ರಾಜಧರ್ಮ, ರಾಜನೀತಿ ಭಾಗ ೧
ಪತ್ರಿಕೆಗಳಿಗೆ ಅಂಕಣಗಳನ್ನು ಬರೆಯುವುದು ಕಷ್ಟದ ಕೆಲಸ ಎಂದು ನನ್ನ ಅನುಭವ. ಬೇರೆಯವರ ಅಭಿಪ್ರಾಯವು ಬೇರೆಯೇ ಇದ್ದರೆ ಅದಕ್ಕೆ ಅವರವರೇ ಹೊಣೆ. ಬರೆಯುವವನ “ವ್ಯವಸಾಯ” – ಅಂದರೆ ಓದಿನ ವ್ಯಾಪ್ತಿ, ಅದರ ಸಾಂದರ್ಭಿಕ ಅನ್ವಯಿಕೆ, ಸಂಗತಿಗಳನ್ನು, ಸಂದರ್ಭಗಳನ್ನು ನೋಡುವಲ್ಲಿ, ಅರಿಯುವಲ್ಲಿ, ವಿಶ್ಲೇಷಣೆ ಮಾಡುವಲ್ಲಿ ಇರಬೇಕಾದ ನಿರ್ದಿಷ್ಟ ಸಾಮುದಾಯಿಕ, ಸಾರ್ವತ್ರಿಕ ಹಿತ, ನಿಷ್ಠುರವಾದರೂ ಸತ್ಯವನ್ನು ಹೇಳುವ ಛಲ, ಎದೆಗಾರಿಕೆ, ಅದಕ್ಕೆ ಬೇಕಾದ ಸಮರ್ಥನೆಗಳನ್ನು ಓದಿನಿಂದಲೂ, ಅನುಭವದಿಂದಲೂ ನಿರೂಪಿಸುವ ಪರಿಶ್ರಮ – ಅಡಕವಾಗಿ, ಓದುಗರ ಎಲ್ಲ ವರ್ಗಗಳನ್ನೂ ಮನದಲ್ಲಿಟ್ಟು, ತಿಳಿಯುವಂತೆ ಎಚ್ಚರ ವಹಿಸಬೇಕಾದ ಬರೆಹದ ಬಿಗಿ, ತಿಳಿ, ಭಾರವಾಗದ ಶೈಲಿ, ಅಲ್ಲಲ್ಲಿ ನೆನಪುಗಳು, ವ್ಯಕ್ತಿ ಚಿತ್ರಣ, anecdotes , ರೋಚಕವಾದ ಸಂಗತಿಗಳು ಎಲ್ಲೋ ಚದುರಿದ್ದರೂ, ಸಣ್ಣವಾಗಿದ್ದರೂ, ಹಿಡಿಯುವ ಸೂಕ್ಷ್ಮತೆ, ವಾರಾವಾರ ಪತ್ರಿಕಾಲಯಕ್ಕೆ ಸಕಾಲಕ್ಕೆ ತಲುಪಿಸಬೇಕಾದ ಹೊಣೆ, ಎಚ್ಚರ – ಇಂಥವು ಸುಲಭಸಾಧ್ಯವಾಗಿ ವಶವಾಗುವ ಗುಣಗಳಲ್ಲ. ಎಲ್ಲರೂ ಹೀಗೆ ಬರೆಯತ್ತಾರೋ ಇಲ್ಲವೋ, ಎಂಬುದು ನಿಮಗೂ ಗೊತ್ತಿದೆ. ಬರೀ Journalistic ಎಂಬ ರೀತಿಯ ಸುದ್ದಿ ವಿಶ್ಲೇಷಣೆಗೇ ಮೀಸಲಾದ ಅಂಕಣ ಬರೆಹಗಾರರ ರೀತಿ ಬೇರೆ. ಅಲ್ಲಿ ಸೂಕ್ಷ್ಮತೆ, ವಿಶ್ಲೇಷಣಾ ಕುಶಲತೆ, ಸಮಗ್ರ ಸಂಗತಿಗಳ ಪಕ್ಷಿ ವೀಕ್ಷಣ, ಸುದ್ದಿ ಸಾಮೀಪ್ಯ, ತಕ್ಕಮಟ್ಟಿನ ನಿಷ್ಪಕ್ಷಪಾತತೆ, ಅತಿರೇಕ, ಆಕ್ರೋಶ, ಇಲ್ಲದ ಶೈಲಿ, ಓದುಗನನ್ನು ಮೆಚ್ಚಿಸಹೊರಡದ ಸುದ್ದಿನಿಷ್ಠೆ, ವಸ್ತು ನಿಷ್ಠೆ – ಬರೀ “report ” ಆಗದಂತೆ ವಹಿಸಬೇಕಾದ ಎಚ್ಚರ, ಇವು ಒಂದು ಬಗೆ.