ಘನತೆಯೊಂದಿಗೆ ಮಾನಸಿಕ ಆರೋಗ್ಯ—ಪ್ರಥಮ ಚಿಕಿತ್ಸೆ
ಆರೋಗ್ಯ ಎಲ್ಲರಿಗೂ ಬೇಕೇ ಬೇಕು. ನಾವು ಸಾಮಾನ್ಯವಾಗಿ ಆರೋಗ್ಯವೆಂದರೆ ದೈಹಿಕ ಆರೋಗ್ಯ ಎಂದು ತಿಳಿಯುತ್ತೇವೆ. ನಮ್ಮ ಮಾನಸಿಕ ಆರೋಗ್ಯದತ್ತ ಗಮನಿಸುವುದೇ ಇಲ್ಲ. ಮಾನಸಿಕ ಆರೋಗ್ಯ ದೈಹಿಕ ಆರೋಗ್ಯವನ್ನು ಹೊಂದಿದೆ. ದೈಹಿಕ ಆರೋಗ್ಯ ಮತ್ತು ಮಾನಸಿಕ ಆರೋಗ್ಯ ಒಂದು ನಾಣ್ಯದ ಎರಡು ಮುಖಗಳಿದ್ದಂತೆ. ನಮ್ಮ ದೇಹಕ್ಕೆ ಎರಡೂ ಆರೋಗ್ಯ ಅಷ್ಟೇ ಅವಶ್ಯಕ. ದೈಹಿಕವಾಗಿ ಅನಾರೋಗ್ಯ ಹೊಂದಿದರೆ ಅದೇ ವ್ಯಕ್ತಿ ತಾನಾಗಿಯೇ ಅಥವಾ ಮನೆಯವರೊಂದಿಗೆ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯುತ್ತಾನೆ. ಆದರೆ ಅದೇ ವ್ಯಕ್ತಿ ಮಾನಸಿಕ ಕಾಯಿಲೆಯ ಲಕ್ಷಣಗಳಿಂದ ಬಳಲುತ್ತಿದ್ದರೆ ಮಾನಸಿಕ ಆರೋಗ್ಯ ಸಂಸ್ಥೆಯಲ್ಲಿ ಚಿಕಿತ್ಸೆ ಪಡೆಯಲು ಮುಜುಗುರ ಪಡುತ್ತಾನೆ. ಅಲ್ಲಿ ನನ್ನನ್ನು ಯಾರಾದರು ನೋಡಿದರೆ, ನನ್ನ ಬಗ್ಗೆ ಏನೆಂದುಕೊಂಡಾರು? ಛೇ ಬೇಡಪ್ಪಾ. . . .ಎಂದು ಹಿಂದೆ ಸರಿದಾಗ ದಿನದಿಂದ ದಿನಕ್ಕೆ ನಿಧಾನವಾಗಿ ಆತನಿಗೆ ಕಾಯಿಲೆಯ ಲಕ್ಷಣಗಳು ಉಲ್ಬಣಿಸುತ್ತವೆ. ಸಮಾಜದಲ್ಲಿ ಮಾನಸಿಕ ಕಾಯಿಲೆ ಎಂಬುದು ಹುಚ್ಚು ಎಂದು ಅಚ್ಚೊತ್ತಾಗಿದೆ. ಹುಚ್ಚು ಎಂಬ ಹಣೆಪಟ್ಟಿ ಕಳಂಕವನ್ನಾಗಿಸಿದೆ. ಮಾನಸಿಕ ಕಾಯಿಲೆ ಮಾಟ ಮಂತ್ರ, ದೆವ್ವ ಭೂತಗಳಿಂದ ಬರುತ್ತದೆ ಎಂಬ ಅಪನಂಬಿಕೆಯನ್ನು ತೊಲಗಿಸಲು ಮತ್ತು ಮಾನಸಿಕ ಕಾಯಿಲೆಗೆ ಮಿದುಳಿನಲ್ಲಿ ಆಗುವಂಥ ಕೆಲವು ರಾಸಾಯನಿಕ ಬದಲಾವಣೆಗಳು ಕಾರಣವಾಗುತ್ತವೆ. ಇದರ ಅರಿವು ಮೂಡಿಸಲು ಪ್ರತಿವರ್ಷ ಅಕ್ಟೋಬರ್ 10ರಂದು ಮಾನಸಿಕ ಆರೋಗ್ಯ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಪ್ರತಿವರ್ಷ ಹೊಸ ಹೊಸ ಘೋಷಣೆಗಳನ್ನು ಹೊರಡಿಸಿ, ಮಾನಸಿಕ ಆರೋಗ್ಯದ ಮತ್ತು ಕಾಯಿಲೆಗಿರುವ ಚಿಕಿತ್ಸೆಗಳ ಅರಿವನ್ನು ಮೂಡಿಸಿ, ಮಾನಸಿಕ ಕಾಯಿಲೆ ಹೊಂದಿದ ವ್ಯಕ್ತಿ ಪರಿಪೂರ್ಣವಾದ ಚಿಕಿತ್ಸೆಯನ್ನು ಪಡೆದು ಸಲಹೆ ಸೂಚನೆಗಳೊಂದಿಗೆ, ಮನೆಯವರ ಪ್ರೀತಿ ಸಹಕಾರದೊಂದಿಗೆ ಉತ್ತಮ ಮನೋ ಆರೋಗ್ಯದೊಂದಿಗೆ ಜೀವನ ನಿರ್ವಹಿಸಬಹುದಾಗಿದೆ ಎಂದು ಸಾರುತ್ತಲೇ ಬಂದಿದೆ. ಆಯಾ ಕಾಯಿಲೆಗಳಿಗುಣವಾಗಿ ಚಿಕಿತ್ಸೆ ಅವಲಂಭಿತವಾಗಿರುತ್ತದೆ.
ಮನಸ್ಸಿನ ಅಸಮತೋಲನವು ನಾವು ವರ್ತಿಸುವ ವರ್ತನೆಗಳಲ್ಲಿ ಕಂಡುಬರುತ್ತದೆ. ಮಾನಸಿಕ ಕಾಯಿಲೆಯು ಆಯಾ ಸಮಸ್ಯೆಗಳಿಗೆ, ತೊಂದರೆಗಳಿಗೆ, ಕಾಯಿಲೆಗೆ ಸೂಕ್ತ ಪರಿಹಾರ, ಮಾರ್ಗದರ್ಶನ, ಚಿಕಿತ್ಸೆ ಪಡೆಯಲು ಅಸಮತೋಲನವಾದಲ್ಲಿ, ಅವುಗಳ ಒತ್ತಡ ಉಂಟಾದಲ್ಲಿ ಲಕ್ಷಣಗಳು ತೋರ್ಪಡುತ್ತವೆ. ಕಾಯಿಲೆಯ ಲಕ್ಷಣಗಳು ಕಂಡುಬಂದರೂ ಚಿಕಿತ್ಸೆ ಪಡೆಯಲು ಉತ್ತಮ ದಿನಗಳನ್ನು ನೋಡುತ್ತಾರೆ. ಅಮವಾಸ್ಯೆ, ಹುಣ್ಣಿಮೆ, ಹಬ್ಬ ಹರಿದಿನಗಳಂದು ಸುತಾರಾಮ್ ಬರುವುದಿಲ್ಲ. ಇದು ಇಂದಿಗೂ ಹೊಂದಿರುವ ತಪ್ಪು ನಂಬಿಕೆಯ ಅಜ್ಞಾನವನ್ನು ಸೂಚಿಸುತ್ತದೆ. ಮಾನಸಿಕ ಕಾಯಿಲೆಗೆ ಜಿಗುಪ್ಸೆ, ನಾಚಿಕೆ ಪಡಬೇಕಾಗಿಲ್ಲ. ಕಾಯಿಲೆಯಿದೆ ಎಂದು ಮನೆಯಲ್ಲಿ ಕೂಡಿ ಹಾಕಬೇಕಿಲ್ಲ. ಯಾರಿಗಾದರು ಮಾನಸಿಕ ಕಾಯಿಲೆಯ ಲಕ್ಷಣಗಳು ಕಾಣಿಸಿಕೊಂಡಲ್ಲಿ ಅವರ ಮನೆಯವರ ಸಹಕಾರದೊಂದಿಗೆ ಅವರನ್ನು ತಜ್ಞ ಮನೋವೈದ್ಯರಲ್ಲಿ ಸೂಕ್ತ ಚಿಕಿತ್ಸೆ ಕೊಡಿಸಬೇಕು. ಮನೋವೈದ್ಯರು ಸೂಚಿಸಿದಂತೆ ಔಷೋಧೋಪಚರಿಸಿದಲ್ಲಿ ಖಂಡಿತ ಕಾಯಿಲೆಯ ಬರುತ್ತವೆ. ಮತ್ತು ಅವರಿಗೆ ಕೆಲವು ಅವಧಿವರೆಗೆ ನಿರಂತರ ಔಷೋಧೋಪಚಾರ ಪಡೆಯಬೇಕಾಗುತ್ತದೆ.
ಮಾನಸಿಕ ಕಾಯಿಲೆಗಳ ಬಗ್ಗೆ ಹೊಂದಿರುವ ಅಪನಂಬಿಕೆಗಳನ್ನು ದೂರಮಾಡಲು ವೈಜ್ಞಾನಿಕವಾಗಿ ಅರಿವನ್ನು ಮೂಡಿಸಬೇಕಾಗಿದೆ. ಅದಕ್ಕಾಗಿ ಪರಿಣಿತರಿಂದ ಆಯಾ ಸಭೆ, ಸಮಾರಂಭಗಳಲ್ಲಿ, ಜಾತ್ರಾ ಮಹೋತ್ಸವಗಳಲ್ಲಿ, ಶಾಲಾ ಕಾಲೇಜುಗಳಲ್ಲಿ ಮಾನಸಿಕ ಕಾಯಿಲೆಯ ಅರಿವನ್ನು ಉಪನ್ಯಾಸ, ಚರ್ಚೆ, ನಾಟಕ, ಭಿತ್ತಿಪತ್ರಗಳ ಮೂಲಕ ತಿಳಿಯಪಡಿಸಿ, ಮೂಢನಂಬಿಕೆ, ಕಿಳರಿಮೆ, ಭಯ, ಅಪಹಾಸ್ಯ ಮಾಡುವುದನ್ನು ಬೇರು ಸಮೇತ ಕಿತ್ತುಹಾಕಬೇಕಾಗಿದೆ. ಮಾನಸಿಕ ಕಾಯಿಲೆಯನ್ನು ಹೊಂದಿದ ವ್ಯಕ್ತಿಯನ್ನು ಮುಚ್ಚಿಡಲು ಪ್ರಯತ್ನಿಸಬಾರದು. ಹಾಗೇನಾದರು ಮಾಡಿದಲ್ಲಿ ಅವರ ಹಕ್ಕುಗಳ ಉಲ್ಲಂಘನೆ ಮಾಡಿದಂತಾಗುತ್ತದೆ. ಎಂದಿಗೂ ಅವರನ್ನ ನಿಷ್ಪ್ರಯೋಜಕರೆಂದು ತಿರಸ್ಕರಿಸಬಾರದು. ಅವರಿಗೆ ಅನುಕೂಲಕರವಾದ ಸೂಕ್ತ ತರಬೇತಿಯನ್ನು ನೀಡಿದಲ್ಲಿ, ನಿರಂತರ ಔಷೋಧೋಪಚಾರದೊಂದಿಗೆ ತಮ್ಮ ಉದ್ಯೋಗವನ್ನು ಸಮರ್ಥವಾಗಿ ನಿಭಾಯಿಸುತ್ತಾರೆ. ಹೊಡೆಯುವುದು, ಬೈಯುವುದು, ಕೂಡಿಹಾಕುವುದು, ಕಟ್ಟಿ ಹಾಕುವುದು, ಹಿಂಸಿಸುವುದನ್ನು ಖಂಡಿತ ಮಾಡಬಾರದು. ಇದರಿಂದ ಕಾಯಿಲೆ ವಾಸಿಯಾಗುವುದಿಲ್ಲ ಮತ್ತು ಕಡಿಮೆಯಾಗುವುದಿಲ್ಲ. ತೊಂದರೆಯೇ ಹೆಚ್ಚು ಎಂಬುದನ್ನು ತಿಳಿದಿರಬೇಕು. ಅವರಿಗೆ ಮುಖ್ಯವಾಗಿ ಬೇಕಾಗಿರುವುದು ಸಹಕಾರ, ಆತ್ಮೀಯತೆ, ಪ್ರೀತಿಯ ಮಾತುಗಳು, ಗೌರವದಿಂದ ಸೂಕ್ತ ಚಿಕಿತ್ಸೆ.
ಮನೋರೋಗಿ ಎಂಬ ಪ್ರತ್ಯೇಕತೆಯನ್ನು ದೂರಮಾಡಿ, ಸಮಾಜದಲ್ಲಿ ಸಾಮಾನ್ಯರಂತೆ ಕಾಣಲು ಪ್ರತಿಯೊಬ್ಬರೂ ಬದ್ಧರಾಗೋಣ. ಅವರಲ್ಲಿರುವಂಥ ಅವರದೇ ಆದ ಕಲೆ, ಸಾಹಿತ್ಯ, ಮುಂತಾದ ಪ್ರತಿಭಾಶಾಲಿ ವ್ಯಕ್ತಿತ್ವವನ್ನು ಹೊರತಂದು ಗೌರವದಿಂದ ಹೆಮ್ಮೆಯಿಂದ ಬದುಕಲು ಪ್ರೆರೇಪಿಸಬೇಕು.
ಅವರಿಗೆ ದಯಪಾಲಿಸಿದ ಹಕ್ಕುಗಳನ್ನು, ಸೌಲಭ್ಯಗಳನ್ನು ಗೌರವಯುತವಾಗಿ ಪಡೆಯುವಲ್ಲಿ ಸಹಕರಿಸೋಣ. ಎಷ್ಟೋ ಜನರು ಅವರ ಹಕ್ಕುಗಳಿಂದ ವಂಚಿತರಾಗಿದ್ದಾರೆ, ಸೌಲಭ್ಯಗಳ ಬಗ್ಗೆ ಅರಿವು ಇಲ್ಲ. ಅರ್ಹರಿರುವ ಪ್ರತಿಯೊಬ್ಬರಿಗೂ ಸೌಲಭ್ಯ ದೊರಕಬೇಕು. ಮನೋರೋಗಿಗಳಿಗೆ ಮುಖ್ಯವಾಗಿ ಬೇಕಾಗಿರುವ ಪ್ರಥಮ ಚಿಕಿತ್ಸೆ, ಮನೋವೈದ್ಯರ ಸೂಕ್ತ ಚಿಕಿತ್ಸೆಯ ಔಷೋಧೋಪಚಾರ, ಮನೆಯವರ ಪ್ರೀತಿ, ಸಹಕಾರ, ಆರೈಕೆಯೊಂದಿಗೆ ದಿನನಿತ್ಯ ತಪ್ಪದೇ ಔಷೋಧೋಪಚಾರ ನೀಡುವುದು. ಮನೆಯವರಲ್ಲಿ ಮನೆಯ ಸದಸ್ಯನಂತೆ ಗೌರವಿಸುವುದು. ಸಭೆ ಸಮಾರಂಭಗಳಲ್ಲಿ, ಕಾರ್ಯಕ್ರಮಗಳಲ್ಲಿ ಯಾವ ಸಂಕೋಚವಿಲ್ಲದೇ ಅವರನ್ನು ಕರೆದುಕೊಂಡು ಭಾಗವಹಿಸುವುದು, ಅವರಿಗೆ ತಕ್ಕಂತೆ ಅವರಿಗೆ ಇಷ್ಟವಾಗುವ ತರಬೇತಿಯನ್ನು ನೀಡಿ ಸ್ವಾವಲಂಬಿಯನ್ನಾಗಿ ಮಾಡುವಲ್ಲಿ ಪ್ರಯತ್ನ ಮಾಡಬೇಕು. ಒಟ್ಟಿನಲ್ಲಿ ಗೌರವ ಘನತೆಯೊಂದಿಗೆ ಅವರಿಗೂ ಸಮಾಜದಲ್ಲಿ ಸಮಾನ ಮಾನ್ಯತೆಗೆ ಅವಕಾಶ ದೊರೆಯಬೇಕು. ಸಮಾಜದಲ್ಲಿ ಮನೋರೋಗಿಗಳಿಗೆ ಅಂಟಿರುವ ಹುಚ್ಚು ಎಂಬ ಕಳಂಕವನ್ನು ನಿರ್ಮೂಲನೆ ಮಾಡಲು ಪ್ರತಿಯೊಬ್ಬರ ಪಾತ್ರ ಅಮೂಲ್ಯವಾದದ್ದು.
ಶ್ರೀಮತಿ.ಶ್ರೀದೇವಿ ಬಿರಾದಾರ
ಮನೋವೈದ್ಯಕೀಯ ಸಮಾಜಕಾರ್ಯಕರ್ತೆ
ಡಿಮ್ಹಾನ್ಸ, ಧಾರವಾಡ.