ಅನಗತ್ಯ ಕರ್ಮವನ್ನು ಬಿಡು
‘ಅಕರ್ಮದ ಸೋಗು ಹಾಕುವ ಬದಲು ನಿರ್ಲಿಪ್ತಿಯಿಂದ ಕರ್ಮದಲ್ಲಿ ತೊಡಗುವುದೇ ಉತ್ತಮ ಮಾರ್ಗ’ ಎಂದು ಶ್ರೀಕೃಷ್ಣನು ನಿರ್ದೇಶಿಸಿದನಷ್ಟೆ? ‘ಬಂಧನವಾಗುವುದು ಭೋಗಾತುರದಲ್ಲಿ ಹಮ್ಮಿಕೊಳ್ಳುವ ಅನಗತ್ಯವಾದ ಭೋಗಕರ್ಮಗಳಿಂದಾಗಿಯೇ ಹೊರತು ಕರ್ತವ್ಯಕರ್ಮಗಳಿಂದಲ್ಲ’ ಎಂದು ಮುಂದೆ ಸೂಚಿಸುತ್ತಾನೆ:
ಯಜ್ಞಾರ್ಥಾತ್ ಕರ್ಮಣೊನ್ಯತ್ರ
ಲೋಕೊಯಂ ಕರ್ಮಬಂಧನಃ |
ತದರ್ಥಂ ಕರ್ಮ ಕೌಂತೇಯ
ಮುಕ್ತಸಂಗಃ ಸಮಾಚರ || (ಭ.ಗೀ.: 3.9)
‘ಯಜ್ಞಾರ್ಥವಾಗಿ ಕರ್ಮ ಮಾಡುವ ಬದಲು ಅನ್ಯಕರ್ಮಗಳಲ್ಲಿ ತೊಡಗಿ ಈ ಲೋಕವು ಬಂಧನಕ್ಕೊಳಗಾಗಿದೆ. ನೀನು (ಹಾಗೆ ಮಾಡದೆ) ಸಂಗರಹಿತನಾಗಿದ್ದು ಕೇವಲ ಯಜ್ಞಾರ್ಥವಾಗಿ ಕರ್ಮವನ್ನಾಚರಿಸು.’ – ಇಲ್ಲಿ ಶ್ರೀಕೃಷ್ಣನು ‘ಲೋಕ’ ಎಂದು ಕರೆಯುತ್ತಿರುವುದು ವಿವೇಕವಿಲ್ಲದ ಲೌಕಿಕರನ್ನು. ಅಂತಹವರು ಕರ್ಮವನ್ನು ಮಾಡುವಾಗ ‘ಯಾವುದು ಕರ್ತವ್ಯ, ಯಾವುದು ಧರ್ಮ, ಯಾವುದು ಮಾಡಬಾರದ್ದು’ ಎನ್ನುವ ಜಿಜ್ಞಾಸೆಯನ್ನು ಮಾಡುವ ಬದಲು, ‘ಈ ಕರ್ಮದಿಂದ ಹಣ ಸಿಕ್ಕೀತೆ? ಭೋಗಪ್ರಾಪ್ತಿಯಾದೀತೆ? ಕೀರ್ತಿ ಸಿಕ್ಕೀತೆ? ಮಾಡಲು ಸುಲಭವಿದ್ದೀತೆ?’ ಎಂಬೀ ತೆರನಾದ ಲೆಕ್ಕಾಚಾರದಲ್ಲಿ ತೊಡಗುತ್ತಾರೆ. ‘ತಮ್ಮ ಚಾಪಲ್ಯಕ್ಕೆ ಪೂರಕವಲ್ಲ’ ಎಂಬ ಕಾರಣಕ್ಕಾಗಿ ಕರ್ತವ್ಯಕರ್ಮಗಳನ್ನು ಉದಾಸೀನ ಮಾಡುತ್ತಾರೆ.
ಮನೆಮಂದಿಗೆಲ್ಲ ಊಟ ವಸತಿ ಸುರಕ್ಷೆಗಳನ್ನು ಒದಗಿಸುವ ಆದ್ಯ ಕರ್ತವ್ಯವನ್ನು ಮೊದಲು ಪೂರೈಸುವ ಬದಲು ಶಕ್ತಿಮೀರಿ ಸಾಲ ಮಾಡಿ ರೆಸಾರ್ಟ್ ಫಾರಿನ್ ಟೂರ್ ಗಳಲ್ಲೋ, ಅಗತ್ಯಕ್ಕಿಂತ ಹೆಚ್ಚಾದ ಸೈಟ್ ಮನೆ ಗ್ಯಾಜೆಟ್ಸ್ ಗಳ ಖರೀದಿಯಲ್ಲೋ ಅಪಾರ ಧನವನ್ನು ಕಳೆದುಕೊಳ್ಳುವವರಿರುತ್ತಾರೆ! ಕ್ಷಣಿಕವಾದ ಚಾಪಲ್ಯಪೂರ್ತಿಗಾಗಿ ಕುಡಿತ ಜೂಜು ಸ್ತ್ರೀಸಂಗಗಳಲ್ಲಿ ತೊಡಗಿ, ಹಣ ಮರ್ಯಾದೆ ಆರೋಗ್ಯ ಪ್ರಾಣಗಳನ್ನು ಕಳೆದುಕೊಳ್ಳುವ ಮೂರ್ಖರೂ ಇರುತ್ತಾರೆ! ಹಠಾತ್ತನೆ ಧನಿಕರಾಗುವ ಭರದಲ್ಲಿ ಕಳ್ಳತನ-ಅಡ್ಡದಾರಿಗಳಿಗಿಳಿದು ಜೈಲುಪಾಲಾಗುವ ಮೂಢರೂ ಇರುತ್ತಾರೆ! ಇಂತಹವರುಗಳ ಅವನತಿಗೆ ಕಾರಣ ‘ಕರ್ತವ್ಯಕರ್ಮ’ಗಳೇ? ಕರ್ತವ್ಯವನ್ನು ಮರೆತು ಭೋಗಾತುರದಲ್ಲಿ ಹಮ್ಮಿಕೊಂಡ ‘ಅನವಶ್ಯಕ ಕರ್ಮಗಳು’ ಕಾರಣ! ಇಂತಹ ಅವಿವೇಕವನ್ನೇ ‘ಬೇಡ’ ಎನ್ನುತ್ತಿದ್ದಾನೆ ಶ್ರೀಕೃಷ್ಣ.
ಕರ್ತವ್ಯಕರ್ಮಗಳು ನೆಮ್ಮದಿ ಸಮೃದ್ಧಿಗಳನ್ನು ಕೊಟ್ಟರೆ, ಅನಗತ್ಯಕರ್ಮಗಳು ಪೇಚಿಗೆ ಸಿಲುಕಿಸುತ್ತವೆ. ನಮ್ಮೆಲ್ಲರ ಜೀವನದಲ್ಲೂ ಕರ್ತವ್ಯಕ್ಕಿಂತ ಹೆಚ್ಚಾಗಿ ಅದೆಷ್ಟೋ ಅನಗತ್ಯ ಕರ್ಮಗಳು ಸೇರಿಹೋಗಿರುವುದನ್ನು ನಾವೇ ಗಮನಿಸಬಹುದು.
ಕರ್ತವ್ಯಕರ್ಮಗಳನ್ನು ಕಾಲಕಾಲಕ್ಕೆ ಪೂರೈಸಿ, ಅಧ್ಯಯನ-ನಿಸರ್ಗಗಳಲ್ಲೋ ತೊಡಗಿಸಬಹುದು, ಬಂಧುಮಿತ್ರರೊಂದಿಗೋ, ಪ್ರಾಣಿಪಕ್ಷಿಗಳೊಂದಿಗೋ ರಮಿಸಬಹುದು. ಸಮಾಜ ರಾಜ್ಯ ರಾಷ್ಟ್ರ ಧರ್ಮ ಸಂಸ್ಕೃತಿಗಳಿಗೂ, ದೀನದುರ್ಬಲರಿಗೂ, ತತ್ವ-ಸಾಹಿತ್ಯ-ಕಲೆಗಳಿಗೂ ಬೇಕಾದಷ್ಟು ಮನಗೊಡಬಹುದು. ಆದರೆ ದುರಾಸೆಯಿಂದ ಅನಗತ್ಯ ಭೋಗಕರ್ಮಗಳನ್ನೂ, ಬೇಡದ ಸಂಕಷ್ಟವನ್ನೂ ತಲೆಗೆ ಹತ್ತಿಸಿಕೊಳ್ಳುವವರೇ ಹಲವರು! ಇಂತಹವರನ್ನೇ ಕೃಷ್ಣನು ‘ಲೋಕ / ಲೌಕಿಕರು’ ಎಂದು ಕರೆದಿರುವುದು. ಲೋಕದಲ್ಲಿನ ತಮ್ಮ ಎಲ್ಲ ಕರ್ತವ್ಯಗಳನ್ನೂ ಧರ್ಮಕರ್ಮಗಳನ್ನೂ ಶ್ರದ್ಧೆಯಿಂದ ಮಾಡುತ್ತ ಸಾಗುವವರು ಸಜ್ಜನರು. ಆದರೆ ಹಾಗೆ ಮಾಡುವಾಗಲೂ ಫಲಾಫಲಗಳ ಬಗ್ಗೆ ನಿರ್ಲಿಪ್ತರಾಗಿದ್ದು, ಅಂತರ್ಮುಖಿಯಾಗುವ ಪ್ರಜ್ಞಾಸಂಪನ್ನರು ‘ಕರ್ಮಯೋಗಿಗಳು’ ಎನಿಸುತ್ತಾರೆ.
‘ಅವಿವೇಕಿಗಳಾದ ಲೌಕಿಕರಂತೆ ಕರ್ಮಬಂಧನಕ್ಕೊಳಗಾಗದೆ, ನಿರ್ಲಿಪ್ತಕರ್ಮದ ಮೂಲಕ ಕರ್ಮಯೋಗಿಯಾಗು, ಜೀವನದಲ್ಲಿ ಗೆದ್ದುಕೊ’ ಎಂದು ಕೃಷ್ಣನು ಅರ್ಜುನನಿಗೆ ಸೂಚಿಸುತ್ತಿದ್ದಾನೆ. ಅನಗತ್ಯ ಕರ್ಮಗಳನ್ನು ತ್ಯಜಿಸಿ, ಧಮೈಕ ಉದ್ದೇಶದಿಂದ ಕರ್ಮವೆಸಗುವುದರಲ್ಲಿ ಮಹತ್ತಮ ಪ್ರಯೋಜನವೊಂದಿದೆ. ಸೂರ್ಯರಶ್ಮಿಗಳನ್ನು ಭೂತಗನ್ನಡಿಯಡಿಯಲ್ಲಿ ಸಂಚಯ ಮಾಡಿದಾಗ, ಅವು ಕಾಗದವನ್ನೇ ಸುಡಬಲ್ಲ ಶಕ್ತಿಯನ್ನು ಹೊಂದುತ್ತವೆ! ಅಂತೆಯೇ ಅನಗತ್ಯ ವಿವರಗಳಲ್ಲಿ ಹರಿದು ಹಂಚಿಹೋದ ನಮ್ಮ ತನು-ಮನ-ಮತಿಗಳ ಸಮಸ್ತ ವೃತ್ತಿಗಳನ್ನು ಉದಾತ್ತೀಕರಿಸಿ, ಉತ್ತಮ ಕರ್ಮದಲ್ಲಿ ತೊಡಗಿಸಿದಾಗ, ನಮ್ಮೊಳಗೆ ಅನಂತ ಶಕ್ತಿಸಂಚಯವಾಗಿ, ನಮ್ಮಿಂದ ಲೋಕೋತ್ತರವೂ ಅದ್ಭುತವೂ ಆದ ಕಾರ್ಯಗಳು ಸಾಧ್ಯವಾಗುತ್ತವೆ!
ತಮ್ಮ 32ನೇ ವಯಸ್ಸಿನವರೆಗೂ ಅಧ್ಯಯನ ತಪಸ್ಸು ಪರಿವ್ರಜನಗಳಲ್ಲೇ ತೊಡಗಿದ್ದವರು ಸ್ವಾಮಿ ವಿವೇಕಾನಂದರು. ಆ ಬಳಿಕ ಸಾರ್ವಜನಿಕ ರಂಗಕ್ಕಿಳಿದು, ಸುಂಟರಗಾಳಿಯಂತೆ ದೇಶವಿದೇಶಗಳಲ್ಲಿ ನಿರಂತರ ಪಯಣಿಸುತ್ತ, ತಮ್ಮ ಮಾತು-ಬರಹ-ಸೇವಾಕಲಾಪಗಳ ಮೂಲಕ ಯುವಜನರಲ್ಲಿ ರಾಷ್ಟ್ರೀಯತೆಯನ್ನೂ ಧರ್ಮಾಭಿಮಾನವನ್ನೂ ಸಾಮಾಜಿಕನ್ಯಾಯದ ಪ್ರಜ್ಞೆಯನ್ನೂ ಜಾಗೃತಗೊಳಿಸಿದರು. ಅಸಂಖ್ಯರನ್ನು ಪ್ರೇರೇಪಿಸಿ ಧರ್ಮಮಾರ್ಗಕ್ಕೆಳೆದರು, ರಾಷ್ಟ್ರದ ಪುನರ್ನಿರ್ಮಾಣಕಾರ್ಯದಲ್ಲಿ ತೊಡಗಿಸುವಲ್ಲಿ ಅತಿ ಯಶಸ್ವಿಯಾದರು! ಮೂವತ್ತೊಂಭತ್ತೂವರೆ ವಯಸ್ಸಿನಲ್ಲಿ ಇಹಲೋಕವನ್ನೇ ತ್ಯಜಿಸಿದರು! ಅಧಿಕಾರ ಹಣ ಸ್ಥಾನಮಾನಾದಿಗಳಾವುವೂ ಇಲ್ಲದಿದ್ದ ವಿವೇಕಾನಂದರು, ಕೇವಲ ಏಳೂವರೆ ವರ್ಷಗಳ ಸಾರ್ವಜನಿಕ ಜೀವನದಲ್ಲಿ ವೈಶ್ವಿಕಮಟ್ಟದಲ್ಲಿ ಗಣನೀಯವೂ ಚಿರಸ್ಮರಣಿಯವೂ ಆದಂತಹ ಅತ್ಯದ್ಭುತ ಲೋಕಸಂಗ್ರಹಕಾರ್ಯವನ್ನು ಮಾಡಲು ಹೇಗೆ ಸಾಧ್ಯವಾಯಿತು? ಹೇಗೆಂದರೆ, ಅವರು ತಮ್ಮ ತನುಮನಧನಗಳ ಎಲ್ಲ ಶಕ್ತಿಯನ್ನೂ ಧಮೈಕ ಕಾರಣಕ್ಕಾಗಿ ವಿನಿಯೋಗಿಸಿದರು. ಅದಲ್ಲದೆ ಬೇರಾವುದೇ ವಿವರಕ್ಕೂ ಮನದೊಳಗಾಗಲಿ ಜೀವನದೊಳಗಾಗಲಿ ಆಸ್ಪದವನ್ನೇ ಕೊಡಲಿಲ್ಲ! ಹಾಗಾಗಿಯೇ ಅವರ ವ್ಯಕ್ತಿತ್ವದಲ್ಲಿ ಅಪಾರ ಶಕ್ತಿಸಂಚಯವಾಯಿತು, ಅದರಿಂದಾಗಿ ಅವರ ಪ್ರತಿ ನಡೆನುಡಿಯೂ ಪ್ರಭಾವಶಾಲಿಯಾಯಿತು, ಪರಿಣಾಮಕಾರಿಯಾಯಿತು! ಆತ್ಮೋದ್ಧಾರಕ್ಕೂ ಲೋಕಹಿತಕ್ಕೂ ಸಾಧಕವಾಯಿತು!
ಡಾ. ಆರತಿ ವಿ ಬಿ
ಕೃಪೆ : ವಿಜಯವಾಣಿ