ಇಣುಕಿದಲ್ಲಿ ಛಂದ
(ಲಲಿತ ಪ್ರಬಂಧಗಳು)
ಕಾವ್ಯ ನನಗೆ ಮೌನಗಳ ಮೀಟುವ ಏಕತಾರಿ. ನಾಟಕ ಹಲವು ಸಮಸ್ಯೆಗಳ ಚಿಂತನೆಯ ಅನಾವರಣ. ಸುತ್ತಲಿನ ನನಗಿಷ್ಟವಾದದ್ದನ್ನೆಲ್ಲ ಎತ್ತಿಕೊಂಡು ತನ್ಮಯಳಾಗುವ ಖುಷಿ, ಲಲಿತ ಪ್ರಬಂಧ.
ಎದುರಾಗುವ ಸನ್ನಿವೇಶ, ವ್ಯಕ್ತಿಗಳನ್ನು ರಾಗಭಾವಗಳಿಂದ ಪ್ರತ್ಯೇಕಿಸಿ ನವಿರು ಹಾಸ್ಯಕ್ಕೆ ಪ್ರತಿಮೆಯಾಗಿಸಿಯೂ, ಓರೆ ಕೋರೆಗಳ ಸಾಪೇಕ್ಷತೆಯನ್ನು ಈ ಪ್ರಪಂಚದ ಸಾರ್ವತ್ರಿಕ ಸಹಜ ನಡವಳಿಕೆಯಾಗಿ ಸ್ವೀಕರಿಸುವ ಆರೋಗ್ಯಕರ ಔದಾರ್ಯವೇ ಲಲಿತಪ್ರಬಂಧದ ಜೀವನಾಡಿ. ಯಾವುದೇ ಸಾಹಿತ್ಯಿಕ ಕಾಲಘಟ್ಟದ ಹಣೆಪಟ್ಟಿಯ ಹಂಗಿಲ್ಲದೆ ಹರಿವ ಹೊಳೆ ಲಲಿತ ಪ್ರಬಂಧ. ನನ್ನ ಬೊಗಸೆಯಲಿ ಹಿಡಿವಷ್ಟು ಸಲಿಲವನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿರುವೆ. ಕನ್ನಡದಲ್ಲಿ ಗೊರೂರು, ವಿ. ಸೀ., ಪು.ತಿ.ನ., ಎ. ಎನ್. ಮೂರ್ತಿರಾಯರು, ಅ. ರಾ. ಮಿತ್ರ ಮುಂತಾದ ಲೇಖಕರು ಲಲಿತ ಪ್ರಬಂಧ ಪ್ರಕಾರವನ್ನು ಬೆಳೆಸಿದ್ದಾರೆ. ಮನೆಯ ಪುಸ್ತಕದ ರಾಶಿಯಲ್ಲಿ ಮೊದಲು ನನ್ನ ಕಣ್ಣಿಗೆ ಬಿದ್ದ ರಾ. ಕು. ಅವರ `ಗಾಳಿಪಟ’ ಪ್ರತಿಯೊಂದು ಮರು ಓದಿನಲ್ಲೂ ಅದೇ ಸಂತೋಷ ಕೊಡುವ ಕೃತಿ.