ಬಿ.ಎಂ.ಶ್ರೀ. ಎಂದೇ ಪ್ರಖ್ಯಾತರಾದ ಬೆಳ್ಳೂರು ಮೈಲಾರಯ್ಯ ಶ್ರೀಕಂಠಯ್ಯನವರು ‘ಕನ್ನಡ ಬಾವುಟ’ ಎಂಬ ಕೃತಿಯಲ್ಲಿ ೭ನೆಯ ಶತಮಾನದಿಂದ ಹಿಡಿದು ಸಮಕಾಲೀನ ಕಾಲದವರೆಗೆ ಪ್ರಕಟವಾದ ಕನ್ನಡ ಭಾಷೆಯ ಹೆಮ್ಮೆಯ ಕವನಗಳನ್ನು ಶಾಸನಗಳು, ಪೂರ್ವಸಾಹಿತ್ಯ, ನಾಡಪದಗಳು ಮತ್ತು ಇಂದಿನ ಹೊಸ ಕವಿತೆ ಎಂದು ನಾಲ್ಕು ಭಾಗಗಳಲ್ಲಿ ಒಂದು ಅಪೂರ್ವ ಕೃತಿಯನ್ನು ಪ್ರಕಟಿಸಿದರು. ಕನ್ನಡ ಭಾಷೆಯ
ಮೇಲೆ ಅಭಿಮಾನವಿರುವ ಜನಸಾಮಾನ್ಯರಿಗಾಗಿ ‘ಅಣುಗ, ಕನ್ನಡ ಕಾವ, ಕನ್ನಡ ಜಾಣ’ ಎಂಬ ಪರೀಕ್ಷೆಗಳನ್ನು ಪರಿಷತ್ತಿನಲ್ಲಿ ಆರಂಭಿಸಿದರು. ಈಗ ಅಣುಗ ಪರೀಕ್ಷೆಯನ್ನು ನಡೆಸುತ್ತಿಲ್ಲ. ಆದರೆ ಕನ್ನಡ ರತ್ನ ಎನ್ನುವ ಪರೀಕ್ಷೆಯನ್ನು ನಡೆಸುತ್ತಿದೆ. ಕನ್ನಡ ಸಾಹಿತ್ಯ ಪರಿಷತ್ತು ಕೇವಲ ‘ಪುರುಷಮಯ’ವಾಗಿದ್ದಾಗ, ಪರಿಷತ್ತಿನಲ್ಲಿ ಮಹಿಳಾಶಾಖೆಯನ್ನು ಡಿ.ಬಿಂದೂಬಾಯಿಯವರ ನೇತೃತ್ವದಲ್ಲಿ ಆರಂಭಿಸಿದರು. ಕನ್ನಡ ಸಾಹಿತ್ಯ ಪರಿಷತ್ತು ಕನ್ನಡಿಗರ ಸಾರ್ವಜನಿಕ ವಿದ್ಯಾಪೀಠವಾಗಿ ಕನ್ನಡದ ಪುನರುತ್ಥಾನದಲ್ಲಿ ತೊಡಗಲು ಬಿ.ಎಂ.ಶ್ರೀಯವರು ನೀಡಿದ ಕೊಡುಗೆ ಬಹಳ ದೊಡ್ಡದು.