“ಜಾನಪದ ಕಲೆಗಾರ ಡೊಳ್ ಚಂದ್ರು”,

ಸೊಂಟಕ್ಕೆ ಡೊಳ್ಳು ಕಟ್ಟಿಕೊಂಡು, ಆ ಕಡೆ, ಈ ಕಡೆ ಬಡಿಯುತ್ತಾ, ಬಡಿತದ ಶಬ್ಧಕ್ಕೆ ತಕ್ಕಂತೆ ಹೆಜ್ಜೆ ಹಾಕುತ್ತಿದ್ದರೆ, ಸುತ್ತಲು ನಿಂತು ವೀಕ್ಷಿಸುತ್ತಿದ್ದವರೂ ಇವರ ಡೊಳ್ಳಿನ ತಾಳಕ್ಕೆ ಹೆಜ್ಜೆ ಹಾಕಲಾರಂಭಿಸುತ್ತಾರೆ. ಹೀಗೆ ವಿನೂತನ ಶೈಲಿಯಲ್ಲಿ ಡೊಳ್ಳು ನುಡಿಸುವುದರಿಂದಲೇ ಅವರಿಗೆ ‘ಡೊಳ್ ಚಂದ್ರು’ ಎಂದೇ ಹೆಸರು.ರಾಮನಗರ ಜಿಲ್ಲೆಯ ಅಂಕನಹಳ್ಳಿಯ 24ರ ಹರೆಯದ ಎ.ಎಸ್‌.ಚಂದ್ರಕುಮಾರ್, ರಾಜ್ಯ, ದೇಶ, ವಿದೇಶಗಳಲ್ಲಿ ಡೊಳ್ಳು ಕುಣಿತ ನೀಡುತ್ತಾ, ಗೆಳೆಯರ ಪಾಲಿಗೆ ಡೊಳ್‌ ಚಂದ್ರು ಎಂದೇ ಪರಿಚಿತರಾಗಿದ್ದಾರೆ.ಶ್ರೀನಿವಾಸ–ಸುಶೀಲಮ್ಮ ದಂಪತಿಯ ಪುತ್ರ ಚಂದ್ರು. ಬಡತನದ ಕುಟುಂಬದಲ್ಲಿ ಬೆಳೆದವರು. ಅವರಿಗೆ ಬಾಲ್ಯದಿಂದಲೇ ಕಲೆಯಲ್ಲಿ ಅಪಾರ ಆಸಕ್ತಿ. ವಿದ್ಯಾರ್ಥಿ ದೆಸೆಯಿಂದಲೇ ಜನಪದ ಕಲೆಗಳತ್ತ ಒಲವು. ಇವರ ಕಲಾಸಕ್ತಿಯನ್ನು ಚಿಕ್ಕಂದಿನಲ್ಲಿ ಅಲ್ಲಗಳೆದವರೇ ಬಹಳ. ಇಷ್ಟಾದರೂ, ಕುಣಿತದ ಕಲೆ ಬಗ್ಗೆ ಒಂದಿನಿತೂ ಪ್ರೀತಿ ಕಳೆದುಕೊಳ್ಳದ ಈ ಯುವಕ ಆ ಕಲೆಯನ್ನೇ ಧ್ಯಾನಿಸಲಾರಂಭಿಸಿದರು. ಇದನ್ನು ಕಂಡ ಕೆಲವರು ‘ಇವನಿಗೆ ಓದು ಹತ್ತುವುದಿಲ್ಲ. ಏನನ್ನೂ ಸಾಧಿಸಲಾರ’ ಎಂದು ಜರಿದರು.‌ ಇನ್ನೂ ಕೆಲವರು ‘ಕುಣಿತ ಬಿಡಿಸಿ ಓದಲು ಹಚ್ಚಿ’ ಎಂದು ಪೋಷಕರಿಗೆ ಸಲಹೆ ನೀಡಿದ್ದೂ ಉಂಟು.ಆದರೆ, ಇಂಥವುಗಳಿಗೆ ಬೆನ್ನು ತೋರಿದು ಚಂದ್ರು ಮುಂದೆ ಅದೇ ಕಲೆ ಯಿಂದಲೇ ಹೆಸರು ಸಂಪಾದಿಸಿದ್ದಾರೆ.. ದೇಶ– ವಿದೇಶಗಳನ್ನು ಸುತ್ತಿ ಬಂದಿದ್ದಾರೆ. ನೂರಾರು ಕಾರ್ಯಕ್ರಮಗಳಲ್ಲಿ ಪ್ರದರ್ಶನ ನೀಡಿದ್ದಾರೆ. ಚಲನಚಿತ್ರದ ದಿಗ್ಗಜರ ಬಳಿ ‘ಭೇಷ್’ ಎನ್ನಿಸಿಕೊಂಡಿದ್ದಾರೆ.ಮಗನ ಕಲೆ ಬಗ್ಗೆ ಯಾರು ಏನೇ ಹೇಳಿದರೂ, ಅಪ್ಪ ಶ್ರೀನಿವಾಸ್, ಮಾತ್ರ ಮಗನಲ್ಲಿರುವ ಕಲಾಸಕ್ತಿಯನ್ನು ಗುರುತಿಸಿ, ಚಿಕ್ಕಂದಿನಲ್ಲೇ ಅವರಿಗೆ ಡೊಳ್ಳುಕುಣಿತ ಹೇಳಿಕೊಟ್ಟರು. ಹೀಗಾಗಿ ಚಂದ್ರು 5ನೇ ತರಗತಿಯಲ್ಲೇ ಮೊದಲ ಬಾರಿಗೆ ವೇದಿಕೆ ಏರಿ ಡೊಳ್ಳು ಕುಣಿತ ಪ್ರದರ್ಶಿಸಿ, ವಾದ್ಯಸಂಗೀತ ವಿಭಾಗ ದಲ್ಲಿ ಪ್ರಥಮ ಸ್ಥಾನ ಪಡೆದರು. 5ನೇ ತರತಗತಿಯಿಂದ 10ನೇ ತರಗತಿಯವರೆಗೂ ಪ್ರತಿ ಬಾರಿ ಡೊಳ್ಳು ಕುಣಿತದಲ್ಲಿ ಪ್ರಥಮ ಸ್ಥಾನ ಪಡೆದರು.ದೇಶ–ವಿದೇಶದತ್ತ ಪಯಣ ಡೊಳ್ಳುಕುಣಿತದ ಪರಿಣತಿ ಚಂದ್ರು ಅವರನ್ನು ದೇಶ–ವಿದೇಶಗಳವರೆಗೂ ಕರೆದೊಯ್ದಿದೆ. ರಾಜ್ಯದ ವಿವಿಧ ಭಾಗಗಳಲ್ಲಿ ನಡೆದ ಕಾರ್ಯಕ್ರಮಗಳಲ್ಲಿ ಪ್ರದರ್ಶನ ನೀಡಿದ ಅವರು, 2013ರಿಂದ ಇಲ್ಲಿಯವರೆಗೂ ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಅವರ ಪ್ರತಿ ಹುಟ್ಟು ಹಬ್ಬದಲ್ಲಿ ಡೊಳ್ಳು ಕುಣಿತದ ಪ್ರದರ್ಶನ ನೀಡಿದ್ದಾರೆ.2015ರಲ್ಲಿ ದೆಹಲಿಯಲ್ಲಿ ನಡೆದ ಗಣರಾಜ್ಯೋತ್ಸವದ ಪಥಸಂಚಲನದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದಾರೆ. ಇದೇ ವರ್ಷದ (2019) ಏಪ್ರಿಲ್‌ನಲ್ಲಿ ಸಿಂಗಪುರದಲ್ಲಿ ನಡೆದ ‘ಟ್ಯಾಪೆಸ್ಟಿ ಆಫ್ ಸ್ಯಾಕ್ರೆಡ್ ಮ್ಯೂಸಿಕಲ್ ಫೆಸ್ಟಿವಲ್‌’ನಲ್ಲಿ ಭಾಗವಹಿಸಿದ್ದ ಚಂದ್ರು, ಸಾಗರೋತ್ತರ ರಾಷ್ಟ್ರಗಳಿಗೂ ನಮ್ಮ ದೇಸಿ ಕಲೆಯ ರುಚಿಯನ್ನು ಉಣಿಸಿದ್ದಾರೆ.ರಾಷ್ಟ್ರಮಟ್ಟದಲ್ಲಿ ನಡೆದ ವಿಶ್ವವಿದ್ಯಾಲಯ ಮಟ್ಟದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಡೊಳ್ಳುಕುಣಿತದ ಮೂಲಕ ಮೂರು ಬಾರಿ ಬೆಂಗಳೂರು ವಿಶ್ವವಿದ್ಯಾಲಯವನ್ನು ಪ್ರತಿನಿಧಿಸಿದ್ದಾರೆ.ಸಿನಿಮಾಗಳಲ್ಲೂ ಪ್ರದರ್ಶನ ನಟ ಪುನಿತ್‌ ರಾಜ್‌ಕುಮಾರ್ ನಟನೆಯ ‘ದೊಡ್ಮನೆ ಹುಡ್ಗ’, ನಟ ಧ್ರುವ ಸರ್ಜಾ ಅಭಿನಯದ ‘ಭರ್ಜರಿ’ ಸೇರಿದಂತೆ ಹಲವು ಕನ್ನಡ ಚಿತ್ರಗಳಲ್ಲಿ ಡೊಳ್ಳುಕುಣಿತ ಪ್ರದರ್ಶನ ನೀಡಿದ್ದಾರೆ. ಡ್ಯಾನ್ಸಿಂಗ್ ಸ್ಟಾರ್, ಡಾನ್ಸ್ ಕರ್ನಾಟಕ ಡಾನ್ಸ್, ಕನ್ನಡದ ಕಣ್ಮಣಿ, ಹೆಮ್ಮೆಯ ಕನ್ನಡಿಗ ಸೇರಿದಂತೆ ಖಾಸಗಿ ವಾಹಿನಿಗಳಲ್ಲಿ ಪ್ರಸಾರವಾಗುತ್ತಿರುವ ರಿಯಾಲಿಟಿ ಷೋಗಳಲ್ಲೂ ಭಾಗವಹಿಸಿ ಸೈ ಎನಿಸಿಕೊಂಡಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸುವ ಹೊರನಾಡು ಉತ್ಸವ, ಜಾನಪದ ಜಾತ್ರೆ, ಸಾಂಸ್ಕೃತಿಕ ಸೌರಭ, ಜಾನಪದ ಉತ್ಸವ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಯಶಸ್ವಿ ಪ್ರದರ್ಶನ ನೀಡಿದ್ದಾರೆ. ಕಳೆದ ಮೂರು ವರ್ಷಗಳಿಂದ ಕೆ.ಪಿ.ಎಲ್‌ ಪಂದ್ಯಗಳ ಕಾರ್ಯಕ್ರಮದಲ್ಲೂ ಡೊಳ್ಳು ಕುಣಿತದ ಪ್ರದರ್ಶನ ನೀಡಿದ್ದಾರೆ.‘ಪರಿವರ್ತಕ’ನಾಗಿ ನಿಯೋಜನೆಪ್ರಸ್ತುತ ರಾಮನಗರ ಜಿಲ್ಲೆಯ ಕ್ರೀಡಾ ಮತ್ತು ಯುವ ಸಬಲೀಕರಣ ಇಲಾಖೆಯವರು ಆಯೋಜಿಸುವ ಯುವ ಸ್ಪಂದನ ಕಾರ್ಯಕ್ರಮಕ್ಕೆ ಯುವ ಪರಿವರ್ತಕನಾಗಿ ಆಯ್ಕೆಯಾಗಿದ್ದಾರೆ. ಜಿಲ್ಲೆಯಾ‌ದ್ಯಂತ ಯುವಜನರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದಾರೆ. ಕಾಲೇಜುಗಳಲ್ಲಿ ಎನ್.ಎಸ್.ಎಸ್ ಘಟಕಗಳಿಂದ ನಡೆಯುವ ಶಿಬಿರದಲ್ಲಿ ಶಿಬಿರಾರ್ಥಿಗಳಿಗೆ ಉಚಿತವಾಗಿ ಡೊಳ್ಳುಕುಣಿತದ ತರಬೇತಿ ನೀಡುತ್ತಿದ್ದಾರೆ. ಕಲೆಯ ಜತೆ ಜತೆಗೆ ಓದನ್ನೂ ಮುಂದುವರೆಸಿರುವ ಚಂದ್ರು ಬಿ.ಪಿ.ಇಡಿ ಮುಗಿಸಿ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಎಂ.ಪಿ.ಇಡಿ ಓದುತ್ತಿದ್ದಾರೆ. ಪಿ.ಎಚ್‌ಡಿ ಮಾಡುವ ಕನಸೂ ಇದೆ.ಡೊಳ್ಳು ಕುಣಿತದ ಜತೆಗೆ…ಡೊಳ್ಳುಕುಣಿತದ ಜೊತೆಗೆ ಹುಲಿವೇಷ, ಕಂಸಾಳೆ, ಬೇಡರ ವೇಷ ಮತ್ತು ಸೋಮನ ಕುಣಿತದಂತಹ ಜಾನಪದ ನೃತ್ಯಗಳಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ‘ಸಾಧನೆಗೆ ಬಡತನ, ಕೊರತೆಗಳು ಅಡ್ಡಿಯಾಗುವುದಿಲ್ಲ. ಪ್ರಬಲವಾದ ಇಚ್ಛಾಶಕ್ತಿಯೊಂದಿದ್ದರೆ ಏನನ್ನು ಬೇಕಾದರೂ ಸಾಧಿಸಬಹುದು’ ಎನ್ನುವುದು ಚಂದ್ರು ಅಭಿಪ್ರಾಯ. ಕಲೆಯನ್ನು ಪ್ರೀತಿಸುವಷ್ಟೇ ಓದಿನಲ್ಲೂ ಆಸಕ್ತಿ ತೋರಿಸುವ ಅವರು, ಎಂ.ಪಿ.ಇಡಿ ಮುಗಿಸಿದ ನಂತರ ಮುಂದೆ ಪಿ.ಎಚ್‌ಡಿ ಮಾಡುವ ಗುರಿ ಇಟ್ಟುಕೊಂಡಿದ್ದಾರೆ. ಡೊಳ್ಳುಕುಣಿತದಲ್ಲಿ ಹೆಚ್ಚಿನ ಸಾಧನೆ ಮಾಡಿ, ರಾಜ್ಯದಾದ್ಯಂತ ಜಾನಪದ ತರಬೇತಿ ಕೇಂದ್ರಗಳನ್ನು ಆರಂಭಿಸಬೇಕು. ನಶಿಸಿ ಹೋಗುತ್ತಿರುವ ಜನಪದ ಕಲೆಗಳನ್ನು ಉಳಿಸಿ ಬೆಳೆಸಬೇಕೆಂಬುದು ಚಂದ್ರು ಮಹದಾಸೆ ಪ್ರಶಸ್ತಿ ಪುರಸ್ಕಾರಗಳು..‌2019 ರಲ್ಲಿ ಅಬ್ದುಲ್ ಕಲಾಂ ರಾಷ್ಟ್ರ ಪ್ರಶಸ್ತಿ, 2015 ರಲ್ಲಿ ಕರ್ನಾಟಕ ರಾಜ್ಯಪಾಲ ವಜುಬಾಯಿ ವಾಲಾರಿಂದ ಎನ್.ಎಸ್.ಎಸ್ ರಾಜ್ಯಪ್ರಶಸ್ತಿ ಪಡೆದಿದ್ದಾರೆ. 2014 ರಲ್ಲಿಬೆಂಗಳೂರು ವಿಶ್ವವಿದ್ಯಾಲಯದಿಂದ ‘ಬೆಸ್ಟ್ ಕಲ್ಚರ್ ಅವಾರ್ಡ್‌’ ಪಡೆದಿದ್ದಾರೆ.ರಾಜ್ಯ, ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿನ ಚಂದ್ರು ಅವರ ಜನಪದ ಕಲೆಯ ಸಾಧನೆಯನ್ನು ಗುರುತಿಸಿ ಇಂಡಿಯನ್ ವರ್ಚ್ಯುಯಲ್ ಯುನಿವರ್ಸಿಟಿ ಫಾರ್ ಪೀಸ್ ಅಂಡ್ ಎಜುಕೇಷನ್ ಸಂಸ್ಥೆ 2018 ರಲ್ಲಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ.

courtsey:prajavani.net

“author”: “ಪ್ರದೀಪ ಟಿ.ಕೆ”

https://www.prajavani.net/artculture/dance/folkartist-doal-chandru-645247.html

Leave a Reply