ಆರೋಗ್ಯವರ್ಧಕ ಕೆಂಪು ಬಾಳೆ…!
ಪ್ರಪಂಚದಲ್ಲಿ ಹೆಚ್ಚು ಸೇವಿಸುವ ಹಣ್ಣುಗಳಲ್ಲಿ ಬಾಳೆಹಣ್ಣು ಕೂಡಾ ಒಂದು. ಪೋಷಕಾಂಶಗಳಿಂದ ಸಮೃದ್ಧವಾಗಿರುವ ಬಾಳೆಹಣ್ಣು ಪರಿಪೂರ್ಣ ಆಹಾರಕ್ಕೆ ಸುಮನಾಗಿರುವುದೂ ಹೌದು. ಒಂದು ಸಂಶೋಧನೆಯ ಪ್ರಕಾರ ತೊಂಭತ್ತು ನಿಮಿಷಗಳ ಶ್ರಮದಾಯಕ ಕೆಲಸಕ್ಕೆ ಬೇಕಾಗುವ ಶಕ್ತಿಯನ್ನು ಪೂರೈಸಲು ಕೇವಲ ಎರಡು ಬಾಳೆಹಣ್ಣುಗಳು ಸಾಕಂತೆ. ಕಾರಣ ಇದರಲ್ಲಿ ಶಕ್ತಿಯ ಜೊತೆಗೆ ನಾರಿನಂಶ ಹಾಗೂ ಮೂರು ವಿಧದ ಪ್ರಾಕೃತಿಕ ಸಕ್ಕರೆಗಳಿವೆ ಕಡಿಮೆ ಬೆಲೆಯಲ್ಲಿ ಅಧಿಕ ಪೌಷ್ಟಿಕಾಂಶವನ್ನು ಕೊಡುವ ಜನಪ್ರಿಯ ಹಣ್ಣು ಎಂದರೆ ಅದು ಬಾಳೆಹಣ್ಣು.
ಸಾಮಾನ್ಯವಾಗಿ ಬಾಳೆ ಹಣ್ಣು ಎಂದ ಕೂಡಲೇ ಹಳದಿ ಸಿಪ್ಪೆಯ ಬಾಳೆಹಣ್ಣು ನಮ್ಮ ಕಣ್ಣಮುಂದೆ ಬರುತ್ತದೆ. ಇದು ಎಲ್ಲರಿಗೂ ಚಿರಪರಿಚಿತ. ಬಾಳೆಯಲ್ಲಿ ಅನೇಕ ವಿಧಗಳಿವೆ. ಅದರಲ್ಲಿ ಕೆಂಪು ಬಾಳೆಯೂ ಒಂದು ಹೆಸರೇ ಹೇಳುವಂತೆ ಈ ಬಾಳೆಯ ಕಾಂಡ, ಎಲೆ, ಕಾಯಿ, ಹಣ್ಣು, ಹಣ್ಣಿನ ಸಿಪ್ಪೆ ಎಲ್ಲವೂ ಕೆಂಪು ಬಣ್ಣದ್ದಾಗಿದೆ. ಈ ಕೆಂಪು ಬಾಳೆ ಪೌಷ್ಟಿಕಾಂಶಗಳ ಆಗರ. ಹಳದಿ ಬಾಳೆ ಹಣ್ಣಿಗಿಂತಲೂ ಈ ಕೆಂಪು ಬಾಳೆ ಹಣ್ಣಿನಲ್ಲಿ ಪೋಷಕಾಂಶ ಹೆಚ್ಚಿರುತ್ತದೆ. ಎಂದು ತಿಳಿದುಬಂದಿದೆ. ಇದು ಸ್ವಾದಿಷ್ಟ ಮಾತ್ರವಲ್ಲ ಆರೋಗ್ಯವರ್ಧಕವೂ ಹೌದು. ಈಗ ಬೆಂಗಳೂರಿನ ಮಾರುಕಟ್ಟೆಯಲ್ಲಿ ಕೆಂಪು ಬಾಳೆಹಣ್ಣಿನ ಚಿಲ್ಲರೆ ಮಾರಾಟ ದರ ಕೆ.ಜಿ.ಗೆ ಎಂಭತ್ತರಿಂದ ನೂರು, ನೂರಾ ಹತ್ತರವರೆಗೂ ಪ್ರದೇಶಾವಾರು ಇದೆ. ನಾಲ್ಕು ಹಣ್ಣು ಒಂದು ಕೆ,ಜಿ ತೂಗುತ್ತದೆ. ಒಂದು ಗೊನೆ ಸರಾಸರಿ ಇಪ್ಪತ್ತೈದರಿಂದ ಮೂವತ್ತೈದು ಕೆ.ಜಿ ತೂಗುತ್ತದೆಂದು ವ್ಯಾಪಾರಿಯಿಂದ ತಿಳಿದು ಬಂದಿತು. ಇವತ್ತಿನ ಸೇಬಿನ ಚಿಲ್ಲರೆ ಮಾರುಕಟ್ಟೆ ದರದ ಹತ್ತಿರವೇ ಕೆಂಪು ಬಾಳೆಹಣ್ಣಿನ ದರವೂ ಇದೆ.
ಸಾಮಾನ್ಯ ಬಾಳೆಗಿಂತ ಈ ಬಾಳೆಯಲ್ಲಿ ಪೋಟ್ಯಾಶಿಯಂ, ಕ್ಯಾಲ್ಸಿಯಂ, ಕಬ್ಬಿಣದ ಪ್ರಮಾಣ ಹಾಗೂ ನಾರಿನ ಅಂಶ ಅಧಿಕ ಪ್ರಮಾಣದಲ್ಲಿ ತುಂಬಿದೆ. ರಕ್ತಹೀನತೆ ಕ್ಯಾಲ್ಸಿಯಂ ಕೊರತೆಯಿಂದ ಎಲುಬುಗಳ ಬೆಳವಣಿಗೆ ಆಗದೇ ಇರುವ ಸಮಸ್ಯೆಗೆ ಈ ಬಾಳೆ ಉತ್ತಮ. ಇದರಲ್ಲಿ ನಾರಿನ ಅಂಶ ಹೆಚ್ಚಿದೆ.
ಈ ನಾರಿನಲ್ಲಿ ಕಾರ್ಬೋಹೈಡ್ರೇಟ್ ಹೇರಳವಾಗಿರುವುದರಿಂದ ಪಚನಕ್ರಿಯೆಗೆ ಅನುಕೂಲ. ನಮ್ಮ ದೇಹಕ್ಕೆ ದಿನಕ್ಕೆ ಶೇಕಡ ಹದಿನಾರರಷ್ಟು ನಾರಿನಂಶ ಬೇಕು. ಒಂದು ಕೆಂಪು ಬಾಳೆಹಣ್ಣೊಂದರಲ್ಲೇ ನಮಗೆ ನಾಲ್ಕು ಗ್ರಾಂ ನಾರಿನಂಶ ಸಿಗುತ್ತದೆ. ಧೂಮಪಾನ ತೊರೆದ ನಂತರ ದೇಹದ ಮೇಲಾಗುವ ಕೆಲವು ಪ್ರತಿಕೂಲ ಪರಿಣಾಮಗಳನ್ನು ಕಡಿಮೆ ಮಾಡಲು ಈ ಕೆಂಪು ಬಾಳೆ ಸಹಕಾರಿಯಂತೆ ಇದರಲ್ಲಿರುವ ವಿಟಮಿನ್ ಗಳು ಪೋಟಾಷಿಯಂ ಮತ್ತು ಮೆಗ್ನಿಷಿಯಂ ಮತ್ತು ಮೆಗ್ನಿಷಿಯಂ ಅಂಶಗಳು ಧೂಮಪಾನದ ಹಾನಿಯಿಂದಾದ ದೇಗವನ್ನು ಪುನಶ್ಚೇತನಗೊಳಿಸಲು ನೆರವಾಗುತ್ತದೆ ಎಂಬ ಅಂಶ ಕೂಡಾ ಗಮನಾರ್ಹವಾದುದು. ಇದರಲ್ಲಿ ನಾಲ್ಕರಿಂದ ಐದು ಪಟ್ಟು ಫಾಸ್ಟರಸ್, ಐದು ಪಟ್ಟು ವಿಟಮಿನ್ ಏ ಹಾಗೂ ಕಬ್ಬಿಣ ಸತ್ವ ಸೇಬಿಗಿಂತಲೂ ಅಧಿಕವಾಗಿರುವುದಾಗಿ ವರದಿಯಾಗಿದೆ. ತರಕಾರಿಯಾಗಿ ಕೂಡಾ ಅಡುಗೆಯಲ್ಲಿ ಈ ಬಾಳೆಕಾಯಿಯನ್ನು ಉಪಯೋಗಿಸಬಹುದು.
ಕೆಂಪು ಬಾಳೆ ಹಣ್ಣಿನಲ್ಲಿರುವ ಕಾರ್ಬೊಹೈಡ್ರೇಟ್ ಅಂಶ ಸ್ಥೂಲ ಕಾಯದವರು ದೇಹದ ತೂಕ ಇಳಿಸಲಿಕ್ಕೆ ನೆರವಾಗುವುದಲ್ಲದೇ, ಹಣ್ಣಿನ ತಿರುಳಿನ ಪೇಸ್ ಪ್ಯಾಕ್ ಮುಖದ ಚಲುವಿಗೆ ಸಹಕಾರಿ ಎನ್ನುವ ಅಂಶ ಗಮನಿಸುವಂತಹದ್ದು. ಯ್ಯಾಂಟಿ ಆಕ್ಸಿಡೆಂಟ್ ಮತ್ತು ಪೋಷಕಾಂಶಗಳು ಈ ಬಾಳೆಹಣ್ಣಿನಲ್ಲಿ ಹೇರಳವಾಗಿರುವುದರಿಂದ ರಕ್ತಹೀನತೆ ಶಮನ ಮಾಡಿ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದರ ಜೊತೆಗೆ ಯ್ಯಾಸಿಡಿಟಿಯ ತೊಂದರೆಯನ್ನು ಕೂಡಾ ಕಡಿಮೆ ಮಾಡುತ್ತದೆಂಬುದೇ ಇದರ ಗುಣ ವಿಶೇಷ ಇಷ್ಟೆಲ್ಲಾ ಆರೋಗ್ಯಕರ ಅಂಶ ಹೊಂದಿರುವ ಈ ಹಣ್ಣನ್ನು ಸೇವಿಸುವದು ಆರೋಗ್ಯಕ್ಕೆ ಹಿತ ಎನ್ನುತ್ತಾರೆ ಆರೋಗ್ಯ ತಜ್ಞರು. ನಮ್ಮ ದೇಹಕ್ಕೆ ಅಧಿಕ ಪೋಷಕಾಂಶ ಮತ್ತು ರೋಗ ನಿರೋಧಕ ಶಕ್ತಿಯನ್ನು ನೀಡುವ ಈ ಕೆಂಪುಬಾಳೆ ಹಣ್ಣು ಮಾರುಕಟ್ಟೆಯಲ್ಲಿ ನಿಮ್ಮ ಕಣ್ಣಿಗೆ ಕಂಡರೆ ಖಂಡಿತಾ ಸವಿದು ನೋಡಿ.