ಉಘೇ ಉಘೇ
ಕಥಾ ಸಂಕಲನ
ಊರಿಗೆ ಇನ್ನೂ ಹೊಸದಾಗಿದ್ದ ಕೈಲಾಸ ರಥವನ್ನೇರಿದ ಸಿಂಗಾರಗೊಂಡ ಹೆಣ ಬಿಗಿಯಾಗಿ ಕಟ್ಟಿದ್ದರೂ ಅತ್ತಿತ್ತ ಅಲ್ಲಾಡುತ್ತಲೇ , ಈಗಲೋ , ಆಗಲೋ ಕೆಳಕ್ಕೆ ಬೀಳುವನ್ತೆಯೇ ನಟಿಸುತ್ತಾ ಸ್ಮಶಾನವನ್ನು ಸೇರಿತು. ದಾರಿಯುದ್ದಕ್ಕೂ ತನ್ನ ಒಂದು ಕಣ್ಣನ್ನು ಹೆಣದ ಮೇಲೆಯೇ ನೆಟ್ಟಿದ್ದ ಮೃತ್ಯುಂಜಯ ಭಯಭೀತನಾಗಿಯೇ ಸ್ಮಶಾನ ತಲುಪಿದ. ಕೈಲಾಸ ರಥದ ಮೇಲಿಂದ ಹೆಣವನ್ನು ಕೆಳಗಿರಿಸಿ, ಪೂಜೆ ಮಾಡಿ, ನಂತರ ಸಿದ್ಧಗೊಂಡಿದ್ದ ಆರಡಿ ಮೂರಡಿ ಗುಂಡಿಯಲ್ಲಿ ಹೆಣವನ್ನು ಜಾಗರೂಕತೆಯಿಂದ ಒಂದಷ್ಟು ಜನ ಇಳಿಸಿದರು. ಗುಂಡಿನೊಳಕ್ಕೆ ಕೂಡಿಸಿ ಇಂತೂ ಮಾರ್ಕ್ ನಂತೆ ಕಾಣುತ್ತಿದ್ದ ಸಾರೆ ಹುರಿಯಿಂದ ಕಟ್ಟಿದ್ದ ದಬ್ಬೆಗಳನ್ನು ಹೆಣದ ಕುತ್ತಿಗೆಗೆ ಹಿಡಿದು ಬಿಗಿ ಮಾಡಿ , ಹೆಣಕ್ಕೆ ಹೊದಿಸಿದ್ದ ಬಿಳಿ ಬಟ್ಟೆಯನ್ನು ತೆಗೆದು ಮೇಲಕ್ಕೆಸೆದು, ಮೇಲಿಂದ ಮರೆ ಹಿಡಿಯುವಂತೆ ಹೇಳಿ , ಹೆಣಕ್ಕೆ ಪೂಜೆ ಮಾಡಿದರು. ಇದೆಲ್ಲವನ್ನೂ ಗುಂಡಿಯ ಸುತ್ತಾ ನೆರೆದಿದ್ದ ಜನರ ನಡುವೆಯಿಂದಲೇ ಕುತೂಹಲದ ಕಣ್ಣುಗಳಿಂದಲೇ ನೋಡಿದ ಮೃತ್ಯುಂಜಯನು ಇನ್ಯಾವ ಕಾರಣಕ್ಕೂ ವೀರಭದ್ರಪ್ಪ ಮೇಲೆ ಎದ್ದು ಬರುವುದಕ್ಕೆ ಸಾಧ್ಯವೇ ಇಲ್ಲವೆಂದು ಮನದಲ್ಲೇ ಲೆಕ್ಕ ಹಾಕುತ್ತಾ ಬೇಗ ಮಣ್ಣಾಕಲಿ ಎಂದು ಕಾಯುತ್ತಿದ್ದ ಕ್ಷಣವೂ ಬಂದು ಬಿಟ್ಟಿತು.