ಆಡಾಡತ ಆಯುಷ್ಯ
-ಗಿರೀಶ ಕಾರ್ನಾಡ
ಆಡಾಡತ ಆಯುಷ್ಯ – ಈ ಕ್ರತಿಯು ಗಿರೀಶ ಕಾರ್ನಾಡ ಅವರ ಆತ್ಮಕಥೆಯಾಗಿದ್ದು, ಆತ್ಮಕಥೆಯ ಪೂರ್ವಾರ್ಧವನ್ನು ಒಳಗೊಂಡಿದೆ
ಪ್ರಾಕ್ಕು
ನನ್ನ ತಾಯಿಯ ಹೆಸರು ಕೃಷ್ಣಾಬಾಯಿ. ಕೃಷ್ಣಾಬಾಯಿ ಮಂಕೀಕರ. ಕುಟುಂಬದ ಹಿರಿಯರೆಲ್ಲ ಆಕೆಯನ್ನು ‘ಕುಟ್ಟಾಬಾಯಿ’ ಎಂದೇ ಸಂಬೋಧಿಸುತ್ತಿದ್ದರು. ಆಮೇಲೆ ತನಗಿಂತ ಕಿರಿಯರಿಗೆ, ಮುಂದಿನ ತಲೆಮಾರಿಗೆ, ‘ಕುಟ್ಟಕ್ಕ’ ಆದಳು. ೧೯೮೪ರಲ್ಲಿ , ಅಂದರೆ ಆಕೆಗೆ ಎಂಭತ್ತೆರಡು ತುಂಬಿದಾಗ, ನನ್ನ ಅತ್ತಿಗೆ ಸುನಂದಾ ಆಕೆಯ ಬೆನ್ನು ಹತ್ತಿ ಆಕೆಯಿಂದ ಆತ್ಮಕತೆ ಬರೆಯಿಸಿಕೊಂಡಳು. ನನ್ನ ತಂದೆಯ ಒಂದು ಹಳೆಯ ಡಾಯರಿಯಲ್ಲಿ, ಅವನು ಅಲ್ಲಲ್ಲಿ ಲೆಕ್ಕ ಗೀಚಿ ಬಿಟ್ಟಿರುವ ಪುಟಗಳ ಖಾಲಿ ಜಾಗದಲ್ಲಿ, ಕೊಂಕಣಿಯಲ್ಲಿ ಬರೆದ ಸುಮಾರು ಮೂವತ್ತು ಪುಟಗಳ ಕೃತಿ ಅದು. ಆಕೆ ಅದನ್ನು ಬರೆಯುವಷ್ಟರಲ್ಲಿ ನಾನು, ನನ್ನ ಸಹೋದರ-ಸಹೋದರಿಯರು ಬಾಲ್ಯದುದ್ದಕ್ಕೂ ನಮ್ಮನ್ನು ಪೀಡಿಸಿದ ಭೀತಿಗಳಿಗೆ, ಆತಂಕಗಳಿಗೆ ಹಾಗೂ ಹೀಗೂ ಪರಿಹಾರ ಹುಡುಕಿದ್ದೆವು. ಆಕೆಯ ಆತ್ಮಚರಿತ್ರೆ ಈ ದುಗುಡಗಳ ಬಗ್ಗೆ ಸರಳವಾಗಿ, ಪ್ರಾಮಾಣಿಕವಾಗಿ ಮಾತನಾಡಿ ಅವುಗಳನ್ನು ಬಯಲಿಗೆಳೆದು ಪರೀಕ್ಷಿಸಲಿಕ್ಕೆ ಎಡೆ ಮಾಡಿಕೊಟ್ಟಿತು.