ಸಣ್ಣ ಕತೆ ಎಂಬುದನ್ನು ಆಧುನಿಕ ಕನ್ನಡ ಸಾಹಿತ್ಯದ ಒಂದು ಪ್ರಕಾರ ಎಂದು ಇಂಗ್ಲೀಷಿನ ’Short Story’ ಎಂಬುದಕ್ಕೆ ಸಂವಾದಿಯಾಗಿ ಬಳಸುತ್ತಿದ್ದರೂ ಕಥಾ ಪ್ರಕಾರ ಕನ್ನಡಕ್ಕೆ ಹೊಸದೇನಲ್ಲ. ’ವಡ್ಡಾರಾಧನೆ’ (ಕ್ರಿ.ಶ. ೯೨೦)ಯ ಕತೆಗಳು ಪದ್ಯದಲ್ಲಿ ಇರದೆ ಗದ್ಯದಲ್ಲಿ ಇರುವುದನ್ನು ಅಗತ್ಯ ಗಮನಿಸಬೇಕು. ಪ್ರಾಯಶಃ ಇದು ಕನ್ನಡದ ಮೊದಲ ’ಕಥಾ ಸಂಕಲನ’ ಎನ್ನಬಹುದು. ಅನೇಕ ಚಿಕ್ಕ ಚಿಕ್ಕ ಕಥೆಗಳಿಂದ ಕೂಡಿದ ಈ ಕೃತಿಯು ಅನೇಕ ಬಿಡಿ ರಚನೆಗಳ ಸಂಗ್ರಹವೆಂದು ತೋರುತ್ತಿದ್ದರೂ ಅವುಗಳ ನಡುವೆ ಒಂದು ಅಂತರ್ ಸಂಬಂಧವೂ ಇದೆ. ಬಿಡಿಬಿಡಿ ಕಥೆಗಳನ್ನು ಓದಿ ಸಂತೋಷಿಸುವಂತೆ ’ವಡ್ಡಾರಾಧನೆ’ಯನ್ನು ಒಂದು ಸಮಗ್ರ ’ಕೃತಿ’ಯಾಗಿಯೂ ಓದಬಹುದಾಗಿದೆ. ಇದು ಆ ಕೃತಿಯ ವಿಶೇಷವೆನ್ನಬಹುದು. ಧರ್ಮೋಪದೇಶ ಇಲ್ಲಿಯ ಕತೆಗಳ ಮುಖ್ಯ ಉದ್ದೇಶವಾಗಿದ್ದರೂ ’ಕತೆ’ ಎಂಬುದರ ಸ್ವರೂಪ, ಲಕ್ಷಣ ಮತ್ತು ಪರಿಣಾಮಗಳನ್ನು ಅಧ್ಯಯನ ಮಾಡಬಯಸುವವರಿಗೆ ಇದೊಂದು ಆಕರ ಗ್ರಂಥವೆನ್ನಬಹುದು. ಇನ್ನು ಮೌಕಿಕ ಸಂಪ್ರದಾಯದ ಕತೆಗಳು ಇವಕ್ಕಿಂತ ಹೆಚ್ಚು ಪ್ರಾಚೀನ. ನೀತಿಕತೆಗಳು, ದಂತಕತೆಗಳು, ಪ್ರಾಣಿಕತೆಗಳು ಮುಂತಾಗಿ ಹಲವು ಬಗೆಯ ಕತೆಗಳ ಸಮೃದ್ಧ ಪರಂಪರೆಯೇ ನಮಗಿದೆ. ಕನ್ನಡ ಜನಪದವೇ ಸೃಷ್ಟಿಸಿದ ಕತೆಗಳು, ಸಂಸ್ಕೃತದಿಂದ ಅನುವಾದ-ರೂಪಾಂತರಗೊಂಡು ಬಂದಂಥ ಕತೆಗಳು ನಮ್ಮ ಕಥಾ ಪರಂಪರೆಯನ್ನು ಶ್ರೀಮಂತಗೊಳಿಸಿವೆ. ಎಲ್ಲ ಧರ್ಮಗಳೂ ತಮ್ಮ ಪ್ರಚಾರ-ಪ್ರಸಾರಗಳಿಗೆ ಕಥಾಪ್ರಕಾರವನ್ನು ಬಳಸಿಕೊಂಡರೂ, ಲೌಕಿಕ ಪ್ರಪಂಚದ ಸುಖ-ದುಃಖಗಳಿಗೆ ಅವು ದೂರವಾಗಿಲ್ಲ. ಆಧುನಿಕಪೂರ್ವ ಕತೆಗಳು ಕಾಲದೇಶಗಳಿಗೆ ಬದ್ಧವಾಗದೆ, ಮನುಷ್ಯ ಪಾತ್ರಗಳಿಗಷ್ಟೇ ಸೀಮಿತವಾಗದೆ, ವಾಸ್ತವಮಾರ್ಗಕ್ಕೇ ಜೋತುಬೀಳದೆ ಅನುಭವಸಾಮಗ್ರಿ-ಅಭಿವ್ಯಕ್ತಿ ಮಾದರಿ ಎರಡರಲ್ಲೂ ಸಾಧಿಸಿಕೊಂಡಿರುವ ಸಮೃದ್ಧಿ ಮತ್ತು ಪ್ರಯೋಗಶೀಲತೆಗಳು ಬೆರಗು ಹುಟ್ಟಿಸುವಂತಿವೆ.
About this Ebook
Information
Additional information
Category | |
---|---|
Author | |
Publisher | |
Book Format | Ebook |
Language | Kannada |
Reviews
Only logged in customers who have purchased this product may leave a review.
Reviews
There are no reviews yet.