ತೇರು ಕಾದಂಬರಿಯನ್ನು ಓದಲಾರಂಭಿಸಿದಾಗ ಒಂದನೇ ಭಾಗದಲ್ಲಿ ಪತ್ರಕರ್ತ ಪಾಟೀಲರಿಗೆ ಧರಮನಟ್ಟಿ ಸ್ವಾಂವಪ್ಪಜ್ಜ, ಧರಮನಟ್ಟಿಯ ದೇಸಗತೀ ಕಥೀ ಹೇಳಲಾರಂಭಿಸಿದ. ಅದರ ಜೊತಿಗೆ ನಾಳೆ ನಮ್ಮೂರಾಗ ವಿಠ್ಠಲ ದೇವರ ತೇರ ಇದೆ ನೀವು ಬರಲೇ ಬೇಕು ಎಂದು ಹಠ ಹಿಡಿದು ಕರದುಕೊಂಡು ಹೋದ. ಅಂದು ರಾತ್ರಿ ಅಲ್ಲಿ ಗೊಂದಲಿಗ್ಯಾರು ಕಥಿ ಹೇಳತಾರ ಕೇಳುಣ ನಡಿರಿ ಎಂದು ಪಾಟೀಲರನ್ನು ಕರೆದುಕೊಂಡು ಹೋದ. ವಿಠಲ ದೇವರ ತೇರಿನ ವರ್ಣನೆಯನ್ನ ಆರಂಭಿಸಿ ತೊಗಲು ಬೊಂಗೆ ಆಡಿಸೋ ದ್ಯಾಮಣ್ಣನ ಮಗನ ಮರಣದವರೆಗೂ ಗೊಂದಲಿಗ್ಯಾರ ಪದದ ಧಾಟಿಯಲ್ಲೇ ಸಂಪೂರ್ಣ ಕಥೆ ಹೇಳಿದ್ದು ಕಾದಂಬರಿಗೆ ಬಹು ವಿಶೇಷ ಮೆರಗನ್ನು ಕೊಟ್ಟಿದೆ.
ಕಾದಂಬರಿಯಲ್ಲಿ ತೇರು ತಯಾರಿಸಿದ ನಂತರ ಮೊದಲ ತೇರು ಏಳೆಯಲು ಜನರು ಸೇರಿದಾಗ ಒಂಚೂರ ನೆಲಬಿಟ್ಟು ಕದಲೋದಿಲ್ಲ. ಅದಕ್ಕೆ ಪುರೋಹಿತರನ್ನ ವಿಚಾರಿಸಲಾಗಿ ಅದಕ್ಕೆ ಕೆಳಜಾತಿಯ ಮನುಜನ ಬಲಿ ಬೇಕು ಎಂದು ಕೇಳುತ್ತಿದೆ ತೇರು ಎಂದ ಹೇಳುತ್ತಾನೆ ಪುರೋಹಿತ. ಊರಲ್ಲಿ ಸುದ್ಧಿ ಹರಡಿ ಬೆಳಗಾಗುದರೊಳಗ ಎಲ್ಲ ಕೀಳುಕುಲದ ಜನಾಂಗ ಊರು ಬಿಟ್ಟು ಹೊರಟೋಗಿದ್ದರು. ಒಬ್ಬನೇ ಒಬ್ಬನು ಗೊಂಬೀರಾಮರಾ ದ್ಯಾವಯ್ಯ ದೇವಾಲಯದ ಆವರಣದಲ್ಲಿ ಸಿಕ್ಕನು. ಡಂಣಾಯಕ ಹಾಗು ಅವನ ಹೆಂಡತಿ ಸೇರಿ ದ್ಯಾವಯ್ಯನಿಗೆ ೮ ಎಕರೆ ಜಮೀನು ನೀಡುವುದಾಗಿ ಆಸೆ ಚೆಲ್ಲಿ ಒಬ್ಬ ಮಗನನ್ನ ತೇರಿಗೆ ಬಲಿಕೊಡಲು ತಯಾರಿ ಮಾಡಿದರು. ದ್ಯಾವಯ್ಯನ ಹೆಂಡತಿ ಪಾರೋತೆವ್ವ ಗೋಳಾಡಿ ಅಳಲು ಪ್ರಾರಂಭಿಸುತ್ತಾಳೆ. ಗಂಡ ಅವಳನ್ನು ಬಡಿದು ಹೊಡೆದು ದೇವರಿಗೆ ಮಗನನ್ನ ಅರ್ಪಿಸೋಣ ಎಂದು ಹೇಳಿದನು. ಹಣದ ಆಸೆಗೋ ಏನೋ ಅಂದು ಮಡದಿಯ ಮಾತಿಗೆ ಬೆಲೆ ಕೊಡದೇ ಬಡಿದು ತೇರಿಗೆ ಮಗನನ್ನ ಅರ್ಪಿಸಿದರು. ಅಂದಿನಿಂದ ಇಂದಿನವರೆಗೂ ದ್ಯಾವಪ್ಪನ ಮನೆತನದವರೇ ಬಂದು ರಕ್ತತಿಲಕ ಅಂದ್ರೆ ಹಣೆಯನ್ನು ತೇರಿನ ಗಾಲಿಗೆ ಗುದ್ದಿ ರಕ್ತಾ ಬಂದ ನಂತರ ಆ ರಕ್ತವನ್ನು ದೇವರಿಗೆ ಹಚ್ಚಿದಾಗ ತೇರು ಮುಂದೆ ಬರ್ತಿತ್ತು ಎಂಬ ವಾಡಿಕೆ ಮುಂದುವರೆದಿತ್ತು.