ಮೊಗಸಾಲೆ ಕಾದಂಬರಿ ಸಂಪುಟ – ೧
ಡಾ. ನಾ. ಮೊಗಸಾಲೆ
‘ಮೊಗಸಾಲೆ ಕಾದಂಬರಿ ಸಂಪುಟ – ೧’ : ಎನಿಸಿಕೊಂಡಿರುವ ಈ ಪ್ರಥಮ ಸಂಪುಟದಲ್ಲಿ ಅವರ ಆರಂಭದ ಮೂರು ಕಾದಂಬರಿಗಳಿವೆ. ಈ ಮೂರು ಕಾದಂಬರಿಗಳೂ ಅವರು ಹದಿನೆಂಟರಿಂದ ಇಪ್ಪತ್ತೊಂದರ ಒಳಗಿನ ವಯಸ್ಸಿನ ‘ಹುಡುಗ’ರಾಗಿದ್ದಾಗ ಬರೆದದ್ದು.
ಅವರ ಮೊದಲ ಕಾದಂಬರಿ ‘ಮಣ್ಣಿನ ಮಕ್ಕಳು’. ಕಷ್ಟಪಟ್ಟು ದುಡಿದು ಬದುಕು ಕಟ್ಟಿಕೊಂಡ ಒಂದು ಶೂದ್ರ ಕುಟುಂಬ, ಮನೆಯ ಹಿರಿಮಗನ ಅವಿವೇಕದಿಂದಾಗಿ ಎಲ್ಲವನ್ನೂ ಕಳೆದುಕೊಂಡದ್ದನ್ನು ಚಿತ್ರಿಸುತ್ತದೆ.
ಅನಂತ – ಡಾ. ಮೊಗಸಾಲೆಯವರು ಬರೆದ ಎರಡನೆಯ ಕಾದಂಬರಿ. ವೈದ್ಯಕೀಯ ವಿದ್ಯಾರ್ಥಿಯೊಬ್ಬ ದ.ಕನ್ನಡದ ಹವ್ಯಕ ಬ್ರಾಹ್ಮಣ ಸಮಾಜದಲ್ಲಿ ಪ್ರಚಲಿತ ರೂಢಿಗೆ ವಿರುದ್ಧವಾಗಿ ತನ್ನ ಅಕ್ಕನ ಮಗಳನ್ನು ಮದುವೆಯಾಗಲು ಬಯಸಿ ವಿಫಲನಾಗುವ ಕತೆಯಿದು.
ಮೂರನೆಯ ಕಾದಂಬರಿ ‘ಕನಸಿನ ಬಳ್ಳಿ’. ಇಲ್ಲಿನ ಕಥಾನಾಯಕ ಸದಾನಂದ ಕೂಡ ವೈದ್ಯಕೀಯ ವಿದ್ಯಾಭ್ಯಾಸ ಮುಗಿಸಿ ವೃತ್ತಿ ಮಾಡುತ್ತಿದ್ದವನು. ಇವನು ಕೆಲಸ ಮಾಡುತ್ತಿದ್ದ ಆಸ್ಪತ್ರೆಯಲ್ಲೇ ನರ್ಸ್ ಆಗಿದ್ದ ವಾಸಂತಿಯನ್ನು (ಆಕೆ ಎಳೆ ವಯಸ್ಸಿನ ವಿಧವೆ) ಮದುವೆಯಾಗಲು ಬಯಸಿ ತಾಯಿಯ ಒಪ್ಪಿಗೆ ಸಿಗದ ಕಾರಣಕ್ಕಾಗಿ ಬೇಸರಗೊಂಡು ನೌಕರಿ ಬಿಟ್ಟು ತನ್ನ ಪೂರ್ವಿಕರ ಹಳ್ಳಿಯಾದ ಕಾಸರಗೋಡು ಸಮೀಪದ ಕನ್ಯಾನಕ್ಕೆ ಬಂದು ಖಾಸಗಿ ಕ್ಲಿನಿಕ್ ಆರಂಭಿಸಿ ಅಲ್ಲಿಯೇ ಇರತೊಡಗುತ್ತಾನೆ. ತನ್ನ ತಂದೆ ನಿರ್ಲಕ್ಷಿಸಿ ಹೋಗಿದ್ದ ಕೃಷಿ ಜಮೀನನ್ನೂ ಅಭಿವೃದ್ಧಿಪಡಿಸುತ್ತಾ ಅದನ್ನು ಒಳ್ಳೆಯ ತೋಟವಾಗಿಸುತ್ತಾನೆ.