ಜ್ಞಾನದ ಬೆಳಕು…..
ಒಮ್ಮೆ ರಮಣ ಮಹರ್ಷಿಗಳ ಬಳಿಗೆ ಬಂದ ಒಬ್ಬ ವ್ಯಕ್ತಿ. ರಮಣರ ಕಾಳಿಗೆ ಬಿಕ್ಕಿ ಬಿಕ್ಕಿ ಅಳುತ್ತ, ಜೀವನದಲ್ಲಿ ತುಂಬ ನೊಂದಿರುವುದಾಗಿಯೂ, ಯಾವ ಕೆಲಸವೂ ಕೈ ಹತ್ತದೇ ಸೋತು ಸುಣ್ಣವಾಗಿರುವೆನೆಂತಲೂ ಬದುಕುವ ದಾರಿ ಕಾಣದೇ ನೊಂದಿರುವ ದಾರಿ ಎಂದು ರೋದಿಸುತೊಡಗಿದ.
ಸಂಸಾರದ ತಾಪತ್ರಯದಲ್ಲಿ ನೊಂದು ಬೆಂದು ಆ ವ್ಯಕ್ತಿ, ಸಾವೇ ತನ್ನ ಮುಂದಿನ ದಾರಿ ಎಂದು ರಮಣರಲ್ಲಿ ತನ್ನ ಸಂಕಟ ತೋಡಿಕೊಳ್ಳುತ್ತಿರುವ ಆ ವೇಳೆಯಲ್ಲಿ ಮಹರ್ಷಿಗಳು ಊಟದ ಎಲೆಯನ್ನು ಜೋಡಿಸುತ್ತಿದ್ದರಂತೆ ಶಾಂತ ಚಿತ್ತದಿಂದ ಆತನ ಮಾತುಗಳನ್ನು ಆಲಿಸಿದ ರಮಣರು, ಕೆಲಹೊತ್ತು ಮೌನವಾಗಿದ್ದು ನಂತರ ಆತನನ್ನು ಉದ್ದೇಶಿಸಿ ಸರಿ…, ಮೊದಲು ನೀನು ಈ ಕೆಲಸ ಮಾಡು; ನಂತರ ನಿನ್ನ ಸಮಸ್ಯೆ ಅದರ ಪರಿಹಾರದ ಕುರಿತು ಮಾತಾಡೋಣ…. ಎಂದು ಹೇಳಿದವರೇ, ತಾವು ಅದುವರೆಗೂ ಜೋಡಿಸಿದ್ದ ಊಟದ ಎಲೆಯನ್ನು ಆ ವ್ಯಕ್ತಿಗೆ ತೋರಿಸುತ್ತ, ಇದನ್ನು ಹೊರಗಡೆ ಇರುವ ತಿಪ್ಪೆಗೆಸೆದು ಬಾ ಎಂದು ತಿಳಿಸಿದರು.
ಭಗವಾನರ ಮಾತು ಕೇಳಿದ ಆತನಿಗೆ ಅಚ್ಚರಿಯಾಯಿತು ಆತ ಮೆಲ್ಲನೆ ವಿನಯದಿಂದ ಕ್ಷಮಿಸಿ ಗುರುಗಳೇ….! ತಾವು ಬಹಳ ಸಮಯದಿಂದ ಶ್ರಮವಹಿಸಿ ಈ ಎಲ್ಲಾ ಊಟದ ಎಲೆಗಳನ್ನು ಜೋಡಿಸಿಟ್ಟಿದ್ದೀರಿ ಊಟಕ್ಕೆ ಉಪಯೋಗಿಸಿದ ನಂತರ ಈ ಎಲೆಗಳನ್ನು ತಿಪ್ಪೆಗೆ ಹಾಕುವುದೇನೋ ಸರಿ. ಆದರೆ ಇನ್ನೂ ಊಟಕ್ಕೆ ಬಳಸದ ಈ ಊಟದ ಎಲೆಗಳನ್ನ ತಿಪ್ಪೆಗೆಸೆದರೆ ಅವು ವ್ಯರ್ಥವಾಗುವುದಿಲ್ಲವೇ….? ತಮ್ಮ ಇದುವರೆಗಿನ ಶ್ರಮ ಕೂಡಾ ನಿರರ್ಥಕವಾಗುತ್ತದಲ್ಲ ಗುರುಗಳೇ…! ಎಂದು ತನ್ನ ಅನಿಸಿಕೆಯನ್ನು ತೋಡಿಕೊಂಡ ಭಗವಾನ್ ರಮಣ ಮಹರ್ಷಿಗಳು ಈಗ ನಸು ನಗುತ್ತ… ಹೌದು…!
ನೀನೆನ್ನುವುದೇನೋ ನಿಜ…! ಶ್ರಮವಹಿಸಿ ತಂದು, ಇಷ್ಟು ಕಾಲ ಜೋಡಿಸಿಟ್ಟುಕೊಂಡ ಎಲೆಗಳನ್ನು ಊಟಕ್ಕೆ ಬಳಸಿ ಸದುಪಯೋಗ ಮಾಡಿಕೊಳ್ಳದೇ ತಿಪ್ಪೆಗೆಸೆಯುವುದು ಮೂರ್ಖತನವೇ ಆದೀತು…! ಆದರೆ ಈಗ ಯೋಚಿಸು; ಸದುಪಯೋಗ ಮಾಡಿಕೊಳ್ಳದೇ, ಸದುಪಯೋಗ ಮಾಡಿಕೊಳ್ಳದೇ ಊಟದ ಎಲೆಯನ್ನು ತಿಪ್ಪೆಗೆಸೆಯುವುದು ಹೇಗೆ ಹುಚ್ಚುತನವಾದೀತೋ ಹಾಗೆ ನಿನಗೆ ದೊರೆತ ಈ ಅಮೂಲ್ಯವಾದ ಮನುಷ್ಯ ಜನ್ಮವನ್ನು ಕೂಡ ಸಾರ್ಥಕಪಡಿಸಿಕೊಳ್ಳದೇ ಕೊನೆಗೊಳಿಸಿಕೊಳ್ಳುವುದೂ ಕೂಡಾ ಮೂರ್ಖತನವೇ ಆದೀತಲ್ಲವೇ…! ಎಂದರು
ಅದುವರೆಗೂ ಮಂಕಾಗಿ ರೋದಿಸುತ್ತಿದ್ದ ಆ ವ್ಯಕ್ತಿಯಲ್ಲಿ ಜ್ಞಾನದ ಬೆಳಕೊಂದು ಮೂಡಿತು ತಪ್ಪಿನ ಅರಿವಾಯಿತು ಹೊಸ ದಾರಿಯೊಂದು ಆತನ ಮುಂದೆ ತೆರೆದುಕೊಂಡಿತು. ಆತ ತನ್ನ ಮೂರ್ಖತನಕ್ಕೆ ಮರುಗುತ್ತಾ, ಮಹರ್ಷಿಗಳ ಕಾಲಿಗೆರಗಿ ಕ್ಷಮೆಯಾಚಿಸಿದ.
ಹೊಸ್ಮನೆ ಮುತ್ತು