ಗ್ರೀಟಿಂಗ್ಸ್ ಒನಪು
ಮತ್ತೆ ಹಬ್ಬಗಳ ಹಂಗಾಮು. ಹಬ್ಬಗಳು ಮಾತ್ರ ತಮ್ಮ ಹಾಜರಿ ತಪ್ಪಿಸುವ ಮಾತೇ ಇಲ್ಲ. ಸರಳವೋ, ಅದ್ಧೂರಿಯೋ ಆಚರಣೆ ನಡೆದೇ ನಡೆಯುತ್ತದೆ. ಹಬ್ಬವೆಂದ ಕೂಡಲೇ ಕಣ್ಣಮುಂದೆ ಬರುವ ಆಚರಣೆ, ಸಂಪ್ರದಾಯ, ಖುಷಿ-ಸಂಭ್ರಮಗಳ ನಡುವೆ ನೆನಪಾಗುವುದು ಶುಭಾಶಯಗಳ ವಿನಿಮಯ. ಈಗಾದರೆ ಬೆಳಗ್ಗೆ ಎದ್ದೊಡನೆ ಒಂದು ಎಸ್.ಎಂ.ಎಸ್ ಅನ್ನು ನೂರಾರು ನಂಬರ್ ಗಳಿಗೆ ಏಕಕಾಲದಲ್ಲಿ ಫಾರ್ವರ್ಡ್ ಮಾಡಿ ಬಿಟ್ಟರೆ ಮುಗಿಯಿತು. ಆದರೆ, ಆಗ..? ಗ್ರೀಟಿಂಗ್ ಕಾರ್ಡ್ ಗಳಿಗೇ ಮೊರೆ ಹೋಗಬೇಕಿತ್ತು. ಎಂಥ ಸಂಭ್ರಮ!
ಪುಸ್ತಕದ ಅಂಗಡಿ ಹೊಕ್ಕು, ಕಣ್ಸೆಳೆಯುವ ತರತರಹದ ಕಾರ್ಡ್ ಹೆಕ್ಕಿ ತೆಗೆಯುವುದೇ ಒಂದು ದೊಡ್ಡ ಕೆಲಸ. ಸಂಭ್ರಮವೂ ಹೌದು. ಅಂಗಡಿ, ಅಂಗಡಿ ಸುತ್ತಿ, ಚೌಕಾಸಿ ಮಾಡಿ, ಅದು ಬೇಕೋ, ಇದೇ ಸಾಕೋ ಎನ್ನುವ ಜಿಜ್ಞಾಸೆಗೆ ಬಿದ್ದು, ಅದಕ್ಕೆ ಇದು ಸಮ. ಅದಕ್ಕೆ ಹೋಲಿಸಿದರೆ ಇದೇ ಚೆಂದ. ಒಂದಕ್ಕಿಂತ ಒಂದು ಚೆಂದ. ಏನೋ ಸುಂದರ. ಕೊನೆಗೂ ಹಲವಾರು ಇಷ್ಟಗಳ ಮಧ್ಯೆ ಅವರಿಗೆ ಇದು, ಇವರಿಗೆ ಅದು ಎಂದು ಆಯ್ದುಕೊಂಡು, ತಂದಿದ್ದನ್ನು ಹಲವಾರು ಕೋನಗಳಲ್ಲಿ ನೋಡಿ, ಮನೆ ಮಂದಿಗೆ ತೋರಿಸುವ, ಮನಸ್ಸನ್ನು ಹಗುರ ಮಾಡಿಕೊಳ್ಳುವ ಸಾರ್ಥಕ್ಯ ಭಾವ. ಇಷ್ಟಾದರೆ ಮುಗಿಯಿತೇ? ಕನ್ನಡ ಸಾಹಿತ್ಯದ ಚೆಂದದ ಸಾಲುಗಳನ್ನು ಆಯ್ದು, ಮುದ್ದುಮುದ್ದಾದ ಅಕ್ಷರಗಳಲ್ಲಿ ಪೋಣಿಸಿ, ಪೋಸ್ಟ್ ಡಬ್ಬಿಗೆ ಉಣಿಸಿ ಬಂದರೆ ಮನದಲ್ಲಿ ಮಸ್ತ್ ಮಂದಹಾಸ.
ಬದಲಾದ ಕಾಲಘಟ್ಟದಲ್ಲಿ ಮನುಷ್ಯನ ಮನೋಭಾವಗಳು ಬದಲಾಗುತ್ತಿವೆ. ಬ್ಯುಸಿ ಎನ್ನುವುದೇ ಹೆಮ್ಮೆಯ ವಿಚಾರವಾಗಿರುವ ಜಗದಲ್ಲಿ ಈಗ ಯಾರಿಗೆ ಅಂಗಡಿ, ಅಂಗಡಿ ಅಲೆಯುವ ಕೊಳ್ಳುವ ವ್ಯವಧಾನವಿದೆ? ಸಂಪರ್ಕ ಕ್ರಾಂತಿಯಿಂದ ಜಗತ್ತೇ ಅಂಗೈಯಲ್ಲಿರುವಾಗ ಮನೆಯಲ್ಲೇ ಕಂಪ್ಯೂಟರ್ ಮುಂದೆ ಕುಳಿತೋ, ಮೊಬೈಲ್ ಮೂಲಕ ಎಲ್ಲಿದ್ದರೂ ಯಾರನ್ನಾದರೂ ಸಂಪರ್ಕಿಸುವ ಈ ವೇಗದ ದಿನಗಳಲ್ಲಿ ಯಾರಿಗೂ ಸಮಯ-ಸಂಯಮ ಇಲ್ಲ.
ಈಗಂತೂ ಗ್ರೀಟಿಂಗ್ ಕಾರ್ಡ್ ಗಳಿಗಾಗಿ ಹಲವಾರು ಜಾಲತಾಣಗಳು ಹುಟ್ಟಿಕೊಂಡಿವೆ. ಸಿದ್ಧ ರೂಪದಲ್ಲಿ ಅಲ್ಲದೇ, ನಮ್ಮ ಕಲ್ಪನೆಗೆ ಬೇಕಾದಂತೆ ನಾವೇ ವಿನ್ಯಾಸಗೊಳಿಸುವ ಅವಕಾಶಗಳು ಇಂತಹ ತಾಣಗಳಲ್ಲಿ ಲಭ್ಯವಿದೆ. ಇಂತಹ ಶುಭಾಶಯಗಳನ್ನು ಇ-ಮೇಲ್ ಮೂಲಕ, ಮೊಬೈಲ್ ಮೂಲಕ ಕಳುಹಿಸುವುದು ಸುಲಭ. ಹೀಗಾಗಿ, ಈ ಮಾಧ್ಯಮವೇ ಈಗ ಹೆಚ್ಚು ಜನಪ್ರಿಯ.
ಕೆಲವು ನೆನಪುಗಳೇ ಹಾಗೆ. ಅವು ನೀಡುವ ಖುಷಿ ಅಥವಾ ರೋಮಾಂಚನ ಮಾತಿಗೆ ನಿಲುಕುವಂಥದ್ದಲ್ಲ. ಈ ಗ್ರೀಟಿಂಗ್ಸ್ ಕಾರ್ಡ್ ಕಳುಹಿಸುವ, ಪಡೆಯುವ ಆನಂದ ತಂತ್ರಜ್ಞಾನದ ಭರಾಟೆಯಲ್ಲಿ ಕಣ್ಮರೆಯಾಗಿ ಹೋಗಿದೆ. ಅದೆಲ್ಲ ಸರಿ, ಆದರೆ, ಮನುಷ್ಯನ ಭಾವನೆಗಿಂತ ವ್ಯವಹಾರ ಅತ್ಯಂತ ಕಠಿಣ ತರಹದ್ದು. ನಮ್ಮ ನಮ್ಮ ವ್ಯವಹಾರಿಕ ಜಗತ್ತು ನಮ್ಮನ್ನು ಎತ್ತೆತ್ತಲೋ ಒಯ್ಯುತ್ತದೆ. ಏನೋ ಪಾಠವೆಂಬಂತೆ ಕಲಿಸಿ ಬಿಡುತ್ತದೆ. ಬದುಕಿನ ಎಲ್ಲಾ ಸೂಕ್ಷ್ಮತೆಗಳ ಮೇಲೆ ಧೂಳು ಮುಸುಕುತ್ತಿರುತ್ತದೆ. ಈ ಜಂಜಾಟದಲ್ಲಿ ನಾವು ಸೋಲುತ್ತಾ ಹೋಗಬೇಕಾಗುತ್ತದೆ. ಹೀಗೆಯೇ ಸಾಗುತ್ತದೆ ಎಲ್ಲಾ…!
ಇಷ್ಟೆಲ್ಲ ಸಂಗತಿಗಳ ನಡುವೆಯೂ ಒಂದು ಹೊಸವರ್ಷದ ಆದಿಯಲ್ಲಿ ವರ್ತಮಾನ ಪತ್ರಿಕೆಯೊಂದು ವರದಿ ಮಾಡಿದ ಆಘಾತಕಾರಿ ಸುದ್ದಿ ಹೀಗಿದೆ. ಆಪ್ತರೊಬ್ಬರು ಹೊಸವರ್ಷಕ್ಕೆ ಶುಭಾಶಯ ಹೇಳಲಿಲ್ಲವೆಂಬ ಕಾರಣಕ್ಕೆ ಬೇಸರಗೊಂಡ ಯುವತಿ ನೇಣಿಗೆ ಕೊರಳೊಡ್ಡಿದ್ದು, ಪ್ರತಿವರ್ಷದಂತೆ ಆ ವರ್ಷವೂ ಮಧ್ಯರಾತ್ರಿ 12ಕ್ಕೆ ದೂರವಾಣಿ ಕರೆ ಮಾಡಿ ಶುಭಾಶಯ ಹೇಳುತ್ತಿದ್ದವರು ಅಂದು ಕರೆ ಮಾಡಲಿಲ್ಲವೆಂದೂ, ಬೇಸರಗೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆಂದೂ.. ಪೊಲೀಸರಿಗೆ ಲಭ್ಯವಾದ ಪತ್ರದ ಒಕ್ಕಣಿಕೆ, ಸಾವಿನ ಬಗ್ಗೆ ವಿಷಾದವಿದ್ದರೂ, ಒಂದಿಷ್ಟು ಭಾವನಾತ್ಮಕ ಮನಸ್ಸುಗಳು ಇನ್ನೂ ಇರುವುದು ಗಮನಿಸಬೇಕಾದ ಒಂದು ಅಂಶ.
ಹೇಗೂ ಇರಲಿ; ಮನುಷ್ಯನ ದೈನಂದಿನ ಬದುಕಲ್ಲಿ ಕೊಂಚ ಲವಲವಿಕೆ, ಸಂತಸ, ಚೈತನ್ಯ ಉಕ್ಕಿಸುವ ಹಬ್ಬಗಳನ್ನು ಸ್ವಾಗತಿಸೋಣ. ಈ ನೆಪದಲ್ಲಾದರೂ ಶುಭಾಶಯಗಳು ನಮ್ಮೆಲ್ಲರ ನಡುವೆ ಹರಿದಾಡುತ್ತಲೇ ಇರಲಿ. ಸುತ್ತಿಕೊಂಡಿರುವ ಬಾಂಧವ್ಯದ ಎಳೆಯ ಗಂಟುಗಳು ಭದ್ರವಾಗುತ್ತಲೇ ಹೋಗಲಿ.