ಹನ್ನೊಂದು ಕವನ ಸಂಕಲನ, ಹದಿನಾರು ಕಾದಂಬರಿ, ಆರು ಕಥಾಸಂಗ್ರಹ, ಆರು ವೈದ್ಯಕೀಯ ಕೃತಿ, ಹತ್ತು ಸಂಪಾದಿತ ಕೃತಿಗಳಿಂದ ನಾಡಿಗೆ ಪರಿಚಿತರಾಗಿರುವ ಡಾ| ನಾ. ಮೊಗಸಾಲೆಯವರು (೨೭.೮.೧೯೪೪) ನಮ್ಮ ನಡುವಿನ ಹಿರಿಯ ಸಾಹಿತಿ. ಕೇರಳದಲ್ಲಿ ಹುಟ್ಟಿದ್ದರೂ, ಕರ್ನಾಟಕದ ಕಾರ್ಕಳ ಸಮೀಪದ ಕಾಂತಾವರದಲ್ಲಿ ನೆಲೆನಿಂತು, ‘ಕಾಂತಾವರ ಕನ್ನಡ ಸಂಘ’, ‘ಅಲ್ಲಮಪ್ರಭು ಪೀಠ’, ಮೂಡಬಿದ್ರೆಯ ‘ವರ್ಧಮಾನ ಪ್ರಶಸ್ತಿ ಪೀಠ’ದ ಮೂಲಕ ಸಾಹಿತ್ಯ ಪರಿಚಾರಿಕೆಯನ್ನು ವೃತವಾಗಿರಿಸಿಕೊಂಡ ಸಂಘಟಕ. ಜೀವಮಾನ ದುದ್ದಕ್ಕೂ ಹಳ್ಳಿಯನ್ನೇ ಆಶ್ರಯಿಸಿ, ಹಳ್ಳಿಯ ಮಂದಿಯ ಮನಗೆದ್ದ ವೈದ್ಯ. ಬಹುಸಂಸ್ಕೃತಿಯನ್ನು, ಜೀವವೈವಿಧ್ಯತೆಯನ್ನು ಉಳಿಸಲು ಹೆಣಗಾಡುತ್ತಿರುವ ಸಾಹಸಿ. ಕರ್ನಾಟಕ ಸಾಹಿತ್ಯ ಅಕಾಡಮಿಯಿಂದ ಮೂರು ಬಾರಿ ಅವರ ಸಾಹಿತ್ಯ ಕೃತಿಗಳಿಗೆ ಪುಸ್ತಕ ಬಹುಮಾನಗಳು ಬಂದಿದೆ. ಅವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯೂ (೨೦೦೪) ಸಂದಿದೆ. ಖಾಸಗಿಯಾದ ಹತ್ತಾರು ಪ್ರಶಸ್ತಿಗಳಿಂದ ಅವರು ಪುರಸ್ಕೃತರಾಗಿದ್ದಾರೆ. ‘ಮೊಗಸಾಲೆ’, ‘ಅಯಸ್ಕಾಂತಾವರ’ ಎಂಬ ಎರಡು ಅಭಿನಂದನ ಗ್ರಂಥಗಳು ಅವರಿಗೆ ಅರ್ಪಿಸಲ್ಪಟ್ಟಿವೆ. ಬೆಳಗೋಡು ರಮೇಶ ಭಟ್ಟರು ‘ಮೊಗಸಾಲೆಯ ಮುಖಾಂತರ’ ಎಂಬ ಮಿತ್ರ ಸಮ್ಮಿತೆ (ಜೀವನ ಚರಿತ್ರೆ)ಯನ್ನು ಪ್ರಕಟಿಸಿದ್ದಾರೆ. ಅವರ ಕಾದಂಬರಿ, ಕಥೆ, ಕವನಗಳಲ್ಲಿ ಕೆಲವು, ಹಿಂದಿ, ಇಂಗ್ಲಿಷ್, ತೆಲುಗು, ಮರಾಠಿ ಭಾಷೆಗಳಿಗೆ ಅನುವಾದಗೊಂಡಿವೆ. ಮಂಗಳೂರು ವಿ.ವಿ.ಯ ಪಠ್ಯಗಳಲ್ಲಿ ಮತ್ತು ಪ್ರೌಢಶಿಕ್ಷಣ ಪಠ್ಯಗಳಲ್ಲೂ ಅವರ ಕಥೆ, ಕವನ, ಕಾದಂಬರಿಗಳು, ಅಭ್ಯಾಸಕ್ಕೆ ನಿಗದಿಗೊಂಡಿವೆ. ‘ಬಯಲ ಬೆಟ್ಟ’ ಅವರ ಆತ್ಮಚರಿತ್ರೆ, ಶ್ರೀ ಮಾಧವರಾವ್ ಮೂಡುಕೊಣಾಜೆ ಅವರು ‘ಮೊಗಸಾಲೆ-ಬದುಕು ಬರೆಹ’ ಎಂಬ ಮಹಾಪ್ರಬಂಧ ರಚಿಸಿ ಮೈಸೂರು ಮುಕ್ತ ವಿ.ವಿ.ಯಿಂದ ಡಾಕ್ಟರೇಟ್ ಪದವಿ ಪಡೆದಿದ್ದಾರೆ.