`ಅಭಿಜಾತ ಕನ್ನಡ’ವೆಂಬ ಹೆಸರಿನ ಈ ಕಿರುಬರಹಗಳ ಸಂಕಲನವು ತನ್ನ ಹೆಸರಿನಲ್ಲಿರುವ ಎರಡೂ ಪದಗಳನ್ನೂ ಭೂತಗನ್ನಡಿಯಡಿಗೆ ಇಡುತ್ತದೆ – `ಅಭಿಜಾತ’ವೆಂದರೆ ಏನು? ಅದು ಬಹುಕಾಲದಿಂದ ಬಾಳಿದ್ದಕ್ಕೆ ಭಾಷೆಗೆ ಒದಗಿಬಂದ ವಿಶೇಷಣವೆ? ಅಥವಾ, ಸರ್ಕಾರವೊಂದು ತನ್ನ ನಾಡಿನ ಭಾಷೆಯೊಂದಕ್ಕೆ ದಯಪಾಲಿಸಿದ ಬಿರುದು ಮಾತ್ರವೆ? ಅಥವಾ, ಇನ್ನೂ ಪ್ರಾಥಮಿಕವಾಗಿ `ಕನ್ನಡ’ವೆಂದರೆ ಏನದು? ಅದು ಸಾವಿರಾರು ವರ್ಷಗಳಿಂದ ನಮ್ಮ ನಾಡಿನ ಪರಸ್ಪರರ ಸಂಪರ್ಕಕ್ಕೆ ಸಹಾಯಕವಾಗಿ ಬೆಳೆದುಕೊಂಡ ಮಾಧ್ಯಮ ಮಾತ್ರವೆ?  ಅಥವಾ ಅದು ಒಂದು ನಾಡಿನ ಹಲವು ಸ್ಮೃತಿಕೋಶಗಳ ಸಮುಚ್ಚಯವೆ? – ಈ ಬಗೆಯ ತಾತ್ತ್ವಿಕ ಪ್ರಶ್ನೆಗಳಿಗೆ ನಮ್ಮ ನಾಡಿನ ಹಿರಿಯ ವಿದ್ವಾಂಸರಾದ ಶ್ರೀರಾಮ ಭಟ್ಟರು ಈ ಸಂಕಲನದ ಬರಹಗಳ ಮೂಲಕ ತುಂಬ ತಿಳಿಯಾದ ಮಾತುಗಳಲ್ಲಿ ಪರೋಕ್ಷ ಉತ್ತರ ಕೊಡುತ್ತಾರೆ.  ಈ ಪುಸ್ತಕದ ಒಂದೊಂದೂ ಬರಹವು ಕನ್ನಡ ವಾಙ್ಮಯದಿಂದ ಒಂದು ಪದವನ್ನೋ, ಪರಿಭಾಷೆಯನ್ನೋ, ಘಟನೆಯನ್ನೋ, ಅಥವಾ ಒಂದು ಉಲ್ಲೇಖವನ್ನೋ ಎತ್ತಿಕೊಂಡು, ಅದನ್ನು ಬಗೆಬಗೆಯ ಭಾಷಾ-ಸಾಹಿತ್ಯ-ಸಂದರ್ಭಗಳಲ್ಲಿ ಕಂಡರಿಸುತ್ತ, ಭಾಷೆ-ಸಾಹಿತ್ಯಗಳು ನಡೆಸುವ ಸಂಕೀರ್ಣ ಕೊಡುಕೊಳೆಯ ವ್ಯವಹಾರಗಳನ್ನು ತೆರೆದಿಡುತ್ತದೆ.  ಮಾತ್ರವಲ್ಲ, ಇಂಥ ಸಂಬಂಧದ ತಿಳುವಳಿಕೆಯ ಮೂಲಕವೇ ಕನ್ನಡವು ತನ್ನ ಅಭಿಜಾತತೆಯನ್ನು ಅನ್ವೇಷಿಸಿಕೊಳ್ಳಬೇಕು – ಎಂಬ ಅವ್ಯಕ್ತ ಸೂಚನೆಯೂ ಈ ಬರಹಗಳ ಹಿಂದಿರುವಹಾಗಿದೆ.  ಓದುವುದಕ್ಕೆ ಭಾರವಾಗದ, ಆದರೆ ಘನವಾದ ಪಾಂಡಿತ್ಯ ಮತ್ತು ವಿಸ್ತಾರವಾದ ಓದಿನಿಂದ ಕನ್ನಡ ನುಡಿಯನ್ನು ಕುರಿತ ನಮ್ಮ ತಿಳಿವನ್ನು ಗಟ್ಟಿಗೊಳಿಸುವ ಅಪೂರ್ವ ಲೇಖನಗಳು ಇಲ್ಲಿವೆ.

ಅಕ್ಷರ ಕೆ.ವಿ.

Additional information

Category

Author

Publisher

Book Format

Printbook

Language

Kannada

Reviews

There are no reviews yet.

Only logged in customers who have purchased this product may leave a review.