ನಮ್ಮ ಪೂರ್ವಜರ ಸೈನಿಕವೃತ್ತೀಯ ಅಂಕುರವು ಇದೇ ಇರಬಹುದೇ? ಅದೆಂತಹ ಅರ್ಥವನ್ನು ಇದರಲ್ಲಿ ಸ್ಥಾನೀಕರಿಸಿದ್ದಾರೆ! ನಾವು ಮೊದಲಗಿತ್ತಿಯ ಈ ದೇವಗರ್ಭಕೆ ಇನ್ನು ಮರಳಬಹುದೇ? ಅದು ಹೇಗೆ ಸಾಧ್ಯ? ನಮ್ಮ ಆಧುನಿಕ ಕವಿತೆ-ಕತೆಗಳಲ್ಲಿ ಕಾದಂಬರಿ-ಪ್ರಬಂಧಗಳ ಲೇಖಕರಲ್ಲಿ ಸೈನಿಕ, ವ್ಯೂಹಪದ್ಧತಿ ನಮೂದಿಸಲ್ಪಟ್ಟೆ ಇಲ್ಲ!
ಹೋದ ಶತಕದ ಮೂರನೆಯ ದಶಕದ ಒಂಬತ್ತನೆಯ ತಿಂಗಳ ನಾಲ್ಕನೆಯ ದಿವಸ ನನ್ನ ಹುಟ್ಟು ಎಂದು ನಾನು ಕೇಳಿ ತಿಳಿದದ್ದು. ಮೊದಲನೆಯ ಪ್ರಜ್ಞೆ ಎಂದರೆ ಹಳ್ಳಿಯ ದಂಡೆಗೆ ಜುಳು ಜುಳು ಹರಿಯುವ ಮಲಪ್ರಭೆ, ಅದರ ಪಾತ್ರದೊಳಗೆಯೇ ಮಡಗಿದ ಪುಂಡಲೀಕನ ಗುಡಿ, ಮತ್ತು ಬದಿಗೆ ಕಟ್ಟೆಯ ಮೇಲೆ ಕರಿಕಲ್ಲಿನ ಈಶ್ವರಲಿಂಗ, ಹತ್ತಿಪ್ಪತ್ತು ಮೆಟ್ಟಿಲುಗಳನ್ನೇರಿದರೆ ವಿಠೋಬನ ಗುಡಿ, ನದಿನೀರು ಕೊಚ್ಚಬಾರದೆಂಬಂತೆ ಕೋಟೆಯಾಕಾರದ ಎತ್ತರವಾದ ಗೋಡೆ, ಗೋಡೆಯಾಚೆ ತನ್ನ ನೇರ ಪಾತಳಿಯನ್ನು ಕಳೆದುಕೊಂಡು ಕೋನಾಕಾರ ತಳೆದು ಗೋಲಾಕಾರವಾಗಿ ಸುತ್ತಿದ ಹೊಳೆಯ ಹರಿಯನ್ನು ಮೈಲಿಗಳುದ್ದಕ್ಕೂ ಸಿಂಹಾವಲೋಕಿಸುವಂತೆ ಧುತ್ತನೆ ಎದ್ದು ನಿಂತ ವಿಶಾಲ ದಿಬ್ಬದ ಮೇಲೆ ಮೂರೋ ನಾಲ್ಕೂ ನೂರು ವರ್ಷಗಳ ಹಿಂದೆ ಕಟ್ಟಿದ ಕೋಟೆ. ಇದೊಂದು ದೃಶ್ಯ.
Reviews
There are no reviews yet.