ಬೆಳಗೆರೆ ಜಾನಕಮ್ಮ ನವೋದಯ ಕನ್ನಡ ಸಾಹಿತ್ಯದ ಮೊದಲ ಕವಯತ್ರೀ. ಜಾನಕಮ್ಮನವರು ಹಳ್ಳಿಗಾಡಿನಲ್ಲಿ ಹುಟ್ಟಿದ ಹೆಣ್ಣುಮಗಳು. ಅವರು ಹುಟ್ಟಿದ ಬೆಳಗೆರೆಯಲ್ಲಿ ನಾಲ್ಕನೆಯ ತರಗತಿಯವರೆಗೆ ಓದಲು ಅವಕಾಶವಿತ್ತು. ಜಾನಕಮ್ಮ ಎರಡನೆಯ ತರಗತಿಗೆ ಬರುತ್ತಿದ್ದ ಹಾಗೆ, ಅವರ ಅಜ್ಜಿ ಬಂದು ‘ಜಾನಕಿಯನ್ನು ಶಾಲೆಗೆ ಸೇರಿಸಿದ್ದೀಯಂತೆ. ನಾವೇನು ಸರೀಕರೆದುರು ತಲೆಯೆತ್ತಿ ತಿರುಗಬೇಕೋ ಬೇಡವೋ’ ಎಂದು ಗದರಿ ಶಾಲೆಯಿಂದ ಬಿಡಿಸಿದರಂತೆ. ವಾಸ್ತವದಲ್ಲಿ ಶಾಲೆ-ಶಿಕ್ಷಣ ಎನ್ನುವುದು ಮಕ್ಕಳಿಗೆ ಎರಡನೆಯ ಹುಟ್ಟಿನ ಹಾಗೆ. ಜಾನಕಮ್ಮನವರು ಶಾಲೆಯನ್ನು ಬಿಟ್ಟು, ಹತ್ತನೆಯ ವಯಸ್ಸಿಗೇ ಮದುವೆಯಾಗಿ, ೧೭ನೆಯ ವಯಸ್ಸಿಗೆ ಮಗನನ್ನು ಹೆತ್ತರು. ಹಾಡುಗಾರಿಕೆಯು ಆನುವಂಶಿಕವಾಗಿ ಬಂದಿದ್ದ ಜಾನಕಮ್ಮನವರು, ತಮಗೆ ತೋಚಿದಂತೆ ಮಗನ ಮೇಲೆ ಕವನವನ್ನು ಕಟ್ಟಿ ಹಾಡಿದಾಗ, ಅವರ ತಂದೆ ಚಂದ್ರಶೇಖರ ಶಾಸ್ತ್ರಿಗಳು ‘ಜಾನಕಮ್ಮ ಇವೆಲ್ಲ ಹೀಗೆ ಹಾಡಿ ಮರೆತುಬಿಡಬೇಡ. ಒಂದು ಕಡೆ ಬರೆದಿಡು’ ಎಂದು ಒತ್ತಾಯಿಸಿದಾಗ ಬರೆದಿಡಲು ಪ್ರಯತ್ನಿಸಿದರು. ಆದರೆ ಅಕ್ಷರಾಭ್ಯಾಸ ಹಾಗೂ ಕಾಗುಣಿತವನ್ನು ಪೂರ್ಣ ಕಲಿಯುವ ಮೊದಲೇ ಶಾಲೆಯನ್ನು ಬಿಡಬೇಕಾಗಿ ಬಂದಕಾರಣ, ಬರೆಯುವುದು ನಿಜಕ್ಕೂ ಕಷ್ಟವಾಗುತ್ತದೆ. ಸೀಮಿತ ಶಬ್ದಸಂಪತ್ತನ್ನು ಬಳಸಿ, ಸರಳವಾದ ಕವನಗಳನ್ನು ರಚಿಸಲು ಆರಂಭಿಸಿದರು.
ಜಾನಕಮ್ಮನವರ ಭಾವಕೋಶವನ್ನು ತಿದ್ದಿ ತೀಡಿದವರು ಸಂಗಯ್ಯ ಶಾಸ್ತ್ರಿಗಳು, ಜಿ.ಪಿ.ರಾಜರತ್ನಂ, ದತ್ತಾತ್ರೇಯ ರಾಮಚಂದ್ರ ಬೇಂದ್ರೆ, ಮಾಸ್ತಿ ವೆಂಕಟೇಶ ಅಯ್ಯಂಗಾರ್ ಮುಂತಾದವರು! ಆದರೂ ಬಡತನ, ವಿದ್ಯೆಯ ಕೊರತೆ, ಗಂಡನ ಅಹಮಿನ ಕೋಟೆಯಲ್ಲಿ ಜಾನಕಮ್ಮ ನರಳಬೇಕಾಗುತ್ತದೆ. ಜಾನಕಮ್ಮನವರು ಗರ್ಭವತಿಯಾಗಿ ಬಳ್ಳಾರಿಯ ಸರ್ಕಾರಿ ಆಸ್ಪತ್ರೆಯಲ್ಲಿ ಬದುಕು-ಸಾವುಗಳ ನಡುವೆ ತೂಗುವಾಗ ತಂಗಿಗೆ ಹೇಳಿ ‘ಸುಮ್ಮನಿರು ಸಾಕು’ ಎನ್ನುವ ಕವನವನ್ನು ಬರೆಯಿಸಿ, ತಮ್ಮ ೩೬ರ ಎಳೆಯ ವಯಸ್ಸಿನಲ್ಲಿ ತೀರಿಹೋದರು.
Reviews
There are no reviews yet.