ಜಾಣ ಬಾಲಕ
ಒಂದಾನೊಂದು ಕಾಲದಲ್ಲಿ ಒಬ್ಬ ರಾಜನಿದ್ದ. ಅವನೊಬ್ಬ ನುರಿತ ಚಿತ್ರ ಕಲಾವಿದ ಆಗಿದ್ದನು. ಅವನು ಸುಂದರವಾದ ಜಾಗಗಳಿಗೆ ಹೋಗಿ ಅಲ್ಲಿ ಚಿತ್ರಗಳನ್ನು ಬರೆಯುತ್ತಿದ್ದನು.
ಒಂದು ದಿನ ರಾಜನು ಬೆಟ್ಟಗುಡ್ಡಗಳಿರುವ ಜಾಗಕ್ಕೆ ಹೋದನು. ಸುತ್ತಲಿನ ಬೆಟ್ಟಗಳು, ಮರಗಳು, ಹುಲ್ಲುಗಾವಲಿನ ಅಂದವನ್ನು ನೋಡುತ್ತಾ ಅವನು ಚಿತ್ರ ಬರೆಯಲು ತೊಡಗಿದನು. ತುಂಬಾ ಹೊತ್ತಿನವರೆಗೆ ರಾಜನು ಬೆಟ್ಟದ ತುದಿಯಲ್ಲಿ ನಿಂತು ಚಿತ್ರ ಬರೆಯುತ್ತಿದ್ದನು. ಕೊನೆಗೆ ಅವನು ಚಿತ್ರವನ್ನು ಪೂರ್ಣ ಮಾಡಿದನು.
ಬಳಿಕ ಅರಸನು ಹಿಂದೆ ಹಿಂದೆ ಹೋಗುತ್ತಾ ಚಿತ್ರವನ್ನು ಪರೀಕ್ಷಿಸತೊಡಗಿದನು. ದೂರದಿಂದ ಅವನು ಬರೆದ ಚಿತ್ರವು ಹೇಗೆ ಕಾಣುವುದೆಂದು ನೋಡುತ್ತಿದ್ದ ರಾಜನಿಗೆ, ತಾನು ಬೆಟ್ಟದ ತುದಿಯಲ್ಲಿ ನಿಂತಿರುವುದು ಗಮನಕ್ಕೆ ಬರಲಿಲ್ಲ. ಅವನು ಇನ್ನೊಂದು ಹೆಜ್ಜೆ ಹಿಂದೆ ಇಟ್ಟರೂ ಅವನಿಗೆ ಅಪಾಯ ಉಂಟಾಗುತ್ತಿತ್ತು. ಅವನು ಬೆಟ್ಟದಿಂದ ಕೆಳಗೆ ಉರುಳಿ ಬೀಳುತ್ತಿದ್ದನು. ಅಷ್ಟರಲ್ಲಿ ಒಬ್ಬ ದನ ಕಾಯುವ ಹುಡುಗನು ರಾಜನನ್ನು ನೋಡಿದನು. ಆಗ ರಾಜನನ್ನು ಕರೆದು ವಿಷಯ ಕೂಗಿ ಹೇಳುವಷ್ಟು ಸಮಯವಿರಲಿಲ್ಲ.
ಹಾಗಾಗಿ ಹುಡುಗನು ಕಲ್ಲನ್ನು ಎತ್ತಿಕೊಂಡು ರಾಜನು ಬರೆದ ಚಿತ್ರದ ಮೇಲೆ ಎಸೆದನು. ಕಲ್ಲು ಚಿತ್ರಕ್ಕೆ ತಾಗಿತು. ಚಿತ್ರ ಬರೆದ ಹಾಳೆಯು ಚೂರು ಚೂರಾಗಿ ಹೋಯಿತು. ಇದನ್ನು ಕಂಡು ರಾಜನಿಗೆ ಬಹಳ ಸಿಟ್ಟು ಬಂದಿತು, “ಏಯ್ ಮೂರ್ಖ! ಎಷ್ಟು ಸೊಕ್ಕು ನಿನಗೆ! ನನ್ನ ಚಿತ್ರವನ್ನೆಲ್ಲ ಕೆಡಿಸಿಬಿಟ್ಟೆಯಲ್ಲ!” ಎಮದು ರಾಜನು ಕೋಪದಿಂದ ನುಡಿದನು.
“ಪ್ರಭುಗಳು ನನ್ನನ್ನು ಕ್ಷಮಿಸಬೇಕು. ದಯವಿಟ್ಟು ನೀವು ಹಿಂತಿರುಗಿ ನೋಡಿ, ಆಗ ನಿಮಗೆ, ನೀವು ಯಾವ ಜಾಗದಲ್ಲಿ ನಿಂತಿರುವಿರಿ ಎಂದು ತಿಳಿಯುತ್ತದೆ” ಎಂದನು.
ರಾಜನು ಹಿಂದೆ ತಿರುಗಿ ನೋಡಿದನು. ಅವನು ಬೆಟ್ಟದ ತುತ್ತ ತುದಿಯಲಿ ನಿಂತಿದ್ದನು; ರಾಜನಿಗೆ ಭಯವಾಯಿತು. ಅವನು ಬೇಗನೆ ಈಚೆ ಕಡೆಗೆ ಓಡಿ ಬಂದನು. ದನ ಕಾಯುವವನ ಜಾಣ್ಮೆ, ಬುದ್ಧಿವಂತಿಕೆ ಕಂಡು ಅವನಿಗೆ ಸಂತೋಷವಾಯಿತು. ತನ್ನ ಪ್ರಾಣ ಕಾಪಾಡಿದ ಆ ಬಾಲಕನಿಗೆ ರಾಜನು ಸೂಕ್ತ ಬಹುಮಾನವನ್ನು ನೀಡಿ ಕಳುಹಿಸಿದನು.