆ ತಾನೆ ಗೊಣಗಿದಳು. ಇದ್ದಕ್ಕಿದ್ದಂತೆ ಆಕೆಗೆ ಅವರ ತಾಯಿ ಒಮ್ಮೆ ಕೊಟ್ಟ ಅವರ ಫೋನ್ ನಂಬರ್ ನೆನಪಾಯಿತು. ನೋಡಿಯೇ ಬಿಡೋಣ ಎಂದು ಪ್ರಯತ್ನಿಸಿದಳು. ಒಂದು ಪುಟ್ಟ ಹುಡುಗಿಯ ಧ್ವನಿ ಬಂತು. ಯಾರು? ಎಂದು ಪ್ರಶ್ನಿಸಿದರೆ ಆ ಹುಡುಗಿ ರೇಷ್ಮಾಳ ಹಿರಿಯ ಮಗಳು ಅಂಜು ಎಂದು ಹೇಳಿದಳು. ಅಂಜು ನಿಮ್ಮ ಅಮ್ಮ ಎಲ್ಲಿದ್ದಾಳೆ? ಎಂದು ಕೇಳಿದರೆ, ಅಮ್ಮ ವಲಿನ ಕರಕೊಂಡು ಶಿವಮೊಗ್ಗಾದ ಮೆಗನ್ ಆಸ್ಪತ್ರೆಗೆ ಹೋಗಿದ್ದಾಳೆ ಎಂದಳು ಆ 7 ವರ್ಷದ ಹುಡುಗಿ. ಯಾಕೆ ವಲಿ ಈಗ ಹೇಗಿದ್ದಾನೆ? ಎಂದು ಕೇಳಿದಳು ನಿರ್ಮಲಾ. ಆಪಾ ಅದು ವಲಿಗೇ ಬಾಳ ತ್ರಾಸ್ ಆಗೇತಿ ಅದಕ್ಕೇ ಅಕಿ ಅಲ್ಲೇ ಅದಾಳ. ನಮ್ಮ ಸಣ್ಣ ಆಪಾ, ಹಸಿನಾ ಈಗ ನಿಮ್ಮ ಮನಿ ಕೆಲಸಕ್ಕೆ ಬರುತಾಳೆ. ಅಂತ ಹೇಳಿ ಫೋನ್ ಇಟ್ಟಳು. ಸರಿ ಈಗ ಹಸೀನಾ ಬರುವ ದಾರಿಯನ್ನೇ ಕಾಯುತ್ತಾ ಕುಳಿತಳು ನಿರ್ಮಲಾ. ಸ್ವಲ್ಪ ಸಮಯದಲ್ಲೇ ಆಕೆ ಬಂದಳು. ಈಗ ಮೊದಲು ವಲಿಯ ವಿಚಾರ ಎಲ್ಲಾ ಕೇಳಿ ತಿಳಿಯಲು ಹೊರಬಂದು, ವಲಿ ಹೇಗಿದ್ದಾನೆ? ಡಾಕ್ಟರ್ ಏನಂದ್ರು? ಯಾವಾಗ ಡಿಸ್ಚಾರ್ಜ ಮಾಡತಾರಂತೆ ಎಂದು ಎಡಬಿಡದೇ ಪ್ರಶ್ನೆ ಕೇಳಲು ಶರುಮಾಡಿದಳು ನಿರ್ಮಲಾ. ಹಸೀನಾ ಉದಾಸೀನಳಾಗಿಯೇ ಉತ್ತರಿಸಿದಳು,” ಆಪಾ ಏನಂತಾ ಹೇಳೋದ್ರೀ, ವಲಿ ಉಳಿಯೋದೇ ಕಷ್ಟ ಅಂತ ಡಾಕ್ಟರ್ ಹೇಳಿದ್ದಾರೆ. ಅವನಿಗೆ ಕಿಡ್ನಿಯಲ್ಲಿ ಏನೋ ಸಮಸ್ಯೆ ಆಗ್ಯಾದಂತೆ. ಮೂತ್ರದಲ್ಲಿ ರಕ್ತ ಹೊಂಟೈತಂತೆ,ಇರೋ ಅಷ್ಟು ದಿನಾ ಅರಾಮಾಗಿ ಮನ್ಯಾಗೆ ಇರಲಿ ಕರಕೊಂಡು ಹೋಗ್ರಿ ಅಂತ ಡಾಕ್ಡರ್ ಹೇಳ್ಯಾರ. ಆದ್ರ ಈ ನಮ್ಮ ರೇಷ್ಮಾ ಅದಾಳಲ್ಲಾ ಆಕಿ ಮಾತ್ರ ನಾ ಮನಿಗೆ ಕರಕೊಂಡು ಹೋಗಾಂಗಿಲ್ಲಾ, ಆ ಅಲ್ಲಾ ನಮ್ಮ ಕೈ ಬಿಡಾಂಗಿಲ್ಲಾ ಏನಾರಾ ಆಗ್ಲಿ ಡಾಕ್ಟರೇ ನೀವು ನಮ್ಮ ಮಗನ್ನ ಉಳಿಸಿ ಕೊಡಬೇಕು, ನನ್ನ ಮನಸು ಹೇಳತೈತ್ರೀ ನನ್ನ ಮಗನಿಗೆ ಏನೂ ಆಗಂಗಿಲ್ಲಾ. ನನಗೆ ಪೂರಾ ಭರವಸಾ ಐತ್ರೀ, ಮತ್ತ ಎಲ್ಲಾರ ಬ್ಯಾರೆ ಕಡೆ ಕರಕೊಂಡು ಹೋಗೋದಿತ್ತಂದ್ರ ಹೇಳ್ರೀ, ನಾ ಕರಕೊಂಡು ಹೋಗತೀನಿ ಅಂತ ಒಂದೇ ಸಮನೆ ಗೊಳೋ ಅಂತ ಬರೇ ಅಳತಾಳ ಎಂದು ಹೇಳಿದಳು. ಈಗ ನಿರ್ಮಲಾಳಿಗೆ ತುಂಬಾ ಕಸಿವಿಸಿ ಪ್ರಾರಂಭವಾಯಿತು. “ರೊಕ್ಕಕ್ಕೆ ಏನ ಮಾಡ್ತಾ ಇದ್ದಾಳೆ ಆ ಮಾರಾಯ್ತಿ, ಏನಾರಾ ಕೇಳೊಣ ಅಂದ್ರೆ ಆಕಿ ಕಡೆ ಫೋನ್ ಒಂದ್ ಇಲ್ಲ. ನನಗೆ ಮನಸ್ಸಿಗೆ ಸಮಾಧಾನ ಆಗವಲ್ದು”. ಎಂದಳು. ಹೋಗ್ಲಿ ಅಂಜು ಎಲ್ಲಿದ್ದಾಳೆ? ಪಾಪ ಆಕಿನೂ ಸಣ್ಣಾಕಿ, ಅಮ್ಮ ಇಲ್ಲಾ ಅಂದ್ರೆ ಕಾಳಜಿ ಆಗೂದಿಲ್ಲಾ, ಅಕಿಗೂ ಇಲ್ಲೇ ಕರಕೊಂಡು ಬಂದಿದ್ದರೆ ಏನಾರಾ ಉಂಡು ತಿಂದು ಹೋಗಬಹುದಿತ್ತು ಎಂದಳು ನಿರ್ಮಲಾ.
ರೇಷ್ಮಾಳ ನಂಬಿಕೆ ಹೇಗಿತ್ತೆಂದರೆ, ಆಸ್ಪತ್ರೆಯಲ್ಲಿ ಮಗ ವಲಿ ಒಂದು ಕಡೆ ನಿತ್ರಾಣವಾಗಿ ಮಲಗಿದ್ದರೆ, ತಾನು ಹಣಕ್ಕಾಗಿ ಮತ್ತೇನು ದಾರಿ ಕಂಡುಕೊಳ್ಳುವುದೆಂದು ಚಿಂತಿಸುತ್ತಿದ್ದಳು. ತಿರುಗಾ ಮುರುಗಿ ಡಾಕ್ಟರ್ ಬಳಿ ಹೋಗಿ, ನೀವು ಏನೂ ತಿಳ್ಕೋಬ್ಯಾಡ್ರಿ ಡಾಕ್ಟರ್ ನನಗೆ ಗೊತ್ತದ ನಿಂಮ್ಮಥವರ ಬಯಾಗೇ ಕೇಳಿನಿ. ಪೂರಾ ವಿಶ್ವಾಸ ಇದ್ರ ಎಲ್ಲಾ ಸರಿನೇ ಆಗತ್ತಾಂತ. ನನಗ ಮಾತ್ರ ಭರವಸೆ ಇದೆ ನೋಡ್ರೀ ನನ್ನ ಮಗನಿಗೆ ಏನೂ ಆಗಂಗಿಲ್ಲಾ, ನೀವು ರೊಕ್ಕದ ಚಿಂತಿ ಮಾಡಬ್ಯಾಡ್ರಿ ನಾ ಏನಾರ ವ್ಯವಸ್ಥೆ ಮಾಡೇ ಮಾಡತೀನಿ ಅಂತ ಧೈರ್ಯದಿಂದ ಹೇಳುತ್ತಿದ್ದಳು. ಅವಳ ಆ ಧೈರ್ಯ, ನಂಬಿಕೆ, ವಿಶ್ವಾಸ ನೋಡಿದ ಡಾಕ್ಟರ್ ಆಶ್ಚರ್ಯದಿಂದ ಆಕೆಯ ಕಡೆ ನೋಡಿದ. ನನ್ನ ಎಲ್ಲಾ ಪ್ರಯತ್ನ ಮೀರಿ ನಿನ್ನ ಮಗನನ್ನು ಉಳಿಸುವ ಪ್ರಯತ್ನ ಮಾಡುವುದಾಗಿ ಹೇಳಿ, ಆಕೆಗೆ ಒಂದು ಪ್ರಶ್ನೆ ಕೇಳಿದ. ಈಗ ಕೊಡೊ ಗುಳಿಗೆಗಳು ತುಂಬಾ ದುಬಾರಿಯಾದವು, ಸರ್ಕಾರಿ ಆಸ್ಪತ್ರೆಯಾದರೂ ಸ್ವಲ್ಪ ಹಣಮಾತ್ರ ಬೇಕು, ಈಗಾಗಲೇ ನಿನಗೆ ಹಣದ ಸಮಸ್ಯೆಯಾಗಿ ತುಂಬಾ ಸಂಕಷ್ಟದಲ್ಲಿದ್ದಿ, ಇನ್ನು ಮುಂದೆ ಹೇಗೆ ಮಾಡುತೀ ಎಂದು ಕೇಳಿದರು. ಇಲ್ರೀ ನಾನು ನಾಳೆಯಿಂದ ಇಲ್ಲೇ ನಿಮ್ಮ ದವಾಖಾನಿ ಬಾಜು ಒಂದು ಹೋಟೆಲ್ ಅದೆಯಲ್ಲಾ ಅಲ್ಲಿ ಮಾತಾಡಿ ಬಂದೀನ್ರಿ. ಅಲ್ಲಿ ಭಾಂಡೆ ತೊಳೆಯೋದು, ದೋಸಾದ ಹಿಟ್ಟು ರುಬ್ಬಿ ಕೊಡೋದು, ಟೇಬಲ್ ವರೊಸೋದು ಮಾಡಿದರೆ, ನನಗೆ ದಿನಾ ಊಟ ಫ್ರೀ ಕೊಡತಾರಂತ್ರಿ, ಹಂಗಾ ದಿನಕ್ಕೆ ಇಷ್ಟು ಅಂತ ರೊಕ್ಕಾನೂ ಕೊಡತಾರಂತ್ರೀ. ನಾನೂ ಇಲ್ಲೇ ಬಾಜು ಇದ್ದಂಗ ಆಗತೈತ್ರಿ ಕೆಲಸಾನೂ ಆತು ರೊಕ್ಕಾನೂ ಆತು.ನನ್ನ ಮಗನ ದೇಖರೇಖಿನೂ ಆಗತೈತ್ರಿ ಅಂದ್ಲು. ಏನೂ ಓದದ, ಬರೆಯದ, ವ್ಯವಹಾರ ಜ್ಞಾನ ಇಲ್ಲದ ರೇಷ್ಮಾಳ ನಿಷ್ಟೆ ಕಂಡು ಡಾಕ್ಟರ್ ಮೆಚ್ಚಿಗೆ ವ್ಯಕ್ತಪಡಿಸಿ ಮನಸಾರೆ ಆಕೆಯ ಮಗ ಆಕೆಯ ಕೈ ತಪ್ಪಬಾರದೆಂದು ಹಾರೈಸಿದ.
ಈ ಕಡೆ ನಿರ್ಮಲಾ, ಯಾರಾದರೂ ಈ ದಿನ ಆಸ್ಪತ್ರೆಗೆ ಹೋಗುವುದಿದ್ದರೆ ಕೊಟ್ಟು ಕಳಿಸಲು ಎಂದು ಅಣ್ಣ, ಅತ್ತಿಗೆ,ಅಮ್ಮ ಎಲ್ಲರ ಕಡೆ ಹಣ ಸಂಗ್ರಹಿಸಿ ಸುಮಾರು ಆರು ಏಳು ಸಾವಿರ ರೂಪಾಯಿಯನ್ನು ಕವರಿನಲ್ಲಿ ಹಾಕಿ ಇಟ್ಟಳು. ಇದ್ದಕ್ಕಿದ್ದಂತೆ ರೇಷ್ಮಾಳ ಫೋನ್ ಬಂತು. ಆಪಾ ಹೇಗಿದ್ದೀರಿ? ಅಂತ ಕೇಳಿದಳು. ನಿರ್ಮಲಾ ಅವಳ ಫೋನ್ ಬಂದೊಡನೆ ಹಣದ ಅಶ್ಯಕತೆ ಏನಾದರೂ ಇರಬಹುದೆಂದು ತಿಳಿದು, ರೇಷ್ಮಾ ರೊಕ್ಕ ಏನಾದರೂ ಕಳಿಸಲಾ ಅಂತ ಕೇಳಿದಳು. ಬ್ಯಾಡ್ರೀ ಆಪಾ ನಿಮಗೆ ಭಾಳ ದಿನದಿಂದ ಮಾತಾಡಿರ್ಲಿಲ್ಲ ಅದಕ್ಕೇ ಮಾಡ್ದೆ ಅಂದ್ಲು. ಎಷ್ಟು ಸ್ವಾಭಿಮಾನ ಈ ಹುಡುಗಿಗೆ ಎಂದು ನಿರ್ಮಲಾ ಮುಚ್ಚೇ ಬಾಯಿ ಎಲ್ಲಾ ಛಲೋ ಇದ್ದಾಗ ಅಷ್ಟೇ ಏನು, ನಿಜವಾಗ್ಲೂ ಕಷ್ಟ ಬಂದಾಗ ಒಬ್ಬರಿಗೊಬ್ಬರು ಸಹಾಯಕ್ಕೆ ಬರಬೇಕು, ನಾನು ಮೊದಲೇ ನಿನಗೆ ಕೊಡಲು ಅಂತ ರೊಕ್ಕ ತೆಗೆದಿಟ್ಟೀನಿ, ಆದ್ರೇ ಯಾರ ಕಡೆ ಕೊಡಬೇಕು ಅಂತ ತಿಳಿತಾ ಇಲ್ಲಾ. ಸರಿ ನೀನು ತಲೆ ಕೆಡಿಸ್ಕೋಬೇಡ ನಾ ಏನಾರ ವ್ಯವಸ್ಥೆ ಮಾಡತೀನಿ, ನೀನು ತುಂಬಾ ಧೈರ್ಯ ಇದ್ದಾಕಿ ಅಂತ ನನಗೆ ಗೊತ್ತು. ನಿನ್ನ ಮಗನಿಗೇ ಏನೂ ಆಗೋದಿಲ್ಲಾ ನಿನ್ನ ಅಲ್ಲಾ ಇದ್ದಾನಲ್ಲಾ ಅವನಿಗೆ ನೀನು ತುಂಬಾ ಹಟಮಾರಿ ಅಂತ ಗೊತ್ತು. ಅದಕ್ಕ ಅನಿಗೇ ಲಗೂನಾ ಅರಾಮ ಮಾಡತಾನೆ ಅಂತ ಸ್ವಲ್ಪ ಮುಗುಳು ನಗೆ ತರಿಸಿ ಫೋನ್ ಇಟ್ಟಳು.
ಜೀವನದಲ್ಲಿ ಬರುವ ಕಷ್ಟಗಳನ್ನು ಎದುರಿಸೋದು ಅಂದ್ರೆ ಹೀಗೇ, ಕೇವಲ ಬಾಯಿಮಾತಿನಲ್ಲಿ ಹೇಳಿ ಎದುರಿಸದೇ ಸೋಲೊಪ್ಪಿಕೊಂಡರೆ ಏನೂ ಸಾಧನೆ ಮಾಡಿದಂತಾಗುವುದಿಲ್ಲಾ. ಆಶಾಭಾವನೆ ನಮ್ಮಲ್ಲಿ ಚೈತನ್ಯ ತುಂಬುತ್ತದೆ. ನಿರುತ್ಸಾಹಿ ಜೀವಕೋಶಗಳನ್ನು ಅವು ನಾಶ ಮಾಡುತ್ತವೆ, ಹಾಗೇ ಉತ್ಸಾಹಿ ಜೀವಕೋಶಗಳನ್ನು ಮತ್ತೆಮತ್ತೆ ಹುಟ್ಟಿಸುತ್ತವೆ. ಅದಕ್ಕೆ ಜೀವಂತ ಸಾಕ್ಷಿ ಈ ರೇಷ್ಮಾಳ ನಿಜ ಕಥೆ. ಹೌದು ನನ್ನ ತವರೂರಾದ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕು ಇಲ್ಲಿ ಈ ರೇಷ್ಮಾ ನನ್ನ ಅಮ್ಮನ ಮನೆಯಲ್ಲಿ ಕೆಲಸ ಮಾಡುವ ಹುಡುಗಿ ಮಾತ್ರವಲ್ಲ ನಮ್ಮ ಮನೆಯ ಒಬ್ಬಳಂತೆ ಆಕೆ ಆತ್ಮೀಯವಾಗಿ ನಮ್ಮೊಂದಿಗೆ ಇದ್ದಾಳೆ. ನಿರ್ಮಲಾ ನನ್ನ ಅಕ್ಕ, ನಿಜವಾಗಿಯೂ ನಿರ್ಮಲ ಮನಸ್ಸಿನವಳು.
ಆಸ್ಪತ್ರೆಗೆ ಹಣ ಮುಟ್ಟಿದಾಗ, ರೇಷ್ಮಾ ಮತ್ತೊಮ್ಮೆ ಪೋನ್ ಮಾಡಿದಳು. “ಆಪಾ ಯಾಕ್ರೀ, ಈ ಬಡವಿ ಮ್ಯಾಲೆ ಇಷ್ಟೋಂದು ಪ್ರೀತಿ ನಿಮಗೆ, ನೀವು ಕೊಟ್ಟ ಹಣ ಸರಿಯಾದ ಸಮಯಕ್ಕೆ ತುಂಬಾ ಉಪಯೋಗ ಆಗ್ಯಾತ್ರೀ, ನನ್ನ ಮಗನಿಗೆ ಮೂತ್ರದಾಗೆ ರಕ್ತ ಹೋಗೋದು ಕಡಿಮೆ ಆಗ್ಯಾತಂತ್ರಿ” ಅಂದ ಕೂಡಲೇ ನಿರ್ಮಲಾಳಿಗೆ ತುಂಬಾ ಆಶ್ಚರ್ಯ ಆಗಿ ಏನೂ ಮಾತೇ ಹೊರಗ ಬರ್ಲಿಲ್ಲ. ಕೇವಲ ಕಣ್ಣಲ್ಲಿ ಧಾರಾಕಾರ ಕಂಬನಿ ಹರಿಯಲು ಶುರುಮಾಡಿತು. ನನಗೆ ಗೊತ್ರಿ ಆಪಾ ನಿಮಗೆ ಏನಾಗಕ್ಹತ್ಯೇತೀ ಅಂತಾ, ನೀವು ಏನೂ ಮಾತಾಡೋದು ಬ್ಯಾಡ. ನಾನೇ ಸಂಜಿ ಮುಂದ ಮತ್ತೆ ಫೋನ್ ಮಾಡತೀನಿ, ಈಗ ನಾ ಇಡತೀನಿ ಅಂತ ಹೇಳಿ ಫೋನ್ ಇಟ್ಟಳು. ತಿರುಗಿ ಎರಡು ದಿನಗಳು ಕಳೆದವು ಈಗ ಎಲ್ಲರಿಗೂ ಸ್ವಲ್ಪ ಸಮ���ಧಾನ ಹಾಗೇ ಇದೊಂದು ಪವಾಡವೇ ಸರಿ ಎನ್ನುವ ತರ್ಕ, ಇದು ಹೇಗೆ ಸಾಧ್ಯ ಎಂಬ ಆಶ್ಚರ್ಯ.ಆದರೂ ಇದು ಸತ್ಯ. ಇಲ್ಲಿ ನನಗನ್ನಿಸಿದ್ದು ಯಾವುದೋ ಒಂದೇ ಶಕ್ತಿಯ ಕೈವಾಡ ಇಲ್ಲ. ರೇಷ್ಮಾಳ ಮೇಲೆ ದೈವ ಶಕ್ತಿ, ಮನುಜ ಸಹಜ ಇರಬೇಕಾದ ಮಾನವೀಯ ಶಕ್ತಿ, ಬಲವಾದ ನಂಬಿಕೆ ಎಂಬ ಶಕ್ತಿ ಮೈಗೂಡಿಕೊಂಡು ಕೆಲಸ ಮಾಡಿದೆ. ಆಕೆಯ ಪ್ರಾಮಾಣಿಕತೆ, ಮಗನನ್ನು ಉಳಿಸಿಕೊಳ್ಳುವ ಛಲ ಯಮನನ್ನೇ ಸೋಲುವಂತೆ ಮಾಡಿತೇ?
ಕಳೆದ ಎರಡು ದಿನಗಳಲ್ಲಿ ಬಂದ ಸುದ್ದಿ, ವಲಿಗೆ ಈಗ ಜೀವಕ್ಕೇನೂ ಅಪಾಯವಿಲ್ಲ. ತಾಯಿ ಕರುಳು ವಲಿಯನ್ನು ಮತ್ತೆ ಜನ್ಮ ಕೊಟ್ಟಿತು. ಈಗ ವಲಿಯ ಮೈ ತುಂಬಾ ಇದ್ದ ಬಾವು ಕಡಿಮೆಯಾಗಿ ಅರಾಮಾಗಿದ್ದಾನೆ. ಕಿಡ್ನಿಗೂ ಯಾವ ತೊಂದರೆಯೂ ಇಲ್ಲ ಎಂದು ಡಾಕ್ಟರ್ ಹೇಳಿದ್ದಾರೆ. ರೇಷ್ಮಾ ಮತ್ತೆ ಫೊನ್ ಮಾಡಿ ನಿರ್ಮಲಾಳಿಗೆ ಹೇಳಿದು ಏನು ಗೋತ್ತಾ, “ಆಪಾ, ಇವತ್ತು ಡಾಕ್ಟರ್ ನನ್ನ ಕಡೆ ಬಂದು ಏನ್ ಹೇಳಾರ ಗೊತ್ತೇನ್ರಿ, ಸುಮ್ಮನೆ ನಿಂತು ನನ್ನ ಮಾರಿ ನೋಡಿ ನಗಲಿಕ್ಹತ್ತಾರ್ರೀ, ಅವರೇನೋ ನನ್ನಿಂದ ಕಲಿಯೋದು ಭಾಳ ಅದ ಅಂತ ಅನ್ನಾಕ ಶುರುಮಾಡ್ಯಾರ್ರೀ, ನನಗ ಸಹಿತ ನೀನು ಧೈರ್ಯ ತುಂಬಿದ್ಯಲ್ಲಾ ತಾಯಿ ಅಂತ ಅನ್ನಕ ಶುರು ಮಾಡ್ಯಾರ್ರೀ, ನಂದೇನೈತ್ರೀ ಎಲ್ಲಾ ಆ ಅಲ್ಲಾಂದೇ ಹೌದಲ್ಲರ್ರೀ”. ಎಂದಳು. ಇರ್ಲಿ ಬಾರೇ ಮಾರಾಯ್ತಿ ಮೊದಲು ಅವನ್ನ ಯಾವಾಗ ಡಿಸ್ಚಾರ್ಜ ಮಾಡತಾರಂತ ಹೇಳು, ಡಿಸ್ಚಾರ್ಜ ಆದ ಕೂಡ್ಲೆ ನಮ್ಮ ಮನಿಗೇ ಕರಕೊಂಡು ಬಾ, ಅವನಿಗೆ ದೃಷ್ಟಿ ಗಿಷ್ಟಿ ತಗಸೋಣಂತೆ ಎಂದಳು ನಿರ್ಮಲಾ.
ಕಳೆದ ತಿಂಗಳು ನಾನು ಮನೆಗೆ ಹೋದಾಗ, ರೇಷ್ಮಾ ವಲಿನ ನಮ್ಮ ಮನೆಗೆ ಕರಕೊಂಡು ಬಂದಿದ್ದಳು. ಈಗ ಆರೋಗ್ಯದಿಂದ ಇದಾನೆ. ಜೊತೆಗೆ ಶಾಲೆಗೆ ಬೇರೆ ಹೋಗ್ತಿದ್ದಾನೆ. ಅಂಜು ಅವನ ಅಕ್ಕ ಅವನಿಗೆ ತುಂಬಾ ಕಾಳಜಿಯಿಂದ ನೋಡಿಕೊಳ್ಳುತ್ತಿದ್ದಾಳೆ. ಈ ಎಲ್ಲಾ ಘಟನೆಗಳ ಸುಳಿವು ಸಹಿತ ಆ ಗಂಡ ಎನಿಸಿಕೊಂಡವನಿಗೆ ತಿಳಿದೇ ಇಲ್ಲ ! ಆಕೆ ಆತನ ಉಸಾಬರಿಗೂ ಹೋಗಿಲ್ಲಾ. ಎಲ್ಲಾ ಮನಸ್ಸಿನ ಗಾಯಗಳನ್ನು ಮುಚ್ಚಿಕೊಳ್ಳುವ ಹೆಣ್ಣು ಈ ರೇಷ್ಮಾ. ಆದರೂ ಮೊದಲಿಗಿಂತ ಹೆಚ್ಚು ಲವಲವಿಕೆ, ಹುರುಪಿನಿಂದ ಕೆಲಸ ಮಾಡುತ್ತಾ ಆರಾಮವಾಗಿ ಸಂಸಾರ ನಡೆಸುವ ಧೀರೆ ಈಕೆ. ಈ ಸಾಧನೆಯೂ ಹೆಣ್ಣು ಕುಲಕ್ಕೆ ಅವಶ್ಯವೇ ಆಗಿದೆ.
– – ಉಮಾ ಭಾತಖಂಡೆ.