ಕೆಂಪುಬೊಟ್ಟಿನ ಮೀನು
ಉಜ್ಜಲ ದೇಶ ಸಂಪೂರ್ಣ ಸೀದು ಹೋಗಿತ್ತು. ದಂಡೆತ್ತಿ ಬಂದ ವೈರಿ ಸೇನೆ ಇಡೀ ರಾಜ್ಯವನ್ನು ತನ್ನ ವಶಕ್ಕೆ ಪಡೆದಿತ್ತು. ಯುದ್ಧ ಮತ್ತು ಪ್ರೇಮದಲ್ಲಿ ಏನೇ ಮಾಡಿದರೂ ಅದು ಸರಿಯೇ ಎಂಬ ಮಾತಿಲ್ಲವೇ? ಹಾಗೇ ಇಡೀ ಉಜ್ಜಲ ದೇಶವನ್ನು ಚೆಂಡಾಡಿದ ವೈರಿ ಸೇನೆ ಏನೆಲ್ಲಾ ಮಾಡದೇ ಉಳಿದಿತ್ತು ಎಂಬುದಷ್ಟೇ ಇತ್ತು.
ಕಥೆಗಾರ ಆರಂಭದಲ್ಲೇ ಪ್ರವೇಶಿಸಿದ್ದಾನೆ. ಉಜ್ಜಲ ದೇಶದ ಮಹತ್ವದ ಕಥೆಗಾರನಾತ. ಅವನಿಗೊಬ್ಬಳು ಪ್ರೇಯಸಿ. ಆಕೆ ಅವನ ಅಭಿಮಾನಿ. ಅವನೂ ಅವಳ ಆರಾಧಕ. ಅವಳಲ್ಲಿ ಆತ ಸದಾ ದೇವತೆಯನ್ನು ಕಾಣುತ್ತಿದ್ದ. ಅವಳು ಅವನಲ್ಲಿ ಪ್ರೀತಿಯ ಆರಾಧನೆಯನ್ನು ಬಯಸುತ್ತಿದ್ದಳು.
ಕಥೆಗಾರ ಮತ್ತವನ ಪ್ರೇಯಸಿ ಆ ಮಹಾಯುದ್ಧದಲ್ಲಿ ಕದಡಿಹೋಗಿದ್ದರು.
ಕಥೆಗಾರ ಉದ್ದೇಶಪೂರ್ವಕ ಈ ಕದಡಿಹೋಗಿದ್ದರು ಎಂಬ ಪದ ಬಳಸಿದ್ದಾನೆ. ಅದಕ್ಕೆ ಬೇರೆ ಬೇರೆ ಅರ್ಥಗಳನ್ನು ಓದುಗ ಬಂಧುಗಳು ಅರ್ಥೈಸಿಕೊಳ್ಳುವಂತೆ ವಿನಂತಿಸಿದ್ದಾನೆ.
ಕಥೆಗಾರನ ಪ್ರೇಯಸಿ ತನ್ನ ಮನೆ ಮಕ್ಕಳನ್ನು ತೊರೆದು ಕಾಡು ಸೇರಿದ್ದಾಳೆ. ಅವಳು ಕಥೆಗಾರನನ್ನು ಹುಡುಕುತ್ತಿದ್ದಾಳೆ. ಕಥೆಗಾರ ವಾಸಿಸುತ್ತಿರುವ ಬೀದಿಯನ್ನು ಸಂಪೂರ್ಣವಾಗಿ ವೈರಿಸೇನೆ ಸುಟ್ಟುಹಾಕಿದೆ. ಅದು ಆಸ್ಥಾನ ವಿದ್ವಾಂಸರಿದ್ದ ಬೀದಿ. ಆ ಬೀದಿಯಲ್ಲಿ ನಿತ್ಯವೂ ಕಾವ್ಯ, ಕಥೆ, ಗಮಕ, ಗಾಯನ, ಪುರಾಣ, ಇತಿಹಾಸ, ಅಲಂಕಾರ, ತರ್ಕ, ಮೀಮಾಂಸೆ, ಶಾಸ್ತ್ರಾರ್ಥಗಳ ಗೋಷ್ಠಿ ನಡೆಯುತ್ತಿರುತ್ತಿತ್ತು. ಬೀದಿಯ ಸ್ವಾಗತ ದ್ವಾರದಲ್ಲೇ ಇರುವುದು ಸಾಹಿತ್ಯ ಮಂಟಪ. ಆ ಮಂಟಪದಲ್ಲಿ ವರ್ಷಪೂರ್ತಿ ಸಾಹಿತ್ಯ ಸಮಾರಾಧನೆ ನಡೆಯುತ್ತಿರುತ್ತದೆ. ಅನೇಕ ಬಾರಿ ಉಜ್ಜಲದೇಶದ ರಾಜ ಮಾರುವೇಷದಲ್ಲಿ ಬಂದು ಆ ಸಾಹಿತ್ಯ ಸಮಾರಾಧನೆಯನ್ನು ಸ್ವೀಕರಿಸಿದ್ದಿದೆ. ಆಸ್ಥಾನದಲ್ಲಿ ನಡೆಯುವ ಚರ್ಚೆ, ಸಾಹಿತ್ಯ, ವಿಚಾರಗೋಷ್ಠಿಗಳೇನಿದ್ದರೂ ರಾಜನ ಸಮ್ಮುಖದಲ್ಲಿ ನಡೆಯುತ್ತದೆ. ಆಗ ಸಾಹಿತಿ, ಕವಿ, ಕಥೆಗಾರ, ಪಂಡಿತರೆಲ್ಲಾ ಮುಕ್ತವಾಗಿ ಮಾತನಾಡುವುದಿಲ್ಲ. ಎಲ್ಲೋ ಒಂದೆಡೆ ಏನನ್ನೋ ಅಡಗಿಸುತ್ತಾರೆ ಅಥವಾ ತನ್ನನ್ನು ಮೆಚ್ಚಿಸಲೆಂದಷ್ಟೇ ವರ್ತಿಸುತ್ತಾರೆ ಎಂಬುದು ರಾಜನಿಗೆ ಗೊತ್ತಿದೆ. ಅದಕ್ಕೆ ಅವನು ಆ ಮಂಟಪಕ್ಕೆ ಬರುತ್ತಾನೆ. ಜೊತೆಗೆ ರಾಣಿಯೂ. ಈಗ ಇದಾವುದೂ ಉಳಿದಿಲ್ಲ. ವೈರಿಸೇನೆ ಬೀದಿಯ ಒಂದೇ ಒಂದು ಮನೆಯನ್ನು ಬಿಡದೇ ಸುಟ್ಟು ಹಾಕಿದೆ. ಸಾವಿರಾರು ಲಾಕ್ಷಣಿಕ ಗ್ರಂಥಗಳೂ ಸೇರಿ ಸರ್ವಸ್ವವೂ ನಾಶವಾಗಿವೆ. ಕಥೆಗಾರ ಅದೆಷ್ಟು ಸಾವಿರ ಕಥೆ ಬರೆದು ಪೇರಿಸಿಟ್ಟಿದ್ದನೋ ಅದೆಲ್ಲವೂ ಹೊತ್ತಿ ಭಸ್ಮವಾಗಿದೆ.
ಕತೆಗಾರನ ಪ್ರೇಯಸಿ ಆ ಬೀದಿಯಲ್ಲೆಲ್ಲಾ ಸುತ್ತಿದ್ದಾಳೆ. ಕಥೆಗಾರನ ಕುರುಹೇನಾದರೂ ಸಿಗುವುದೋ ಎಂದು ಹಂಬಲಿಸಿದ್ದಾಳೆ. ಆದರೆ ಏನೂ ಇಲ್ಲ. ಯಾವುದೂ ಇಲ್ಲ. ಆಕೆಗೆ ತನ್ನ ಗಂಡ, ಮಕ್ಕಳೇನಾದರೆಂಬುದು ಗೊತ್ತಿಲ್ಲ. ಅವರೆಲ್ಲಾ ಎಲ್ಲಾದರೂ ಹೋಗಿ ಸುಖವಾಗಿ ಇರಬಹುದು ಎಂಬ ಗಟ್ಟಿ ನಂಬುಗೆ ಅವಳಲ್ಲಿ ಇದೆ. ಆದರೆ ಕಥೆಗಾರ, ಅವಳ ಪ್ರಿಯಕರ ಮಾತ್ರ ಅವಳಿಗೆ ಈಗ ಎಲ್ಲಿದ್ದಾನೆ, ಹೇಗಿದ್ದಾನೆ ಎಂಬುದು ಬೇಕಾಗಿದೆ. ಅದಕ್ಕಾಗಿ ಅವಳು ಅವನನ್ನು ಹುಡುಕುತ್ತಿದ್ದಾಳೆ.
ಬೀದಿಯುದ್ದಕ್ಕೂ ಒಬ್ಬರೇ ಒಬ್ಬರು ಕಾಣಿಸುತ್ತಿಲ್ಲ.ಒಂದಾದರೂ ಜೀವ ಸಿಕ್ಕರೂ ಸಾಕು ಎಂದು ಆಕೆ ಹಂಬಲಿಸುತ್ತಿದ್ದಾಳೆ. ಅವಳ ಪ್ರೀತಿಯ ಕಥೆಗಾರ ಎಲ್ಲಿದ್ದಾನೆ ಎಂದು ತಿಳಿಸಲು ಒಂದು ನೀಲಿ ರೆಕ್ಕೆಯ ಹಳದಿ ಪುಚ್ಛದ ಹಕ್ಕಿ ಸಿಕ್ಕರೂ ಸಾಕು. ಆ ಹಕ್ಕಿಯ ಉಲಿಯನ್ನು ಆಕೆ ಅರ್ಥಮಾಡಿಕೊಂಡಾಳು. ಅವಳಿಗೆ ಆಮೇಲೆ ಕಥೆಗಾರ ಸಿಗುತ್ತಾನೆ.
ಆದರೆ ಎಲ್ಲಿದೆ ಹಕ್ಕಿ?
ಆ ಪ್ರಿಯತಮೆ ಬೀದಿಯ ಉದ್ದಕ್ಕೂ ಸಾಗುತ್ತಾಳೆ. ಎಲ್ಲವೂ ಸುಟ್ಟು ಭಸ್ಮವಾಗಿದೆ. ಕಥೆಗಾರನ ಮನೆ ಅಲ್ಲಿತ್ತು ಎಂಬ ಬಗ್ಗೆ ಯಾವ ಕುರುಹೂ ಇಲ್ಲದಂತಿದೆ. ಬೀದಿಯ ನೆತ್ತಿಯಲ್ಲಿ ಅರಮನೆಯ ವಿಮಾನಗೋಪುರ ಕಾಣುತ್ತಿದೆ. ಎರಡು ದಿನಗಳ ಹಿಂದೆ ಆಕೆಗೆ ಮೀನುಗಾರ ಹೇಳಿದ್ದ, ಅರಮನೆಯನ್ನು ವೈರಿಗಳು ಏನೂ ಮಾಡಿಲ್ಲ. ಅವರೆಲ್ಲಾ ಅದರೊಳಗಿನ ವೈಭೋಗವನ್ನು ಅನುಭವಿಸುತ್ತಿದ್ದಾರೆ ಎಂದು.
ಕಥೆಗಾರನ ಪ್ರಿಯತಮೆ ಅರಮನೆಯತ್ತ ಹೋಗೋಣವೇ ಎಂದು ಯೋಚಿಸುತ್ತಾಳೆ. ಆದರೆ ಅವಳಿಗೆ ಗೊತ್ತು, ಅಲ್ಲಿ ವೈರಿಸೇನೆ ತನ್ನ ಮೇಲೆ ಆಕ್ರಮಣ ಮಾಡುವುದು ಖಚಿತ. ಹಾಗಾಗಿ ಆಕೆ ಬೀದಿಯ ನೆತ್ತಿಯನ್ನು ದಾಟಿ ಸೀದಾ ನದಿಯತ್ತ ನಡೆಯುತ್ತಾಳೆ. ನದಿ ದಂಡೆಯಲ್ಲಿ ಅದೇ ಮೀನುಗಾರ. ಅವನು ಅದೇ ಭಂಗಿಯಲ್ಲಿ ಕುಳಿತಿದ್ದಾನೆ. ಈ ಬಾರಿ ಅವನ ಕೈಯಲ್ಲಿ ಬಲೆಯಿಲ್ಲ,ಗಾಳವಿಲ್ಲ. ಮೀನುಗಾರ ಯಾವುದೋ ಹಾಡನ್ನು ಹಾಡುತ್ತಿದ್ದಾನೆ. ಕಥೆಗಾರನ ಪ್ರಿಯತಮೆ ಆ ಹಾಡಿಗೆ ಕಿವಿಯಾನಿಸುತ್ತಾಳೆ. ಅದು ಹಾಡಲ್ಲ, ಕಥೆ. ಕಥೆಯನ್ನು ಆ ಮೀನುಗಾರ ಹಾಡಿನ ರೀತಿ ಹೇಳುತ್ತಿದ್ದಾನೆ. ಪ್ರಿಯತಮೆಗೆ ಅರ್ಥವಾಗುತ್ತದೆ, ಅದು ತನ್ನ ಪ್ರಿಯತಮನೇ ಬರೆದ ಕಥೆ. ಮೀನುಗಾರ ಅದನ್ನೇ ಹೇಳುತ್ತಿದ್ದಾನೆ.
ಆಕೆ ಆ ಮೀನುಗಾರನ ಬಳಿ ಹೋಗಿ ಕೂರುತ್ತಾಳೆ. ಆತ ಆಕೆಯನ್ನು ನೋಡಿ ನಸುನಗುತ್ತಾನೆ. ಅವನು ಮತ್ತೆ ಆ ಕಥಾನಕವನ್ನು ಹಾಡುತ್ತಾನೆ. ಮೀನುಗಾರನ ವಿಶಾಲ ಎದೆಯಲ್ಲಿ ತನ್ನ ದೇಹವನ್ನು ಆನಿಸಿಕೊಳ್ಳಬೇಕೆಂದು ಆ ಪ್ರಿಯತಮೆಗೆ ಒಮ್ಮಿಂದೊಮ್ಮೆಲೆ ದಟ್ಟವಾಗಿ ಅನಿಸುತ್ತದೆ. ಅವಳಿಗೆ ಆ ಕಥೆಯ ಮೂಲಕ ತನ್ನ ಪ್ರಿಯಕರ ಮೀನುಗಾರನಲ್ಲಿ ಕಾಣಿಸುತ್ತಾನೆ.
ಮೀನುಗಾರ ಹರಿವ ನೀರಿನಲ್ಲಿ ಪಾದಗಳನ್ನು ಇಳಿಬಿಟ್ಟಿದ್ದಾನೆ. ಅವನ ಮುದ್ದಾದ ಪಾದಗಳನು ನೋಡಿ ಆಕೆಗೆ ಉನ್ಮಾದವಾಗುತ್ತದೆ. ಅವಳೂ ತನ್ನ ಪಾದಗಳನ್ನು ನೀರಿಗೆ ನೀವುತ್ತಾಳೆ. ಮೀನುಗಳು ಬಂದು ಪಾದಗಳನ್ನು ಚುಂಬಿಸಿ ಸಾಗುತ್ತವೆ. ಒಂದಾದ ಮೇಲೊಂದು ಮೀನು ಬಂದೂ ಬಂದೂ ನೀಡುವ ಮುತ್ತಿನ ಮೋಹಕತೆಯನ್ನು ಅನುಭವಿಸುತ್ತಾ ಆ ಕಥೆಗಾರನ ಪ್ರಿಯತಮೆ ಆ ಮೀನುಗಾರನ ಪಾದದ ಕಿರುಬೆರಳನ್ನು ತನ್ನ ಪಾದದ ಕಿರುಬೆರಳಿನ ಜೊತೆ ಬಂಧಿಸುತ್ತಾಳೆ.
ನನಗೇನೂ ಗೊತ್ತಿಲ್ಲ. ಈ ರಾಜ್ಯ, ಈ ಕೋಶ, ರಾಜ, ಅಂತಃಪುರ, ರಾಣಿಯರು ಯಾರೂ ಎಲ್ಲಿದ್ದಾರೆಂದು ನಾನು ಹೇಳಲಾರೆ. ಆದರೆ ಕಥೆಗಾರ ಮಾತ್ರ ದಂಡೆಯಾಚೆ ಅಗೋ ಅಲ್ಲಿ ಇದ್ದಾನೆ ಎಂದು ಮೀನುಗಾರ ಅವಳಿಗೆ ಮಾತ್ರ ಕೇಳಿಸುವಂತೆ ಹೇಳುತ್ತಾನೆ.
ಅವಳಿಗೆ ಆ ಮಾತಿನ ಸ್ಪರ್ಶ ಮೀನುಗಾರನ ಕಿರುಬೆರಳ ಮೂಲಕವೇ ಹರಿದುಬಂದಂತಾಗಿ ಮೈ ಝುಂ ಎನ್ನುತ್ತದೆ. ಒಂದೇ ಒಂದು ಸಾರಿ ನನ್ನನ್ನು ಈ ನದಿಯ ದಡದಾಚೆ ಎತ್ತಿ ಹಾಕಿಬಿಡು, ಮುಂದೆಂದೂ ನಾನು ಈ ರಾಜ್ಯದತ್ತ ಮುಖ ಮಾಡಲಾರೆ, ನನಗೆ ನನ್ನ ಗಂಡ, ಮಕ್ಕಳು, ಮನೆ, ಅರ್ಥ, ಕಾಮ ಯಾವುದೂ ಬೇಕಾಗಿಲ್ಲ ಎಂದು ಆಕೆ ಆ ಮೀನುಗಾರನ ಬಳಿ ಮೊರೆಯಿಡುತ್ತಾಳೆ. ಆತ ತಾನು ಹಾಡುತ್ತಿದ್ದ ಕಥೆಯನ್ನು ನಿಲ್ಲಿಸುತ್ತಾನೆ. ಅವಳನ್ನು ಬಾಚಿ ತಬ್ಬಿಕೊಂಡು ತಲೆಯ ಮೇಲೆ ಹೊತ್ತು ನದಿಗೆ ಧುಮುಕುತ್ತಾನೆ. ಅವಳ ಮೈಮಾಟಕ್ಕೆ ಯಾವ ಖತಿಯೂ ಆಗದಂತೆ ನದಿಯ ಅಬ್ಬರವನ್ನು ಮಣಿಸುತ್ತಾ ಈಜುತ್ತಾನೆ. ನದಿಯ ಮಧ್ಯ ಭಾಗದಲ್ಲಿ ಆ ಬಂಡೆಯ ಮೇಲೆ ಅವಳನ್ನು ಕೆಡಹುತ್ತಾನೆ. ಆಕೆ ಬಾಯ್ತುಂಬಾ ನಗುತ್ತಾಳೆ. ಅವಳ ನಗುವಿನ ರಭಸಕ್ಕೆ ಒಂದು ಕ್ಷಣ ಆ ನದಿಯ ನಿನಾದವೂ ನಾಚಿಕೊಳ್ಳುತ್ತದೆ.
ಓಹ್ ಎನ್ನುತ್ತಾಳೆ ಆಕೆ.
ಅವನು ಉಶ್ ಅನ್ನುತ್ತಾನೆ.
ಇಬ್ಬರೂ ಆ ಬಂಡೆಯ ಮೇಲೆ ಕೂರುತ್ತಾರೆ. ಅವಳು ಅತ್ಯಂತ ಪ್ರೀತಿಯಿಂದ ಅವನ ಒದ್ದೆ ಮೈಗೆ ಅಂಟಿದ್ದ ಆ ಒದ್ದೆ ಶಲ್ಯವನ್ನು ಬಿಡಿಸುತ್ತಾಳೆ. ಅವನು ಅವಳ ಕಣ್ಣುಗಳನ್ನು ನೋಡುತ್ತಾನೆ. ಅವಳು ಅವನ ಶಲ್ಯವನ್ನು ಬಿಚ್ಚಿ ಅದರಲ್ಲಿದ್ದ ನೀರನ್ನು ಹಿಂಡಿ ಸೀದುತ್ತಾಳೆ. ಆಮೇಲೆ ಅವನು ಶತಮಾನಗಳಿಂದ ಮೈಗೆ ಬಿಗಿದುಕಟ್ಟಿದಂತಿದ್ದ ಆ ಪಂಚೆಯನ್ನು ನಿಧಾನವಾಗಿ ಸಡಿಲಿಸುತ್ತಾಳೆ.ನೋಡುತ್ತಾ ನೋಡುತ್ತಾ ಮೀನುಗಾರ ಬೆತ್ತಲಾಗುತ್ತಾನೆ.
ಅವಳೂ ಅವನ ಕಣ್ಮುಂದೆಯೇ ಒಂದೊಂದೇ ಬಟ್ಟೆಗಳನ್ನು ಕಳಚುತ್ತಾಳೆ. ಹೂಬಿಸಿಲು ಬಂಡೆಯ ಮೇಲೆ ರಾಚುತ್ತಿದೆ. ನದಿ ಬಂಡೆಯನ್ನು ಸುತ್ತುಬಳಸಿ ತಬ್ಬಿ ಮುದ್ದಾಡಿ ಮುಂದೋಡುತ್ತಿದೆ. ಅದೆಷ್ಟು ಕಾಲದಿಂದ ಆ ತಬ್ಬುಗೆಯೋ ಏನೋ? ನದಿಯ ತಬ್ಬುಗೆಗೆ ಆ ಕೊರಲು ಬಂಡೆ ಅದೆಷ್ಟು ನುಣುಪಾಗಿದೆ ಆಹಾ!
ಇಡೀ ದೇಶ ನಾಶವಾಗಿದೆ, ನಾನು ನನ್ನ ಗಂಡ, ನನ್ನ ಮಕ್ಕಳು, ನನ್ನ ಮನೆ, ನನ್ನ ಉದ್ಯೋಗ, ನನ್ನ ಕೋಶ..ಎಲ್ಲವೂ ಅನ್ನುತ್ತಾಳೆ ಕಥೆಗಾರ ಪ್ರಿಯತಮೆ.
ಆದರೆ ಈ ನದಿ, ಈ ಹರಿವು, ಈ ಬಂಡೆ ಈ ಹೊಂಬೆಳಕು ಯಾವುದನ್ನೂ ಯುದ್ಧ, ಆಕ್ರಮಣ, ದಾಳಿ ಏನೂ ಮಾಡಲಾಗಿಲ್ಲ ಎಂದು ಮೀನುಗಾರ ಹೇಳುತ್ತಾನೆ.
ನನ್ನ ಬಲೆಗೆ ನಿನ್ನೆಯೂ ಆ ಕೆಂಪುಬೊಟ್ಟಿನ ಮೀನು ಬಂದಿತ್ತು. ನಾನು ಅದನ್ನು ಮತ್ತೆ ನೀರಿಗೆ ಕಳುಹಿಸಿಕೊಟ್ಟೆ ಎನ್ನುತ್ತಾನೆ.
ಅವನ ಜೊತೆ ರಮಿಸಬೇಕು ಎಂದು ಹವಣಿಸಿದ್ದ ಆ ಕಥೆಗಾರನ ಪ್ರಿಯತಮೆ ಮತ್ತೆ ತನ್ನ ಬಟ್ಟೆಗಳನ್ನು ಸುತ್ತಿಕೊಳ್ಳುತ್ತಾಳೆ.ಅವನಿಗೆ ಮತ್ತೆ ಬಿಚ್ಚಿದ ಪಂಚೆ ಉಡಿಸಿ ಅರೆಬಾಡಿದ ಶಲ್ಯವನ್ನು ಹೊದಿಸುತ��ತಾಳೆ.
ಇನ್ನರ್ಧ ದಾರಿ ದಯವಿಟ್ಟು ನನ್ನನ್ನು ಈ ನದಿಯಾಚೆಗೆ ದಾಟಿಸಿಕೊಡು. ಮತ್ತೆಂದೂ ನಾನು ನಿನ್ನ ಕಾಣಲಾರೆ ಎಂದು ಭರವಸೆ ನೀಡಿದಂತೆ ಬೇಡುತ್ತಾಳೆ. ಅವಳ ಧ್ವನಿಯಲ್ಲಿ ಆ ಆರ್ದ್ರತೆಯನ್ನು ಕಂಡ ಮೀನುಗಾರ ಅವಳ ಮುಖವನ್ನು ಬೊಗಸೆಯಲ್ಲಿ ಹಿಡಿದು ಅವಳ ನೆತ್ತಿಗೆ ಚುಂಬಿಸುತ್ತಾನೆ. ಅರ್ಧ ಹಾದಿಯಲ್ಲಿ ನಿನ್ನನ್ನು ಬಿಡಲಾರೆ,ಹಾಗೆಯೇ ಆ ಕಥೆಯನ್ನೂ ಅರ್ಧಕ್ಕೆ ನಿಲ್ಲಿಸಲಾರೆ ಎನ್ನುತ್ತಾನೆ.
ಅದು ನನ್ನ ಪ್ರಿಯಕರನ ಕಥೆ, ಆ ಕಥೆಗೆ ಸಾವಿರಾರು ಓಟಗಳಿವೆ. ನನಗೆ ಆ ಕಥೆಯನ್ನು ಕೇಳಿಸು ಎಂದು ಆಕೆ ವಿನಂತಿಸುತ್ತಾಳೆ.
ಮೀನುಗಾರ ಕೇಳುತ್ತಾನೆ,ಆ ಕಥೆ ನನ್ನದು.
ಹಾಗಾದರೆ ನಾನು ಪ್ರೀತಿಸಿದ ಕಥೆಗಾರ ನೀನೇನು?
ನನಗೆ ಗೊತ್ತಿಲ್ಲ. ಅವನು ಯಾರೆಂದೂ ನನಗೆ ತಿಳಿದಿಲ್ಲ. ಪ್ರತೀ ನಿತ್ಯ ಸಂಜೆ ನನ್ನ ಬಳಿಗೆ ನದಿ ದಂಡೆಯಲ್ಲಿ ನಾನು ಕುಳಿತಿದ್ದಾಗ ಅವನು ಬರುತ್ತಿದ್ದ. ಆಸ್ಥಾನಕ್ಕೊಂದು ಕಥೆ ಬೇಕು ಹೇಳು ಎನ್ನುತ್ತಿದ್ದ. ನಾನು ಹೇಳುತ್ತಿದ್ದೆ. ಅವನು ಅದನ್ನು ಕಣ್ಮುಚ್ಚಿ ಕೇಳುತ್ತಿದ್ದ. ಒಂದಾದರೊಂದು ದಿನ ನಾನು ಅವನಿಗೆ ಕಥೆಯನ್ನು ಏನು ಮಾಡಿದೆ ಎಂದು ಕೇಳುತ್ತಿರಲಿಲ್ಲ. ಅವನು ಆ ಕಥೆಯನ್ನು ಆಸ್ಥಾನದಲ್ಲಿ ಹೇಳಿದನೇ ನನಗೂ ಗೊತ್ತಿಲ್ಲ. ನನಗದರ ಅಗತ್ಯವೂ ಇಲ್ಲ …..
ಯುದ್ಧ ನಡೆದ ಮೇಲೆ ಅವನು ಬರಲಿಲ್ಲ. ಆಮೇಲೆ ಬಂದವಳು ನೀನು.
ಹಾಗಾದರೆ ನೀರಿನಲ್ಲಿ ಮುಳುಗಿದ್ದ ನಿನ್ನ ಪಾದಗಳನ್ನು ನೋಡಿ ನನ್ನಲ್ಲಿ ಉಕ್ಕಿದ್ದ ಆ ಲಹರಿಗೆ ಈಗ ಅರ್ಥ ಸಿಕ್ಕಿತು ಎಂದಳು ಅವಳು.
ಮತ್ತೆ ಅವನ ಶಲ್ಯವನ್ನು ಸೆಳೆದಳು.ಪಂಚೆಯನ್ನು ಕಿತ್ತಳು.ತನ್ನ ಮೈಮೇಲಿನ ಬಟ್ಟೆಗಳನ್ನು ನಿವಾಳಿಸಿದಂತೆ ಕಳಚಿದಳು.ಎಲ್ಲವನ್ನೂ ನದಿಗೆ ಎಸೆದು ಆ ಮೀನುಗಾರನನ್ನು ಬಿಗಿಯಾಗಿ ತಬ್ಬಿಕೊಂಡಳು.
ದಡದಾಚೆಗೆ ದೇಶಕ್ಕೆ ಮುಖಮಾಡಿ ಉಜ್ಜಲ ದೇಶದ ರಾಜ ಮತ್ತು ಅವನ ದಂಡು ನಿಂತಿತ್ತು.
ಮೀನುಗಾರ ಅವಳ ತೆಕ್ಕೆಯಲ್ಲಿ ಉಸುರಿದ, ಮತ್ತೆ ಯುದ್ಧ ನಡೆಯುತ್ತದೆ. ರಾಜ ಮರಳಿ ಬರುತ್ತಾನೆ. ಸೋತುಹೋದ ದೇಶವನ್ನು ರಾಜ ಮತ್ತೆ ಗೆಲ್ಲುತ್ತಾನೆ. ಆ ಬೀದಿ, ಆ ಮನೆಗಳು ಮತ್ತೆ ಬರುತ್ತವೆ. ಕಥೆಗಾರ ಮತ್ತೆ ನನ್ನ ಬಳಿಗೆ ಕಥೆ ಕೇಳಲು ಬರುತ್ತಾನೆ. ಅವನಿಗಾಗಿ ನಾನು ಕಥೆ ಹೇಳುತ್ತೇನೆ. ಅವನು ಅದನ್ನು ಆಸ್ಥಾನದಲ್ಲಿ ಮತ್ತೆ ಹೇಳುತ್ತಾನೆ. ನಾನು ರಾಣಿ, ಆ ಉಜ್ಜಲ ದೇಶದ ಅರಸಿ. ಈಗ ಈ ನದಿಯ ಅರ್ಧದಲ್ಲಿ ನಾನಿದ್ದೇನೆ. ನಾವಿಲ್ಲೇ ಇರೋಣ. ಇದು ಯಾವ ದೇಶವೂ ಅಲ್ಲ. ರಾಜ ಯುದ್ಧದಲ್ಲಿ ಸೋಲಲಿ, ದೇಶ ವೈರಿಗಳದ್ದಾಗಲಿ, ನನಗೆ ನೀನು ಸಾಕು. ಕಥೆ ಕಟ್ಟಿದ ನೀನೇ ನನ್ನ ಪ್ರಿಯಕರ. ನಮಗೆ ಯಾವ ಹಂಗೂ ಬೇಡ,ಯಾರ ಹಂಗೂ ಬೇಡ. ಅದಕ್ಕೇ ಬಟ್ಟೆಗಳನ್ನೆಲ್ಲಾ ನದಿಗೆ ಎಸೆದೆ ಎಂದು ಆ ಕಥೆಗಾರನ ಪ್ರಿಯತಮೆ ಆ ಮೀನುಗಾರನನ್ನು ಮತ್ತಷ್ಟು ತಬ್ಬಿಕೊಂಡಳು.
ರಾಜ ಮತ್ತು ಅವನ ಸೇನೆ ನದಿ ದಾಟಿ ಉಜ್ಜಲದೇಶವನ್ನು ಮರಳಿ ಪಡೆಯಲು ಮುನ್ನುಗ್ಗಿತು. ಬಹುಶಃ ಆ ದೇಶವನ್ನು ಆತ ಮರಳಿ ಪಡೆಯಲೂ ಬಹುದು.