ಅಕ್ಷಯಪಾತ್ರೆ
(ಕಾಂದಬರಿ)
ಇತ್ತೀಚಿನ ದಿನಗಳಲ್ಲಿ ಕನ್ನಡ ಸಾಹಿತ್ಯ ಲೋಕದಲ್ಲಿ ಸಾಹಸ ಕಥೆ ಕಾದಂಬರಿಗಳು ಕಮ್ಮಿಯಾಗಿವೆ. ಮೊದಲೇ ಕನ್ನಡ ಸಾಹಿತ್ಯವು ಓದುಗರ ಕ್ಷಾಮವನ್ನು ಎದುರಿಸುತ್ತಿದೆ. ಟಿವಿ, ಸಿನಿಮಾದ ಅಬ್ಬರದಲ್ಲಿ ಕಾದಂಬರಿ ಓದಿಗರ ಸಂಖ್ಯೆ ಕಡಿಮೆಯಾಗಿದೆ. ಅದರಲ್ಲೂ ಯುವವರ್ಗ ಸಾಹಿತ್ಯ ಕ್ಷೇತ್ರದತ್ತ ನಿರಾಸಕ್ತಿ ಹೊಂದಿದೆ. ಇಂತಹ ವಿಷಮ ಘಟ್ಟದಲ್ಲಿ ಮಿತ್ರ ಶ್ರೀ ಎಚ್.ಜಿ.ಮಳಗಿಯವರು ರೋಚಕ ಸಾಹಸ ಕಾದಂಬರಿಯನ್ನು ಕನ್ನಡ ಓದುಗರಿಗೆ ನೀಡುವ ಸಾಹಸ ಮಾಡಿದ್ದು ಅಭಿನಂದನೀಯ. ಮಹಾಭಾರತ ಕಾಲದ ಅಕ್ಷಯಪಾತ್ರೆಯನ್ನು ಹುಡುಕಿಕೊಂಡು ಪ್ರಾಚ್ಯವಸ್ತು ಸಂಶೋಧನಾ ತಂಡವು ದೂರದ ಅಫಘಾನಿಸ್ತಾನಕ್ಕೆ ಹೋಗಿ ಅಲ್ಲಿ ಭಯೋತ್ಪಾದರಿಂದ, ಖಳನಾಯಕನಿಂದ ಅನೇಕ ತೊಂದರೆಗಳನ್ನು ಎದುರಿಸಿ ಬರುವ ರೋಚಕ ಕಥಾವಸ್ತುವನ್ನು ಹೊಂದಿದೆ. ಕ್ಷಣಕ್ಷಣಕ್ಕೂ ಎದುರಾಗುವ ಅಪಾಯಗಳು, ವಿಕ್ಷಿಪ್ತ ಖಳನಾಯಕನ ಕ್ರೂರ ನಡೆಗಳು. ನಾಯಕನ ಮೈನವಿರೇಳಿಸುವ ಸಾಹಸಗಳು, ನಾಯಕಿಯ ಅಹಂ, ಸಿಟ್ಟು, ಅಸಹಾಯಕತೆ ಎಲ್ಲವೂ ರೋಚಕತೆಗೆ ಮೆರಗನ್ನು ತಂದಿವೆ. ನಾಯಕಿ ಅಫಘಾನಿಸ್ತಾನದ ಹಳ್ಳಿಯ ತಾಂಡಾವೊಂದರಲ್ಲಿ ಅಲ್ಲಿನ ನೃತ್ಯಗಾತಿಯೊಂದಿಗೆ ಸ್ಪರ್ಧೆಗೆ ಬಿದ್ದು ನೃತ್ಯ ಮಾಡುವುದಂತೂ ಥೇಟ್ ಹಿಂದೀ ಚಿತ್ರದಲ್ಲಿ ಬರುವ ಸನ್ನಿವೇಶದಂತಿದೆ.