‘ತಾಳ್ಮೆಯೇ ಬದುಕಿನ ಸೂತ್ರ’

‘ತಾಳ್ಮೆಯೇ ಬದುಕಿನ ಸೂತ್ರ’

‘ದೇವರ ಸ್ಮರಣೆ ಯಾವ ಒತ್ತಡವನ್ನಾದರೂ ತಾನಾಗಿಯೇ ಕಡಿಮೆ ಮಾಡುತ್ತದೆ. ಅದನ್ನು ಮೀರಿಯೂ ಕೆಡುಕೇನಾದರೂ ಆದಾಗ, ಜಾಗರೂಕನಾಗಿರಲು, ನನ್ನ ಅಂತರಂಗದ ವಿಮರ್ಶೆ ಮಾಡಿಕೊಳ್ಳಲು ದೇವರು ಕೊಡುವ ಸೂಚನೆ ಎಂದು ಸಕಾರಾತ್ಮಕವಾಗಿ ಭಾವಿಸುತ್ತೇನೆ’ ಎಂದು ಒತ್ತಡದ ನಿವಾರಣೆಯ ಬಗ್ಗೆ ತಮ್ಮದೇ ಮಾತಿನಲ್ಲಿ ತಿಳಿಸಿದ್ದಾರೆ ಯಕ್ಷಗಾನ ಭಾಗವತರಾದ ಪಟ್ಲ ಸತೀಶ್ ಶೆಟ್ಟಿ.

ಕಟೀಲು ದುರ್ಗಾಪರಮೇಶ್ವರಿ ಪ್ರಸಾದಿತ ಯಕ್ಷಗಾನ ಮಂಡಳಿಯ ಮೇಳದಲ್ಲಿ ತಿರುಗಾಟದ ಜೊತೆಗೆ ಯಕ್ಷಧ್ರುವ ಪಟ್ಲ ಫೌಂಡೇಶನ್‍ನ ಕೆಲಸವನ್ನೂ ನಿರ್ವಹಿಸಬೇಕಾದ್ದರಿಂದ ಒತ್ತಡದ ಕ್ಷಣಗಳು ಆಗಾಗ ಎದುರಾಗುತ್ತವೆ.  ಮೇಳದ ತಿರುಗಾಟ ಎಂದರೆ ರಾತ್ರಿ ಪೂರಾ ಪ್ರದರ್ಶನ ಇರುವುದರಿಂದ ನನ್ನ ಪಾಳಿಯ ಭಾಗವತಿಕೆ ನಿರ್ವಹಿಸಲು ನಿದ್ರೆ ಕೆಡಲೇಬೇಕು. ಇತರ ಕಲಾಪ್ರಕಾರಗಳಲ್ಲಿ ಸಾಧ್ಯವಾಗುವಂತೆ ವಿರಾಮವನ್ನು ಪಡೆಯುವ ಅವಕಾಶವೇ ಇಲ್ಲಿ ಇಲ್ಲ. ಮರುರಾತ್ರಿ ಮತ್ತೊಂದು ಕಡೆ ಪ್ರಸಂಗಕ್ಕೆ ಭಾಗವತಿಕೆ ಮಾಡಲೇ ಬೇಕು. ಯಕ್ಷಗಾನ ಪ್ರಸಂಗ ಆಡಿಸುವವರಿಗೆ ಆ ದಿನ ಅವರ ಬದುಕಿನ ಮಹತ್ವದ ದಿನಗಳಲ್ಲೊಂದಾಗಿರುತ್ತದೆ. ಅದನ್ನು ಯಶಸ್ವಿಯಾಗಿ ನಿಭಾಯಿಸುವ ಆಶಯದಿಂದ ಅವರು ಭಾಗವತರ ಮೇಲೆ ಹೆಚ್ಚಿನ ನಿರೀಕ್ಷೆಯನ್ನು ಇಟ್ಟುಕೊಂಡಿರುತ್ತಾರೆ. ಹಾಗಾಗಿ ಸಿಗುವ ಒಂದು ಹಗಲಿನಲ್ಲಿ ನಿದ್ದೆ, ಕೌಟುಂಬಿಕೆ ಜವಾಬ್ದಾರಿ ನಿರ್ವಹಣೆ, ಸಂಘಟನೆಯ ಕೆಲಸಗಳು, ಅಭಿಮಾನಿಗಳ ಮಾತುಕತೆಗಳಿಗೆ ಕಿವಿಯಾಗುವುದು – ಹೀಗೆ ನಿರಂತರವಾಗಿ ತೊಡಗಿಸಿಕೊಳ್ಳಬೇಕು. ಈ ತೀವ್ರತೆಯು ನನ್ನ ಬದುಕಿನಲ್ಲಿ ಖುಷಿಯನ್ನು ಕೊಟ್ಟಿದೆ. ಆದ್ದರಿಂದಲೇ ನಾನು ಒತ್ತಡವನ್ನು ಹೇಗೆ ನಿಭಾಯಿಸುತ್ತೇನೆ ಎಂದು ಪ್ರಜ್ಞಾಪೂರ್ವಕವಾಗಿ ಯೋಚಿಸಿಲ್ಲ ಅನಿಸುತ್ತದೆ.

ಆದರೆ ಪ್ರತಿದಿನವೂ ಒತ್ತಡದ ಕ್ಷಣಗಳು ಎದುರಾಗುತ್ತಲೇ ಇರುತ್ತವೆ. ಪ್ರತಿಕ್ಷಣವೂ ನಾನು ಮನಸ್ಸಿನಲ್ಲಿ ಒಂದು ಸಾಲನ್ನು ಗಟ್ಟಿಮಾಡಿಕೊಂಡಿದ್ದೇನೆ. ‘ತಾಳ್ಮೆ ಕಳೆದು ಕೊಂಡರೆ ಪರಿಸ್ಥಿತಿ ಕೈಮೀರಿಬಿಡುತ್ತದೆ’. ನನ್ನ ಪ್ರಕಾರ ವೈಯಕ್ತಿಕ ವಿಷಯಕ್ಕೆ  ಹೆಚ್ಚು ಆದ್ಯತೆ ಕೊಟ್ಟರೆ ‘ತಾಳ್ಮೆ’ ಸಿದ್ಧಿಸುವುದಿಲ್ಲ. ಮೊದಲು ‘ನಾನು’ ಕೇವಲ ನನ್ನ ಕುಟುಂಬ ಎಂಬ ಅಂಶವನ್ನೂ ಬದಿಗೆ ಸರಿಸಿ, ನನ್ನ ಯಶಸ್ಸಿನಲ್ಲಿ ಸಮಾಜದ ಪಾಲು ದೊಡ್ಡದಿದೆ ಎಂಬ ಅರಿವು ಮೂಡಿದಾಗ, ಆ ಅರಿವೇ ತಾಳ್ಮೆಯನ್ನು ಕಟ್ಟುತ್ತ ಬರುತ್ತದೆ. ಯಶಸ್ಸು ಎಂಬುದು ‘ನಾವು’ ಎಂಬ ಸಮಷ್ಟಿ ಭಾವದಿಂದ ಸಾಧ್ಯವೇ ಹೊರತು ‘ನಾನು’ ಎಂಬ ಭಾವನೆಯಿಂದ ಸಾಧ್ಯವೇ ಇಲ್ಲ.

ಕಟೀಲು ಮೇಳ, ನನ್ನ ಭಾಗವತಿಕೆಯನ್ನು ಮೆಚ್ಚುವ ಅಭಿಮಾನಿಗಳು, ಈ ಯಕ್ಷಗಾನ ಎಂಬ ಮಹಾನ್ ಕಲೆಯನ್ನು ಕಟ್ಟಿದ ಹಿರಿಯರು ಎಲ್ಲರೂ ನನ್ನನ್ನು ಒಟ್ಟಾಗಿ ರೂಪಿಸಿದ್ದಾರೆ ಎಂಬ ಋಣಭಾವ ನನ್ನಲ್ಲಿ ಸದಾ ಜಾಗೃತವಾಗಿರುತ್ತದೆ. ಅದೇ ಕಾರಣಕ್ಕೆ ನಾನು ಪಟ್ಲ ಫೌಂಡೇಶನ್ ಎಂಬ ಸಂಘಟನೆಯನ್ನು ಮಾಡಹೊರಟಿದ್ದು.

ನಾನು ಪ್ರತಿಕ್ಷಣವೂ ಗಂಭೀರವಾಗಿರುತ್ತೇನೆ ಎಂದೇನಲ್ಲ. ತಮಾಷೆ, ಹಾಡು ಕೇಳುವುದು ಕ್ರಿಕೆಟ್ ನೋಡುವುದು, ಸ್ನೇಹಿತರ ಜೊತೆ ಪಟ್ಟಾಂಗ ನನಗೆ ಇಷ್ಟ. ಕೆಲಸದ ನಡುವೆಯೇ ರನ್ ಎಷ್ಟಾಯಿತೆಂದೋ, ಯಾರು ಗೆದ್ದರೆಂದೋ, ಯಾರು ಚೆನ್ನಾಗಿ ಆಡಿದರೆಂದೋ ಗಮನಿಸುವುದೂ ಉಂಟು. ಇವೆಲ್ಲ ಒತ್ತಡವನ್ನು ಹಗುರ ಮಾಡುವ ರಿಲೀಫ್‌ಗಳೇ.

ಇನ್ನು ಪ್ರಯಾಣಗಳಿದ್ದರೆ ವಿಮಾನ ನಿಲ್ದಾಣದಲ್ಲಿ ಬಹಳ ಹೊತ್ತು ಸಿಗುತ್ತದೆ. ತುಂಬ ದಿನದಿಂದ ಮಾತಿಗೆ ಸಿಕ್ಕದ ಸ್ನೇಹಿತನನ್ನು ಮಾತಿಗೆಳೆಯುತ್ತೇನೆ. ಆ ಕತೆ, ಈ ಕತೆ ಮಾತನಾಡುತ್ತ  ನಕ್ಕು ಮನಸ್ಸು ಹಗುರಾಗುತ್ತದೆ. ಕಾದಂಬರಿಗಳನ್ನು ಓದುವುದು ಇಷ್ಟ. ಈಗ ಮಹಾಭಾರತ ಮತ್ತು ರಾಮಾಯಣದ ಓದುತ್ತಿದ್ದೇನೆ. ಜೈಮಿನಿ ಭಾರತ, ಕುಮಾರವ್ಯಾಸ ಭಾರತ ಮತ್ತೆ ಮತ್ತೆ ಓದಬೇಕಾಗುತ್ತದೆ. ಪ್ರಸಂಗ ಸಾಹಿತ್ಯದ ಹಿನ್ನೆಲೆಯನ್ನು ಅರ್ಥಮಾಡಿಕೊಳ್ಳಲು ಈ ಓದು ನನಗೆ ಸಹಾಯ ಮಾಡುತ್ತದೆ. ಶ್ರೇಯಾ ಘೋಷಾಲ್ ಹಾಡು ಕೇಳುವಾಗ ಮನಸ್ಸು ಹಗುರಾಗುತ್ತದೆ. ಲತಾ ಮಂಗೇಶ್ಕರ್, ಬಾಲಮುರಳೀಕೃಷ್ಣರ ಧ್ವನಿಗಳು ಯಾರ ಮನಸ್ಸನ್ನು ಹಗುರ ಮಾಡುವುದಿಲ್ಲ ಹೇಳಿ?

ಮತ್ತೊಂದು ಮುಖ್ಯವಾದ ವಿಷಯವೆಂದರೆ ಆಹಾರದ ಶಿಸ್ತು. ಸಾತ್ವಿಕ ಮತ್ತು ಸಸ್ಯಾಹಾರವನ್ನು ಅಭ್ಯಸಿಸಿದಾಗ ಅದರಿಂದ ಲಾಭವಿದ್ದೇ ಇದೆ. ನಿದ್ದೆ ಕೆಡುವ ಈ ವೃತ್ತಿಯಲ್ಲಿ ಹಿತಮಿತ ಆಹಾರಕ್ರಮವು ಹೆಚ್ಚು ಅಗತ್ಯ. ಆಹಾರಕ್ರಮದಲ್ಲಿ ಶಿಸ್ತು ಇಟ್ಟುಕೊಳ್ಳದೇ ಇದ್ದರೆ ದೇಹ ಮನಸ್ಸು ಎರಡೂ ಮುಷ್ಕರ ಹೂಡಿಬಿಡುತ್ತವೆ. ಹಾಗಂತ ನಾನು ಮಾಂಸಾಹಾರ ಮಾಡುವುದೇ ಇಲ್ಲವೆಂದಲ್ಲ. ಸಾತ್ವಿಕ ಆಹಾರದಿಂದ ಮನಸ್ಸನ್ನು ಹಗುರವಾಗಿಟ್ಟುಕೊಳ್ಳಬಹುದು ಎಂಬುದನ್ನು ನಾನು ಗುರುತಿಸಿ ಕೊಂಡಿದ್ದೇನೆ.

ಹಿರಿಯರ ಆಚರಣೆ, ಸಂಪ್ರದಾಯಗಳು ವೈಜ್ಞಾನಿಕವಾಗಿಯೇ ಇರುತ್ತವೆ. ಅವುಗಳನ್ನು ಅನುಸರಿಸುವುದು ಅಂದರೆ ಪರಂಪರೆಯನ್ನು ಮುನ್ನಡೆಸಿಕೊಂಡು ಬರುವುದು ಮನುಷ್ಯನ ಹಲವು ಒತ್ತಡಗಳನ್ನು ನಿವಾರಿಸುತ್ತದೆ ಎಂದು ನನಗೆ ಹಲವು ಬಾರಿ ಅನಿಸಿದೆ. ಕುಟುಂಬದವರನ್ನು ಒಂದಾಗಿಸುವ, ಮನೆಯವರೊಡನೆ ಸಮಯ ಕಳೆಯುವ ಅವಕಾಶಗಳು ಮನಸ್ಸಿನಲ್ಲಿ ಪ್ರಫುಲ್ಲ ಭಾವನೆಯನ್ನು ಮೂಡಿಸುತ್ತದೆ. ಮನುಷ್ಯ ಸಂಘಜೀವಿ ಅಲ್ವೆ? ಜೊತೆಯಾಗಿ ಉಣ್ಣುವುದು, ಒಂದಿಷ್ಟು ಹೊತ್ತಿನ ಹರಟೆ, ಜೊತೆಯಾಗಿ ಕೆಲಸಗಳನ್ನು ನಿರ್ವಹಿಸುವುದು ಉತ್ತಮ ಎಂಬ ಉದ್ದೇಶದಿಂದ ಹಿರಿಯರು ರೂಪಿಸಿಟ್ಟ ಆಚರಣೆಗಳು ಹಲವಾರು ಇವೆ. ಅವುಗಳನ್ನು ವಿವೇಕಯುತವಾಗಿ ಆಚರಿಸುವುದು ನಮಗೇ ಒಳ್ಳೆಯದು ಎಂದು ಕಂಡುಕೊಂಡಿದ್ದೇನೆ. ನಮ್ಮ ಮನೆಯ ದೈವಗಳ ಕೆಲಸ ಇದ್ದಾಗ, ಕೌಟುಂಬಿಕ ಸಮಾರಂಭಗಳಿದ್ದಾಗ ನಾನು ಸಾಧ್ಯವಾದಷ್ಟು ಮಟ್ಟಿಗೆ ಭಾಗವಹಿಸಲು ಇಚ್ಛಿಸುತ್ತೇನೆ. ಹಿರಿಯರಿಗೆ ನಮಸ್ಕರಿಸುವುದು, ಬೆಳಿಗ್ಗೆ ಒಂದಿಷ್ಟು ಹೊತ್ತು ಮನಸ್ಸನ್ನು ದೇವರಲ್ಲಿ ಕೇಂದ್ರೀಕರಿಸುವುದು ಎಷ್ಟು ಒಳ್ಳೆಯ ಸಂಪ್ರದಾಯ! ಅವೆಲ್ಲ ನನಗಿಷ್ಟ.

ದೇವರ ವಿಚಾರ ಎಲ್ಲರ ಬದುಕಿನಲ್ಲಿಯೂ ಇದ್ದೇ ಇರುತ್ತದೆ. ‘ನಾನು’ ಎಂಬ ಅಹಂನ್ನು ಬಿಟ್ಟುಬಿಡಲು ಮೊದಲ ಮೆಟ್ಟಿಲೇ ದೇವರನ್ನು ನಂಬುವುದು. ಹಳ್ಳಿಗಳಲ್ಲಿ ಹಿರಿಯರು ಈಗಲೂ ಹೇಳುತ್ತಾರೆ ‘ನಾನೇನೂ ಮಾಡಿಲ್ಲ. ಎಲ್ಲ ಆ ದೇವರು ಮಾಡಿಸಿಕೊಂಡರು’ ಅಂತ. ಈ ಸಾಲಿನಲ್ಲಿ ಅಹಂನ್ನು ಬಿಡುವ ಪ್ರಯತ್ನವಿದೆ ಅನಿಸುತ್ತದೆ. ದೇವರೆಂದರೆ ಕಾಣದ ಪರಾಶಕ್ತಿ. ಮನಸ್ಸಿಗೆ ಖುಷಿ ಆದಾಗಲೂ ಬೇಸರ ಆದಾಗಲೂ ದೇವಸ್ಥಾನಗಳಿಗೆ ಹೋಗುತ್ತೇನೆ.

ನನ್ನ ಪಾಲಿಗೆ ದೇವರ ಸ್ಮರಣೆ ಯಾವ ಒತ್ತಡವನ್ನಾದರೂ ತಾನಾಗಿಯೇ ಕಡಿಮೆ ಮಾಡುತ್ತದೆ. ಅದನ್ನು ಮೀರಿಯೂ ಕೆಡುಕೇನಾದರೂ ಆದಾಗ, ಜಾಗರೂಕನಾಗಿರಲು, ನನ್ನ ಅಂತರಂಗದ ವಿಮರ್ಶೆ ಮಾಡಿಕೊಳ್ಳಲು ದೇವರು ಕೊಡುವ ಸೂಚನೆ ಎಂದು ಸಕಾರಾತ್ಮಕವಾಗಿ ಭಾವಿಸುತ್ತೇನೆ. ಸಕಾರಾತ್ಮಕ ಚಿಂತನೆ ಒಳ್ಳೆಯದು ಎಂದು ಎಲ್ಲರೂ ಹೇಳುತ್ತಾರಲ್ಲ. ನನ್ನ ಮಟ್ಟಿಗೆ ಇದೇ ನನ್ನ ಸಕಾರಾತ್ಮಕ ಧೋರಣೆ. ಆದ್ದರಿಂದ ನನಗೆ ಕೆಡುಕು ಮಾಡಿದವರಿಗೂ ನನ್ನಿಂದ ಅಪಚಾರ ಆಗದೇ ಇರಲಿ ಎಂದೇ ದೇವರಲ್ಲಿ ಬೇಡಿಕೊಳ್ಳುತ್ತೇನೆ. ದೇವರೆಂದ ಕೂಡಲೇ ಯೋಚನೆಯನ್ನು ಸಂಕೀರ್ಣ ಮಾಡಿಕೊಳ್ಳಬೇಕಿಲ್ಲ. ನನ್ನ ಪಾಲಿಗೆ ಬಂದ ಕರ್ತವ್ಯವನ್ನು ಚೆನ್ನಾಗಿ ನಿಭಾಯಿಸಿದರೆ  ಅದು ದೇವರ ಆಜ್ಞೆಯನ್ನು ಪಾಲಿಸಿದಂತೆ.

Courtesy : Prajavani.net

http://www.prajavani.net/news/article/2018/05/09/571728.html

Leave a Reply