ಮೊಗಸಾಲೆ ಕಾದಂಬರಿ ಸಂಪುಟ – ೨
ಡಾ. ನಾ. ಮೊಗಸಾಲೆ
ಡಾ. ನಾ. ಮೊಗಸಾಲೆಯವರ ಕಾದಂಬರಿಗಳ ಈ ಎರಡನೇ ಸಂಪುಟದಲ್ಲಿ ಇರುವ ಮೂರು ಕಾದಂಬರಿಗಳು – ‘ನನ್ನದಲ್ಲದ್ದು’ (೧೯೭೭), ‘ಪಲ್ಲಟ’ (೧೯೭೯) ಹಾಗೂ ‘ಹದ್ದು’ (೧೯೭೨).
ಈ ಸಂಪುಟದಲ್ಲಿನ ಕಾದಂಬರಿಗಳ ಪೈಕಿ ‘ನನ್ನದಲ್ಲದ್ದು’ ಲೇಖಕರಿಗೆ ಹೆಚ್ಚು ಪ್ರಚಾರವನ್ನು ತಂದುಕೊಟ್ಟ ಕಾದಂಬರಿ. ಮೇಧಾವಿ ವೈದ್ಯನೊಬ್ಬ ತನ್ನ ತಂದೆ ಮಧುಮೇಹದಿಂದ ನರಳಿ ನರಳಿ ಸತ್ತದ್ದನ್ನು ನೋಡಿ, ತನ್ನ ಮಕ್ಕಳಿಗೂ ಅದೇ ರೋಗ ಬರುವುದೆಂಬ ಕಾರಣದಿಂದ ಮದುವೆಗೂ ಮೊದಲೇ ಸಂತಾನ ನಿರೋಧ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವುದು, ಅದನ್ನು ಮುಚ್ಚಿಟ್ಟು ಮದುವೆಯಾಗುವುದು, ಮದುವೆಯಾದ ನಾಲ್ಕೈದು ವರ್ಷಗಳ ನಂತರ ಅದನ್ನು ಪತ್ನಿಗೆ ಹೇಳಿ ಇನ್ನೊಬ್ಬರ ವೀರ್ಯದಿಂದ ಗರ್ಭಿಣಿಯಾಗುವಂತೆ ಸಲಹೆ ಕೊಡುವುದು, ಆಕೆ ತೀವ್ರ ಘಾಸಿಗೊಳ್ಳುವುದು – ಇಲ್ಲಿನ ವಸ್ತು. ಮದುವೆಗೆ ಮೊದಲು ಮತ್ತೂ ನಂತರ ಆ ವೈದ್ಯ ಡಾ. ಶ್ರೀನಿವಾಸ್ ಹಲವಾರು ಹೆಣ್ಣುಗಳನ್ನು ಅನುಭವಿಸಿ ‘ಎಲ್ಲರಲ್ಲೂ ಇರುವುದು ಅದೇ’ ಎಂಬ ನಿಲುವಿಗೆ ಬಂದಿರುತ್ತಾನೆ. ತನ್ನ ಆಸ್ತಿಯನ್ನೆಲ್ಲಾ ಪತ್ನಿಯ ಹೆಸರಿಗೆ ಬರೆದು, ಆಕೆಗೆ ಮರುಮದುವೆಯಾಗುವಂತೆ ಸಲಹೆ ನೀಡಿ ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ.
‘ಪಲ್ಲಟ’ದಲ್ಲಿ ಭೂ ಸುಧಾರಣೆ ಕಾನೂನು ಜಾರಿಯಾಗುವಾಗ ಕುಟುಂಬಗಳ ಒಳಗಿನ ಬಿರುಕಿಗೆ ಹೇಗೆ ಕಾರಣವಾಯಿತೆಂಬುದನ್ನು ಚಿತ್ರಿಸುತ್ತದೆ.
‘ಹದ್ದು’ ಕೃತಿಯಲ್ಲಿ ಪ್ರಾಯದಲ್ಲಿ ಉದಿಸುವ ಕಾಮದ ಅಭೀಷ್ಟೇ ವ್ಯಕ್ತಿಗಳು ಹದ್ದುವಾಗುವಂತೆ ಮಾಡುವುದನ್ನು ಚಿತ್ರಿಸುತ್ತದೆ.