ತೊಂಬತ್ತು ತುಂಬಿದ ಚೆನ್ನವೀರ ಕಣವಿ

ತೊಂಬತ್ತು ತುಂಬಿದ ಚೆನ್ನವೀರ ಕಣವಿ

|ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ

‘ಕಲೆಗಾಗಿ ಕಲೆಯುಂಟೆ? ಜನ ಬದುಕುವುದು ಬೇಡ?’

ಹೋಗಬೇಡ ಕವಿತೆ ನೀನು, ಬಾಗಬೇಡ ಯಾರಿಗೂ/ ತೂಗಿ ನೋಡಿ ಬೆಲೆಯ ಕಟ್ಟು ಹೂವಿನಂತೆ ನಾರಿಗೂ. / ನಿನ್ನ ರೂಪ ಲಾವಣ್ಯಕೆ ಬೀಗಬೇಡ ಎಂದಿಗೂ/ ಬತ್ತದಿಹುದು ಚೆಲುವಿನೂಟೆ ನೆಲದ ಒಡಲೊಳೆಂದಿಗೂ. / ಒಡೆದುಹೋದ ಮನಸುಗಳಲಿ ಹಗೆಯ ಕಿಡಿಯ ನಂದಿಸು/ ಸಿಡಿದು ನಿಂತ ಹೃದಯಗಳನು ಪ್ರೀತಿಯಲ್ಲಿ ಬಂಧಿಸು. / ದುಡಿವ ಕೈಗೆ ಶಕ್ತಿ ಬರಲಿ; ಮಳೆಯ ಸುರಿಸು ಧರಣಿಗೆ / ಹಳೆಯ ಕೊಳೆಯ ಕೊಚ್ಚಿ ತೊಳೆಯೆ ಹಚ್ಚಹಸಿರು ಹಾಡಿಗೆ. / ಹಾಡಿಗೆದೆಯು ಮಿಡಿಯುವಾಗ ಬೇಡ ವಾದ್ಯದಬ್ಬರ / ಗಾಢ ಮೌನದಲ್ಲಿ ತಾನೆ ಮೂಡಿ ಬಹನು ಚಂದಿರ.

ಇದು ನಾಡಿನ ಮಹತ್ವದ ಕವಿಗಳಲ್ಲೊಬ್ಬರಾದ ಚೆನ್ನವೀರ ಕಣವಿಯವರ ಕಾವ್ಯತತ್ತ್ವವೂ ಹೌದು, ಜೀವನ ಸಿದ್ಧಾಂತವೂ ಹೌದು. ಇದೇ ಜೂನ್ 28 ಕ್ಕೆ (28 ಜೂನ್ 1928) ತೊಂಬತ್ತು ತುಂಬಿ ತೊಂಬತ್ತೊಂದಕ್ಕೆ ಕಾಲಿಡುತ್ತಿರುವ ಕಣವಿಯವರು ನಮ್ಮ ಸಾಮಾಜಿಕ ಬದುಕಿಗೆ ಒಂದು ಘನತೆಯನ್ನು ತಂದುಕೊಟ್ಟವರು. ಕನ್ನಡ ಸಂಸ್ಕೃತಿಗೆ ಕೆಲವು ಗುಣಾತ್ಮಕ ಅಂಶಗಳನ್ನು ಸೇರಿಸುತ್ತ, ಸಮಕಾಲೀನ ಕಲುಷಿತ ಪರಿಸರದಲ್ಲಿ ಮಾನವ ಸಂಬಂಧಗಳ ಬಗೆಗಿನ ನಂಬಿಕೆಯನ್ನು ಕಾಪಾಡುತ್ತಿರುವಂಥವರು. ಕಣವಿಯವರು ಹೇಳುತ್ತಾರೆ: ‘ಈಗ ಸೃಜನಶೀಲ ಮನಸ್ಸು ಅನೇಕ ಆತಂಕಗಳ ನಡುವೆ ಕ್ರಿಯಾಶೀಲವಾಗಬೇಕಿದೆ. ಒಂದು ಬಗೆಯ ಗೊಂದಲದ ವಾತಾವರಣವಿದೆ. ಸರಳತೆ, ನಿರಾಡಂಬರತೆ ಮಾಯವಾಗಿ ತೋರಿಕೆ, ಆಡಂಬರ ಎಲ್ಲ ರಂಗಗಳನ್ನೂ ಆವರಿಸಿದೆ. ಕಾಣ್ಕೆ ಕಣ್ಕಟ್ಟುಗಳ ನಡುವೆ ಅಂತರ ಇಲ್ಲವಾಗಿದೆ. ಮನುಷ್ಯ ಸಂಬಂಧಗಳ ಮೂಲ ನಂಬಿಕೆಯನ್ನೇ ಅಲುಗಾಡಿಸುವಂತಹ ಘಟನೆಗಳು ನಡೆಯುತ್ತಿವೆ. ವ್ಯಕ್ತಿ-ವ್ಯಕ್ತಿಗಳ ನಡುವೆ ಮಾತ್ರವಲ್ಲ, ಸಂವೇದನಾಶೀಲ ಮನಸ್ಸು ಹಾಗೂ ಸಮಾಜದ ನಡುವೆಯೂ ಸಂವಾದ ಸಾಧ್ಯವಾಗುತ್ತಿಲ್ಲ. ಈ ಎಲ್ಲ ಸವಾಲುಗಳನ್ನು ಸೃಜನಶೀಲ ಪ್ರತಿಭೆ ಎದುರಿಸಬೇಕಾಗಿದೆ’. ಇಂಥ ಸವಾಲುಗಳನ್ನು ಎದುರಿಸುತ್ತಲೇ ಅವರ ಸೃಜನಶೀಲ ಪ್ರತಿಭೆ ಕ್ರಿಯಾಶೀಲವಾಗಿದೆ.

ಕಣವಿಯವರ ಮೊದಲ ಕವನ ಸಂಕಲನ ‘ಕಾವ್ಯಾಕ್ಷಿ’ ಪ್ರಕಟವಾದದ್ದು 1949 ರಲ್ಲಿ. ಸುಮಾರು ಏಳು ದಶಕಗಳ ಕಾಲ ನಿರಂತರವಾಗಿ ಸೃಜನಶೀಲವಾಗಿರುವ ಕಣವಿಯವರು ತಮ್ಮ ಸುತ್ತಮುತ್ತಲಿನ ಪರಿಸರವನ್ನು ಜಡವಾಗಲು ಬಿಡದೆ ತಮ್ಮ ಕಾವ್ಯದ ಮೂಲಕ ಜೀವಂತವಾಗಿರಿಸಲು ಪ್ರಯತ್ನಿಸಿದ್ದಾರೆ. ‘ರೂಢಿಯಾಗಿದೆ ಒಬ್ಬೊಬ್ಬನಿಗೂ ಒಂದೊಂದು ಬಗೆಯ ನಡಿಗೆ/ಮುಖ್ಯ ಬೇಕಾದದ್ದು ಜೀವಂತ ಗತಿ, ಹೊಸ ನೆತ್ತರಿನ ಕೊಡುಗೆ’. ಇದು ಕಣವಿಯವರು ತಮ್ಮ ಕಾವ್ಯಪಥದುದ್ದಕ್ಕೂ ಪ್ರತಿಪಾದಿಸಿಕೊಂಡು ಬಂದ ನಿಲವು. ಅವರು ತಮ್ಮ ಕಾವ್ಯ ಬದುಕಿನಲ್ಲಿ ಕನ್ನಡ ಕಾವ್ಯದ ಅನೇಕ ಘಟ್ಟಗಳನ್ನು ಹಾದು ಬಂದಿದ್ದಾರೆ. ಎಲ್ಲ ಬಗೆಯ ಬದಲಾವಣೆಗಳಿಗೂ ಮುಕ್ತ ಮನಸ್ಸಿನಿಂದ ಸ್ಪಂದಿಸಿದ್ದಾರೆ. ಆದರೆ ಯಾವ ಸಿದ್ಧಾಂತಕ್ಕೂ ಗಂಟು ಬೀಳದೆ ಸ್ವಾನುಭವವನ್ನೇ ಮೂಲದ್ರವ್ಯವನ್ನಾಗಿ ಮಾಡಿಕೊಂಡು ಜೀವನಪ್ರೀತಿ ಹಾಗೂ ಮಾನವೀಯ ಕಾಳಜಿಯನ್ನು ಉದ್ದಕ್ಕೂ ಜತನವಾಗಿ ಕಾಪಾಡಿಕೊಂಡು ಬಂದಿದ್ದಾರೆ. ಎಲ್ಲ ಬಗೆಯ ಆಕ್ರಮಣಗಳ ನಡುವೆಯೂ ತನ್ನೊಳಗಿನ ಬೆಳಕನ್ನು ನಂದಲು ಬಿಡದೆ, ವಿಕ್ಷಿಪ್ತ ಪರಿಸರದಲ್ಲೂ ಸಮಚಿತ್ತದ ಹದವನ್ನು ಉಳಿಸಿಕೊಂಡು ಕಾವ್ಯ ರಚಿಸುತ್ತ ಬಂದದ್ದು ಕಣವಿಯವರ ಪ್ರತಿಭೆಯ ವಿಶಿಷ್ಟತೆ. ಕನ್ನಡ ಕಾವ್ಯ ಈಗ ಹೊಸ ಚಲನೆಯ ದಿಕ್ಕಿನಲ್ಲಿದೆ. ಹಿನ್ನೆಲೆಗೆ ಸರಿದಿದ್ದ ಅನೇಕ ಅನುಭವ ವಲಯಗಳು ಈಗ ಮತ್ತೆ ಕಾಣಿಸಿಕೊಳ್ಳುತ್ತಿವೆ. ಇಂತಹ ಹೊತ್ತಿನಲ್ಲಿ ಕಣವಿಯವರ ಕಾವ್ಯ ನಮ್ಮ ಸೃಜನಶೀಲ ಮನಸ್ಸುಗಳಿಗೆ ಅನೇಕ ಒಳನೋಟಗಳನ್ನು ಒದಗಿಸಿಕೊಡಬಲ್ಲುದು; ಹೊಸ ಸಾಧ್ಯತೆಗಳನ್ನು ಕಾಣಿಸಬಲ್ಲುದು.

ಕಣವಿಯವರ ಒಂದು ಸಂಕಲನದ ಹೆಸರು ‘ನೀವೇ ಪ್ರಮಾಣು’. ಇದನ್ನು ಅವರು ವಚನ ಸಾಹಿತ್ಯದಿಂದ ಆರಿಸಿಕೊಂಡಿದ್ದಾರೆ. ಅಲ್ಲಮ, ಬಸವಣ್ಣ ಇಬ್ಬರಲ್ಲೂ ಈ ಪ್ರಯೋಗವಿದೆ. ಅಲ್ಲಮ ‘ಗುಹೇಶ್ವರನೆಂಬುದು ಅಪ್ರಮಾಣು’ ಎನ್ನುತ್ತಾನೆ. ಅಲ್ಲಮ ಅನುಭಾವ ಜಗತ್ತಿನ ಉನ್ನತ ನೆಲೆಯ ಪ್ರತಿನಿಧಿ. ಈ ಲೋಕದ ಹಂಗಿಲ್ಲದವನು. ಈ ಲೋಕದಲ್ಲಿ ಇದ್ದೂ ಇಲ್ಲದಂತಿರುವ ನಿರ್ಲಿಪ್ತ. ಆತ್ಯಂತಿಕ ಸತ್ಯ ಎಲ್ಲ ಮಾನದಂಡಗಳನ್ನೂ ಮೀರಿದ್ದೆನ್ನುವ ಅನುಭಾವದ ನಿಲವು ಅಲ್ಲಮನದು. ಆದ್ದರಿಂದಲೇ ಅವನಿಗೆ ಗುಹೇಶ್ವರನೆಂಬುದು ಅಪ್ರಮಾಣು. ಆದರೆ ಬಸವಣ್ಣ ‘ಕೂಡಲ ಸಂಗಮ, ನೀವೇ ಪ್ರಮಾಣು’ ಎನ್ನುತ್ತಾನೆ. ಬಸವಣ್ಣನೂ ಅನುಭಾವದಲ್ಲಿ ಆಸಕ್ತ, ಮಹಾಭಕ್ತ. ಆದರೆ ಆತನ ಭಕ್ತಿಗೆ ಸಾಮಾಜಿಕ ಆಯಾಮವಿದೆ. ‘ಕಳಬೇಡ, ಕೊಲಬೇಡ…’ ಎಂಬ ವಚನದಲ್ಲಿ ಕಡೆಗೆ ಈ ಸಾಮಾಜಿಕ ಮೌಲ್ಯಗಳೇ ಕೂಡಲ ಸಂಗಮ ನನ್ನು ಒಲಿಸುವ ಪರಿ ಎಂಬ ನಿಲವಿದೆ. ಅಂದರೆ ಬಸವಣ್ಣನಿಗೆ ಮೋಕ್ಷವೆಂಬುದು ಇಲ್ಲಿಯೇ, ಈ ಲೋಕದಲ್ಲಿಯೇ ಇದ್ದು ಸಾಧಿಸಬೇಕಾದಂಥದು. ಇಲ್ಲಿ ಸಲ್ಲುವರು ಅಲ್ಲಿಯೂ ಸಲ್ಲುವರು. ಹೀಗಾಗಿಯೆ ಬಸವಣ್ಣನ ವಸ್ತುಪ್ರಪಂಚ ಬೆಡಗಿನ ಲೋಕವಲ್ಲ, ಜನಸಾಮಾನ್ಯರ ಜಗತ್ತು. ಜನತೆಯನ್ನು ತನ್ನೊಂದಿಗೆ ಕರೆದೊಯ್ಯುವ ಹಂಬಲದ ಬಸವಣ್ಣನ ಅಭಿವ್ಯಕ್ತಿಯ ಮಾದರಿ ಸಂವಹನಶೀಲವಾದುದು.

ಅಲ್ಲಮ, ಬಸವಣ್ಣ ಎರಡು ಭಿನ್ನ ಮಾದರಿಗಳು. ಕಣವಿಯವರಿಗೆ ನಿಸ್ಸಂದೇಹವಾಗಿ ಬಸವಣ್ಣ ಮಾದರಿ. ತಮ್ಮ ಕಾವ್ಯ ಈ ಲೋಕದೊಂದಿಗೆ ಎಷ್ಟರ ಮಟ್ಟಿಗೆ ಸಂಬಂಧ ಸೃಷ್ಟಿಸಿಕೊಳ್ಳುತ್ತದೆಯೋ ಅಷ್ಟರ ಮಟ್ಟಿಗೆ ಅದು ಸಾರ್ಥಕ ಎಂದು ನಂಬಿದವರು. ಬಸವಣ್ಣನ ಭಕ್ತಿಗೆ ಸಾಮಾಜಿಕ ಆಯಾಮವಿದ್ದಂತೆ ಕಣವಿಯವರ ಕಾವ್ಯಶ್ರದ್ಧೆಗೆ ನಿಸ್ಸಂದೇಹವಾಗಿ ಸಾಮಾಜಿಕ ತುಡಿತವಿದೆ.

‘ಶ್ರಾವಣದ ಮೋಡದ ರೀತಿ: ಅವಸರದ ಪ್ರೀತಿ. / ಕಾರ್ತಿಕದಲ್ಲಿ ಪೂರ್ತಿ ಬೇರೆ ತರಹ. ಬೆಟ್ಟದ / ಹಾಗೆ ಗಟ್ಟಿಯಾಗಿ ಒಂದೆಡೆ ನಿಂತು, ಮೆಲ್ಲಗೆ / ಅರಳಿ, ಹಲವು ಬಗೆ ಶಿಲ್ಪದಲಿ ಕಡೆದ ಪ್ರತಿಮೆ / ಗೆಲ್ಲುಪಮೆ? ಸಂಜೆ ಸೂರ್ಯನ ಬಣ್ಣದೋಕುಳಿಗೆ / ಅಪೂರ್ವ ಜೀವಕಳೆ, ನಿಮಿಷ ನಿಮಿಷಕ್ಕೊಂದು / ಭಂಗಿ, ಕೆಳಗೆ ಕಪ್ಪಗೆ ನೆಲಕೆ ಕಾಲೂರುವುದು / ಮಳೆ. ಕತ್ತಲಾದಂತೆ ಮಿಂಚು ಕೋರೈಸಿ / ಗುಡುಗುವುದು: ದೂರದ ಗುಡಿಯ ನಗಾರಿಯಂತೆ. / ಕಣ್ಣು ತಣಿಸುವ ಮಣ್ಣಿಗುಣಬಡಿಸುವುದು ಮೋಡ / ಕಲೆಗಾಗಿ ಕಲೆಯುಂಟೆ? ಜನ ಬದುಕುವುದು ಬೇಡ? /’

ಆಗಸದಲ್ಲಿ ಚೆಲುವಿನ ಚಿತ್ತಾರಗಳನ್ನು ಬಿಡಿಸುವ ಮೋಡ ನಮ್ಮ ಕಣ್ಣು ತಣಿಸುತ್ತಲೇ ಕಡೆಗೆ ಮಳೆಯ ಮೂಲಕ ಮಣ್ಣಿನ ಮಕ್ಕಳಿಗೆ ಉಣಬಡಿಸುತ್ತದೆನ್ನುವ ಚಿತ್ರ ಕಣವಿಯವರ ಕಾವ್ಯದ ನಿಲವನ್ನು ಅತ್ಯಂತ ಪರಿಣಾಮಕಾರಿಯಾಗಿ ಪ್ರತಿಪಾದಿಸುತ್ತದೆ. ‘ನಿನ್ನ ರೂಪ ಲಾವಣ್ಯಕೆ ಬೀಗಬೇಡ ಎಂದಿಗೂ’ ಎಂದು ಅವರು ಕವಿತೆಯನ್ನು ಎಚ್ಚರಿಸುತ್ತಾರೆ. ‘ಒಡೆದುಹೋದ ಮನಸುಗಳಲಿ ಹಗೆಯ ಕಿಡಿಯ ನಂದಿಸು/ ಸಿಡಿದು ನಿಂತ ಹೃದಯಗಳನು ಪ್ರೀತಿಯಲ್ಲಿ ಬಂಧಿಸು’ ಎಂದು ಕವಿತೆಯನ್ನು ಪ್ರಾರ್ಥಿಸುತ್ತಾರೆ. ಚೆಲುವಿನ ಆರಾಧನೆ, ಆರೋಗ್ಯಕರ ಸಮಾಜ ನಿರ್ವಣದ ಹಂಬಲ- ಇವೆರಡನ್ನೂ ಒಂದೇ ಬಿಂದುವಿನಲ್ಲಿ ಹಿಡಿಯುವ ರೀತಿಯಲ್ಲಿ ಕಣವಿಯವರ ಕವಿತೆಗಳ ವಿನ್ಯಾಸವಿದೆ. ಸು ರಂ ಎಕ್ಕುಂಡಿ ನನಗಿಲ್ಲಿ ನೆನಪಾಗುತ್ತಾರೆ. ಚೆಲುವು ಸಾಮಾಜಿಕ ಎಚ್ಚರವಾಗಿ ರೂಪಾಂತರವಾಗುವ ಕ್ರಮವನ್ನು, ಇದರಿಂದಾಗಿಯೇ ಸಂವಹನಶೀಲತೆಯಿಂದ ದೂರವಾಗದ ಕಾವ್ಯಲಯವನ್ನು ಕಣವಿಯವರಂತಹ ಕವಿಗಳು ಪ್ರಜ್ಞಾಪೂರ್ವಕವಾಗಿ ರೂಪಿಸಿಕೊಂಡಂತೆ ತೋರುತ್ತದೆ. ಇದು ಸರಳವೇನಲ್ಲ. ಕಣವಿಯವರಿಗೆ ಇದರ ಅರಿವಿದೆ. ‘ಆಕಾಶಬುಟ್ಟಿಯೊಲು ಏಕಾಕಿಯಾದರೂ/ ಎದೆಗೆದೆಯ ಹೊಂದೀಪ ಉದ್ದೀಪನಂಗೊಂಡು/ ಬಾಳ ದ್ವೀಪವ ಬೆಳಗುವಂತೆ ಹಾಡು/ ಎಂದೆಂದು ನೀನಿಂಥ ಹಾಡ ಹಾಡು’. ಏಕಾಂಗಿಯಾದರೂ ಅಡ್ಡಿಯಿಲ್ಲ, ಆತ್ಮಬಲ ಬೆಳೆಸಿಕೊಂಡು ತನ್ನದೇ ಹಾದಿಯಲ್ಲಿ ಸಾಗಬೇಕೆಂಬ ಅಭೀಪ್ಸೆ ಕಣವಿಯವರ ಕಾವ್ಯಪಥವನ್ನು ರೂಪಿಸಿದೆ. ಮಾತ್ರವಲ್ಲ, ಇದನ್ನು ಮನದುಂಬಿ ಹಾಡಬೇಕೆನ್ನುವ ಜೀವನೋತ್ಸಾಹದ ಲಯವೂ ಅವರ ಕಾವ್ಯ ನಡಿಗೆಯಲ್ಲಿ ಸಹಜವೆಂಬಂತೆ ಸೇರಿಕೊಂಡಿದೆ. ಕಣವಿಯವರು ಮೂಲತಃ ಭಾವಗೀತಾತ್ಮಕ ಕವಿ.

ಆಧುನಿಕ ಕನ್ನಡ ಸಂವೇದನೆ ಸಂಘರ್ಷವನ್ನು, ಪ್ರತಿಭಟನೆಯನ್ನು ಸಾಹಿತ್ಯದ ಪ್ರಧಾನ ಲಕ್ಷಣವೆಂದು ಗುರ್ತಿಸಿಕೊಂಡಿದೆ. ಸಂಘರ್ಷವಿಲ್ಲದ ಕಾವ್ಯ ನೀರಸವೆಂಬುದು ಇವರ ನಿಲವು. ಕಣವಿಯವರ ಮಾರ್ಗ ಸಂಘರ್ಷಕ್ಕಿಂತ ಸಂವಾದವನ್ನು ಅವಲಂಬಿಸಿರುವಂಥದು. ಹೀಗಾಗಿ ಕಣವಿಯಂಥವರ ಕಾವ್ಯ ಪ್ರಚಲಿತ ಕಾವ್ಯ ಚರ್ಚೆಗಿಂತ ಭಿನ್ನವಾದ ಹೊಸ ಬಗೆಯ ಕಾವ್ಯ ಮೀಮಾಂಸೆಯನ್ನು ಬಯಸುತ್ತದೆ. ಇಂತಹ ಕಾವ್ಯ ಮಾದರಿಯ ಕವಿಗಳು ಅದ್ಭುತ ಕುಶಲಕರ್ವಿುಗಳಾಗಿರುತ್ತಾರೆ. ಕಣವಿಯವರ ಕಲೆಗಾರಿಕೆಯ ಬಗ್ಗೆ ಕನ್ನಡ ವಿಮರ್ಶೆ ಈಗಾಗಲೇ ಸಾಕಷ್ಟು ರ್ಚಚಿಸಿದೆ. ಸಾನೆಟ್ ಬಳಕೆಯಲ್ಲಂತೂ ಕಣವಿಯವರದು ಅನನ್ಯ ಸಾಧನೆ. ಶಾಂತಿನಾಥ ದೇಸಾಯಿಯವರು ಹೇಳುವಂತೆ ಕಣವಿಯವರ ಸಾನೆಟ್​ಗಳು ‘ವೈಚಾರಿಕ ಭಾವಗೀತೆಗಳು’.

‘ಈ ಸುನೀತ ನವನೀತವ ಕಾಸಿ ತುಪ್ಪ ತೆಗೆ / ತಳಕಿಳಿಯಲಿ ಗಷ್ಟು ಮೇಲೆ ತಿಳಿಯಾಗಲಿ ಬಗೆ’. ಎಂತಹ ಸಂಕಷ್ಟದ ಸಂದರ್ಭದಲ್ಲಿಯೂ ಜೀವಚೈತನ್ಯದ ಸೆಲೆಯನ್ನುಳಿಸಿಕೊಳ್ಳಬೇಕು; ಬದುಕಿನ ಬಗೆಗಿನ ಪ್ರೀತಿಯನ್ನು ಕಳೆದುಕೊಳ್ಳಬಾರದು; ಉದ್ವಿಗ್ನಗೊಳ್ಳದೆ ಸಮಾಧಾನವಾಗಿ ಈ ಬದುಕನ್ನು ಅನುಭವಿಸಬೇಕೆನ್ನುವುದು ಕಣವಿಯವರ ಅಭೀಪ್ಸೆ. ಈ ಸಮಚಿತ್ತದ ಹದದಿಂದಾಗಿಯೇ ಕಣವಿಯವರ ಕಾವ್ಯ ಮೆಲುದನಿಯ ಕಾವ್ಯವಾಗಿದೆ. ಮೆಲುದನಿಯಿಂದಾಗಿಯೇ ತನ್ನ ಶಕ್ತಿಯನ್ನು ದೀರ್ಘಕಾಲ ಕಾಪಾಡಿಕೊಳ್ಳುವುದು ಸಾಧ್ಯವಾಗಿದೆ.

‘ಮುಂಜಾವದಲಿ ಹಸಿರು ಹುಲ್ಲು ಮಕಮಲ್ಲಿನಲಿ/ ಪಾರಿಜಾತವು ಹೂವ ಸುರಿಸಿದಂತೆ / ಮುಟ್ಟಿದರೆ ಮಾಸುತಿಹ ಮಂಜುಹನಿ ಮುತ್ತಿನಲಿ/ ಸೃಷ್ಟಿ ಸಂಪೂರ್ಣತೆಯ ಬಿಂಬಿಪಂತೆ / ಮೆಲ್ಲೆದೆಯ ಸವಿಯೊಲುಮೆ ಕರಗಿ ಕಂಬನಿಯಾಗಿ/ ಹೆಣ್ಣ ಕಣ್ಣಂಚಿನಲಿ ತುಳುಕುವಂತೆ/ ಸುಳಿಗಾಳಿಯೊಂದಿನಿತು ಸೂಸಿ ಬಂದರು ಸಾಕು/ ಮರವನಪ್ಪಿದ ಬಳ್ಳಿ ಬಳುಕುವಂತೆ/ ನಾವು ಆಡುವ ಮಾತು ಹೀಗಿರಲಿ ಗೆಳೆಯ/ ಮೃದುವಚನ ಮೂಲೋಕ ಗೆಲ್ಲುವುದು ತಿಳಿಯ’. ಕಣವಿಯವರದು ಮೃದುಮಾತು ನಿಜ, ಆದರೆ ಅವರ ದನಿಯಲ್ಲಿ ಹೋರಾಟದ ಲಯವಿದೆ. ನಾಡು ನುಡಿಗೆ ಸಂಬಂಧಿಸಿದ ಎಲ್ಲ ಹೋರಾಟಗಳಲ್ಲೂ ಅವರು ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ. ವ್ಯವಸ್ಥೆಯ ವಿರುದ್ಧದ ತಮ್ಮ ದನಿಯನ್ನು ಸ್ಪಷ್ಟವಾಗಿ ದಾಖಲಿಸಿದ್ದಾರೆ. ಹೋರಾಟದಲ್ಲಿ ಅವರು ಜೊತೆಗಿದ್ದರೆ ಸಹಜವಾಗಿಯೇ ಆ ಹೋರಾಟಕ್ಕೆ ನೈತಿಕತೆಯ ಬಲ ಒದಗಿಬರುತ್ತದೆ. ಅದಕ್ಕೆ ಕಾರಣವೂ ಇದೆ. ಕಣವಿಯವರು ತಮ್ಮ ಬದುಕಿನುದ್ದಕ್ಕೂ ‘ಅಧಿಕಾರ ಕೇಂದ್ರ’ದಿಂದ ದೂರವಿದ್ದಾರೆ. ಕರ್ನಾಟಕ ವಿಶ್ವವಿದ್ಯಾಲಯದ ವ್ಯಾಸಂಗ ವಿಸ್ತರಣ – ಪ್ರಕಟಣ ವಿಭಾಗದ ಕಾರ್ಯದರ್ಶಿಯಾಗಿ ವೃತ್ತಿ ಜೀವನವನ್ನು ಆರಂಭಿಸಿದ ಕಣವಿಯವರು ಪ್ರಸಾರಾಂಗದ ನಿರ್ದೇಶಕರಾಗಿ ನಿವೃತ್ತರಾದರು. ಒಂದು ವರ್ಷ ಅವರು ಕನ್ನಡ ಅಧ್ಯಯನ ಪೀಠದಲ್ಲಿ ಗೌರವ ಸಂದರ್ಶಕ ಪ್ರಾಧ್ಯಾಪಕರಾಗಿದ್ದುದನ್ನು ಬಿಟ್ಟರೆ, ವಿಶ್ವವಿದ್ಯಾಲಯದಲ್ಲಿದ್ದೂ ಪ್ರಾಧ್ಯಾಪಕ ವೃತ್ತಿ ಮಾಡಿದವರಲ್ಲ, ಹೀಗಾಗಿ ಅನೇಕ ಪ್ರಾಧ್ಯಾಪಕರಂತೆ ಶಿಷ್ಯಬಳಗದ ಅಧಿಕಾರ ವಲಯವನ್ನು ಅವರು ಸೃಷ್ಟಿಸಿಕೊಳ್ಳಲಿಲ್ಲ. ಅಕಾಡೆಮಿಯ ಅಧ್ಯಕ್ಷ ಪದವಿ ಅವರನ್ನು ಅರಸಿ ಬಂದಾಗ ಅದನ್ನು ಅವರು ನಯವಾಗಿ ನಿರಾಕರಿಸಿದ್ದನ್ನು ನಾನು ಬಲ್ಲೆ. ಯಾವ ಬಗೆಯ ವ್ಯವಸ್ಥೆಯ ಅಧಿಕಾರದಿಂದಲೂ ಅವರು ಅಂತರವನ್ನು ಎಚ್ಚರದಿಂದ ಕಾಯ್ದುಕೊಂಡಿದ್ದಾರೆ. ಆದರೆ ಪ್ರತಿಭಟನೆಯ ನೇತೃತ್ವವನ್ನು ನಿರುದ್ವಿಗ್ನವಾಗಿ ನಿರ್ವಹಿಸಿದ್ದಾರೆ.

ಒಮ್ಮೆ ಮಾತನಾಡುತ್ತ ಕೇಳಿದೆ: ‘ದೇವರ ಬಗೆಗಿನ ನಿಮ್ಮ ಕಲ್ಪನೆ?’

ಕಣವಿಯವರು ಹೇಳಿದರು: ‘‘ಭಯ ಮತ್ತು ಅಸ್ಥಿರತೆಯ ಸ್ಥಿತಿಯಲ್ಲಿ, ಸಂಕಷ್ಟದ ಸಮಯದಲ್ಲಿ ಮನುಷ್ಯನಿಗೆ ಒಂದು ಆಸರೆ ಬೇಕಾಗುತ್ತದೆ. ಈ ಆಸರೆಯೇ ‘ದೇವರು’. ನನ್ನ ಪ್ರಕಾರ ದೇವರೆಂದರೆ ಕೆಲವು ಗುಣಗಳ ಮೊತ್ತ. ನಮ್ಮಲ್ಲಿ ಈಗಲೂ ‘ದೇವರಂತಹ ಮನುಷ್ಯ’ ಎಂಬ ಮಾತಿದೆ. ಅಂದರೆ ಕೆಲವು ಮೌಲ್ಯಗಳನ್ನು ಆತ ಪ್ರತಿನಿಧಿಸುತ್ತಾನೆ ಎಂಬ ಅರ್ಥದಲ್ಲಿ ಇದನ್ನು ನಾವು ಬಳಸುತ್ತಿದ್ದೇವೆ. ಇದೊಂದು ರೀತಿಯಲ್ಲಿ ಮನುಷ್ಯ ಗಳಿಸಿಕೊಳ್ಳುವ ಅರ್ಹತೆಯೂ ಹೌದು. ಹೀಗಾಗಿ ದೇವರೆಂದರೆ ಆಡಂಬರದ ಪೂಜೆಯಲ್ಲ, ಬದಲಿಗೆ ವ್ಯಕಿತ್ವದಲ್ಲಿ ಅಳವಡಿಸಿಕೊಳ್ಳಬೇಕಾದ ಕೆಲವು ಉತ್ತಮ ಗುಣಗಳು, ಇತರರಿಗೆ ನೆರವಾಗುವ ಇತ್ಯಾತ್ಮಕ ಮೌಲ್ಯಗಳು.

ಕಣವಿಯವರೊಡನೆ ನನಗೆ ನಾಲ್ಕು ದಶಕಗಳ ಒಡನಾಟ. ನಾನು ಕಂಡ ಅತ್ಯಂತ ಸುಸಂಸ್ಕೃತ ವ್ಯಕ್ತಿಗಳಲ್ಲಿ ಕಣವಿಯವರು ಮೇಲುಸಾಲಿನಲ್ಲಿದ್ದಾರೆ. ಕುಟುಂಬವತ್ಸಲರಾದ ಅವರು ನನ್ನನ್ನೂ, ರಜನಿಯವರನ್ನೂ ಮನೆಯವರಂತೆಯೇ ಅತ್ಯಂತ ಆಪ್ತವಾಗಿ ನಡೆಸಿಕೊಂಡಿದ್ದಾರೆ. ಇಂಥವರ ಒಡನಾಟ ಬದುಕಿನ ಭಾಗ್ಯ ಎಂಬ ಭಾವ ಮೂಡಿಸಿದ್ದಾರೆ. ಇದೇ ಜೂನ್ 28 ರಂದು ಧಾರವಾಡದಲ್ಲಿ ಅವರ ಆಪ್ತರೆಲ್ಲ ಸೇರಿ ಸಮಾರಂಭವೊಂದನ್ನು ಏರ್ಪಡಿಸಿದ್ದಾರೆ. ಆ ಸಂದರ್ಭದಲ್ಲಿ ಮೈಸೂರಿನ ಸಂವಹನ ಪ್ರಕಾಶನ ಪ್ರಕಟಿಸಿರುವ ‘ಕಣವಿ ಸಮಗ್ರ ಕಾವ್ಯ’ ಹಾಗೂ ಜಿ ಎಂ ಹೆಗಡೆ ಸಂಪಾದಿಸಿರುವ ‘ಚೆನ್ನವೀರ ಕಣವಿ ಸಂದರ್ಶನ’ ಪುಸ್ತಕಗಳು ಬಿಡುಗಡೆಯಾಗುತ್ತಿವೆ. ನಮ್ಮೆಲ್ಲರ ಪ್ರೀತಿಯ ಕವಿಗೆ ನಾಡವರ ಪರವಾಗಿ ಶುಭಾಶಯಗಳು.

Courtesy : Vijayavani.net

http://vijayavani.net/samayika-column-by-dr-narahalli-balasubrhmanya/

Leave a Reply