ಮಕ್ಕಳ ಮನೋಲೋಕ – ೧ ಹಕ್ಕಿಯ ಹೆಗಲೇರಿ
(ಮಕ್ಕಳ ಮಾನಸಿಕ ಮತ್ತು ಬೌದ್ಧಿಕ ವಿಕಸನ ಮಾಲೆ )
ನಾವು ಮಕ್ಕಳಿಗಾಗಿ ಮಾಡುವ ಎಲ್ಲ ಪ್ರಯತ್ನಗಳ ಅಂತಿಮ ಗುರಿ-ಮಕ್ಕಳ ಅರಳುವಿಕೆ. ಪರಿಸರ, ಸಂಸ್ಕಾರ, ಸಾಹಿತ್ಯ, ಕಲೆ ಇವುಗಳೆಲ್ಲಾ ಪೂರಕವಾಗಿದ್ದಾಗ ಮಾತ್ರ ಮಕ್ಕಳ ಪೂರ್ಣ ಮಾನಸಿಕ ವಿಕಸನ ಸಾಧ್ಯ. ವೃಷ್ಟಿಯಿಂದ ಸಮಷ್ಟಿ, ಪ್ರತಿಯೊಬ್ಬ ಮಗುವೂ ಶಕ್ತಿಯಾದಾಗಲೇ ರಾಷ್ಟ್ರದ ಬೆಳೆವಣಿಗೆ, ರಾಷ್ಟ್ರದ ಚಾರಿತ್ರ್ಯ, ರಾಷ್ಟ್ರದ ಸಾಮರ್ಥ್ಯ. ಈ ಪೂರ್ಣತ್ವಕ್ಕಾಗಿಯೇ ಸತತ ಅನ್ವೇಷಣೆ ಮತ್ತು ಪ್ರಯತ್ನಶೀಲತೆಯ ಅಗತ್ಯ.
ಯಾವ ಜೀವಿಯಲ್ಲೇ ಆಗಲಿ ಅದರ ಒಂದೊಂದು ವರ್ತನೆಗೆ ಸಂಬಂಧಪಟ್ಟಂತೆ ಒಂದೊಂದು ಮನೋವೃತ್ತಿ ಇರುತ್ತದೆ. ಮೂಕ ಪ್ರಾಣಿಗಳ ಮತ್ತು ಸಣ್ಣ ಮಕ್ಕಳ ಮನೋವೃತ್ತಿಯನ್ನು ನಡವಳಿಕೆ, ಹೇಳಿಕೆಗಳ ಮೂಲಕ ನಾವು ಊಹಿಸಿ ತಿಳಿಯಬೇಕೇ ಹೊರತು ನೇರವಾಗಿ ತಿಳಿಯುವುದು ಅಸಾಧ್ಯ. ಮಕ್ಕಳು ಬೆಳೆದು ಶಾಲೆಗೆ ಹೋಗಿ ಜ್ಞಾನ ಸಂಪಾದಿಸುವುದರ ಜೊತೆಗೆ ಅವರಿಗೆ ನೈತಿಕ ಬುನಾದಿಯಾಗಿ ಪ್ರಾಮಾಣಿಕತೆ, ಗುರು ಹಿರಿಯರಿಗೆ ಗೌರವ ತೋರಿಸುವುದು, ವಿನಯ ಶೀಲತೆ, ಶ್ರದ್ಧೆ, ಅಚ್ಚುಕಟ್ಟುತನ ಇವುಗಳನ್ನು ಕಲಿಸಿಕೊಟ್ಟು ಅವರ ಚಾರಿತ್ರ್ಯನಿರ್ಮಾಣ ಮಾಡುವ ಮನೋಶಿಕ್ಷಣದ ಅವಶ್ಯಕತೆಯೂ ಇದೆ.