ವಿಜ್ಞಾನವೆಂಬ ಮೋಜು
ಮಕ್ಕಳಲ್ಲಿ ವೈಜ್ಞಾನಿಕ ದೃಷ್ಟಿಕೋನ ಬೆಳೆಸಲು, ಅವರನ್ನು ವಿಜ್ಞಾನ ಮತ್ತು ತಂತ್ರಜ್ಞಾನ ಸಂಶೋಧನೆಯತ್ತ ಆಕರ್ಷಿಸಲು ವಸ್ತು ಸಂಗ್ರಹಾಲಯಗಳ ಪಾತ್ರವೂ ಮುಖ್ಯ. ಮಕ್ಕಳು ವಿಜ್ಞಾನದ ಪ್ರಾಯೋಗಿಕ ಮಾದರಿಗಳನ್ನು ಕಂಡಾಗ ಅವರಿಗೆ ವಿಜ್ಞಾನ ಸುಲಭವಾಗಿ ಅರ್ಥವಾಗುತ್ತದೆ. ನಗರದ ಕೆಲ ಪ್ರಮುಖ ವಿಜ್ಞಾನ ವಸ್ತುಸಂಗ್ರಹಾಲಯಗಳ ಮಾಹಿತಿ ಇಲ್ಲಿದೆ.
ಜವಾಹರ್ಲಾಲ್ ನೆಹರೂ ತಾರಾಲಯ
ವಿಜ್ಞಾನ ವಿದ್ಯಾರ್ಥಿಗಳಲ್ಲಿ ಸೃಜನಶೀಲ ಪ್ರತಿಭೆಗಳನ್ನು ಗುರುತಿಸಿ ಪೋಷಿಸುವ ಮತ್ತು ಎಲ್ಲಾ ಹಂತಗಳಲ್ಲಿ ಗುಣಮಟ್ಟದ ವಿಜ್ಞಾನ ಶಿಕ್ಷಣವನ್ನು ನೀಡುವುದು ತಾರಾಲಯದ ಮುಖ್ಯ ಉದ್ದೇಶ. ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ‘ವಾರಾಂತ್ಯದಲ್ಲಿ ವಿಜ್ಞಾನ’ ತರಗತಿಗಳನ್ನು ನಡೆಸಲಾಗುತ್ತದೆ. ಇಲ್ಲಿ ಪ್ರಯೋಗಗಳ ಮೂಲಕ ಚರ್ಚಿಸಿ,,ಸಮಸ್ಯೆ ಬಗೆಹರಿಸುವುದು ಹಾಗೂ ವೈಜ್ಞಾನಿಕ ಪರಿಕಲ್ಪನೆಗಳ ಬಗ್ಗೆ ಸಂಪೂರ್ಣ ತಿಳುವಳಿಕೆಯನ್ನು ನೀಡಿ ವಿಜ್ಞಾನ ಸಂಶೋಧನಾ ಮನೋಧರ್ಮ ಬೆಳೆಸುವುದೇ ಈ ಕಾರ್ಯಕ್ರಮದ ಉದ್ದೇಶವಾಗಿದೆ.
ಭೌತಶಾಸ್ತ್ರ ಮತ್ತು ಖಗೋಳ ಶಾಸ್ತ್ರದ ಬಗ್ಗೆ ಪ್ರತಿಷ್ಠಿತ ಸಂಸ್ಥೆಗಳ ವಿಷಯ ತಜ್ಞರು ಮತ್ತು ಪ್ರಾಧ್ಯಾಪಕರು ಉಪನ್ಯಾಸ ನೀಡುವರು. ಪುಟಾಣಿಗಳಿಗಾಗಿ ಕಮ್ಮಟ ಬೆಳಕು, ಬಣ್ಣ, ಧ್ವನಿ, ಸರಳ ಯಂತ್ರಗಳು ಮತ್ತು ಗಣಿತಶಾಸ್ತ್ರಕ್ಕೆ ಸಂಬಂಧಿಸಿದ ವೈಜ್ಞಾನಿಕ ಪರಿಕಲ್ಪನೆಗಳನ್ನು ಪ್ರಾಯೋಗಿಕ ಚಟುವಟಿಕೆಗಳ ಮೂಲಕ ಚರ್ಚಿಸಲಾಗುವ ಕಾರ್ಯಕ್ರಮದಲ್ಲಿ ಮೂರರಿಂದ ಐದನೇ ತರಗತಿಯ ವಿದ್ಯಾರ್ಥಿಗಳು ಭಾಗವಹಿಸಬಹುದು.
ನಮ್ಮ ಸೌರವ್ಯೂಹ, ವಿಶ್ವದ ಅನ್ವೇಷಣೆ, ಮಿರರ್ ಡೋಂ ಪ್ರದರ್ಶನಗಳಾದ ‘ನೈಸರ್ಗಿಕ ಆಯ್ಕೆ’ ಮತ್ತು ‘ಗಗನಯಾನದ ನವೋದಯ’ ಪ್ರದರ್ಶನ ಪ್ರತಿದಿನ ಇರುತ್ತದೆ. ಸೋಮವಾರ ಮತ್ತು ಎರಡನೇ ಮಂಗಳವಾರ ರಜೆ.
***
ವಿಶ್ವೇಶ್ವರಯ್ಯ ಕೈಗಾರಿಕಾ ಹಾಗೂ ತಾಂತ್ರಿಕ ವಸ್ತುಸಂಗ್ರಹಾಲಯ
ಸರ್ ಎಂ.ವಿಶ್ವೇಶ್ವರಯ್ಯ ಜನ್ಮಶತಮಾನೋತ್ಸವ ಅಂಗವಾಗಿ 1962ರಲ್ಲಿ ಕಸ್ತೂರ್ಬಾ ರಸ್ತೆಯಲ್ಲಿ ವಿಶ್ವೇಶ್ವರಯ್ಯ ಕೈಗಾರಿಕಾ ಮತ್ತು ತಾಂತ್ರಿಕ ವಸ್ತುಸಂಗ್ರಹಾಲಯ ಸ್ಥಾಪನೆಯಾಯಿತು. ಇದು ಕಬ್ಬನ್ ಪಾರ್ಕ್ಗೆ ಹೊಂದಿಕೊಂಡಂತೆ ಇದೆ. ಭಾರತ ಸರ್ಕಾರದ ‘ರಾಷ್ಟ್ರೀಯ ವೈಜ್ಞಾನಿಕ ಸಂಗ್ರಹಾಲಯಗಳ ಸಮೂಹ’ಕ್ಕೆ ಸೇರಿದೆ. ಈ ವಸ್ತು ಸಂಗ್ರಹಾಲಯದಲ್ಲಿ ವಿವಿಧ ವೈಜ್ಞಾನಿಕ ಪ್ರಯೋಗ ಮಾದರಿಗಳನ್ನು ಕಾಣಬಹುದು. ಜ್ಯಾಕೋಬ್ಸ್ ಲ್ಯಾಡರ್ ಉಪಕರಣ, ಹೈ ವೊಲ್ಟೇಜ್ ಮೂಲಕ ದೀಪವು ಹೊತ್ತಿ ಮೇಲೆರುವುದು, ಮಾನವ ನಿರ್ಮಿತ ಕೃತಕ ಉಪಗ್ರಹಗಳ ಮಾದರಿಗಳು ಇಲ್ಲಿವೆ.
ಭೌತಶಾಸ್ತ್ರ ವಿಜ್ಞಾನಿ ಸರ್ ಜೋಸೆಫ್ ಜಾನ್ ಥಾಮ್ಸನ್ ಅವರು ಅಧ್ಯಯನ ಮಾಡುತ್ತಿದ್ದ ಕೋಣೆ ಹೇಗಿತ್ತೆಂಬುದನ್ನು ವಿವರಿಸುವ ಸೆಟ್, ಸರ್ಕ್ಯೂಟ್ಗಳಲ್ಲಿ ವಿದ್ಯುತ್ ಪ್ರವಾಹವು ಯಾವ ರೀತಿ ಆಗುತ್ತದೆಂದು ಸರಳವಾಗಿ ವಿವರಿಸುವ ವಿದ್ಯುತ್ ಚಾಲಿತ ಉಪಕರಣ, ಉಷ್ಣ ಸ್ಥಾವರ ಕೈಗಾರಿಕೆಯ ಮಾದರಿ, ಡೀಸೆಲ್ ಎಂಜಿನ್ನ ಮಾದರಿ, ಜೆಟ್ ವಿಮಾನದ ಮಾದರಿ ಹೀಗೆ ನೂರಾರು ವಿಜ್ಞಾನದ ಮಾದರಿಗಳಿವೆ. ಬೆಳಿಗ್ಗೆ 10ರಿಂದ ಸಂಜೆ 6ರವರೆಗೆ ತೆರೆದಿರುತ್ತವೆ.
***
ದ ಹಿಂದೂಸ್ತಾನ್ ಏರೋನಾಟಿಕ್ಸ್ ಏರೋಸ್ಪೇಸ್ ಮ್ಯೂಸಿಯಂ
ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ದೇಶದಲ್ಲಿ ವಿಮಾನದ ಕೊರತೆ ಉಂಟಾಯಿತು. ಆ ದಿನಗಳಲ್ಲಿ ಕೈಗಾರಿಕಾ ಉದ್ಯಮಿಗಳಾದ ವಾಲ್ ಚಂದ್ ಹೀರಾಚಂದ್ರವರು ನಾಲ್ವಡಿ ಕೃಷ್ಣರಾಜ ಒಡೆಯರ್ರವರ ನೆರವಿನಿಂದ ಭೂಮಿಯನ್ನು ಪಡೆದು 1940ರಲ್ಲಿ ‘ಹಿಂದೂಸ್ತಾನ್ ವಿಮಾನ ಕಾರ್ಖಾನೆ’ಯನ್ನು ಸ್ಥಾಪಿಸಿದರು. ಈ ಸಂಸ್ಥೆಯ ಇತಿಹಾಸ ಮತ್ತು ಅಲ್ಲಿನ ಉತ್ಪಾದನಾ ವಿವರಗಳನ್ನು ನೀಡುವ ಸಲುವಾಗಿ ಮಾರತ್ಹಳ್ಳಿಯ ಸಮೀಪ ಹಿಂದೂಸ್ತಾನ್ ಹೆರಿಟೇಜ್ ಸೆಂಟರ್ ಇದೆ. ಹಿಂದೂಸ್ತಾನ್ ಹೆರಿಟೇಜ್ ಮತ್ತು ಏರೋಸ್ಪೇಸ್ ಮ್ಯೂಸಿಯಂ 2001ರಿಂದ ಸಾರ್ವಜನಿಕರಿಗೆ ಮುಕ್ತವಾಗಿದೆ.
ಆವರಣದಲ್ಲಿ ಎರಡು ವಿಶಾಲವಾದ ಕೋಣೆಗಳಿವೆ. ಕೋಣೆಯ ಒಂದು ಭಾಗದಲ್ಲಿ ಇಲ್ಲಿಯವರೆಗೆ ತಯಾರಿಸಿದ ಯುದ್ಧವಿಮಾನಗಳ ವಿವರ, ಅದರ ವಿನ್ಯಾಸ ಮತ್ತು ತಾಂತ್ರಿಕ ವಿವರಣೆಗಳಿವೆ. ಮತ್ತೊಂದು ಕೋಣೆಯಲ್ಲಿ ಸಂಸ್ಥೆಯು ತಯಾರಿಸಿದ ಉತ್ಪನ್ನಗಳ ಮಾದರಿಗಳಿವೆ. ಇದರ ಜೊತೆಯಲ್ಲಿ ದೇಶದ ಪ್ರಸಿದ್ಧ ಯುದ್ಧವಿಮಾನಗಳ ಇಂಜಿನ್ಗಳನ್ನೂ ಪ್ರದರ್ಶನ ಮಾಡಲಾಗಿದೆ. ಹಲವಾರು ತಾಂತ್ರಿಕ ವಿದ್ಯಾರ್ಥಿಗಳ ಮಾರ್ಗದರ್ಶನಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಗ್ರಂಥಾಲಯದ ವ್ಯವಸ್ಥೆಯನ್ನೂ ಮಾಡಿದೆ. ಹೆರಿಟೇಜ್ ಸೆಂಟರ್ನ ಆವರಣದಲ್ಲಿ ಮಾರುತ್ ಎಚ್ ಎಪ್ 24 ಟ್ರೈನರ್ ಏರ್ ಕ್ರಾಫ್ಟ್, ಮಿಗ್ 21 ಪೈಟರ್, ಎಚ್ ಜೆ ಟಿ 36, ಎಲ್ ಸಿ ಎ, ಪೈಲಟ್ ಲೆಸ್ ಏರ್ ಕ್ರಾಫ್ಟ್, ಕ್ಯಾನ್ಬೆರಾ, ಸೀ ಕಿಂಗ್ ಎಂ ಕೆ 42, ಹಂಸಾ, ಹಿಂದೂಸ್ತಾನ್ ಟ್ರೈನರ್, ಕಿರಣ ಏರ್ಕ್ರಾಫ್ಟ್ ಇನ್ನೂ ಹಲವಾರು ಯುದ್ಧವಿಮಾನಗಳ ಮಾದರಿಗಳನ್ನು ಪ್ರದರ್ಶನ ಮಾಡಲಾಗಿದೆ. ಹೆರಿಟೇಜ್ ಸೆಂಟರ್ ಪ್ರತಿದಿನ ಬೆಳಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆವರೆಗೂ ತೆರೆದಿರುತ್ತದೆ.
Courtesy : Prajavani.net
http://www.prajavani.net/news/article/2018/03/05/557533.html