ಮಿಸ್ರಿ ಜೇನು….!
ಜೇನು ತುಪ್ಪ ಸಂಗ್ರಹಿಸುವ ಜೇನ್ನೊಣಗಳಲ್ಲಿ ಮಿಸ್ರಿ ಜೇನು ಇತರ ಪ್ರಭೇದಗಳಿಗಿಂತ ತೀರಾ ಚಿಕ್ಕದು. ಅತ್ಯಂತ ಗೌಪ್ಯ ಸ್ಥಳಗಳಾದ ಕಲ್ಲಿನ ಸಂದುಗಳು, ಮಣ್ಣಿನ ಗೋಡೆ, ಮರದ ಪೊಟರೆಗಳು ಮತ್ತು ಹಳೆಯ ದೇವಸ್ಥಾನದ ಕಲ್ಲ ಪಡಕುಗಳಲ್ಲಿ ಗೂಡು ಮಾಡಿಕೊಂಡು ಆರೋಗ್ಯದಾಯಕ ಔಷಧಯುಕ್ತ ಜೇನು ನೀಡುವ ಈ ಜೇನು, ಕೊಂಡಿಯಿಲ್ಲದ ಜೇನು, ಗಲಾಟೆ ಇಲ್ಲದೆ ಶಾಂತಿಯಿಂದ ಬದುಕುವ ಈ ಜೇನು ಹುಳುಗಳು ತಮ್ಮ ಗೂಡನ್ನು ಮೇಣದಿಂದ ಮುಚ್ಚಿ, ಎಲ್ಲಿಯೂ ಬೆಳಕು- ಗಾಳಿ ಬರದಂತೆ ಕತ್ತಲ ಕೋಣೆಯಲ್ಲಿ ಜೀವನ ಮಾಡುತ್ತವೆ. ಈ ಜೇನು ಹುಳುಗಳು ಗಾತ್ರದಲ್ಲಿ ತುಂಬಾ ಚಿಕ್ಕದಾಗಿರುವುದರಿಂದ ಎಲ್ಲಾ ತರಹದ ಸಣ್ಣಪುಟ್ಟ ಹೂವುಗಳಿಂದಲೂ ಮಕರಂದ ಸಂಗ್ರಹಿಸುವುದರಿಂದ ಕೃಷಿ ಬೆಳೆಗಳ ಇಳುವರಿ ಹೆಚ್ಚಳಕ್ಕೆ ಸಹಕಾರಿಯಾಗಿವೆ. ಈ ಜೇನಿನ ತುಪ್ಪ ಇತತರಲ್ಲಾ ಜೇನಿಗಿಂತ ತುಂಬಾ ದುಬಾರಿ. ಆಯುರ್ವೇದ ಔಷಧಿಯಲ್ಲಿ ಎಲ್ಲಾ ಜೇನಿಗಿಂತಲೂ ಈ ಜೇನಿನ ತುಪ್ಪ ಹೆಚ್ಚು ಬಳಕೆಯಾಗುತ್ತದಂತೆ. ವಿಶೇಷವಾದ ಆರೈಕೆಯನ್ನು ಬೇಡದ ಈ ಜೇನಿನ ಸಾಕಣೆ ಸುಲಭದಲ್ಲಿ ಮಾಡಬಹುದು.
ಹೊಸ್ಮನೆ ಮುತ್ತು