ವೇಶ್ಯಾ ಜಗತ್ತಿನ ಅನಾವರಣ
ಅಂದಿನ ದೇವದಾಸಿಯರಿಂದ , ಇಂದಿನ ಕಾಲ್ ಗರ್ಲ್ಸ್ ವರೆಗೆ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಹೆಣ್ಣಿನ ಕುರಿತ ಹಾಗೆ ಬರೆದದ್ದು ಸಮುದ್ರದಷ್ಟಿದೆ. ಅದರಲ್ಲಿಯೂ ವೇಶ್ಯಾ ಸಮಸ್ಯೆಯ ಕುರಿತ ಹಾಗೇ ಬರೆಯದ ಲೇಖಕರೆ ಇಲ್ಲ ಎನ್ನುವಷ್ಟು ಸಾಹಿತ್ಯ ಬಂದಿದೆ. ಆದರೆ ಬರೆದವರೆಲ್ಲರ ಕಣ್ಣಲ್ಲಿ ಪಸೆಯಿರಲಿಲ್ಲವೆಂಬುದು ವಿಷಾದದ ಸಂಗತಿ. ಹೆಣ್ಣಿನ ದೇಹ ಸಂಬಂಧಿ ಸಂಗತಿಗಳ ಬಗ್ಗೆ ಇರುವ ಕೆಟ್ಟ ಕುತೂಹಲದಿನದ ಹೆಣ್ಣಿನ ಮನಸ್ಸನ್ನು ಮುಟ್ಟುವುದು ಸಾಧ್ಯವಾಗಲೇ ಇಲ್ಲ. ಇಡೀ ನಮ್ಮ ಬದುಕಿನುದ್ದಕ್ಕೂ ಹೆಣ್ಣು ಕಪ್ಪು, ಬಿಳುಪಿನ ಪಾತ್ರದಲ್ಲಿ ಕಾಣಿಸುತ್ತಿರುವ ಕಾರಣದಿಂದ ಸ್ತ್ರೀ ಲೋಕದಲ್ಲಿಯೇ ಪರಸ್ಪರ ಹಗೆತನ ಮನೆ ಮಾಡಿದೆ. ಗರತಿ, ಗಣಿಕೆ, ಗಯ್ಯಾಳಿ ಪಾತ್ರಗಳನ್ನು ಸೃಷ್ಟಿಸಿದ ವ್ಯವಸ್ಥೆಯನ್ನು ಅರ್ಥೈಸುವುದರಲ್ಲಿ ವಿಫಲರಾದ ಕಾರಣದಿಂದಲೇ ಇಂದಿಗೂ ವೇಶ್ಯಾ ಸಮಸ್ಯೆ ಕುರಿತು ಬರೆಯುವ, ಮಾತನಾಡುವ ಮಾತುಗಳಿಗೆ ಸಾಮಾಜಿಕ ನೈತಿಕ ಹೊಣೆಗಾರಿಕೆಯನ್ನು ಹೊರಲು ಆಗುತ್ತಿಲ್ಲ. ಅತ್ಯಂತ ಅಮಾನವೀಯ ಈ ಸಾಮಾಜಿಕ ಸಮಸ್ಯೆಯೊಳಗಿನ ಸಂಕಟ ಅರ್ಥವಾಗುತ್ತಿಲ್ಲವೆಂಬ ನೋವು ಕೈಬೆರಳೆಣಿಕೆಯ ಲೇಖಕರನ್ನಾದರೂ ಕಾಡಿದೆ ಎಂಬುದಕ್ಕೆ ಸಾಕ್ಷಿ ನೀಡುವಂತೆ ಕೆಲವು ಕೃತಿಗಳಾದರೂ ನಮ್ಮೆದುರಿಗಿವೆ. ಅಂತಹ ಕೃತಿಗಳ ಸಾಲಿಗೆ ಹನುಮಂತ ಹಾಲಿಗೇರಿಯ ‘ಕೆಂಗುಲಾಬಿ’ ಸೇರುತ್ತದೆ.