ಮುಖಾಂತರ
‘ಮುಖಾಂತರ’ ಸಾವಧಾನದ ಲಯದಲ್ಲಿ ನಿರೂಪಿತವಾಗಿರುವ ಕಾದಂಬರಿ. ಇತ್ತೀಚೆಗೆ ಅಪರೂಪವಾಗುತ್ತಿರುವ ಈ ಲಯವೇ ಈ ಕಾದಂಬರಿಯ ಆಶಯ ಆಕೃತಿಯನ್ನು ರೂಪಿಸಿದೆ. ಹೀಗಾಗಿ ವೇಗಕ್ಕೆ ದಕ್ಕದ ಅನೇಕ ಸೂಕ್ಷ್ಮಗಳು ಈ ಕಾದಂಬರಿಯ ಬಂಧದಲ್ಲಿ ಸಹಜವೆಂಬಂತೆ ಸೇರಿಕೊಂಡಿವೆ. ದಟ್ಟ ಜೀವನಾನುಭವದ ಹೆಣಿಗೆಯಲ್ಲಿ ಸಿದ್ಧವಾಗಿರುವ ‘ಮುಖಾಂತರ’ದಲ್ಲಿ ಮೊಗಸಾಲೆಯವರು ಒಂದು ಕುಟುಂಬದ ಕತೆಯನ್ನು ಹೇಳುತ್ತಲೇ ನಾಡಿನ ಜಗತ್ತಿನ ವಿದ್ಯಮಾನಗಳನ್ನು ಹಾಸು ಹೊಕ್ಕಾಗಿ ಸೇರಿಸಿದ್ದಾರೆ. ಸ್ಥಳೀಯ ಸತ್ವವನ್ನು ಒಳಗೊಳ್ಳುತ್ತಲೇ ಜಾಗತಿಕ ಆಗು ಹೋಗುಗಳನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವ ‘ಮುಖಾಂತರ’ದ ವಿಸ್ತಾರ ಬೆರಗು ಮೂಡಿಸುತ್ತದೆ.
ಸಂಬಂಧಗಳ ಜಟಿಲತೆ, ಸ್ತ್ರೀ ಜಗತ್ತಿನ ತಲ್ಲಣಗಳು, ಆಸ್ತಿ ಅಧಿಕಾರದ ದರ್ಪ, ಅಂತಃಕರಣ ಜಗತ್ತಿನ ಆರ್ದ್ರತೆ. ಜಾಗತೀಕರಣ ಕಬಂಧ ಬಾಹು, ಆಕಸ್ಮಿಕಗಳು ಬದುಕನ್ನು ರೂಪಿಸುವ ವಿಸ್ಮಯ, ವರ್ಗ ಸಂಘರ್ಷ ಅನಿಯಂತ್ರಿತ ಆಕರ್ಷಣೆಯ ಸ್ವರೂಪ. ಈ ಎಲ್ಲವನ್ನೂ ಮೀರಿದ ನಿರ್ಲಿಪ್ತತೆ ಹೀಗೆ ಹಲವು ನೆಲೆಗಳನ್ನು ಒಳಗೊಂಡಿದೆ.