ಕುಗ್ಗಿದ ಭಾವುಕತೆ ಹಿಗ್ಗಿದ ಜಿಜ್ಞಾಸೆ
‘ಕ್ಷಣಿಕ ಆಕರ್ಷಣೆಗೊಳಪಟ್ಟು ಸ್ವಧರ್ಮ ಬಿಟ್ಟು, ಬೇರೆಯವರದನ್ನು ಅನುಕರಿಸುವ ಚಾಪಲ್ಯವು ಸರ್ವಥಾ ಶ್ರೇಯಸ್ಕರವಲ್ಲ’ ಎಂಬ ವಿಚಾರವನ್ನು ಕೃಷ್ಣ ಹೇಳುತ್ತಿದ್ದನು. ಇದೀಗ ಸ್ವಧರ್ಮ ಎಂಬ ಮೂಲಚರ್ಚೆಗೇ ಹಿಂದಿರುಗಿ ತನ್ನ ಅಭಿಮತವನ್ನು ನಿಶ್ಚಿತವಾಗಿ ತಿಳಿಸುತ್ತಿದ್ದಾನೆ; ‘ಸ್ವಧರ್ಮವನ್ನು (ಕರ್ತವ್ಯ) ನಿಭಾಯಿಸುವುದೇ ಸರ್ವಥಾ ಶ್ರೇಯಸ್ಕರ’ ಎಂದು.
ಇಷ್ಟು ಹೊತ್ತು ಆಲಿಸಿದ ಅರ್ಜುನನ ಕ್ಲೇಶ ಕರಗಿ, ಸಹಜಸ್ಥಿತಿಗೆ ಬಂದಿದ್ದಾನೆ. ಸ್ವಜನರ ಮಮಕಾರದಿಂದೆದ್ದ ಅಸ್ಥಾನ-ಕಾರುಣ್ಯ, ದುಃಖಗಳು ಕುಗ್ಗಿವೆ. ಕಾರ್ಯಾಕಾರ್ಯಗಳ ಬಗೆಗಿನ ದ್ವಂದ್ವ ಕರಗಿದೆ, ಭಾವುಕತೆಯ ಮೋಡ ಚದರಿ ಸ್ಪಷ್ಟತೆ-ದೃಢತೆಗಳು ಮೂಡುತ್ತಿವೆ. ಆತ್ಮನಿರೀಕ್ಷಣೆ ಮಾಡಿಕೊಳ್ಳುತ್ತಿದ್ದಾನೆ; ‘ಗೊತ್ತಿದ್ದೂ ನಾನೇಕೆ ಈ ಭಾವುಕತೆಗೆ ವಶನಾದೆ?’ಎನ್ನುವ ಪ್ರಶ್ನೆ ಏಳತೊಡಗಿದೆ. ಪ್ರಾಮಾಣಿಕ ಜಿಜ್ಞಾಸೆಯಿಂದ ಕೃಷ್ಣನನ್ನು ಕೇಳುತ್ತಾನೆ; ‘ಹೇ ವಾಷ್ಣೇಯ! ಇಷ್ಟವಿಲ್ಲದಿದ್ದರೂ ಯಾವುದರ ಪ್ರೇರಣೆಯ ಬಲವಂತಕ್ಕೆ ವಶನಾಗಿ ಮನುಷ್ಯನು ಹೀಗೆ ಪಾಪ ಮಾಡುತ್ತಾನೆ?’ (3.36)
ಅರ್ಜುನನಲ್ಲಿ ಮೋಹಜನ್ಯ ಕ್ಲೇಶವು ಆವರಿಸಿದ್ದ ತನಕ, ಆತ್ಮನಿರೀಕ್ಷಣೆ ನಡೆಯಲಿಲ್ಲ. ಆದರೆ ಮೋಹವು ಕರಗಿ, ಬುದ್ಧಿಯು ನಿರ್ಮಲವಾಗುತ್ತಲೇ ಈಗ ‘ಆಲೋಚಿಸ’ತೊಡಗಿದ್ದಾನೆ! ಹೆಚ್ಚಿನ ಮನುಷ್ಯರಲ್ಲಿ ಬುದ್ಧಿಯನ್ನು ಬಹುಮಟ್ಟಿಗೆ ನಿಯಂತ್ರಿಸುವುದು ಸ್ವಜನಪ್ರೀತಿ, ಅನುಕೂಲ-ಪ್ರತಿಕೂಲಗಳು, ಹಿಂದಿನ ಸಿಹಿ-ಕಹಿ ನೆನಪು, ಮುಂದಿನದರ ಆತಂಕ-ಆಕಾಂಕ್ಷೆ ಇತ್ಯಾದಿ ಮಮಕಾರಾಂಶಗಳೇ! ಅಷ್ಟೇ ಅಲ್ಲ! ಈ ಭಾವನೆಗಳ ಏರಿಳಿತದಂತೆಯೇ ಬುದ್ಧಿಯ ನಿರ್ಣಯಗಳ ಸ್ವರೂಪಗಳೂ ಬದಲಾಗುತ್ತವೆ! ಭಾವುಕತೆಯ ಬಗ್ಗಡವಿಲ್ಲದ ಶುದ್ಧ-ಸ್ಪಷ್ಟ ಬುದ್ಧಿ ಮಾತ್ರವೇ ನೇರವಾಗಿ ‘ಆಲೋಚಿಸಲು’ ಸಮರ್ಥ. ಅರ್ಜುನನು ಭಾವುಕತೆಯಿಂದ ಆಚೆ ಬಂದು, ಪ್ರಾಮಾಣಿಕ ಜಿಜ್ಞಾಸೆಯಿಂದ ಕೃಷ್ಣನೊಂದಿಗೆ ಸಂವಾದ ನಡೆಸುತ್ತಾನೆ. ಅರ್ಜುನನು ಆಲೋಚಿಸತೊಡಗಿದ್ದಾನೆ; ‘ಧರ್ಮಕರ್ಮಗಳನ್ನು ಚೆನ್ನಾಗಿ ತಿಳಿದವನಾಗಿದ್ದ ತನ್ನಂತಹ ಸಜ್ಜನನೂ ಸ್ವಜನಮೋಹಕ್ಕೆ ಒಳಪಟ್ಟು ಕರ್ತವ್ಯವನ್ನೇ ಕೈಬಿಡುವ ಯೋಚನೆ ಮಾಡಿಬಿಟ್ಟೆನಲ್ಲ! ಅದಾವ ಶಕ್ತಿ ಹೀಗೆ ಪಾಪಕ್ಕೆ ಕೈಹಾಕುವಂತೆ ಮನುಷ್ಯನನ್ನು ವಿವಶವಾಗಿಸುತ್ತದೆ?’
ಮನುಷ್ಯನಿಗೆ ಯಾವುದು ಧರ್ಮ, ನ್ಯಾಯ, ಶ್ರೇಯಸ್ಕರ, ಸತ್ಯ ಎನ್ನುವುದೆಲ್ಲ ಗೊತ್ತಿಲ್ಲವೆಂದಲ್ಲ, ಇಷ್ಟವಿಲ್ಲ ಎಂದೂ ಅಲ್ಲ! ಅಂತರಾತ್ಮವು ಬೇಡವೆಂದು ಕೂಗುತ್ತಿದ್ದರೂ, ಪರಿಣಾಮದ ಭೀತಿ ಕಾಡಿದರೂ ಪಾಪಕ್ಕೆ ಕೈಹಾಕುತ್ತಾನೆ! ಸ್ವಧರ್ಮವು ಶ್ರೇಯಸ್ಕರ ಎಂದು ಗೊತ್ತಿದ್ದರೂ ಔದಾಸೀನ್ಯ ಬೆಳೆಸಿಕೊಳ್ಳುತ್ತಾನೆ. ವಿವೇಚಿಸದೆ ಪ್ರಮಾಣಿಸದೆ ಬೇರೆಯವರ ಬಣ್ಣನೆಗೆ ಮನಸೋತು ಅದನ್ನು ಕಣ್ಮುಚ್ಚಿ ಅನುಸರಿಸುತ್ತಾನೆ! ತಪ್ಪೆಂದು ಗೊತ್ತಿದ್ದರೂ ‘ತಾನು’ ತೆಗೆದುಕೊಂಡ ನಿರ್ಧಾರ ಎಂಬ ಒಂದೇ ಕಾರಣಕ್ಕಾಗಿ, ತಾನು ಮಾಡಿದ್ದನ್ನೇ ಸಮರ್ಥಿಸಿಕೊಳ್ಳುತ್ತ ಮತ್ತಷ್ಟು ತಪ್ಪುಗಳನ್ನೇ ಮಾಡುತ್ತಾನೆ! ಯಾವುದರ ಪ್ರಚೋದನೆಯಿಂದಾಗಿ ಮನುಷ್ಯ ಹೀಗೆ ಪಾಪವೆಸಗುತ್ತಾನೆ? ಕೃಷ್ಣ ಉತ್ತರಿಸುತ್ತಾನೆ; ‘ರಜೋಗುಣದಿಂದ ಹುಟ್ಟುವಂಥ ಈ ಕಾಮ ಅಥವಾ ಕ್ರೋಧ ಎನ್ನುವುದು ಮಹಾಪಾಪಕಾರಿಯೂ ಮಹಾಶನಿಯೂ (ಬಹಳ ತಿನ್ನುವಂಥದ್ದು, ಅರ್ಥಾತ್, ಮುಗಿಯದ ಭೋಗಾನುಭವದ ಹಸಿವನ್ನು ತಾಳುವಂಥದ್ದು). ಇದೇ ‘‘ವೈರಿ’’ ಎಂದು ತಿಳಿ.’ (3.37)
ಮನುಷ್ಯನಲ್ಲಿನ ರಜಸ್ಸು ಈ ಕಾಮ ಅಥವಾ ಕ್ರೋಧಕ್ಕೆ ಜನ್ಮ ನೀಡುತ್ತದೆ. ‘ಕಾಮವೆಂದರೆ ಬಯಕೆ, ಕ್ರೋಧವೆಂದರೆ ಕೋಪ’ ಎನ್ನುವುದು ಬಾಹ್ಯವಿವರಗಳಿಂದ ಕಾಣುವ ಭೇದವಾದರೂ, ಅವೆರಡೂ ಮೂಲತಃ ಒಂದೇ ಗುಣದ ವಿಭಿನ್ನ ಅಭಿವ್ಯಕ್ತಿಗಳು. ರಜಸ್ಸು ಮನುಷ್ಯನನ್ನು ಕಾರ್ಯಪ್ರವೃತ್ತವಾಗಿಸುತ್ತದೆ. ಇದು ಧರ್ಮ-ಕರ್ತವ್ಯಗಳ ಚೌಕಟ್ಟಿನಲ್ಲಿ ಉದಾತ್ತೀಕರಣಗೊಂಡಾಗ ಮಾತ್ರ ಸಾರ್ಥಕ. ಹಾಗೆ ಮಾಡದಿದ್ದಲ್ಲಿ, ರಜಸ್ಸು ಸುಮ್ಮನಿರಲಾಗದೆ ‘ಕಾಮ’ವನ್ನು ಹುಟ್ಟಿಸುತ್ತದೆ. ವ್ಯಕ್ತಿಗಳನ್ನೋ ವಸ್ತುಗಳನ್ನೋ ಪದವಿ ಕೀರ್ತಿ ಭೋಗಾದಿಗಳನ್ನೋ ಬಾಚಿಕೊಳ್ಳಲು ಅಲ್ಲಿಂದಿಲ್ಲಿಗೆ ಓಡುತ್ತ ಇರುವುದೇ ಈ ಕಾಮದ ಜಾಯಮಾನ! ಆದರೆ ಈ ಹುಚ್ಚು ಕಾಮವು ‘ಬೇಕು’ ಎಂದು ಕೈಚಾಚಿದ್ದೆಲ್ಲವೂ ಅದಕ್ಕೆ ದಕ್ಕುವುದಿಲ್ಲವಷ್ಟೆ? ಆಗ ಅದು ‘ಕ್ರೋಧ’ವಾಗಿ ರೂಪಾಂತರಗೊಳ್ಳುತ್ತದೆ. ಈ ಕಾಮಕ್ರೋಧಗಳು ಮನುಷ್ಯನ ಮನೋಬುದ್ಧೀಂದ್ರಿಯಗಳನ್ನು ಹಿಡಿದವೆಂದರೆ ಸಾಕು, ಅಲ್ಲಿಂದ ಅವನ ಪಾಪಕಾರ್ಯಗಳ ಪರಂಪರೆ ಪ್ರಾರಂಭವಾಗುತ್ತದೆ!
ಡಾ. ಆರತೀ ವಿ. ಬಿ.
ಕೃಪೆ : ವಿಜಯವಾಣಿ