ಎಲ್ಲರಂಥವನಲ್ಲ ನನ್ನಪ್ಪ !
ಅಪ್ಪನ ಕುರಿತ ಮಿಡಿತಗಳು
ಈ ಪುಸ್ತಕದ ಮೂವತ್ತೇಳು ಲೇಖನಗಳು ಅಪ್ಪನ ಮೂವತ್ತೇಳು ಮುಖಗಳನ್ನು ಚಿತ್ರಿಸಿವೆ. ಮಗುವಿನ ಕಷ್ಟವನ್ನು ನೋಡಲಾರದೆ ಗಳಗಳನೆ ಅಳುವ ಅಪ್ಪ, ಮಗುವನ್ನು ಸರಿಯಾದ ಮಾರ್ಗದಲ್ಲಿ ನಡೆಯಿಸಲು ಕಠಿಣವಾಗಿ ಶಿಕ್ಷಿಸುವ ಅಪ್ಪ, ಮಗುವಿನೊಡನೆ ಗೆಳೆಯನಂತೆ ವರ್ತಿಸುವ ಅಪ್ಪ ಇವರೆಲ್ಲರೂ ಅಪ್ಪನ ಕರ್ತವ್ಯದಿಂದ ಪ್ರೇರಿತರಾದವರೆ. ಪ್ರತಿ ನಿಯಮಕ್ಕೊಂದು ಅಪವಾದವಿರುತ್ತದೆ ಎನ್ನುವಂತೆ, ತನ್ನವರನ್ನು ಮೋಸಗೊಳಿಸಿ ಓಡಿ ಹೋದಂತಹ ಅಪ್ಪನೂ ಇಲ್ಲಿದ್ದಾನೆ.
ಅಪ್ಪನ ವ್ಯಕ್ತಿತ್ವವನ್ನು ಚಿತ್ರಿಸುತ್ತಿರುವಾಗಲೆ, ಇಲ್ಲಿಯ ಲೇಖನಗಳುಹಳೆಯ ತಲೆಮಾರಿನವರ ಜಗತ್ತಿನ ಚಿತ್ರವನ್ನೂ ನಮ್ಮೆದುರಿಗೆ ಇಡುತ್ತವೆ. ಆ ಕಾಲದ ನೀತಿ, ನಿಯಮಗಳು, ಆದರ್ಶ, ಹಿರಿಯರ ವರ್ತನೆಯ ಕ್ರಮ ಇವುಗಳ ಅನಾವರಣವೂ ಇಲ್ಲಿರುವ ಲೇಖನಗಳಲ್ಲಿ ಆಗಿದೆ.