ಭೇದ ಮೀರು, ಜ್ಞಾನ ಪಡೆದುಕೊ…
ವೇದವೇ ಪ್ರಸ್ತಾಪಿಸಿರುವ ಹಲವು ಬಗೆಯ ಕರ್ಮಯೋಗ ವಿಧಾನಗಳಲ್ಲಿ ನಡೆದು ಮುಕ್ತಿಯನ್ನು ಪಡೆಯಬಹುದು. ಅದಲ್ಲದೇ ಮುಕ್ತಿಯನ್ನೈದಿದ ಜ್ಞಾನಿಗಳ ಸತ್ಸಂಗದಲ್ಲಿದ್ದು, ಅವರಿಂದ ಮಾರ್ಗದರ್ಶನ ಪಡೆಯಬೇಕು? ಎನ್ನುವ ಮಾತನ್ನು ಕೃಷ್ಣನು ಹೇಳುತ್ತಿದ್ದನು. ಮುಂದೆ ಹೇಳುತ್ತಾನೆ, ‘ಹೇ ಪಾಂಡವನೇ! ಈ ಜ್ಞಾನವನ್ನು ಪಡೆದರೆ ನೀನು ಮತ್ತೆ ಮೋಹಕ್ಕೆ ವಶನಾಗುವುದಿಲ್ಲ. ಸರ್ವ ಜೀವರನ್ನೂ ನಿನ್ನೊಳಗೆ ನೋಡಿಕೊಳ್ಳುವೆ, (ಪರಮಾತ್ಮನಾದ) ನನ್ನಲ್ಲಿಯೂ ನೋಡುವೆ.’ (ಭ.ಗೀ.: 4.35)
ಶ್ರೀಮಾತೆ ಶಾರದಾದೇವಿಯವರು ಹೀಗೆನ್ನುತ್ತಾರೆ, ‘‘ಮನುಷ್ಯನು ಮುಕ್ತನಾದರೆ ಏನಾಗುತ್ತಾನೆ? ಅವನಿಗೆ ಎರಡು ಕೋಡು ಬರುತ್ತದೆಯೆ? ಹಾಗೇನೂ ಇಲ್ಲ. ಅವನು ಎಲ್ಲರಂತೆಯೇ ಇರುತ್ತಾನೆ. ಆದರೆ ‘ಯಾವುದು ಸತ್ಯ-ಯಾವುದು ಅನಿತ್ಯ’ ಎನ್ನುವುದರ ವಿಷಯದಲ್ಲಿ ಆತನಲ್ಲಿ ವಿವೇಕ ಉದಯಿಸುತ್ತದೆ.’’ ಎಷ್ಟು ಸುಂದರವಾದ ಮಾತು! ‘ಮುಕ್ತಿ’ಯೆಂದರೆ ನಮಗೆಲ್ಲ ಅದೇನೇನೋ ಕಲ್ಪನೆಗಳು! ‘ಮುಕ್ತಪುರುಷನೆಂದರೆ ಆತನ ಹಾವ-ಭಾವ, ಭಂಗಿ, ನಡೆ-ನುಡಿ ಎಲ್ಲವೂ ಅದೇನೋ ಭಯಾಶ್ಚರ್ಯಗಳನ್ನು ಹುಟ್ಟಿಸುವಂತಿರಬೇಕು’ ಎನ್ನುವ ಬಾಲಿಶ ನಂಬಿಕೆಗಳು ನಮ್ಮಲ್ಲಿ ಬೇರುಬಿಟ್ಟಿವೆ. ಸಾಲದ್ದಕ್ಕೆ ಕಥೆಗಾರರೂ, ನಾಟಕಗಳೂ, ಚಲನಚಿತ್ರಗಳೂ, ಡೋಂಗಿ ಬಾಬಾಗಳೂ ಮುಕ್ತಿಯ ಬಗ್ಗೆ ನಮ್ಮಲ್ಲಿ ಅದೆಂತೆಂಥದ್ದೋ ಪವಾಡಗಳ ಕಲ್ಪನೆಯನ್ನು ಮೂಡಿಸಿಬಿಟ್ಟಿದ್ದಾರೆ. ಮೋಹವನ್ನು ಗೆಲ್ಲಲ್ಲು ಬೇಕಿರುವುದು ‘ವಿವೇಕ’. ಅದು ಸಿಕ್ಕಮೇಲೆ, ಜನ-ಧನಗಳ ಸಂಗದಲ್ಲೇ ಇದ್ದರೂ ಮೋಹದ ಲೇಪವಾಗದು. ರಾಮಕೃಷ್ಣ ಪರಮಹಂಸರು ಮನೋಜ್ಞ ನಿದರ್ಶನ ನೀಡುತ್ತಾರೆ: ‘ಹಾಲನ್ನು ನೀರಲ್ಲಿ ಹಾಕಿದರೆ ಒಡನೆ ಬೆರೆತುಬಿಡುತ್ತದೆ, ಬೇರ್ಪಡಿಸಲಾಗದು. ಆದರೆ ಅದೇ ಹಾಲನ್ನು ಹೆಪ್ಪು ಹಾಕಿ, ಮೊಸರು ಮಾಡಿ, ಮಜ್ಜಿಗೆ ಮಾಡಿ, ಕಡೆದು ಬೆಣ್ಣೆ ತೆಗೆದು, ಆ ಬೆಣ್ಣೆಮುದ್ದೆಯನ್ನು ನೀರಲ್ಲಿ ಹಾಕಿದರೆ, ಅದು ನೀರಲ್ಲಿ ಬೆರೆಯುವುದಿಲ್ಲ, ತೇಲುತ್ತಿರುತ್ತದೆ! ಮನುಷ್ಯನೂ ಹಾಗೆಯೇ! ಅಪಕ್ವ ಮನಃಸ್ಥಿತಿಯಲ್ಲಿ ಜಗತ್ತಿನಲ್ಲಿದ್ದರೆ ಅಲ್ಲೇ ಮೋಹದಿಂದ ಬೆರೆತುಹೋಗುತ್ತಾನೆ. ಆದರೆ ಮನಸ್ಸು-ಬುದ್ಧಿಗಳನ್ನು ವಿವೇಕದಿಂದ ಪಕ್ವವಾಗಿಸಿಕೊಂಡ ಮೇಲೆ ಜಗತ್ತಿನಲ್ಲಿದ್ದರೆ, ಮೋಹದಿಂದ ಬೆರೆಯದೆ ಬೆಣ್ಣೆಯಂತೆ ತೇಲುತ್ತಿರುತ್ತಾನೆ!’’ ಕೃಷ್ಣನು ಹೇಳುತ್ತಿರುವುದೂ ಇದನ್ನೇ, ‘‘ಹೇ ಪಾಂಡವ! ಈ ಜ್ಞಾನವನ್ನು ಪಡೆದಾದ ಮೇಲೆ ನಿನ್ನಲ್ಲಿ ಮೋಹವು ಉಳಿದಿರುವುದಿಲ್ಲ’’ ಎಂದು.
ಮೋಹದ ಲಕ್ಷಣವು ‘ಅಂಟಿಕೊಳ್ಳುವುದಕ್ಕ’ಷ್ಟೇ ಸೀಮಿತವಾಗಿರುವುದಿಲ್ಲ. ಅದು ಭೇದವನ್ನೂ ದ್ವೇಷವನ್ನೂ ಹುಟ್ಟಿಸುತ್ತದೆ. ‘ಇವನು ನನ್ನವನು, ನನಗೆ ಆಪ್ತ, ಇವನು ನನಗೆ ಬೇಕು, ಇವನಿಗೆ ಮಾತ್ರ ಸುಖ ಸಿಗಬೇಕು’ ಎನ್ನುವ ಮೋಹವೆಲ್ಲಿರುತ್ತದೋ ಅಲ್ಲೇ, ‘ಅವನು ಪರಕೀಯ, ಅವನನ್ನು ಕಂಡರೆ ನನಗಾಗದು, ಅವನು ನನಗೆ ಬೇಕಿಲ್ಲ, ಅವನು ಚೆನ್ನಾಗಿರಬಾರದು, ಹಾಳಾಗಿಹೋಗಲಿ!’ ಎಂಬ ದ್ವೇಷಜನ್ಯ ಭಾವಗಳೂ ಎದ್ದೇಳುತ್ತವೆ! ಅದು ಅನಿವಾರ್ಯ! ಮೋಹವಿದೆಯೆಂದ ಮೇಲೆ ದ್ವೇಷವೂ ಇದ್ದೇ ಇದೆ ಎಂದರ್ಥ. ಹಾಗಾಗಿ ಮೋಹ ಎಲ್ಲಿರುತ್ತದೋ ಅಲ್ಲಿ ತಾರತಮ್ಯದ ಮನೋಭಾವವೂ ಮನುಷ್ಯನಿಗೆ ಅನಿವಾರ್ಯ. ಈ ಮೋಹವು ಕಳಚಿ ಜ್ಞಾನವು ಮೂಡಿದಾಗ ಮಾತ್ರವೆ ಮನುಷ್ಯನಲ್ಲಿ ಸಮಭಾವ ಬರಲು ಸಾಧ್ಯ. ಕೃಷ್ಣನು ಹೇಳುತ್ತಾನೆ, ‘‘ಜ್ಞಾನವು ಉದಯಿಸಿದಾಗ, ನೀನು ನಿನ್ನೊಳಗೂ ನನ್ನೊಳಗೂ ಸರ್ವಜೀವರನ್ನು ಕಾಣುವೆ’’ ಎಂದು.
‘ಎಲ್ಲ ಜೀವರನ್ನೂ ತನ್ನೊಳಗೆ ನೋಡುವುದು’ ಎಂದರೇನು? ‘ತಾನೂ-ಬೇರೆಯವರೂ ಪರಮಾತ್ಮ’ ಎಂಬ ಭೇದಗಳು ವ್ಯವಹಾರದ ನೆಲೆಯಲ್ಲಿ ಇವೆ, ಇರುತ್ತವೆ. ಆದರೆ ತಾತ್ವಿಕ ನೆಲೆಯಲ್ಲಿ ನೋಡಿದಾಗ ಇರುವುದೆಲ್ಲ ಅಖಂಡ ಸಚ್ಚಿದಾನಂದ ಪರಮಾತ್ಮನ ಅಸ್ತಿತ್ವವೊಂದೇ. ತನ್ನೊಳಗಿಂದಲೇ ಎಲ್ಲವನ್ನೂ ಸೃಜಿಸಿ, ಎಲ್ಲೆಲ್ಲೂ ಎಲ್ಲದರಲ್ಲೂ ಎಲ್ಲರಲ್ಲೂ ತಾನೇ ಪ್ರವೇಶಿಸಿ, ವ್ಯಾಪಿಸಿ, ಸುಪ್ತವಾಗಿರುವ ಚೈತನ್ಯ ಪರಮಾತ್ಮನೇ ಆಗಿದ್ದಾನೆ. ಭಗವಂತನ ನಾಮಗಳೂ ಇದನ್ನೇ ಸಂಕೇತಿಸುತ್ತವೆ. ವಿಷ್ಣು (ಸರ್ವತ್ರ ಪ್ರವೇಶಿಸಿರುವವನು), ವಿಭು (ಸರ್ವತ್ರ ವ್ಯಾಪಿಸಿರುವವನು), ಸರ್ವಭೃತ್ (ಎಲ್ಲವನ್ನೂ ಭರಿಸಿರುವವನು), ಸರ್ವಾತ್ಮನ್ (ಸರ್ವರ ಆತ್ಮವಾಗಿರುವವನು), ಈಶ್ವರ (ಎಲ್ಲವನ್ನೂ ಶಾಸಿಸುವವನು), ಸರ್ವಾಂತರ್ಯಾಮಿ (ಎಲ್ಲರ ಆಂತರಂಗದಲ್ಲಿ ಇರುವವನು) ಇತ್ಯಾದಿ.
ಆಗಮೋಕ್ತ ಚಿತ್ರ-ಶಿಲ್ಪಶಾಸ್ತ್ರಗಳಲ್ಲೂ ಇದನ್ನು ಸಂಕೇತಿಸುವಂತಹ ರೂಪಗಳನ್ನೇ ಕಾಣುತ್ತೇವೆ. ವಿಷ್ಣುವಿನ ಅನಂತಶಯನರೂಪವು ಅವನು ‘ಸರ್ವತ್ರ ಹರಡಿ ಸುಪ್ತವಾಗಿರುವ ಆತ್ಮಚೈತನ್ಯ’ ಎನ್ನುವುದನ್ನು ಸಂಕೇತಿಸುತ್ತದೆ. ಪರಶಿವನ ರೂಪವು ಪಂಚಭೂತಗಳ ವೈಪರೀತ್ಯಕ್ಕೂ, ಸುತ್ತಲೂ ಇರುವ ಪಶು-ಭೂತಗಣ-ದೇವ-ದಾನವ-ಮಾನವಾದಿಗಳೆಲ್ಲರ ಮಧ್ಯೆ (ಅಂತರಂಗದಲ್ಲಿ) ಆತ್ಮಾರಾಮನಾಗಿದ್ದಾನೆ’ ಎನ್ನುವುದನ್ನು ಸಂಕೇತಿಸುತ್ತದೆ. ಮೂರ್ತಪ್ರಪಂಚದ ವ್ಯವಹಾರಗಳನ್ನೆಲ್ಲ ಹೊರಾವರಣಗಳಲ್ಲಿ ನಡೆಸುತ್ತಿದ್ದರೂ, ಅಂತರಂಗದಲ್ಲಿ ನಿರ್ವಿಕಾರವಾಗಿರುವ ಆತ್ಮಸ್ವರೂಪಿಯು ಭಗವಂತ ಎನ್ನುವುದನ್ನು ನಮ್ಮ ಧ್ಯಾನಕ್ಕೆ ತರುತ್ತವೆ ಈ ಚಿತ್ರಗಳು. ಆತ್ಮಚೈತನ್ಯವನ್ನು ಗುರುತಿಸಬಲ್ಲ ಜ್ಞಾನಿಯು ಜೀವಿಗಳ ಹೊರಾವರಣವನ್ನಷ್ಟೇ ನೋಡಿ ತಾರತಮ್ಯ ಮಾಡುವುದಿಲ್ಲ. ಜ್ಞಾನವಿಲ್ಲದ ಮೋಹಿಗಳು ಮಾತ್ರ ಜೀವ-ಜಗತ್ತುಗಳ ಹೊರಾವರಣಗಳನ್ನಷ್ಟೇ ನೋಡುತ್ತ ತಾರತಮ್ಯಭಾವದಿಂದ ವರ್ತಿಸುತ್ತ ದುಃಖವನ್ನಪ್ಪುತ್ತಾರೆ. ಹಾಗಾಗಿ ಕೃಷ್ಣ; ‘‘ಯಾವ ಜ್ಞಾನವನ್ನು ಪಡೆಯುವುದರಿಂದ ನೀನು ನಿನ್ನೊಳಗೂ (ಪಿಂಡಾಂಡದೊಳಗೂ), ನನ್ನೊಳಗೂ (ಬ್ರಹ್ಮಾಂಡದೊಳಗೂ/ಪರಮಾತ್ಮನೊಳಗೂ) ಸರ್ವರನ್ನೂ ನೋಡಬಲ್ಲೆಯೋ ಅಂಥ ಜ್ಞಾನವನ್ನು ಜ್ಞಾನಿಗಳ ಸತ್ಸಂಗದ ಮೂಲಕ ಪಡೆದುಕೋ’’ ಎನ್ನುತ್ತಿದ್ದಾನೆ.
ಡಾ. ಆರತೀ ವಿ. ಬಿ.
ಕೃಪೆ: ವಿಜಯವಾಣಿ